ರನ್ನ ಸಕ್ಕರೆ ಕಾರ್ಖಾನೆ ಉಳಿಸಲು ಶತಪ್ರಯತ್ನ

KannadaprabhaNewsNetwork |  
Published : Sep 25, 2024, 12:55 AM IST
ಲೋಕಾಪುರ | Kannada Prabha

ಸಾರಾಂಶ

ತಿಮ್ಮಾಪುರ ಗ್ರಾಮದಲ್ಲಿರುವ ಜಿಲ್ಲೆಯ ಏಕೈಕ ಸಹಕಾರಿ ರಂಗದ ರನ್ನ ಸಹಕಾರಿ ಸಕ್ಕರೆ ಕಾರ್ಖಾನೆ ಉಳಿಸಿ ಬೆಳೆಸಲು ಪ್ರಾಮಾಣಿಕ ಕೆಲಸ ಮಾಡುತ್ತೇನೆ. ಪ್ರಸಕ್ತ ಹಂಗಾಮಿನಲ್ಲಿ ಕಾರ್ಖಾನೆ ಪ್ರಾರಂಭಿಸಲು ಶತಪ್ರಯತ್ನ ಮಾಡುವೆ ಎಂದು ಮಾಜಿ ಸಚಿವ ಹಾಗೂ ಬೀಳಗಿ ಶುಗರ್ಸ್ ಅಧ್ಯಕ್ಷ ಎಸ್.ಆರ್.ಪಾಟೀಲ ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ಲೋಕಾಪುರ

ತಿಮ್ಮಾಪುರ ಗ್ರಾಮದಲ್ಲಿರುವ ಜಿಲ್ಲೆಯ ಏಕೈಕ ಸಹಕಾರಿ ರಂಗದ ರನ್ನ ಸಹಕಾರಿ ಸಕ್ಕರೆ ಕಾರ್ಖಾನೆ ಉಳಿಸಿ ಬೆಳೆಸಲು ಪ್ರಾಮಾಣಿಕ ಕೆಲಸ ಮಾಡುತ್ತೇನೆ. ಪ್ರಸಕ್ತ ಹಂಗಾಮಿನಲ್ಲಿ ಕಾರ್ಖಾನೆ ಪ್ರಾರಂಭಿಸಲು ಶತಪ್ರಯತ್ನ ಮಾಡುವೆ ಎಂದು ಮಾಜಿ ಸಚಿವ ಹಾಗೂ ಬೀಳಗಿ ಶುಗರ್ಸ್‌ ಅಧ್ಯಕ್ಷ ಎಸ್.ಆರ್.ಪಾಟೀಲ ಭರವಸೆ ನೀಡಿದರು.

ಮಂಗಳವಾರ ಸಮೀಪದ ತಿಮ್ಮಾಪುರ ಗ್ರಾಮದ ರನ್ನ ಸಕ್ಕರೆ ಕಾರ್ಖಾನೆಯ ಆವರಣದಲ್ಲಿ ನಡೆದ ಶೇರುದಾರರ, ರೈತರ, ಕಾರ್ಖಾನೆ ಹಿತಚಿಂತಕರ, ಕಾರ್ಮಿಕ ಮುಖಂಡರ ಸಲಹೆ, ಸೂಚನೆ ಅಭಿಪ್ರಾಯ ಸಂಗ್ರಹ ಸಭೆಯಲ್ಲಿ ಮಾತನಾಡಿದ ಅವರು, ತೀವ್ರ ಆರ್ಥಿಕ ನಷ್ಟದಲ್ಲಿರುವ ರನ್ನ ಸಹಕಾರಿ ಸಕ್ಕರೆ ಕಾರ್ಖಾನೆ ಪುನರ್ ಆರಂಭಿಸುವಂತೆ ರೈತರು ಮತ್ತು ಕಾರ್ಮಿಕರು ಸಾಕಷ್ಟು ಹೋರಾಟ ನಡೆಸಿದ ಪರಿಣಾಮ ರೈತರ, ಶೇರುದಾರರ, ಕಾರ್ಮಿಕರ ಮತ್ತು ಕಬ್ಬು ಬೆಳೆಗಾರರ ಅನಕೂಲಕ್ಕಾಗಿ ೩೦ ವರ್ಷ ಲೀಸ್ ಮೇಲೆ ಆರಂಭಿಸಲು ಹತ್ತು ಹಲವು ಷರತ್ತುಗಳನ್ನು ವಿಧಿಸಿ ಸರ್ಕಾರ ಟೆಂಡರ್ ಕರೆದಿದ್ದರು. ಕಾರ್ಖಾನೆ ರೂವಾರಿಗಳಾದ ಮಾಜಿ ಸಂಸದ ದಿ.ಎಸ್.ಟಿ.ಪಾಟೀಲ ಆತ್ಮಕ್ಕೆ ಶಾಂತಿ ಸಿಗಲು, ಮುಧೋಳ ತಾಲೂಕಿನ ಜನತೆಯ ಋಣ ತೀರಿಸಲು, ರೈತ ಮುಖಂಡರ, ಶೇರುದಾರರ, ಕಾರ್ಮಿಕರ ಎಲ್ಲರ ಒತ್ತಾಯದ ಮೇರೆಗೆ, ಕಾರ್ಖಾನೆ ಉಳಿಸಿ ಬೆಳೆಸಲು ನಾನು ಟೆಂಡರ್‌ನಲ್ಲಿ ಭಾಗವಹಿಸಿ ಸಹಕಾರಿ ರಂಗದಲ್ಲೇ ಉಳಿಯಲು ಈ ಕಾರ್ಖಾನೆಯನ್ನು ಲೀಜ್‌ನಲ್ಲಿ ಪಡೆದುಕೊಂಡಿದ್ದೇನೆ ಎಂದರು.

ಕಾರ್ಖಾನೆಯ ಏಳ್ಗೆಗೆ ರೈತರ, ಶೇರುದಾರರು ಮತ್ತು ಕಾರ್ಮಿಕರ, ಮುಖಂಡರು ನೀವೆಲ್ಲರೂ ಸಹಾಯ, ಸಹಕಾರ ಅಗತ್ಯವಾಗಿದೆ. ಇನ್ನೆರಡು ದಿನಗಳಲ್ಲಿ ಬಿಡಿಸಿಸಿ ಬ್ಯಾಂಕ್‌ ಬಾಗಲಕೋಟೆ, ಅಪೆಕ್ಸ್ ಬ್ಯಾಂಕ್‌ ಬೆಂಗಳೂರ ಇವರ ಅಭಿಪ್ರಾಯ ಪಡೆದು ಬರುವ ಪ್ರಸ್ತಕ್ತ ಹಂಗಾಮಿನಲ್ಲಿ ಕಾರ್ಖಾನೆ ಪ್ರಾರಂಭಿಸಲು ಶತಃ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.

ಮುಖಂಡ ದಯಾನಂದ ಪಾಟೀಲ ಮಾತನಾಡಿ, ಈ ಕಾರ್ಖಾನೆಯ ಜೊತೆ ರೈತರಿಗೆ ಭಾವನಾತ್ಮಕ ಸಂಬಂಧ ಯಾವುದೇ ಕಾಲಕ್ಕೂ ಕಾರ್ಖಾನೆಯು ನಿಲ್ಲಬಾರದು. ಪ್ರಾರಂಭವಾಗಬೇಕೆಂಬ ಆಸಕ್ತಿ ಇದೆ. ತಾಲೂಕಿನ ರೈತ ಮುಖಂಡರು, ಕಬ್ಬುಬೆಳೆಗಾರರು, ಕಾರ್ಮಿಕರು ಕಾರ್ಖಾನೆ ಪ್ರಾರಂಭಿಸಲು ಸಹಕಾರಿ ಧುರೀಣ ಎಸ್.ಆರ್.ಪಾಟೀಲ ಅವರ ಕೈ ಬಲಪಡಿಸಬೇಕೆಂದು ಮನವಿ ಮಾಡಿದರು.

ರೈತ ಮುಖಂಡ ಹಾಗೂ ಜಿಪಂ ಮಾಜಿ ಉಪಾಧ್ಯಕ್ಷ ಮುತ್ತಪ್ಪ ಕೋಮಾರ ಮಾತನಾಡಿ, ಈ ಕಾರ್ಖಾನೆ ಪ್ರಾರಂಭಿಸಲು ರೈತರು ಮತ್ತು ಕಾರ್ಮಿಕರು ಸಾಕಷ್ಟು ಹೋರಾಟ ಮಾಡುತ್ತಾ ಬಂದಿದ್ದೇವೆ. ಕಾರ್ಖಾನೆ ಮುಚ್ಚಿಹೋಗುವ ಸಂದರ್ಭದಲ್ಲಿ ಆಶಾ ಕಿರಣವಾಗಿ ಬೀಳಗಿ ಶುಗರ್ಸ್‌ ಅಧ್ಯಕ್ಷ ಎಸ್.ಆರ್.ಪಾಟೀಲ ಅವರು ಕಾರ್ಖಾನೆ ಪ್ರಾರಂಭಿಸಲು ಮುಂದೆ ಬಂದಿದ್ದು, ಎಲ್ಲ ರೈತರಿಗೆ, ಕಬ್ಬು ಬೆಳೆಗಾರರಿಗೆ, ಶೇರುದಾರರು ಸಂತಸವನ್ನುಂಟು ಮಾಡಿದೆ. ಕಾರ್ಖಾನೆ ಪ್ರಾರಂಭವಾದ ನಂತರ ಎಲ್ಲ ರೈತರು, ಶೇರುದಾರರು, ಕಾರ್ಮಿಕರು ನಿಮ್ಮ ಜೊತೆ ನಿಲ್ಲುತ್ತೇವೆ ಎಂದು ಭರವಸೆ ನೀಡಿದರು.

ಮುಧೋಳ ತಾಲೂಕು ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಸಂಗನಗೌಡ ಕಾತರಕಿ ಮಾತನಾಡಿ, ಕಾರ್ಖಾನೆ ಪ್ರಾರಂಭಿಸಲು ಬೆಂಬಲ ವ್ಯಕ್ತಪಡಿಸಿ, ಬೀಳಗಿ ಶುಗರ್ಸ್‌ ಕಾರ್ಖಾನೆಯವರಿಗೆ ಲೀಜ್‌ ಮೇಲೆ ಕೊಡಲು ಶೇರುದಾರರು ವಾರ್ಷಿಕ ಸರ್ವ ಸಾಧಾರಣ ಸಭೆ ಕರೆಯಲು ಒತ್ತಾಯಿಸಿದರು.

ಬಾಗಲಕೋಟೆ ಉಪನಿಬಂಧಕರು ಸಹಕಾರ ಸಂಘಗಳು ಮತ್ತು ವ್ಯವಸ್ಥಾಪಕ ನಿರ್ದೇಶಕ ರನ್ನ ಶುಗರ್ಸ್‌ ಧನಂಜಯ ಹಿರೇಮಠ ಮಾತನಾಡಿ, ೧೫ ದಿನದೊಳಗೆ ಕಾರ್ಖಾನೆಯ ಶೇರುದಾರರ ವಾರ್ಷಿಕ ಸರ್ವ ಸಾಧಾರಣ ಸಭೆ ಕರೆಯಲಾಗುವುದು ಎಂದು ತಿಳಿಸಿದರು.

ಈ ವೇಳೆ ಎಸ್.ಆರ್.ಪಾಟೀಲ ನೇತೃತ್ವದಲ್ಲಿ ಬೀಳಗಿ ಶುಗರ್ಸ್‌ ಕಾರ್ಖಾನೆ ಪ್ರಾರಂಭಿಸಲು ವಿವಿಧ ಮುಖಂಡರಾದ ಮಾಜಿ ಜಿಪಂ ಅಧ್ಯಕ್ಷ ಎಲ್.ಕೆ.ಬಳಗಾನೂರ, ದಯಾನಂದ ಪಾಟೀಲ, ವಿಠ್ಠಲ ತುಮ್ಮರಮಟ್ಟಿ, ಕಾಮಣ್ಣ ಜೋಗಿ, ಧರೆಯಪ್ಪ ಸಾಂಗ್ಲೀಕರ, ಬಸವರಾಜ ಜಮಖಂಡಿ ಅಶೋಕ ಕಿವಡಿ, ಸಂಗಣ್ಣಗೌಡ ಕಾರತಕಿ, ಮುತ್ತಪ್ಪ ಕೋಮಾರ, ಶಿವಾನಂದ ಉದಪುಡಿ, ಸಂಗಪ್ಪ ಹಂಚಿನಾಳ, ಸುಗಿರಿಯಪ್ಪ ಅಕ್ಕಿಮರಡಿ, ನ್ಯಾಯವಾದಿ ಯಲ್ಲಪ್ಪ ಹೆಗಡೆ, ಕಾರ್ಮಿಕರ ಒಕ್ಕೂಟದ ಕಾರ್ಯದರ್ಶಿ ಪ್ರಕಾಶ ಕಬ್ಬೂರ ಮಾತನಾಡಿದರು.

ಸಭೆಯಲ್ಲಿ ಬೀಳಗಿ ಶುಗರ್ಸ್‌ ನಿರ್ದೇಶಕ ಎಚ್.ಎಲ್.ಪಾಟೀಲ, ಸುರೇಶಗೌಡ ಪಾಟೀಲ, ರಾಹುಲ್ ನಾಡಗೌಡ, ಕಾರ್ಯಾಚರಣೆ ತಾಂತ್ರಿಕ ವಿಭಾಗಾಧಿಕಾರಿ ದೀಕ್ಷಿತ, ಉದಯ ಸಾರವಾಡ, ಸಂಜು ನಾಯ್ಕ, ರಾಜುಗೌಡ ಪಾಟೀಲ, ರಾಜುಗೌಡ ನ್ಯಾಮಗೌಡ, ಕೆ.ಎಚ್.ಪಾಟೀಲ, ಗಿರೀಶ ಲಕ್ಷಾಣಿ, ಕಲ್ಲಪ್ಪಣ್ಣ ಸಬರದ, ದುಂಡಪ್ಪ ಲಿಂಗರಡ್ಡಿ, ಮಂಜುನಾಥಗೌಡ ಪಾಟೀಲ, ಕೆ.ಆರ್.ಮಾಚಪ್ಪನವರ, ಬಿ.ವ್ಹಿ.ಹಲಕಿ, ನಾಗಪ್ಪ ಅಂಬಿ, ಗಡ್ಡೆಪ್ಪ ಬಾರಕೇರ, ರಾಜು (ನಾರಾಯಣ) ಯಡಹಳ್ಳಿ, ರುದ್ರಪ್ಪ ಅಡವಿ, ವಾಯ್.ಜಿ.ದಾಸರಡ್ಡಿ, ರನ್ನ ಸಕ್ಕರೆ ಕಾರ್ಖಾನೆಯ ಶೇರುದಾರರು ಹಾಗೂ ರೈತ ಮುಖಂಡರು, ಕಾರ್ಖಾನೆಯ ಕಾರ್ಮಿಕರು ಇತರರು ಇದ್ದರು.---------

ಕೋಟ್‌....

ಕಾರ್ಖಾನೆ ಬಂದ್ ಆಗಿದ್ದರಿಂದ ಕಾರ್ಮಿಕ ಕುಟುಂಬದವರು ಆರ್ಥಿಕ ನಷ್ಟ ಹೊಂದಿ ಬೀದಿ ಪಾಲಾಗಿದ್ದಾರೆ. ಕಾರ್ಖಾನೆಯನ್ನು ಬೇಗನೆ ಪ್ರಾರಂಭಿಸಿ ಕಾರ್ಮಿಕರ ೧೪ ತಿಂಗಳ ರೆಗ್ಯೂಲರ್ ವೇತನ ₹೫ ಕೋಟಿ ನೀಡಲು ಒಪ್ಪಿದ್ದು, ಬಾಕಿ ವೇತನವನ್ನು ಹಂತ ಹಂತವಾಗಿ ನೀಡಲು ಒಪ್ಪಿದ್ದರಿಂದ ಎಲ್ಲ ಕಾರ್ಮಿಕರ ಸಂತಸಗೊಂಡಿದ್ದಾರೆ.

-ಈರಣಗೌಡ ಪಾಟೀಲ, ಸಕ್ಕರೆ ಕಾರ್ಖಾನೆ ಕಾರ್ಮಿಕ ಒಕ್ಕೂಟದ ಅಧ್ಯಕ್ಷ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!