ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಅನುದಾನದಲ್ಲಿ ಕ್ಷೇತ್ರದ ಕೆರಗೋಡು, ಶಿಂಷಾ ಹಾಗೂ ಹೊಸ ಮದ್ದೂರು ಶಾಖಾ ನಾಲೆ, ಪಿಕಪ್ ನಾಲೆಗಳ ಆಧುನೀಕರಣ ಮಾಡಲಾಗುವುದು. ಶೀಘ್ರವೇ ಟೆಂಡರ್ ಕರೆದು ಎರಡು ತಿಂಗಳಲ್ಲಿ ಕಾಮಗಾರಿ ಆರಂಭಿಸಲಾಗುವುದು ಎಂದರು.
ಕಳೆದ ಎರಡೂವರೆ ವರ್ಷದಲ್ಲಿ ನಾಲೆಗಳ ಆಧುನೀಕರಣಕ್ಕೆ ೨೦೦ ಕೋಟಿ ರು. ಹಣ ಬಿಡುಗಡೆಗೊಳಿಸಲಾಗಿದೆ. ಇದರಲ್ಲಿ ಶೇ.೮೦ರಷ್ಟು ಕಾಮಗಾರಿ ಮುಗಿದಿದೆ. ತಾಲೂಕಿನ ಬಸರಾಳು ವ್ಯಾಪ್ತಿಯ ಹೇಮಾವತಿ ನಾಲೆಯ ಆಧುನೀಕರಣವನ್ನು ೩೫೦ ಕೋಟಿ ರು. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದೆ. ಕಾಮಗಾರಿಗೆ ಸಮಗ್ರ ಕ್ರಿಯಾಯೋಜನೆ ತಯಾರಾಗಿದ್ದು ತಾಂತ್ರಿಕ ಅನುಮೋದನೆ ದೊರಕಿದೆ. ಶೀಘ್ರವೇ ಅನುಮೋದನೆಗಾಗಿ ಕ್ಯಾಬಿನೆಟ್ ಮುಂದೆ ತರಲಾಗುವುದು ಎಂದರು.ಮಂಡ್ಯ ನಗರಕ್ಕೆ ಹೊಸ ರೂಪ ಕೊಡುವುದಕ್ಕೆ ನಿರ್ಧರಿಸಲಾಗಿದ್ದು ಡೆಲ್ಟಾ ಸಹಯೋಗದೊಂದಿಗೆ ಬೆಸಗರಹಳ್ಳಿ ರಾಮಣ್ಣ ವೃತ್ತದಿಂದ ಗೌರಿಶಂಕರ ಕಲ್ಯಾಣ ಮಂದಿರದವರೆಗೆ ೬.೫೦ ಕೋಟಿ ರು. ವೆಚ್ಚದಲ್ಲಿ ಫುಟ್‌ಪಾತ್ ಮತ್ತು ಸೈಕಲ್ ಬೇ ನಿರ್ಮಿಸಲಾಗುವುದು. ೫೫ ಲಕ್ಷ ರು. ವೆಚ್ಚದಲ್ಲಿ ವೃತ್ತದ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ನಾಲ್ಕೈದು ದಿನಗಳಲ್ಲಿ ಸಾರ್ವಜನಿಕರ ಸಂಚಾರಕ್ಕೆ ದೊರಕಲಿದೆ. ೧.೫೦ ಕೋಟಿ ರು. ವೆಚ್ಚದಲ್ಲಿ ಹೊಸಹಳ್ಳಿ ವೃತ್ತವನ್ನು ವಿದೇಶಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು. ನಗರಸಭೆ ಮತ್ತು ಡೆಲ್ಟಾ ಸಹಯೋಗದೊಂದಿಗೆ ೪ ಕೋಟಿ ರು. ಅನುದಾನದಲ್ಲಿ ವಿ.ವಿ.ರಸ್ತೆಯನ್ನು ಸುಂದರವಾಗಿ ನಿರ್ಮಿಸಲಾಗುವುದು ಎಂದರು.
ನಗರ ವ್ಯಾಪ್ತಿಯೊಳಗೆ ಹೊಸ ಕಾರ್ಖಾನೆಯನ್ನು ನಿರ್ಮಾಣ ಮಾಡುವುದಕ್ಕೆ ಕಾನೂನಾತ್ಮಕವಾಗಿ ಸಾಕಷ್ಟು ಅಡೆ-ತಡೆಗಳು ಇರುವುದರಿಂದ ಹಾಲಿ ಇರುವ ಮಿಲ್‌ನ್ನು ೫೦೦೦ ಟನ್ ಅರೆಯುವಂತೆ ಸಿದ್ಧಪಡಿಸುವುದು. ಬಾಯ್ಲರ್ ಹೌಸ್‌ಗೆ ಸರ್ಕಾರ ೬೦ ಕೋಟಿ ರು. ಹಣ ಮಂಜೂರು ಮಾಡಿರುವುದರಿಂದ ಸಮಸ್ಯೆಗಳು ಉದ್ಭವಿಸುವುದಿಲ್ಲ. ಮುಂದಿನ ದಿನಗಳಲ್ಲಿ ಕಾರ್ಖಾನೆ ಸುಗಮವಾಗಿ ಕಾರ್ಯಾಚರಣೆ ಮಾಡುವುದಕ್ಕೆ ವ್ಯವಸ್ಥೆ ಮಾಡಿರುವುದಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮೈಷುಗರ್ ಕಾರ್ಖಾನೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ-ಅವ್ಯವಹಾರಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ತನಿಖಾ ಸಮಿತಿ ರಚನೆ ಮಾಡಿದೆ. ಸಮಿತಿ ವರದಿ ನೀಡಿದ ಬಳಿಕ ಅದರ ಬಗ್ಗೆ ಕ್ರಮ ಆಗಲಿದೆ. ಕಾರ್ಖಾನೆಗೆ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರು ಇರುವುದರಿಂದ ಕಾರ್ಖಾನೆ ವಿಚಾರದಲ್ಲಿ ಮಧ್ಯಪ್ರವೇಶಿಸಲಾಗುವುದಿಲ್ಲ. ಕಾರ್ಖಾನೆ ಮತ್ತು ಸರ್ಕಾರದ ನಡುವೆ ಸಂಪರ್ಕ ಸೇತುವೆಯಾಗಿ ಕೆಲಸ ಮಾಡಬಹುದಷ್ಟೇ ಎಂದು ಸ್ಪಷ್ಟಪಡಿಸಿದರು.ಬಿ.ಹೊಸೂರು ಶಿಕ್ಷಣ-ಆರೋಗ್ಯ ಹಬ್:
ನಗರದ ಹೊರ ವಲಯದಲ್ಲಿರುವ ಬಿ.ಹೊಸೂರು ಕಾಲೋನಿಯನ್ನು ಶಿಕ್ಷಣ ಮತ್ತು ಆರೋಗ್ಯ ಹಬ್ ಆಗಿ ಅಭಿವೃದ್ಧಿಪಡಿಸಲಾಗುವುದು. ಇಲ್ಲಿ ಕೇಂದ್ರೀಯ ಶಾಲೆ, ಅಕ್ಕ ಮಹಾದೇವಿ ಹೊರಾಂಗಣ ವಿ.ವಿ, ತಾಯಿ-ಮಗು ಆಸ್ಪತ್ರೆ ಇದೆ. ಇದೀಗ ೩೦ ಕೋಟಿ ರು. ವೆಚ್ಚದಲ್ಲಿ ಕಾರ್ಮಿಕರ ವಸತಿ ಶಾಲೆ ಹಾಗೂ ೩೫ ಕೋಟಿ ರು. ವೆಚ್ಚದಲ್ಲಿ ಅಬ್ದುಲ್ ಕಲಾಂ ಶಾಲೆ ಜಿಲ್ಲೆಗೆ ಮಂಜೂರಾಗಿದೆ. ಇವುಗಳಿಗೆ ೫ ಎಕರೆ ಜಮೀನಿನ ಅವಶ್ಯಕತೆ ಇದೆ. ಇದರಲ್ಲಿ ೨.೫೦ ಎಕರೆ ಇದ್ದು, ಇನ್ನುಳಿದ ೨.೫೦ ಎಕರೆಗೆ ಜಿಲ್ಲಾಧಿಕಾರಿಗಳಿಂದ ಆದೇಶ ಹೊರಬೀಳಬೇಕಿದೆ. ಮುಂದಿನ ಆರು ತಿಂಗಳಲ್ಲಿ ಶಾಲೆಗಳ ಉದ್ಘಾಟನೆ ಮಾಡಲಾಗುವುದು ಎಂದು ವಿಶ್ವಾಸದಿಂದ ನುಡಿದರು.ಯಾವುದಾದರೊಂದು ಕಡೆ ಆಯ್ಕೆ ಮಾಡಿಕೊಳ್ಳಲಿ:
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಕೈಗಾರಿಕೆ ಸ್ಥಾಪನೆಗೆ ಜಾಗ ಕೋರಿರುವಂತೆ ನಾಲ್ಕು ಕಡೆ ಜಾಗವನ್ನು ಗುರುತಿಸಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳನ್ನು ಅಲ್ಲಿಗೆ ಕಳುಹಿಸಿ ಯಾವುದು ಬೇಕೋ ಅದನ್ನು ಆಯ್ಕೆ ಮಾಡಿಕೊಳ್ಳಲಿ. ನಾಲ್ಕು ಕಡೆಯೂ ಜಾಗ ಬೇಕೆಂದರೆ ನೀಡಲಾಗುವುದಿಲ್ಲ ಎಂದರು.ಕೈಗಾರಿಕೆಗಳು ಎಷ್ಟು ಮುಖ್ಯವೋ ಕೃಷಿ ಅದಕ್ಕಿಂತ ಹೆಚ್ಚು ಮುಖ್ಯ. ಮುಂದಿನ ದಿನಗಳಲ್ಲಿ ಕೃಷಿಗೆ ಹೆಚ್ಚಿನ ಪ್ರಾಮುಖ್ಯತೆ ಬರಲಿದೆ. ಕೈಗಾರಿಕೆಗಳೇ ಬೆಳೆದೆ ಅದನ್ನು ತಿನ್ನಲಾಗುವುದೇ. ಅನ್ನ ಬೆಳೆಯುವುದಕ್ಕೆ ಕೃಷಿ ಭೂಮಿ ಬೇಕಿದೆ. ಅದನ್ನು ಉಳಿಸಿಕೊಳ್ಳುವ ಅಗತ್ಯವಿದೆ. ಬಿಡದಿಯಲ್ಲಿ ರೈತರ ಜಮೀನು ಕಿತ್ತುಕೊಳ್ಳಬಾರದು ಎನ್ನುವ ಕುಮಾರಸ್ವಾಮಿ ಅವರು, ಮಂಡ್ಯ ಜಿಲ್ಲೆಯಲ್ಲಿ ಕೃಷಿ ಜಮೀನನ್ನು ಪಡೆದುಕೊಳ್ಳಿ ಎನ್ನುವುದು ದ್ವಂದ್ವ ನಿಲುವಲ್ಲವೇ ಎಂದು ಪ್ರಶ್ನಿಸಿದರು.
ಗೋಷ್ಠಿಯಲ್ಲಿ ತಾಪಂ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು, ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್ ಇದ್ದರು.