ರಾಜಕೀಯ ತಿಕ್ಕಾಟ, ರೈತರ ಪ್ರತಿಭಟನೆ ನಡುವೆಯೇ ಬಿಡದಿ ಟೌನ್‌ಶಿಪ್‌ಗಾಗಿ ರಾಮನಗರ ಮತ್ತು ಹೇರೋಹಳ್ಳಿ ತಾಲೂಕು ವ್ಯಾಪ್ತಿಯ ಮೂರು ಗ್ರಾಮಗಳ ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಪ್ರಕಟಿಸಲಾಗಿದೆ.
ಬೆಂಗಳೂರು : ರಾಜಕೀಯ ತಿಕ್ಕಾಟ, ರೈತರ ಪ್ರತಿಭಟನೆ ನಡುವೆಯೇ ಬಿಡದಿ ಟೌನ್‌ಶಿಪ್‌ಗಾಗಿ ರಾಮನಗರ ಮತ್ತು ಹೇರೋಹಳ್ಳಿ ತಾಲೂಕು ವ್ಯಾಪ್ತಿಯ ಮೂರು ಗ್ರಾಮಗಳ ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಪ್ರಕಟಿಸಲಾಗಿದೆ.
755 ಭೂ ಮಾಲೀಕರಿಂದ 519.05 ಎಕರೆ ಭೂಸ್ವಾಧೀನಕ್ಕೆ ಅಧಿಸೂಚನೆ
ರಾಮನಗರ ತಾಲೂಕಿನ ಕೆಂಪಯ್ಯನಪಾಳ್ಯ, ಮಂಡಲಹಳ್ಳಿ ಮತ್ತು ಹೇರೋಹಳ್ಳಿ ತಾಲೂಕಿನ ವಡೇರಹಳ್ಳಿಗಳ 755 ಭೂ ಮಾಲೀಕರಿಂದ 519.05 ಎಕರೆ ಭೂಸ್ವಾಧೀನಕ್ಕೆ 2025ರ ಮಾರ್ಚ್‌ನಲ್ಲಿ ಪ್ರಾಥಮಿಕ ಅಧಿಸೂಚನೆ ಪ್ರಕಟಿಸಲಾಗಿತ್ತು. ಇದೀಗ ಆ ಭೂಮಿ ಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಪ್ರಕಟಿಸಲಾಗಿದೆ. ಆ ಪೈಕಿ 20 ಎಕರೆಯಷ್ಟು ಖರಾಬು ಭೂಮಿಯಾಗಿದ್ದು, ಉಳಿಕೆ 499.14 ಎಕರೆ ಭೂಮಿ ಖಾಸಗಿಯವರದ್ದಾಗಿದೆ. ಆಭೂಮಿಯನ್ನು ಇದೀಗ ಪರಿಹಾರ ನೀಡಿ ಭೂಸ್ವಾಧೀನಕ್ಕೆ ನಿರ್ಧರಿಸಲಾಗಿದೆ. ಅಲ್ಲದೆ, ಯೋಜನೆಗಾಗಿ ಭೂಮಿ ನೀಡುವವರಿಗಾಗಿ ಸರ್ಕಾರ ಪರಿಹಾರವನ್ನೂ ನಿಗದಿ ಮಾಡಿದೆ.
ಭೂಮಿಯನ್ನು ನೀಡುವವರಿಗೆ ಎಕರೆಗೆ ತಲಾ 2.07 ಕೋಟಿ ರು. ಪರಿಹಾರ
ಕೆಂಪಯ್ಯನಪಾಳ್ಯ ವ್ಯಾಪ್ತಿಯಲ್ಲಿನ ಭೂಮಿಯನ್ನು ನೀಡುವವರಿಗೆ ಎಕರೆಗೆ ತಲಾ 2.07 ಕೋಟಿ ರು. ಪರಿಹಾರ ನೀಡಲಾಗುತ್ತದೆ. ಮಂಡಲಹಳ್ಳಿ, ವಡೇರಹಳ್ಳಿ ಗ್ರಾಮಗಳ ಭೂಮಿಗೆ ಎಕರೆಗೆ ತಲಾ 2.14 ಕೋಟಿ ರು. ಪರಿಹಾರ ನಿಗದಿ ಮಾಡಲಾಗಿದೆ. ನಗದು ಪರಿಹಾರ ಪಡೆಯಲೊಪ್ಪದವರಿಗೆ ತಮ್ಮ ಭೂಮಿಯ ಪ್ರಮಾಣದ ಸುಮಾರು ಶೇ. 50 ಅಭಿವೃದ್ಧಿ ಹೊಂದಿದ ಭೂಮಿ ನೀಡಲು ನಿರ್ಧರಿಸಲಾಗಿದೆ.
ಬಿಡದಿ ಟೌನ್‌ಶಿಪ್ ಯೋಜನೆಗಾಗಿ ಅಂದಾಜು 9 ಗ್ರಾಮಗಳ 7400 ಎಕರೆಗೂ ಹೆಚ್ಚಿನ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ನಿರ್ಧರಿಸಲಾಗಿದೆ. ಯೋಜನೆಯ ಅಂದಾಜು ವೆಚ್ಚವನ್ನು 20 ಸಾವಿರ ಕೋಟಿ ರು. ನಿಗದಿ ಮಾಡಲಾಗಿದೆ.
ಅಧಿಸೂಚನೆ ವಿರುದ್ಧ ಕಾನೂನು ಹೋರಾಟ: ಕುಮಾರಸ್ವಾಮಿ
‘ಬಿಡದಿ ಭಾಗದಲ್ಲಿ ರಿಯಲ್ ಎಸ್ಟೇಟ್ ದಂಧೆ ನಡೆಸಲು ಟೌನ್ ಶಿಪ್ ನೆಪದಲ್ಲಿ ನೋಟಿಫೈ ಮಾಡಿರುವ ಭೂಮಿಯ ಮಾಲೀಕರು ಅಸಲಿ ರೈತರೋ ಅಲ್ಲವೋ ಎಂಬುದನ್ನು ತೀರ್ಮಾನಿಸಲು ಸ್ವತಃ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ನನ್ನೊಂದಿಗೆ ಆ ನೊಂದ ಹಳ್ಳಿಗಳಿಗೆ ಬರಲಿ’ ಎಂದು ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ರೈತರ ತೀವ್ರ ವಿರೋಧದ ನಡುವೆಯೂ ಬಿಡದಿ ಟೌನ್ ಶಿಪ್ ಯೋಜನೆ ಭೂ ಸ್ವಾಧೀನಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರವು ಅಂತಿಮ ಅಧಿಸೂಚನೆ ಹೊರಡಿಸಿದೆ. ಈ ರೈತದ್ರೋಹದ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು. ಭೂಮಿ ಕಳೆದುಕೊಳ್ಳುತ್ತಿರುವ ಅನ್ನದಾತರ ಪರವಾಗಿ ನಾನು ಹೋರಾಡುತ್ತೇನೆ ಎಂದು ಘೋಷಿಸಿದರು.
ರೈತರನ್ನು ರೈತರೇ ಅಲ್ಲ ಎಂದು ಹೇಳುತ್ತಿರುವುದು ಅಹಂಕಾರದ ಪರಮಾವಧಿ. ಅನ್ನ ಕೊಡುವ ರೈತನಿಗೆ ಮಾಡುವ ಘೋರ ಅಪಮಾನ ಇದಾಗಿದೆ. ನಿಜಕ್ಕೂ ಅವರು ರೈತರೋ ಅಲ್ಲವೋ ಎಂಬುದನ್ನು ತಿಳಿಯಲು ಮುಖ್ಯಮಂತ್ರಿ ಆ ಗ್ರಾಮಗಳಿಗೆ ಬರಲಿ. ನಾನು ಕೂಡ ಅಲ್ಲಿಗೆ ಹೋಗುತ್ತೇನೆ. ಭೂಮಿ ಕಳೆದುಕೊಳ್ಳುತ್ತಿರುವ ಆ ಜನರು ರೈತರೋ ಅಲ್ಲವೋ ಎನ್ನುವುದು ಆ ಹಳ್ಳಿಗಳಲ್ಲಿಯೇ ತೀರ್ಮಾನ ಆಗಲಿ ಎಂದು ಖಡಕ್ಕಾಗಿ ಹೇಳಿದರು.
ರೈತರ ಮೇಲೆ ದರ್ಪ:
ರೈತರು 470 ದಿನಗಳಿಂದ ಪ್ರತಿಭಟನೆ ಮಾಡುತ್ತಿದ್ದಾರೆ. ಅಲ್ಲಿರುವುದು ಫಲವತ್ತಾದ ಕೃಷಿ ಭೂಮಿ. ಅದನ್ನು ಕಸಿದುಕೊಂಡು ರಿಯಲ್ ಎಸ್ಟೇಟ್ ದಂಧೆ ಮಾಡಲು ಈ ಸರ್ಕಾರ ಹೊರಟಿದೆ. ಈಗ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದೆ. ಪ್ರತಿಭಟನೆ ಮಾಡುತ್ತಿರುವ ರೈತರ ಮೇಲೆ ಎಫ್ಐಆರ್ ಹಾಕಲಾಗುತ್ತಿದೆ. ಗೃಹ ಸಚಿವರು ನೋಡಿದರೆ ಯಾವುದೇ ಎಫ್''''ಐಆರ್ ಹಾಕಿಲ್ಲ ಎಂದು ಹೇಳುತ್ತಿದ್ದಾರೆ. ರಾಜ್ಯದಲ್ಲಿ ಏನು ನಡೆಯುತ್ತಿದೆ ಎಂಬುದು ಗೊತ್ತಾಗುತ್ತಿಲ್ಲ. ಸರ್ಕಾರವೇ ದೌರ್ಜನ್ಯ ದರ್ಪ ನಡೆಸುತ್ತಿದೆ ಎಂದು ಕಿಡಿಕಾರಿದರು.
ರೈತರ ವಿರೋಧದಿಂದ ಕೈಬಿಟ್ಟೆ:
2006ರಲ್ಲಿ ಬಿಡದಿ ಸೇರಿ ಐದು ಟೌನ್ ಶಿಪ್ ಗಳನ್ನು ಮಾಡಬೇಕೆಂದು ನಾನು ತೀರ್ಮಾನ ಮಾಡಿದ್ದೆ. ಅದಕ್ಕೆ ರೈತರಿಂದ ತೀವ್ರ ವಿರೋಧ ಬಂದಿದ್ದರಿಂದ ನಾನು ಆ ಯೋಜನೆಯನ್ನು ಮುಲಾಜಿಲ್ಲದೆ ಅಲ್ಲಿಗೆ ಕೈಬಿಟ್ಟೆ. ನಾನು ಜನರ ಹಿತಕ್ಕಾಗಿ ಕೈ ಬಿಟ್ಟ ಯೋಜನೆಯನ್ನು ಇವರು ತಮ್ಮ ಸ್ವಾರ್ಥಕ್ಕಾಗಿ ಪುನಾ ಕೈಗೆತ್ತಿಕೊಂಡಿದ್ದಾರೆ. ಬಡಜನರ ಭೂಮಿಯನ್ನು ರಿಯಲ್ ಎಸ್ಟೇಟ್ ದಂಧೆಗೆ ಬಳಕೆ ಮಾಡಿಕೊಳ್ಳಲು ಹೀಗೆ ಮಾಡುತ್ತಿದ್ದಾರೆ ಎಂದು ಸಚಿವ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
