ಕನ್ನಡಪ್ರಭ ವಾರ್ತೆ, ಚಿಕ್ಕಬಳ್ಳಾಪುರ:
ಕಾರ್ಪೊರೇಟ್ ರಿಯಲ್ ಎಸ್ಟೇಟ್ ಭೂ ಕಬಳಿಕೆ ವಿರುದ್ಧ ಹೋರಾಡುತ್ತಿರುವ ರಾಮನಗರ ಜಿಲ್ಲೆ ಬಿಡದಿ ಹೋಬಳಿ ಬೈರಮಂಗಲ ಹಾಗೂ ಕಂಚುಗಾರನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ರೈತರನ್ನು ಬೆಂಬಲಿಸಿ. ಬಿಡದಿ ಟೌನ್ ಶಿಪ್ ಯೋಜನೆಗೆ ನೀಡಿರುವ ಸಂಪುಟ ಅನುಮೋದನೆ ವಾಪಸು ಪಡೆಯುವಂತೆ ಸರ್ಕಾರಕ್ಕೆ ಆಗ್ರಹಿಸಿ ಕರ್ನಾಟಕ ಪ್ರಾಂತ್ಯ ರೈತ ಸಂಘ(ಕೆಪಿಆರ್‌ಎಸ್) ದಿಂದ ಮೇ 29 ರಂದು ಬೈರಮಂಗಲ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಆರ್‌ಎಸ್ ಜಿಲ್ಲಾ ಗೌರವಾಧ್ಯಕ್ಷ ಬಿ.ಎನ್. ಮುನಿಕೃಷ್ಣಪ್ಪ ತಿಳಿಸಿದರು.ನಗರದ ಜಿಲ್ಲಾ ಸಿಪಿಐಎಂ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೈರಮಂಗಲ ಕ್ರಾಸ್ ಹಾರೋಹಳ್ಳಿ ಮುಖ್ಯರಸ್ತೆಯ ಅಬ್ಬನಕುಪ್ಪೆ ಬಿಎಂಟಿಸಿ ಬಸ್ ಡಿಪೋದಿಂದ ಮೇ 29ರ ಬೆಳಗ್ಗೆ 11 ಗಂಟೆಗೆ ಪ್ರಾರಂಭವಾಗುವ ಮೆರವಣಿಗೆಯನ್ನು ಅಖಿಲ ಭಾರತ ಕಿಸಾನ್ ಸಭಾ ರಾಷ್ಟ್ರೀಯ ಸಹ ಕಾರ್ಯದರ್ಶಿ ಡಿ. ರವೀಂದ್ರನ್ ಉದ್ಘಾಟಿಸಲಿದ್ದು, ಸಿಐಟಿಯು ರಾಜ್ಯ ಪ್ರದಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ, ಕರ್ನಾಟಕ ಪ್ರಾಂತ ರೈತ ಸಂಘ ರಾಜ್ಯಾಧ್ಯಕ್ಷ ಯು ಬಸವರಾಜ, ರಾಜ್ಯ ಪ್ರಧಾನ ಕಾರ್ಯದರ್ಶಿ ಯಶವಂತ ಟಿ, ಹಿರಿಯ ರೈತ ಮುಖಂಡರಾದ ಎನ್ ವೆಂಕಟಾಚಲಯ್ಯ ಸೇರಿ ರೈತ ಸಂಘದ ಕಾರ್ಯಕರ್ತರು ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.
ಕೆಪಿಆರ್‌ಸ್ ಕಾರ್ಯದರ್ಶಿ ಚನ್ನರಾಯಪ್ಪ ಮಾತನಾಡಿ, ಫಲವತ್ತಾದ ನೀರಾವರಿ ಕೃಷಿ ಭೂಮಿ ನಾಶ ಮಾಡಿ ನಿರ್ಮಿಸಲು ಉದ್ದೇಶಿಸಿರುವ ಬಿಡದಿ ಟೌನ್ ಶಿಪ್ ಯೋಜನೆ ರೈತ ವಿರೋಧಿ ಹಾಗೂ ಜೀವ ಪರಿಸರ ವ್ಯವಸ್ಥೆಗೆ ವಿನಾಶಕಾರಿಯಾಗಿದ್ದು ರೈತರ ಪಕ್ಷಾತೀತ ವಿರೋಧವನ್ನೂ ಲೆಕ್ಕಿಸದೇ ಏಪ್ರಿಲ್ 30 ರಂದು ರಾಜ್ಯ ಸರ್ಕಾರದ ಅನುಮೋದನೆ ನೀಡಿರುವುದು ರೈತರ ಸಂವಿಧಾನ ಬದ್ಧ ಹಕ್ಕುಗಳ ಉಲ್ಲಂಘನೆ ಹಾಗೂ ಸರ್ವಾಧಿಕಾರಿ ಕ್ರಮವಾಗಿದೆ ಎಂದು ಆರೋಪಿಸಿದರು.ಈ ಹಿನ್ನೆಲೆಯಲ್ಲಿ ರೈತರ ಹೋರಾಟ ಬಲಪಡಿಸಲು ಹಾಗೂ ಹೋರಾಡುತ್ತಿರುವ ರೈತರಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ಕರ್ನಾಟಕ ಪ್ರಾಂತ ರೈತ ಸಂಘ ಬೈರಮಂಗಲ ಚಲೋ ಹಮ್ಮಿಕೊಂಡಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕೆಪಿಆರ್‌ಎಸ್ ನ ಡಿ.ಟಿ. ಮುನಿಸ್ವಾಮಿ, ಲಕ್ಷ್ಮೀನಾರಾಯಣರೆಡ್ಡಿ, ಶ್ರೀನಿವಾಸ, ಡಿ.ಎನ್.ಬಾಬು, ವೆಂಕಟಸ್ವಾಮಿರೆಡ್ಡಿ ಮತ್ತಿತರರು ಇದ್ದರು.
ಸಿಕೆಬಿ-1 ಸುದ್ದಿಗೋಷ್ಠಿಯಲ್ಲಿ ಬಿ.ಎನ್. ಮುನಿಕೃಷ್ಣಪ್ಪ ಮಾತನಾಡಿದರು.