ರೈತ ಪ್ರತಿಭಟನೆಯ ಫಲವಾಗಿ ಉತ್ತರ ಕರ್ನಾಟಕದ ಸಕ್ಕರೆ ಕಾರ್ಖಾನೆಗಳು ರೈತ ಸಮುದಾಯಕ್ಕೆ ಎಫ್.ಆರ್.ಪಿ ದರಕ್ಕಿಂತ ಹೆಚ್ಚಿನ ಬೆಲೆ ನೀಡುವ ಘೋಷಣೆ ಮಾಡಿವೆ. ಆದರೆ, ದಕ್ಷಿಣ ಕರ್ನಾಟಕ ಭಾಗದ ಮಂಡ್ಯ, ಮೈಸೂರು, ಹಾಸನ ಮತ್ತು ಚಾಮರಾಜನಗರ ಜಿಲ್ಲೆಯಲ್ಲಿನ ಸಕ್ಕರೆ ಕಾರ್ಖಾನೆಗಳು ದರ ಹೆಚ್ಚಳದ ಬಗ್ಗೆ ಮಾತನಾಡುತ್ತಿಲ್ಲ.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪ್ರತಿ ಟನ್ ಕಬ್ಬಿಗೆ 4500 ರು. ನೀಡುವಂತೆ ಆಗ್ರಹಿಸಿ ತಾಲೂಕಿನ ಹೇಮಗಿರಿ ಸಕ್ಕರೆ ಕಾರ್ಖಾನೆ ಎದುರು ನ.30ರಂದು ಕಬ್ಬು ಬೆಳೆಗಾರರ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ತಾಲೂಕು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕಾರಿಗನಹಳ್ಳಿ ಕುಮಾರ್ ತಿಳಿಸಿದರು.ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಸಕ್ತ ಸಾಲಿನ ಕಬ್ಬು ಕಟಾವು ಹಂಗಾಮು ಮುಗಿಯುವ ಹಂತಕ್ಕೆ ಬಂದಿದೆ. ಕಬ್ಬು ಕಟಾವು ಕೂಲಿ ದರ ಹೆಚ್ಚಳ, ರಸಗೊಬ್ಬರ, ಕೃಷಿ ಕೂಲಿ ಕಾರ್ಮಿಕರ ವೆಚ್ಚ, ಕಬ್ಬು ಸಾಗಣಿಕಾ ವೆಚ್ಚ ಸೇರಿದಂತೆ ಎಲ್ಲ ದರಗಳು ಹೆಚ್ಚಳವಾಗಿದೆ. ಇದು ಕಾರ್ಖಾನೆ ಪಾಲಿಗೆ ಸಿಹಿಯನ್ನು ತಂದರೆ ರೈತರ ಪಾಲಿಗೆ ಕಹಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ರೈತ ಪ್ರತಿಭಟನೆಯ ಫಲವಾಗಿ ಉತ್ತರ ಕರ್ನಾಟಕದ ಸಕ್ಕರೆ ಕಾರ್ಖಾನೆಗಳು ರೈತ ಸಮುದಾಯಕ್ಕೆ ಎಫ್.ಆರ್.ಪಿ ದರಕ್ಕಿಂತ ಹೆಚ್ಚಿನ ಬೆಲೆ ನೀಡುವ ಘೋಷಣೆ ಮಾಡಿವೆ. ಆದರೆ, ದಕ್ಷಿಣ ಕರ್ನಾಟಕ ಭಾಗದ ಮಂಡ್ಯ, ಮೈಸೂರು, ಹಾಸನ ಮತ್ತು ಚಾಮರಾಜನಗರ ಜಿಲ್ಲೆಯಲ್ಲಿನ ಸಕ್ಕರೆ ಕಾರ್ಖಾನೆಗಳು ದರ ಹೆಚ್ಚಳದ ಬಗ್ಗೆ ಮಾತನಾಡುತ್ತಿಲ್ಲ ಎಂದು ಕಿಡಿಕಾರಿದರು.ದಕ್ಷಿಣ ಕರ್ನಾಟಕ ಭಾಗದ ಜಿಲ್ಲಾಧಿಕಾರಿಗಳು ಮತ್ತು ಶಾಸಕರು ಕೂಡ ನಮ್ಮ ಭಾಗದ ಕಬ್ಬು ಬೆಳೆಗಾರರಿಗೆ ಹೆಚ್ಚಿನ ಬೆಲೆ ನೀಡುವಂತೆ ಧ್ವನಿಯೆತ್ತಿ ಮಾತನಾಡುತ್ತಿಲ್ಲ. ಕಬ್ಬಿನ ಬೆಲೆ ಹೆಚ್ಚಳ ಕುರಿತು ಜಿಲ್ಲಾಡಳಿತ ಇದುವರೆಗೂ ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳ ಮತ್ತು ರೈತರ ನಡುವೆ ಕನಿಷ್ಠ ಒಂದು ಸಭೆ ನಡೆಸುವತ್ತಲೂ ಆಲೋಚಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಕ್ಷಣವೇ ಜಿಲ್ಲಧಿಕಾರಿಗಳು ರೈತರು ಮತ್ತು ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಗಳ ಸಭೆ ಕರೆಯಬೇಕು. ಪ್ರತಿ ಟನ್ ಕಬ್ಬಿಗೆ 4500 ರು. ನೀಡಬೇಕು. ಈಗಾಗಲೇ ತಾಲೂಕಿನ ಹೇಮಗಿರಿ ಶುಗರ್ಸ್ ಕಂಪನಿಗೆ ಮನವಿ ನೀಡಿದ್ದರೂ ಆಡಳಿತ ಮಂಡಳಿ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ದೂರಿದರು.ಕಳೆದ ವರ್ಷ ಪೂರೈಕೆ ಮಾಡಿದ್ದ ಪ್ರತಿಟನ್ ಕಬ್ಬಿಗೆ ನೀಡಬೇಕಾದ ಹೆಚ್ಚುವರಿ 50 ರು. ನೀಡಲು ಕ್ರಮ ವಹಿಸಿಲ್ಲ. ಕಾರ್ಖಾನೆಯ ರೈತ ವಿರೋಧಿ ನೀತಿ ಖಂಡಿಸಿ, ಟನ್ ಕಬ್ಬಿಗೆ 4500 ರು. ನೀಡುವಂತೆ ನ.30 ರಂದು ಕಬ್ಬು ಬೆಳೆಗಾರರು ಪ್ರತಿಭಟನೆ ನಡೆಸಲಿದ್ದಾರೆ. ದರ ಘೋಷಣೆಗಾಗಿ ಕಾರ್ಖಾನೆ ಗೋಡನ್ನಿಂದ ಒಂದೇ ಒಂದು ಕೆ.ಜಿ ಸಕ್ಕರೆ ಹೊರಹೋಗದಂತೆ ತಡೆಯಲಾಗುವುದು ಎಂದು ಎಚ್ಚರಿಸಿದರು.
ಈ ವೇಳೆ ತಾಲೂಕು ಕಬ್ಬು ಬೆಳೆಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಬೋರಾಪುರ ಮಂಜುನಾಥ್, ಖಜಾಂಚಿ ಕಾಯಿ ಮಂಜೇಗೌಡ, ಪದಾಧಿಕಾರಿಗಳಾದ ವಡಕಹಳ್ಳಿ ಮಂಜೇಗೌಡ, ಚಿಕ್ಕತಾರಹಳ್ಳಿ ಮಧು, ರಾಮೇಗೌಡ, ಚಿನ್ನೇನಹಳ್ಳಿ ದೇವರಾಜು, ಅಗ್ರಹಾರ ಬಾಚಹಳ್ಳಿ ನಾಗೇಶ್ ಇದ್ದರು.