ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಕಾರ್ಯಾಗಾರ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ನಾಡಿನ ಆರ್ಥಿಕತೆ ಗತಿಯನ್ನೇ ಬದಲಿಸಿದ ಶಕ್ತಿಯಾಗಿದೆ ಎಂದು ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಎಚ್.ಎಂ.ರೇವಣ್ಣ ತಿಳಿಸಿದರು.

ನಗರದ ಕುವೆಂಪು ಕಲಾಮಂದಿರದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯಿಂದ ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಕಾರ್ಯಾಗಾರದಲ್ಲಿ ಮಾತನಾಡಿ, ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರಾಜ್ಯದ ಬಜೆಟ್ ಗಾತ್ರವನ್ನು ₹2.5 ಲಕ್ಷ ಕೋಟಿ ಗಳಿಂದ ₹4.09 ಲಕ್ಷ ಕೋಟಿಗೆ ಏರಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ ಎಂದು ತಿಳಿಸಿದರು.

ವಿಶ್ವಸಂಸ್ಥೆ ಉನ್ನತ ಅಧಿಕಾರಿಗಳೇ ಕರ್ನಾಟಕಕ್ಕೆ ಭೇಟಿ ನೀಡಿ ಅಭಿವೃದ್ಧಿ ಮಾದರಿಯನ್ನು ವಿಶೇಷವಾಗಿ ಮಹಿಳಾ ಸಬಲೀ ಕರಣ ಮತ್ತು ಉದ್ಯೋಗ ಸೃಷ್ಟಿ ವಿಷಯಕ್ಕೆ ಮುಕ್ತವಾಗಿ ಶ್ಲಾಘಿಸಿದ್ದಾರೆ. ಶಕ್ತಿ ಮತ್ತು ಗೃಹಲಕ್ಷ್ಮಿ ಯೋಜನೆಗಳ ಮೂಲಕ ಮಹಿಳೆಯರು ಆರ್ಥಿಕವಾಗಿ ಸ್ವತಂತ್ರರಾಗುತ್ತಿದ್ದಾರೆ. ಉಚಿತ ಬಸ್ ಪ್ರಯಾಣ ಅವರ ಕೆಲಸದ ಅವಕಾಶಗಳನ್ನು ಹೆಚ್ಚಿಸಿದೆ ಎಂಬುದು ಹೆಮ್ಮೆಯ ವಿಷಯ ಎಂದು ಅಭಿಪ್ರಾಯಪಟ್ಟರು.


ರಾಜ್ಯದಲ್ಲಿ 1,46,056 ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ 1664 ಮರಣ ಹೊಂದಿದವರ ಖಾತೆಗಳಿಗೆ ಗೃಹಲಕ್ಷ್ಮೀ ಹಣ ಜಮೆಯಾಗಿದ್ದು, ಅವುಗಳ ವಾಪಸ್‌ಗೆ ಕ್ರಮ ವಹಿಸಲಾಗುತ್ತಿದೆ ಎಂದು ತಿಳಿಸಿದರು.

ಜಾಗೃತ ಕರ್ನಾಟಕ ಸಂಚಾಲಕ ಡಾ.ಎಚ್.ವಿ.ವಾಸು, ಅಭಿವೃದ್ಧಿ ಚಾಲಕ ಶಕ್ತಿಯಾಗಿ ಗ್ಯಾರಂಟಿಗಳು ಕುರಿತು ಉಪನ್ಯಾಸ ನೀಡಿ, ರಾಜ್ಯ ಸರ್ಕಾರ ಕಳೆದ 2-3 ವರ್ಷಗಳಲ್ಲಿ ಈ ಯೋಜನೆಗಳಿಗೆ ಒಟ್ಟು ₹1.16 ಲಕ್ಷ ಕೋಟಿ ವ್ಯಯಿಸಿದೆ. ಈ ಮೂಲಕ ಜನಸಾಮಾನ್ಯರ ಆರ್ಥಿಕ ಸ್ಥಿತಿ ಬಲಪಡಿಸಲಾಗಿದೆ ಎಂದರು.

ಯೋಜನೆಗಳ ವಿರುದ್ಧ ನಡೆಯುತ್ತಿರುವ ಅಪಪ್ರಚಾರದ ಬಗ್ಗೆ ಮಾತನಾಡಿ ಈ ಗ್ಯಾರಂಟಿ ಜಾರಿಯಾಗಲ್ಲ ಅಥವಾ ಚುನಾವಣೆ ನಂತರ ನಿಂತುಹೋಗುತ್ತವೆ ಎಂಬ ವದಂತಿ ಸುಳ್ಳು. ಮುಂಬರುವ ಬಜೆಟ್‌ನಲ್ಲೂ ಮುಂದುವರಿಯಲಿವೆ. ಈ ಜನರ ಬದುಕು ಹಸನಾಗುತ್ತಿದೆ ಎಂದರು.

ವಿಶೇಷ ವಾಗಿ ಗೃಹಲಕ್ಷ್ಮಿ ಮತ್ತು ಶಕ್ತಿ ಯೋಜನೆ ಮಹಿಳಾ ಸಬಲೀಕರಣಕ್ಕೆ ಪೂರಕ. ಫಲಾನುಭವಿಗಳು ಈ ಯೋಜನೆಗಳ ಬಗ್ಗೆ ಹೆಮ್ಮೆಯಿಂದ ಮಾತನಾಡಬೇಕು ಎಂದು ಕರೆ ನೀಡಿದರು.

ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆ ಅತ್ಯಂತ ಯಶಸ್ವಿಯಾಗಿವೆ. ಗೃಹಲಕ್ಷ್ಮಿ ಯೋಜನೆ ಜಿಲ್ಲೆ ಯಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿದೆ. ಈವರೆಗೆ ಒಟ್ಟು ₹1,319 ಕೋಟಿ ಮಹಿಳೆಯರ ಖಾತೆಗೆ ನೇರವಾಗಿ ಜಮೆಯಾಗಿದೆ. 2,62428 ಮಹಿಳೆಯರು ಪ್ರತಿ ತಿಂಗಳು ಲಾಭ ಪಡೆಯುತ್ತಿದ್ದಾರೆ. ಪ್ರತಿ ತಿಂಗಳು ಸರಾಸರಿ ₹52.45 ಕೋಟಿ ಜಿಲ್ಲೆಯಲ್ಲಿ ವ್ಯಯಿಸಲಾಗುತ್ತಿದೆ. ತಾಂತ್ರಿಕ ಕಾರಣಗಳಿಂದ ಹಣ ಸಂದಾಯವಾಗದ ಪ್ರಕರಣ ಪರಿಹರಿಸಲು ಆಶಾ ಮತ್ತು ಅಂಗನವಾಡಿ ಕಾರ್ಯ ಕರ್ತೆಯರು ಮನೆ ಮನೆಗೆ ಭೇಟಿ ನೀಡಿ ನೆರವಾಗುತ್ತಿದ್ದಾರೆ ಎಂದರು.

’ಶಕ್ತಿ’ ಯೋಜನೆಯಡಿ ಜಿಲ್ಲೆಯ 6 ಡಿಪೋಗಳ ಮೂಲಕ ಒಟ್ಟು ₹5.95 ಕೋಟಿ ಉಚಿತವಾಗಿ ಪ್ರಯಾಣಿಸಿದ್ದಾರೆ. ಈ ಯೋಜನೆ ನಿರ್ವಹಣೆಗಾಗಿ ಸರ್ಕಾರ ಕೆ.ಎಸ್.ಆರ್.ಟಿ.ಸಿಗೆ ₹231ಕೋಟಿ ಅನುದಾನ ನೀಡಿದೆ. ಇದಲ್ಲದೆ, ಪ್ರಯಾಣಿಕರ ಅನುಕೂಲಕ್ಕಾಗಿ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ 8 ರಿಂದ 11 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಿಸಲಾಗಿದೆ ಎಂದರು.

ಜಿಲ್ಲೆಯ ಸುಮಾರು 8,21,596 ಜನರಿದ್ದು ಅಂದರೆ ಜಿಲ್ಲೆಯ ಒಟ್ಟು ಜನಸಂಖ್ಯೆಯ ಶೇ.75 ರಿಂದ 80 ರಷ್ಟು ಜನರನ್ನು ಅನ್ನಭಾಗ್ಯ ಯೋಜನೆ ಅಕ್ಕಿ ಮತ್ತು ಹಣ ತಲುಪಿದಂತಾಗಿದೆ. ಗೃಹಜ್ಯೋತಿ ಯೋಜನೆಯಡಿ ಜಿಲ್ಲೆಯ 3.10 ಲಕ್ಷ ಮನೆಗಳ ಪೈಕಿ 3.06 ಮನೆಗಳಿಗೆ, ಅಂದರೆ ಸುಮಾರು ₹10 ಲಕ್ಷ ಜನರಿಗೆ ಉಚಿತ ವಿದ್ಯುತ್ ದೊರೆಯುತ್ತಿದೆ. ಯುವನಿಧಿಯಲ್ಲಿ 5,641 ಪದವೀಧರ ಹಾಗೂ ಡಿಪ್ಲೊಮಾ ನಿರುದ್ಯೋಗಿಗಳಿಗೆ ಇದುವರೆಗೆ ಒಟ್ಟು ₹14.5 ಕೋಟಿ ಭತ್ಯೆ ನೇರವಾಗಿ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿದೆ ಎಂದು ತಿಳಿಸಿದರು.

ಭದ್ರಾ ಕಾಡಾ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಡಾ.ಪುಷ್ಪಾ ಅಮರನಾಥ್, ಶಾಸಕರಾದ ಜಿ.ಎಚ್.ಶ್ರೀನಿವಾಸ್, ನಯನಾ ಮೋಟಮ್ಮ, ಪರಿಸರ ಮೌಲ್ಯ ಮಾಪನ ಪ್ರಾಧಿಕಾರದ ಅಧ್ಯಕ್ಷ ಎ.ಎನ್.ಮಹೇಶ್, ರಾಜ್ಯ ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮದ ಅಧ್ಯಕ್ಷ ಬಿ,ಎಚ್.ಹರೀಶ್, ನಗರಸಭೆ ಅಧ್ಯಕ್ಷೆ ಶೀಲಾ ದಿನೇಶ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಪಿ.ಮಂಜೇಗೌಡ, ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ಮೊದಲಾದವರಿದ್ದರು. ಸಮಾವೇಶಕ್ಕೆ ಮುನ್ನ ನಗರದ ಆಜಾದ್‌ಪಾರ್ಕ್ ವೃತ್ತದಿಂದ ಕುವೆಂಪು ಕಲಾಮಂದಿರದವರೆಗೆ ಗ್ಯಾರಂಟಿ ಯೋಜನೆಗಳ ಕುರಿತ ಆಕರ್ಷಕ ಮೆರವಣಿಗೆ ನಡೆಯಿತು.