ಗುಡ್ಡ ಕುಸಿತ ತಡೆ ಕಾರ್ಯಕ್ಕೆ ಸಿಎಂ 100 ಕೋಟಿ ರು. ಮಂಜೂರು: ಕೃಷ್ಣ ಬೈರೇಗೌಡ

KannadaprabhaNewsNetwork |  
Published : Aug 01, 2024, 12:16 AM IST
ವಾಲ್ನೂರು ತ್ಯಾಗತ್ತೂರು ಪರಿಹಾರ/ ಕಾಳಜಿ ಕೇಂದ್ರಕ್ಕೆ ಸಚಿವದ್ವಯರು ಹಾಗೂ ಶಾಸಕರು ಭೇಟಿ ನೀಡಿ ಸಂತ್ರಸ್ತರ ಅಹವಾಲು ಆಲಿಸಿದರು. | Kannada Prabha

ಸಾರಾಂಶ

ಕೊಡಗು ಜಿಲ್ಲೆಯಲ್ಲಿ ಗುಡ್ಡ ಕುಸಿಯುವ ಪ್ರದೇಶವನ್ನು ಜಿಎಸ್ಐ ತಾಂತ್ರಿಕ ಸಂಸ್ಥೆ ಅಧ್ಯಯನ ಮಾಡಿ ವರದಿ ನೀಡಿದ್ದು, ಗುಡ್ಡು ಕುಸಿಯುವ ಪ್ರದೇಶಗಳಲ್ಲಿ ಅಗತ್ಯ ಕಾರ್ಯಗಳನ್ನು ಕೈಗೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ 100 ಕೋಟಿ ರು. ಮಂಜೂರು ಮಾಡಿದ್ದಾರೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗು ಜಿಲ್ಲೆಯಲ್ಲಿ ಗುಡ್ಡ ಕುಸಿಯುವ ಪ್ರದೇಶವನ್ನು ಜಿಎಸ್ಐ ತಾಂತ್ರಿಕ ಸಂಸ್ಥೆ ಅಧ್ಯಯನ ಮಾಡಿ ವರದಿ ನೀಡಿದ್ದು, ಗುಡ್ಡು ಕುಸಿಯುವ ಪ್ರದೇಶಗಳಲ್ಲಿ ಅಗತ್ಯ ಕಾರ್ಯಗಳನ್ನು ಕೈಗೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ 100 ಕೋಟಿ ರು. ಮಂಜೂರು ಮಾಡಿದ್ದಾರೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ತಿಳಿಸಿದ್ದಾರೆ.

ಕೊಡಗು ಜಿಲ್ಲೆಯ ಸಿದ್ದಾಪುರ ಸಮೀಪದ ಅತ್ತೂರು ಗ್ರಾಮದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಸಚಿವರು, ಕೊಡಗು ಜಿಲ್ಲಾ ಉಸ್ತುವಾರಿ ಸಚಿವರು ಸಹ ಜಿಲ್ಲೆಯ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ವೀಕ್ಷಣೆ ಮಾಡಿದ್ದಾರೆ. ಸರ್ಕಾರ ಜಿಲ್ಲಾಡಳಿತದ ಜೊತೆ ಸದಾ ಸ್ಪಂದಿಸಿದೆ ಎಂದು ಅವರು ಹೇಳಿದರು.

ಮಲೆನಾಡು ಪ್ರದೇಶದಲ್ಲಿ ಗುಡ್ಡ ಕುಸಿಯುವುದನ್ನು ತಡೆಯುವ ಅಗತ್ಯ ಮುನ್ನೆಚ್ಚರ ಕ್ರಮಗಳನ್ನು ಕೈಗೊಳ್ಳಲು ಭವಿಷ್ಯದಲ್ಲಿ 300 ಕೋಟಿ ರು. ಬಿಡುಗಡೆಗೆ ಮುಖ್ಯಮಂತ್ರಿ ಒಪ್ಪಿಗೆ ನೀಡಿದ್ದು, ಶಾಶ್ವತ ಪರಿಹಾರ ಕಾರ್ಯಗಳನ್ನು ಕೈಗೊಳ್ಳಬೇಕಿದೆ ಎಂದು ತಿಳಿಸಿದರು.

ಹವಾಮಾನ ವೈಪರಿತ್ಯದಿಂದ ಅತಿವೃಷ್ಟಿ ಉಂಟಾಗಿದ್ದು, ಜುಲೈ ತಿಂಗಳಲ್ಲಿ ಹೆಚ್ಚಿನ ಮಳೆಯಾಗಿದೆ. ಆದ್ದರಿಂದ ಆಗಸ್ಟ್ ತಿಂಗಳಲ್ಲಿಯೂ ಹೆಚ್ಚಿನ ಮುನ್ನೆಚ್ಚರ ವಹಿಸಬೇಕಿದೆ. ಆ ನಿಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌, ಸಿವಿಲ್ ಪೊಲೀಸ್ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.

ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಹೆಚ್ಚಿನ ಮಳೆ ಆಗುತ್ತಿರುವುದರಿಂದ ರಸ್ತೆ, ವಿದ್ಯುತ್ ಪರಿವರ್ತಕ ಮತ್ತು ಕಂಬಗಳು, ಬೆಳೆ ಹಾನಿ ಸೇರಿದಂತೆ ಸಾಕಷ್ಟು ನಷ್ಟ ಉಂಟಾಗಿದೆ ಎಂದು ಮಾಹಿತಿ ನೀಡಿದರು.

ಮುಂಗಾರು ಸಂದರ್ಭದಲ್ಲಿ ರಾಜ್ಯದಲ್ಲಿ ವಿವಿಧ ರೀತಿಯ ರಸ್ತೆ, ವಿದ್ಯುತ್, ಮನೆ, ಗುಡ್ಡ ಕುಸಿತ, ಹೀಗೆ ಹಲವು ರೀತಿಯ ಆಸ್ತಿ ಹಾನಿಯಾಗಿದೆ ಎಂದು ಮಾಹಿತಿ ನೀಡಿದರು.

ಕೊಡಗು ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಾಗುತ್ತಿರುವ ಹಿನ್ನೆಲೆ ಭೂಕುಸಿತ ಹಾಗೂ ಪ್ರವಾಹ ಪೀಡಿತ ಜನರು ಸ್ವಯಂ ಪ್ರೇರಣೆಯಿಂದ ಸ್ಥಳಾಂತರವಾಗಬೇಕು. ಜಿಲ್ಲಾಡಳಿತ ಆ ನಿಟ್ಟಿನಲ್ಲಿ ನಿಷ್ಠುರವಾಗಿ ನಡೆದುಕೊಳ್ಳಬೇಕು ಎಂದು ಕೃಷ್ಣಬೈರೇಗೌಡ ಸೂಚನೆ ನೀಡಿದರು.

ಸರ್ಕಾರಕ್ಕೆ ಪ್ರಾಣ ಉಳಿಸುವುದು ಮುಖ್ಯ. ಪ್ರಾಣ ಹೋದ ನಂತರ ಪರಿಹಾರ ನೀಡುವುದು ಮುಖ್ಯವಲ್ಲ. ಆ ನಿಟ್ಟಿನಲ್ಲಿ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕು. ಜನರು ಸಹ ಬದಲಾಗಬೇಕು ಎಂದು ಹೇಳಿದರು.

ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್.ಭೋಸರಾಜು ಹಾಗೂ ಕಂದಾಯ ಸಚಿವ ಕೃಷ್ಣಭೈರೇಗೌಡ, ಶಾಸಕ ಡಾ.ಮಂತರ್ ಗೌಡ ಅವರು ವಾಲ್ನೂರು ತ್ಯಾಗತ್ತೂರು ಕಾಳಜಿ ಕೇಂದ್ರ, ಹಾರಂಗಿ ಬಳಿಯ ಅತ್ತೂರು, ನೆಲ್ಲಿಹುದಿಕೇರಿ ಪ್ರವಾಹ ಪೀಡಿತ ಪ್ರದೇಶ, ಸಿದ್ದಾಪುರದಲ್ಲಿ ಸ್ಥಾಪಿಸಲಾಗಿರುವ ಕಾಳಜಿ ಕೇಂದ್ರ ಹೀಗೆ ಮಳೆ ಹಾನಿ ಪ್ರದೇಶಗಳಿಗೆ ವೀಕ್ಷಿಸಿ ಸಂತ್ರಸ್ತರಿಗೆ ಧೈರ್ಯ ತುಂಬುವ ಕೆಲಸ ಮಾಡಿದರು.

ಪ್ರಾಕೃತಿಕ ವಿಕೋಪ ನಿರ್ವಹಣೆ ಸಂಬಂಧ ಕಂದಾಯ ಸಚಿವ ಕೃಷ್ಣ ಬೈರೇಗೌಡ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಅವರು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರಿಂದ ಹಾರಂಗಿ ಪ್ರವಾಸಿ ಮಂದಿರದಲ್ಲಿ ಮಾಹಿತಿ ಪಡೆದರು.

ರಸ್ತೆ, ಸೇತುವೆ, ವಿದ್ಯುತ್ ಕಂಬ ಮತ್ತು ಪರಿವರ್ತಕಗಳು, ಬೆಳೆ ಹಾಗೂ ಮನೆ ಹಾನಿ... ಹೀಗೆ ಪ್ರಾಕೃತಿಕ ವಿಕೋಪದಿಂದ ಉಂಟಾದ ನಷ್ಟದ ಬಗ್ಗೆ ಮಾಹಿತಿ ಪಡೆದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಿಲ್ಲಿಯಲ್ಲಿ ಡಿಕೆಶಿ ರಾಜ್ಯ ನೀರಾವರಿ ಸಭೆ
ಗ್ಯಾಸ್ ಇಲ್ಲದೇ ಬೆಳಗಾವಿಯ 60 + ಕೈಗಾರಿಕೆ ಬಂದ್‌ ಹಂತಕ್ಕೆ