ಗ್ಯಾಂಗ್‌ರೇಪ್‌ ತನಿಖೆಗೆ ಎಸ್‌ಐಟಿ ರಚಿಸಲು ಬೊಮ್ಮಾಯಿ ಆಗ್ರಹ

KannadaprabhaNewsNetwork |  
Published : Jan 14, 2024, 01:35 AM IST

ಸಾರಾಂಶ

ಹಾವೇರಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಗಳ ತನಿಖೆಗೆ ಉನ್ನತ ಮಟ್ಟದ ವಿಶೇಷ ತನಿಖಾ ತಂಡ (ಎಸ್‍ಐಟಿ) ರಚಿಸುವಂತೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ. ಅಲ್ಲದೆ, ಭಾನುವಾರ ನಮ್ಮ ಪಕ್ಷದ ಮಹಿಳಾ ನಿಯೋಗ ಹಾವೇರಿಗೆ ಭೇಟಿ ಕೊಡಲಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ನಿರ್ದೇಶನ ಕೋರಿ ನ್ಯಾಯಾಂಗದ ಮೊರೆ ಹೋಗುತ್ತೇವೆ ಎಂದೂ ಅವರು ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರುಹಾವೇರಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಗಳ ತನಿಖೆಗೆ ಉನ್ನತ ಮಟ್ಟದ ವಿಶೇಷ ತನಿಖಾ ತಂಡ (ಎಸ್‍ಐಟಿ) ರಚಿಸುವಂತೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.

ಅಲ್ಲದೆ, ಭಾನುವಾರ ನಮ್ಮ ಪಕ್ಷದ ಮಹಿಳಾ ನಿಯೋಗ ಹಾವೇರಿಗೆ ಭೇಟಿ ಕೊಡಲಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ನಿರ್ದೇಶನ ಕೋರಿ ನ್ಯಾಯಾಂಗದ ಮೊರೆ ಹೋಗುತ್ತೇವೆ ಎಂದೂ ಅವರು ತಿಳಿಸಿದ್ದಾರೆ.ಶನಿವಾರ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತಾಡಿದ ಅವರು, ಹಾವೇರಿ ಸೇರಿ ವಿವಿಧ ಜಿಲ್ಲೆಗಳ ಪೊಲೀಸರಿಂದ ಸ್ಥಳೀಯ ಅತ್ಯಾಚಾರ ಸಂತ್ರಸ್ತರಿಗೆ ನ್ಯಾಯ ಸಿಗಲು ಅಸಾಧ್ಯ. ಹೀಗಾಗಿ ವಿವಿಧ ಜಿಲ್ಲೆಗಳಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಗಳನ್ನು ಹಿರಿಯ ಪೊಲೀಸ್ ಅಧಿಕಾರಿಗಳಿಂದ ನಿಗದಿತ ಕಾಲಾವಧಿಯಲ್ಲಿ ತನಿಖೆ ಮಾಡಿಸಿ ಚಾರ್ಜ್‌ಶೀಟ್ ಹಾಕುವ ಮೂಲಕ ಉಗ್ರವಾದ ಶಿಕ್ಷೆ ಆಗುವಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಸಾಮಾನ್ಯ ಜನರು ಅದರಲ್ಲೂ ಹೆಣ್ಣು ಮಕ್ಕಳು ನಿರ್ಭೀತಿಯಿಂದ ಓಡಾಡಲು ಸಾಧ್ಯವಾಗುತ್ತಿಲ್ಲ. ಎಲ್ಲ ಹೆಣ್ಣು ಮಕ್ಕಳು ಆತಂಕದಿಂದ ಓಡಾಡುವಂತಾಗಿದೆ. ರಾಜ್ಯ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಬೆಂಗಳೂರು ಒಂದರಲ್ಲೇ ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳು ಶೇ.30ರಷ್ಟು ಹೆಚ್ಚಾಗಿವೆ ಎಂದು ಹೇಳಿದರು.ಅತ್ಯಾಚಾರ, ಕಿರುಕುಳ, ಹಿಂಸಾಚಾರ ಹೆಚ್ಚಾಗಿದೆ. ಗ್ರಾಮಾಂತರದಲ್ಲೂ ಮಹಿಳೆಯರು ಸುರಕ್ಷಿತವಾಗಿಲ್ಲ. ಇಂಥ ಹಲವಾರು ಪ್ರಕರಣಗಳನ್ನು ಮುಚ್ಚಿ ಹಾಕುತ್ತಿದ್ದಾರೆ. ಪೊಲೀಸರು ಮೂಕ ಪ್ರೇಕ್ಷಕರಾಗಿದ್ದಾರೆ. ಕಾನೂನು ಪ್ರಕಾರ ಪೊಲೀಸರು ಕೆಲಸ ಮಾಡಿದರೆ ಅವರ ಮೇಲೆ ಸರ್ಕಾರದ ವಕ್ರದೃಷ್ಟಿ ಕಾಡುತ್ತಿದೆ ಎಂದು ವಿವರಿಸಿದರು.ಸಮುದಾಯ ನೋಡಿ ಕೇಸು ಹಾಕುವಂತೆ ಸ್ಟಾಂಡರ್ಡ್ ನಿರ್ದೇಶನ ಕೊಟ್ಟಿದ್ದೀರಾ? ಹಾವೇರಿಯಲ್ಲಿ ನಮ್ಮನ್ನು ಯಾರೂ ಮುಟ್ಟುವುದಿಲ್ಲ ಎಂಬ ಪರಿಸ್ಥಿತಿ ಕೆಲವು ವರ್ಗದ್ದು. ಹಲವೆಡೆ ನೈತಿಕ ಪೊಲೀಸ್‍ಗಿರಿ ನಡೆದಿದೆ. ಶಿರಸಿಯ ಒಬ್ಬ ಹೆಣ್ಮಗಳು ಮತ್ತು ಬೇಕಾದವರು ಹಾನಗಲ್‍ನಲ್ಲಿ ಹೋಟೆಲ್‍ನಲ್ಲಿ ಇದ್ದರೆ ಅಕ್ಕಿಆಲೂರಿನ ಯುವಕರು ಇಬ್ಬರನ್ನೂ ಥಳಿಸಿ ಅವಳ ಗ್ಯಾಂಗ್ ರೇಪ್ ಮಾಡಿದ್ದಾರೆ. ಪೊಲೀಸರು ಇದನ್ನು ಮುಚ್ಚಿ ಹಾಕಲು ಮುಂದಾಗಿದ್ದರು ಎಂದು ತಿಳಿಸಿದರು.ಪೊಲೀಸರು ಮೊಂಡುವಾದವನ್ನೇ ಮಾಡುತ್ತಿದ್ದರು. ವೈದ್ಯಕೀಯ ಪರೀಕ್ಷೆಗಾಗಿ ನಾನು ಒತ್ತಾಯಿಸಿದೆ. ಇವರು ಯಾರನ್ನು ರಕ್ಷಿಸಲು ಹೊರಟಿದ್ದರು? ಬೇರೆ ಕೋಮಿಗೊಂದು ನೀತಿ ಇದೆಯೇ? ಇದರ ಹಿಂದೆ ಯಾರ ಚಿತಾವಣೆ ಇದೆ? ಒತ್ತಡ ಯಾರದ್ದು ಎಂದು ಕೇಳಿದರು. ಅಲ್ಪಸಂಖ್ಯಾತ ಹೆಣ್ಮಗಳ ಮೇಲೆ ಅತ್ಯಾಚಾರ ಆಗಿದ್ದರೂ ಗೃಹ ಸಚಿವರು ಸಮರ್ಪಕ ಕ್ರಮಕ್ಕೆ ಮುಂದಾಗಿಲ್ಲ. ಪ್ರಭಾವಿಗಳ ಬಗ್ಗೆ ಇವರ ಕಾಳಜಿ ಇದೆ ಎಂದು ಟೀಕಿಸಿದರು.ಗ್ರಾಮೀಣ ಪೊಲೀಸ್ ಠಾಣೆಗಳು ಕಲೆಕ್ಷನ್ ಅಡ್ಡಾ ಆಗಿ ಪರಿವರ್ತನೆಗೊಂಡಿವೆ. ಕೆಲವೆಡೆ ಪೊಲೀಸ್ ಇನ್‌ಸ್ಪೆಕ್ಟರ್‌ಗಳು ಇಸ್ಪಿಟ್‌, ಮದ್ಯದ ದಂಧೆಗೆ ಪೊಲೀಸರೇ ಪ್ರೋತ್ಸಾಹ ಕೊಡುತ್ತಿದ್ದಾರೆ. ಕರ್ನಾಟಕವು ಜಂಗಲ್ ರಾಜ್ಯ ಆಗಿದೆ ಎಂದ ಅವರು, ಕಾಂಗ್ರೆಸ್ ಸ್ಥಳೀಯ ನಾಯಕರ ಬೆಂಬಲದಿಂದ ಪುಡಿ ರೌಡಿಗಳು ಮತ್ತೆ ಇಸ್ಪೇಟ್ ಕ್ಲಬ್, ಜೂಜು ಆರಂಭಿಸಿದ್ದಾರೆ ಎಂದರು.ಸಿದ್ದರಾಮಯ್ಯನವರು ಇಂಥ ವಿಚಾರದಲ್ಲಿ ಯಾಕೆ ಮಾತನಾಡುತ್ತಿಲ್ಲ? ಅಲ್ಪಸಂಖ್ಯಾತರ ತುಷ್ಟೀಕರಣ ಮೇರೆ ಮೀರಿದೆ ಎಂದು ಟೀಕಿಸಿದರು.ಈ ವೇಳೆ ಮಾಜಿ ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಡಾ. ಸಿ.ಎನ್. ಅಶ್ವತ್ಥನಾರಾಯಣ್, ಶಾಸಕ ಎಸ್.ಆರ್.ವಿಶ್ವನಾಥ್, ಪಕ್ಷದ ಮುಖ್ಯ ವಕ್ತಾರ ಅಶ್ವತ್ಥನಾರಾಯಣ್ ಮತ್ತಿತರರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮಸ್ಯೆ ಬಗೆಹರಿದ್ರೆ 6 ತಿಂಗಳಲ್ಲಿ 1 ಲಕ್ಷ ನೇಮಕಾತಿ : ಸಾರಿಗೆ ಸಚಿವ
ಸರ್ಕಾರದಿಂದ ಮಹತ್ವದ ನಿರ್ಧಾರ : ವಿಪತ್ತು ವೇಳೆ ಇಡೀ ಊರಿನ ರೈತರಿಗೆ ಪರಿಹಾರ