ಬೆಂಗಳೂರು: ಮಿಲನ್-ಫರ್ಟಿಲಿಟಿ ಆ್ಯಂಡ್ ಬರ್ತಿಂಗ್ ಆಸ್ಪತ್ರೆಯು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ (SAST) ಮತ್ತು ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ (AB-ArK) ಯೋಜನೆಗಳಡಿ ಮಾನ್ಯತೆ ಪಡೆದಿದ್ದು, ಕರ್ನಾಟಕದ ಅರ್ಹ ಫಲಾನುಭವಿಗಳಿಗೆ ಐವಿಎಫ್ ಸೇರಿದಂತೆ ಸರ್ಕಾರದಿಂದ ಅನುಮೋದಿತ ಅಸಿಸ್ಟೆಡ್ ರಿಪ್ರೊಡಕ್ಟಿವ್ ಟೆಕ್ನಾಲಜಿ (ART) ಸೇವೆಗಳನ್ನು ನೀಡಲು ಆರಂಭಿಸಿದೆ.ಈ ಮಾನ್ಯತೆಯೊಂದಿಗೆ ಕರ್ನಾಟಕದ ಅರ್ಹ ಬಿಪಿಎಲ್ ಪಡಿತರ ಚೀಟಿದಾರರು ಸರ್ಕಾರದ ಆರೋಗ್ಯ ಯೋಜನೆಗಳಡಿ ನಿಗದಿಪಡಿಸಲಾದ ಅರ್ಹತಾ ಮಾನದಂಡಗಳು, ಟ್ರೀಟ್‌ಮೆಂಟ್ ಪ್ಯಾಕೇಜ್, ರೆಫರಲ್ ಪ್ರಕ್ರಿಯೆ ಹಾಗೂ ಮಾರ್ಗಸೂಚಿಗಳಿಗೆ ಒಳಪಟ್ಟು, ಆಯ್ದ ಮಿಲನ್ ಕೇಂದ್ರಗಳಲ್ಲಿ ಶೇ. 100ರಷ್ಟು ನಗದುರಹಿತವಾಗಿ ಅನುಮೋದಿತ ಫರ್ಟಿಲಿಟಿ ಚಿಕಿತ್ಸೆಯನ್ನು ಪಡೆಯಬಹುದಾಗಿದೆ.ಬೆಂಗಳೂರಿನ ''ಮಿಲನ್ ಬಿಎಸಿಸಿ ಹೆಲ್ತ್‌ಕೇರ್ ಪ್ರೈ.ಲಿ.'' ಹಾಗೂ ''ಮಿಲನ್ ಯುನಿಟ್ ಆಫ್ ಬಿಎಸಿಸಿ ಹೆಲ್ತ್‌ಕೇರ್ ಪ್ರೈ.ಲಿ.'' ಕೇಂದ್ರಗಳು ಈ ಯೋಜನೆಯಡಿ ಉಚಿತ ಐವಿಎಫ್ (ಸೇವೆ ಒದಗಿಸಲು ಸರ್ಕಾರದಿಂದ ಅನುಮೋದನೆ ಪಡೆದ ಆಸ್ಪತ್ರೆಗಳ ಪಟ್ಟಿಗೆ ಅಧಿಕೃತವಾಗಿ ಸೇರ್ಪಡೆಗೊಂಡಿವೆ. ಸರ್ಕಾರದ ನಿಗದಿತ ಪರಿಶೀಲನೆ ಹಾಗೂ ಮುಂಗಡ ಅನುಮೋದನೆ ಕ್ರಿಯೆಯನ್ನು ಪೂರ್ಣಗೊಳಿಸುವ ಅರ್ಹ ಫಲಾನುಭವಿಗಳು, ಈ ನೋಂದಾಯಿತ ಮಿಲನ್ ಕೇಂದ್ರಗಳಲ್ಲಿ ಉಚಿತ ಐವಿಎಫ್ ಸೇರಿದಂತೆ ಅನುಮೋದಿತ ಫರ್ಟಿಲಿಟಿ ಚಿಕಿತ್ಸೆಯ ಸೌಲಭ್ಯವನ್ನು ಪಡೆಯಬಹುದಾಗಿದೆ.ಫರ್ಟಿಲಿಟಿ ಚಿಕಿತ್ಸೆಯ ಅಗತ್ಯವಿದ್ದರೂ, ಸುಧಾರಿತ ಸಂತಾನೋತ್ಪತ್ತಿ ಆರೈಕೆಯ ವೆಚ್ಚ ಭರಿಸಲು ಸಾಧ್ಯವಾಗದೆ ಆರ್ಥಿಕ ಅಡೆತಡೆಗಳನ್ನು ಎದುರಿಸುತ್ತಿರುವ ದುರ್ಬಲ ವರ್ಗದ ಕುಟುಂಬಗಳಿಗೆ ಈ ಯೋಜನೆಯು ನೆರವಾಗುವ ನಿರೀಕ್ಷೆಯಿದೆ. ಯೋಜನೆಯ ಪ್ರಯೋಜನ ಪಡೆಯಲು ಅರ್ಹ ಫಲಾನುಭವಿಗಳು ಎಬಿ-ಆರ್‌ಕೆ ಐಡಿ, ಬಿಪಿಎಲ್ ಪಡಿತರ ಚೀಟಿ, ಆಧಾರ್ ಕಾರ್ಡ್ ಸೇರಿದಂತೆ ಅಗತ್ಯ ದಾಖಲೆಗಳನ್ನು ಸಲ್ಲಿಸಿ, ಕರ್ನಾಟಕದ ಬಿಪಿಎಲ್ ಫಲಾನುಭವಿಗಳೆಂಬುದನ್ನು ದೃಢೀಕರಿಸುವ ಪರಿಶೀಲನಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಾಗುತ್ತದೆ.ಚಿಕಿತ್ಸೆಗೆ ಮುನ್ನ ಪೂರ್ವಾನುಮೋದನೆ ಪ್ರಕ್ರಿಯೆ ಆರಂಭಿಸಲು, ಸರ್ಕಾರಿ ಆಸ್ಪತ್ರೆ ಅಥವಾ ಸರ್ಕಾರಿ ವೈದ್ಯಕೀಯ ಕಾಲೇಜಿನ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಮುಖ್ಯಸ್ಥರು ನೀಡಿರುವ ರೆಫರಲ್ ಪತ್ರ ಕಡ್ಡಾಯವಾಗಿದೆ. ಬಳಿಕ ಫಲಾನುಭವಿಗಳು ಸಲ್ಲಿಸಿದ ಅಗತ್ಯ ದಾಖಲೆಗಳನ್ನು ಪರಿಶೀಲಿಸಿದ ನಂತರ, ಅನುಮೋದನೆಗಾಗಿ ಸರ್ಕಾರದ ನಿಗದಿತ ಪೋರ್ಟಲ್ ಮೂಲಕ ಚಿಕಿತ್ಸಾ ಪ್ಯಾಕೇಜ್ ಅನ್ನು ಸಲ್ಲಿಸಲಾಗುತ್ತದೆ.ಈ ವಿನೂತನ ಉಪಕ್ರಮದ ಕುರಿತು ಮಾತನಾಡಿದ ''ಮಿಲನ್ – ಫರ್ಟಿಲಿಟಿ ಆ್ಯಂಡ್ ಬರ್ತಿಂಗ್ ಆಸ್ಪತ್ರೆ''ಯ ನಿರ್ದೇಶಕಿ ಅಂಜಲಿ ಅಜಯ್‌ಕುಮಾರ್, "ಬಂಜೆತನವನ್ನು ಕೇವಲ ವೈಯಕ್ತಿಕ ಸಮಸ್ಯೆ ಎನ್ನುವುದಕ್ಕಿಂತ, ಸಾರ್ವಜನಿಕ ಆರೋಗ್ಯದ ಪ್ರಮುಖ ಸವಾಲಾಗಿ ಪರಿಗಣಿಸಲಾಗುತ್ತಿದೆ. ಜಾಗತಿಕ ಮಟ್ಟದಲ್ಲಿ ಆರರಲ್ಲಿ ಒಬ್ಬರು ತಮ್ಮ ಸಂತಾನೋತ್ಪತ್ತಿಯ ವಯಸ್ಸಿನಲ್ಲಿ ಬಂಜೆತನದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಅಂತೆಯೇ, ಭಾರತದಲ್ಲಿಯೂ ಲಕ್ಷಾಂತರ ದಂಪತಿಗಳು ಫರ್ಟಿಲಿಟಿ ಚಿಕಿತ್ಸೆಗಾಗಿ ಎದುರು ನೋಡುತ್ತಿದ್ದಾರೆ. ಆದರೆ, ಆರ್ಥಿಕವಾಗಿ ಹಿಂದುಳಿದ ಅನೇಕ ಕುಟುಂಬಗಳಿಗೆ ಚಿಕಿತ್ಸೆಯ ದುಬಾರಿ ವೆಚ್ಚವೇ ಅತಿ ದೊಡ್ಡ ತಡೆಗೋಡೆಯಾಗಿದೆ. ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ (SAST) ಹಾಗೂ ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ ಯೋಜನೆಗಳಡಿ ನಗದುರಹಿತ ಫರ್ಟಿಲಿಟಿ ಸೇವೆಗಳನ್ನು ಆರಂಭಿಸಿರುವುದು, ಕರ್ನಾಟಕದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಡಿ ಅರ್ಹ ಫಲಾನುಭವಿಗಳಿಗೆ ಸರ್ಕಾರದಿಂದ ಅನುಮೋದಿತ ಚಿಕಿತ್ಸೆಗಳನ್ನು ಸುಲಭವಾಗಿ ಕೈಗೆಟುಕುವಂತೆ ಮಾಡುವ ಮಹತ್ವದ ಹೆಜ್ಜೆಯಾಗಿದೆ. ಪ್ರತಿಯೊಬ್ಬ ಅರ್ಹ ದಂಪತಿಯೂ ಘನತೆ, ಸಮಾನತೆ ಮತ್ತು ಗುಣಮಟ್ಟದ ವೈದ್ಯಕೀಯ ಆರೈಕೆಯೊಂದಿಗೆ ಪೋಷಕರಾಗುವ ಹಕ್ಕನ್ನು ಹೊಂದಿರಬೇಕು ಎಂಬುದು ನಮ್ಮ ಆಶಯವಾಗಿದೆ ಎಂದು ತಿಳಿಸಿದರು.ಯೋಜನೆಯ ಯಶಸ್ವಿ ಅನುಷ್ಠಾನದ ಭಾಗವಾಗಿ, ಮಿಲನ್ ಆಸ್ಪತ್ರೆಯು ತನ್ನ ಬಿಲ್ಲಿಂಗ್, ಆಡಳಿತ ಹಾಗೂ ಕಾರ್ಯಾಚರಣೆ ವಿಭಾಗದ ಸಿಬ್ಬಂದಿಗೆ ವಿಶೇಷ ತರಬೇತಿ ನೀಡಿದೆ. ಯೋಜನೆಯಡಿ ಫಲಾನುಭವಿಗಳ ಅರ್ಹತೆ, ಅಗತ್ಯ ದಾಖಲಾತಿ, ಮುಂಗಡ ಅನುಮೋದನೆ ಹಾಗೂ ಕ್ಲೈಮ್ ಪ್ರಕ್ರಿಯೆಗಳ ಕುರಿತು ಸಿಬ್ಬಂದಿಗೆ ಸಂಪೂರ್ಣ ಮಾಹಿತಿ ಒದಗಿಸಲಾಗಿದೆ. ಅಲ್ಲದೆ, ಬಿಪಿಎಲ್ ಪಡಿತರ ಚೀಟಿ, ಆಧಾರ್ ವಿವರ, ಶಿಫಾರಸು ಪತ್ರ, ಕ್ಲಿನಿಕಲ್ ನೋಟ್ಸ್, ಟ್ರೀಟ್‌ಮೆಂಟ್ ಪ್ಲಾನ್ ಹಾಗೂ ಡಯಾಗ್ನೋಸ್ಟಿಕ್ ರಿಪೋರ್ಟ್ ಸೇರಿದಂತೆ ಯೋಜನೆಯಡಿ ಅಗತ್ಯವಿರುವ ಎಲ್ಲಾ ಪೂರಕ ದಾಖಲೆಗಳನ್ನು ಸಮರ್ಪಕವಾಗಿ ನಿರ್ವಹಿಸುವ ಬಗ್ಗೆ ಆಸ್ಪತ್ರೆಯ ತಂಡಗಳಿಗೆ ಅರಿವು ಮೂಡಿಸಲಾಗಿದೆ.ಈ ಯೋಜನೆಯಡಿ ಪ್ರಯೋಜನ ಪಡೆಯಲು ಬಯಸುವವರು ಕಡ್ಡಾಯವಾಗಿ ಕರ್ನಾಟಕದ ಬಿಪಿಎಲ್ ಪಡಿತರ ಚೀಟಿ ಹೊಂದಿರಬೇಕು ಹಾಗೂ ಚಿಕಿತ್ಸೆ ಆರಂಭಿಸುವ ಮುನ್ನ ನಿಗದಿತ ಅರ್ಹತಾ ಪರಿಶೀಲನೆ ಪೂರ್ಣಗೊಳಿಸುವುದು ಕಡ್ಡಾಯವಾಗಿದೆ. ಬಿಪಿಎಲ್ ರೇಷನ್ ಕಾರ್ಡ್, ಆಧಾರ್ ಹಾಗೂ ಇತರ ಅಗತ್ಯ ಮಾನ್ಯ ದಾಖಲೆಗಳನ್ನು ಸಲ್ಲಿಸಿ ಈ ಪರಿಶೀಲನೆ ಪೂರ್ಣಗೊಳಿಸಬೇಕಾಗುತ್ತದೆ. ಫಲಾನುಭವಿಗಳ ಪರಿಶೀಲನೆ, ರೆಫರಲ್ ಮೌಲ್ಯೀಕರಣ, ಮುಂಗಡ ಅನುಮೋದನೆ, ಅನುಮೋದಿತ ಎಆರ್‌ಟಿಪ್ಯಾಕೇಜ್ ಆಯ್ಕೆ, ಕ್ಲಿನಿಕಲ್ ದಾಖಲೆಗಳ ಸಲ್ಲಿಕೆ ಹಾಗೂ ಸರ್ಕಾರದ ಮಾರ್ಗಸೂಚಿಯನ್ವಯ ಕ್ಲೇಮ್ ಪ್ರಕ್ರಿಯೆಗಳನ್ನು ಒಳಗೊಂಡ ವ್ಯವಸ್ಥಿತ ಹಾಗೂ ರಚನಾತ್ಮಕ ಹಂತಗಳ ಮೂಲಕ ಈ ಸಂಪೂರ್ಣ ಚಿಕಿತ್ಸಾ ಪ್ರಕ್ರಿಯೆ ಮುಂದುವರಿಯುತ್ತದೆ.ಈ ಕುರಿತು ಪ್ರತಿಕ್ರಿಯಿಸಿದ ''ಮಿಲನ್ - ಫರ್ಟಿಲಿಟಿ ಅಂಡ್ ಬರ್ತಿಂಗ್ ಆಸ್ಪತ್ರೆ''ಯ ಗ್ರೂಪ್ ಸಿಒಒ ಡಾ. ದೀಪನ್ ಶಾ, "ಆರ್ಥಿಕವಾಗಿ ದುರ್ಬಲವಾಗಿರುವ ವರ್ಗದವರಿಗೆ ವೈದ್ಯಕೀಯ ಸೇವೆಗಳನ್ನು ಸುಲಭವಾಗಿ ಕೈಗೆಟುಕುವಂತೆ ಮಾಡುವಲ್ಲಿ SAST ಮತ್ತು AB-ArK ನಂತಹ ಸರ್ಕಾರಿ ಆರೋಗ್ಯ ಯೋಜನೆಗಳು ಬಹುಮುಖ್ಯ ಪಾತ್ರ ವಹಿಸುತ್ತವೆ. ಈ ಸರ್ಕಾರಿ ಮಾನ್ಯತೆಯಿಂದಾಗಿ, ಅರ್ಹ ಫಲಾನುಭವಿಗಳು ಅತ್ಯಂತ ಪಾರದರ್ಶಕ ಹಾಗೂ ವ್ಯವಸ್ಥಿತ ಪ್ರಕ್ರಿಯೆಯ ಮೂಲಕ ಫರ್ಟಿಲಿಟಿ ಚಿಕಿತ್ಸೆಯ ನೆರವು ಪಡೆಯಬಹುದಾಗಿದೆ ಎಂದು ತಿಳಿಸಿದರು.ಸರ್ಕಾರದ ಮಾರ್ಗಸೂಚಿಗಳ ಪ್ರಕಾರ, ಅನುಮೋದಿತ ಪ್ಯಾಕೇಜ್‌ಗಳಿಗೆ ಒಳಪಟ್ಟು ಎಆರ್‌ಟಿ ಚಿಕಿತ್ಸೆಯು ಪ್ರತಿ ಅರ್ಹ ದಂಪತಿಗೆ ಕೇವಲ ಒಂದು ಬಾರಿಗೆ ಮಾತ್ರ ಲಭ್ಯವಿರುತ್ತದೆ. ಈ ಸೌಲಭ್ಯವನ್ನು ಒಂದು ''ಫ್ರೆಶ್ ಸೈಕಲ್'' ಅಥವಾ ಒಂದು ''ಫ್ರೋಜನ್ ಸೈಕಲ್''ಗೆ ಬಳಸಿಕೊಳ್ಳಬಹುದು. ಒಂದು ವೇಳೆ, ಅಂಡಾಣು ಹೊರತೆಗೆದ ಬಳಿಕ ಯಾವುದೇ ಕಾರಣಕ್ಕೆ ಟ್ರೀಟ್‌ಮೆಂಟ್ ಸೈಕಲ್ ರದ್ದಾದರೂ ಸಹ, ಯೋಜನೆಯ ಪ್ರಯೋಜನವನ್ನು ಬಳಸಿಕೊಳ್ಳಲಾಗಿದೆ ಎಂದೇ ಪರಿಗಣಿಸಲಾಗುತ್ತದೆ. ಗಮನಿಸಿ, ದಾನಿಗಳ ವೀರ್ಯ, ದಾನಿಗಳ ಅಂಡಾಣು ಹಾಗೂ ಬಾಡಿಗೆ ತಾಯ್ತನದಂತಹ ಪ್ರಕ್ರಿಯೆಗಳು ಈ ಯೋಜನೆಯ ವ್ಯಾಪ್ತಿಗೆ ಒಳಪಡುವುದಿಲ್ಲ.ಈ ಸರ್ಕಾರಿ ಮಾನ್ಯತೆಯೊಂದಿಗೆ, ಅನುಮೋದಿತ ಎಆರ್‌ಟಿ (ART) ಪ್ಯಾಕೇಜ್ ಅಡಿ ಅರ್ಹ ಕುಟುಂಬಗಳಿಗೆ ಫರ್ಟಿಲಿಟಿ ಚಿಕಿತ್ಸೆಯನ್ನು ಸುಲಭವಾಗಿ ತಲುಪಿಸುವ ಹಾಗೂ ಆ ಮೂಲಕ ಕರ್ನಾಟಕದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುವ ಗುರಿಯನ್ನು ''ಮಿಲನ್'' ಹೊಂದಿದೆ.
ಸರ್ಕಾರಿ ಆರೋಗ್ಯ ಯೋಜನೆಗಳಡಿ ಅರ್ಹ ಬಿಪಿಎಲ್ ಕುಟುಂಬಗಳಿಗೆ ನಗದು ರಹಿತ ಐವಿಎಫ್ ಸೇವೆ ಆರಂಭಿಸಿದ ‘ಮಿಲನ್’
ಸರ್ಕಾರಿ ಯೋಜನೆಯ ಮಾರ್ಗಸೂಚಿಗಳ ಅನ್ವಯ, ಅರ್ಹ ಫಲಾನುಭವಿಗಳು ಇದೀಗ ಆಯ್ದ ಮಿಲನ್ ಕೇಂದ್ರಗಳಲ್ಲಿ ಸರ್ಕಾರದಿಂದ ಅನುಮೋದಿತ ಎಆರ್‌ಟಿ (ART) ಚಿಕಿತ್ಸೆಗಳನ್ನು ಪಡೆಯಬಹುದು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.