100 ದಿನ ಪೂರೈಸಿದ ಕಕಜವೇ ಕಾವೇರಿ ಹೋರಾಟ

KannadaprabhaNewsNetwork | Published : Jan 14, 2024 1:35 AM

ಸಾರಾಂಶ

ಚನ್ನಪಟ್ಟಣ: ಕಾವೇರಿ ನದಿ ನೀರಿನ ಹಂಚಿಕೆಯಲ್ಲಿ ಸಂಕಷ್ಟ ಸೂತ್ರ ರಚಿಸುವ ಜೊತೆಗೆ ಮೇಕೆದಾಟು ಯೋಜನೆಗೆ ಅಡಿಗಲ್ಲು ಹಾಕುವಂತೆ ಆಗ್ರಹಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ನಡೆಸುತ್ತಿರುವ ಪ್ರತಿನಿತ್ಯ ಒಂದು ತಾಸು ಪ್ರತಿಭಟನೆ ನೂರನೇ ದಿನ ಪೂರೈಸಿತು.

ಚನ್ನಪಟ್ಟಣ: ಕಾವೇರಿ ನದಿ ನೀರಿನ ಹಂಚಿಕೆಯಲ್ಲಿ ಸಂಕಷ್ಟ ಸೂತ್ರ ರಚಿಸುವ ಜೊತೆಗೆ ಮೇಕೆದಾಟು ಯೋಜನೆಗೆ ಅಡಿಗಲ್ಲು ಹಾಕುವಂತೆ ಆಗ್ರಹಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ನಡೆಸುತ್ತಿರುವ ಪ್ರತಿನಿತ್ಯ ಒಂದು ತಾಸು ಪ್ರತಿಭಟನೆ ನೂರನೇ ದಿನ ಪೂರೈಸಿತು.

ನೂರನೇ ದಿನದ ಹೋರಾಟದಲ್ಲಿ ಮಾಜಿ ಶಾಸಕ ಎಂ.ಸಿ.ಅಶ್ವತ್ಥ್ ಮಾತನಾಡಿ, ಮೇಕೆದಾಟು ಯೋಜನೆ ನಿರ್ಮಾಣದಿಂದ ೬ ಜಿಲ್ಲೆಗಳಿಗೆ ಕುಡಿಯುವ ನೀರಿನ ಅನುಕೂಲವಾಗಲಿದೆ. ಇದರ ಜತೆಗೆ ವಿದ್ಯುತ್ ಉತ್ಪಾದನೆಗೂ ಕ್ರಮ ಕೈಗೊಳ್ಳಬಹುದಾಗಿದೆ. ಈ ನಿಟ್ಟಿನಲ್ಲಿ ಮೇಕೆದಾಟು ಯೋಜನೆಗೆ ಇರುವ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಎರಡು ರಾಜ್ಯಗಳ ನಡುವೆ ಮಧ್ಯಸಿಕೆ ವಹಿಸಿ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಕ್ರಮ ಕೈಗೊಳ್ಳಬೇಕು ಎಂದು ಅಗ್ರಹಿಸಿದರು.

ಯಾವುದೇ ಹೋರಾಟಗಳು ಎಂಟತ್ತು ದಿನಗಳಿಗೆ ಮಾತ್ರ ಸೀಮಿತವಾಗುತ್ತವೆ. ಅದರಲ್ಲೂ ಸರ್ಕಾರದ ವಿರುದ್ಧ ಹೋರಾಟ ಮಾಡುವುದು ಸುಲಭದ ಮಾತಲ್ಲ. ಈ ಹೋರಾಟಗಳಿಗೆ ಹಲವು ಸಮಸ್ಯೆಗಳು, ಕಷ್ಟಗಳು ಅಡೆತಡೆಗಳು ಬರುತ್ತದೆ. ಎಲ್ಲವನ್ನು ಮೆಟ್ಟಿ ಕಕಜವೇ ರಾಜ್ಯಾಧ್ಯಕ್ಷ ರಮೇಶ್‌ಗೌಡರ ನೇತೃತ್ವದಲ್ಲಿ ಕಾವೇರಿ ಸಂಕಷ್ಟ ಸೂತ್ರ ಹಾಗೂ ಮೇಕೆದಾಟು ಯೋಜನೆಗೆ ಅಡಿಗಲ್ಲು ಹಾಕುವಂತೆ ನಡೆಸುತ್ತಿರುವ ಹೋರಾಟ ೧೦೦ ದಿನ ಪೂರೈಸಿರುವುದು ಸಣ್ಣ ಸಂಗತಿಯಲ್ಲ. ಕಾವೇರಿ ಹೋರಾಟವನ್ನು ದೆಹಲಿಯವರೆಗೂ ವಿಸ್ತರಿಸುವ ಅವರ ಪ್ರಯತ್ನಕ್ಕೆ ಫಲ ಸಿಗಲಿ ಎಂದು ಹಾರೈಸಿದರು.

ಜ್ಞಾನ ಸರೋವರ ವಿದ್ಯಾಸಂಸ್ಥೆ ಉಪನ್ಯಾಸಕ ಪ್ರವೀಣ್‌ಕುಮಾರ್ ಮಾತನಾಡಿ, ಕಾವೇರಿಗಾಗಿ ನಡೆಸುತ್ತಿರುವುದು ವೈಯಕ್ತಿಕ ಹೋರಾಟವಲ್ಲ. ಈ ಹೋರಾಟದಿಂದ ರಾಜ್ಯದ ರೈತರು ಮತ್ತು ಜನರಿಗೆ ಅನುಕೂಲವಾಗುತ್ತದೆ. ಕಾವೇರಿ ನದಿ ನೀರು ಕುಡಿಯುವ ಪ್ರತಿಯೊಬ್ಬರೂ ಈ ಹೋರಾಟದ ಜವಾಬ್ದಾರಿ ಹೊರಬೇಕಿದ್ದು, ಈ ನಿಟ್ಟಿನಲ್ಲಿ ಕಾವೇರಿ ಹೋರಾಟಕ್ಕೆ ನಮ್ಮ ಕಾಲೇಜಿನ ಸಂಪೂರ್ಣ ಬೆಂಬಲ ಇದೆ ಎಂದರು.

ಡಾ.ರಾಜ್‌ ಕಲಾ ಬಳಗದ ಅಧ್ಯಕ್ಷ ಎಲೇಕೇರಿ ಮಂಜುನಾಥ್ ಮಾತನಾಡಿ, ಕನ್ನಡದ ನೆಲ, ಜಲ, ಭಾಷೆಯ ಅಸ್ಮಿತೆಗೆ ರಾಜ್ಯದಲ್ಲಿ ಎಲ್ಲೇ ಸಮಸ್ಯೆ ಉಂಟಾದರೂ ಅದರ ವಿರುದ್ಧ ಕಕಜವೇ ರಾಜ್ಯಾಧ್ಯಕ್ಷ ರಮೇಶ್‌ಗೌಡರು ಮೊದಲ ಚನ್ನಪಟ್ಟಣದಲ್ಲಿ ಹೋರಾಟದ ಕಿಚ್ಚನ್ನು ಹೊತ್ತಿಸುತ್ತಾರೆ. ಇದು ರಾಜ್ಯಾದ್ಯಂತ ಜ್ವಾಲೆಯಾಗಿ ರಾಜ್ಯದ ಗಮನ ಸೆಳೆಯುತ್ತದೆ. ಮೇಕೆದಾಟು ಯೋಜನೆ ಹೆಸರಲ್ಲಿ ಪಾದಯಾತ್ರೆ ಮಾಡಿ ಅಧಿಕಾರಕ್ಕೆ ಬಂದ ಸರ್ಕಾರ ಇಂದು ಕಾವೇರಿ ಹೋರಾಟಗಾರರ ವಿರುದ್ಧವೇ ಪ್ರಕರಣ ದಾಖಲಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಕಜವೇ ರಾಜ್ಯಾಧ್ಯಕ್ಷ ರಮೇಶ್‌ಗೌಡ ಮಾತನಾಡಿ, ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ನಾಲ್ಕು ರಾಜ್ಯಗಳಿಗೆ ಕೊಡಗಿನಲ್ಲಿನ ಮಳೆ ಆಧಾರಿದಲ್ಲಿ ನೀರು ಹಂಚಿಕೆ ಸಂಕಷ್ಟ ಸೂತ್ರ ರಚಿಸಬೇಕು. ೬೮ ಟಿಎಂಸಿ ನೀರನ್ನು ಸಂಗ್ರಹ ಮಾಡಿ ೬ ಜಿಲ್ಲೆಗಳಿಗೆ ಕುಡಿಯುವ ನೀರನ್ನು ಪೂರೈಕೆ ಮಾಡಿ ವಿದ್ಯುತ್ ಉತ್ಪಾದಿಸುವ ಯೋಜನೆಯನ್ನು ರಾಜಕೀಯ ಬಳಕೆಗೆ ಸೀಮಿತ ಮಾಡಿಕೊಳ್ಳದೆ ಅನುಷ್ಠಾನಕ್ಕೆ ತರಬೇಕು ಎಂಬ ನಿಟ್ಟಿನಲ್ಲಿ ನಮ್ಮ ಹೋರಾಟ ನಿರಂತರವಾಗಿದ್ದು, ಈ ಹೋರಾಟಕ್ಕೆ ಪ್ರತಿನಿತ್ಯ ಬೆಂಬಲ ನೀಡುತ್ತಿರುವ ತಾಲೂಕಿನ ಜನತೆಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿ ಮುಂದೆಯೂ ನಿಮ್ಮ ಬೆಂಬಲ ಇರಲಿ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ೧೦೦ ದಿನಗಳಿಂದ ಹೋರಾಟದಲ್ಲಿ ಭಾಗಿಯಾಗಿದ್ದವರಿಗೆ ಕಾವೇರಿ ಕಾವಲುಗಾರ ಎಂದು ನೆನಪಿನ ಕಾಣಿಕೆ ನೀಡಿ ಅಭಿನಂದಿಸಲಾಯಿತು.

ಪ್ರತಿಭಟನೆಯಲ್ಲಿ ವೇದಿಕೆಯ ಜಿಲ್ಲಾಧ್ಯಕ್ಷ ಬೇವೂರು ಯೋಗೀಶ್ ಗೌಡ, ರಾಜ್ಯ ಉಪಾಧ್ಯಕ್ಷ ಬೆಂಕಿಶ್ರೀಧರ್, ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷ ಶಂಕರ್, ಕಲಾವಿದ ತಿಮ್ಮರಾಜು, ನಿ.ಶಿಕ್ಷಕ ಪುಟ್ಟಪ್ಪಾಜಿ, ಮುಜಾಯಿದ್, ದುರ್ಗೇಗೌಡ, ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಬಳಗದ ರಾಜು ಎಂ.ಎನ್., ಕರ್ನಾಟಕ ರಕ್ಷಣಾ ವೇದಿಕೆಯ ಸ್ವಾಭಿಮಾನ ಬಣದ ಜಿಲ್ಲಾಧ್ಯಕ್ಷ ಕಿರಣ್ ಕುಮಾರ್, ಕರುನಾಡ ಸೇನೆಯ ಜಿಲ್ಲಾಧ್ಯಕ್ಷ ಜಯಕುಮಾರ್, ಲಕ್ಷ್ಮೀಶ್, ಕೆಂಪರಾಜು, ಕರುನಾಡ ಸೇನೆಯ ರಾಜ್ಯ ಉಪಾಧ್ಯಕ್ಷ ಜಗದೀಶ್ ಇತರರಿದ್ದರು.

ಪೊಟೋ೧೩ಸಿಪಿಟಿ೪,೫:

ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾವೇರಿ ಹೋರಾಟ ೧೦೦ನೇ ದಿನ ಪೂರೈಸಿತು.

Share this article