ವಿವಿಧ ಕಾರಣಗಳಿಂದಾಗಿ ರದ್ದಾಗಿ, ಎಪಿಎಲ್ ಕಾರ್ಡ್‌ಗಳಾಗಿ ಪರಿವರ್ತನೆಗೊಂಡಿದ್ದ ಬಿಪಿಎಲ್ ಪಡಿತರ ಚೀಟಿಗಳನ್ನು ಅರ್ಹರು ಪುನಃ ಪಡೆದುಕೊಳ್ಳಲು ರಾಜ್ಯ ಸರ್ಕಾರ ಅವಕಾಶ ಮಾಡಿಕೊಟ್ಟಿದೆ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಸಿ.ಎಸ್.ಚಂದ್ರಭೂಪಾಲ ತಿಳಿಸಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ವಿವಿಧ ಕಾರಣಗಳಿಂದಾಗಿ ರದ್ದಾಗಿ, ಎಪಿಎಲ್ ಕಾರ್ಡ್‌ಗಳಾಗಿ ಪರಿವರ್ತನೆಗೊಂಡಿದ್ದ ಬಿಪಿಎಲ್ ಪಡಿತರ ಚೀಟಿಗಳನ್ನು ಅರ್ಹರು ಪುನಃ ಪಡೆದುಕೊಳ್ಳಲು ರಾಜ್ಯ ಸರ್ಕಾರ ಅವಕಾಶ ಮಾಡಿಕೊಟ್ಟಿದೆ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಸಿ.ಎಸ್.ಚಂದ್ರಭೂಪಾಲ ತಿಳಿಸಿದರು.ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಅನ್ನಭಾಗ್ಯ ಯೋಜನೆ ಕುರಿತಾದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ನಾನಾ ಕಾರಣಗಳಿಂದ ಎಪಿಎಲ್ ಕಾರ್ಡ್‌ಗಳಾಗಿ ಪರಿವರ್ತನೆಯಾದವರಿಗೆ ಬಿಪಿಎಲ್ ಕಾರ್ಡ್ ಆಗಿ ಅರ್ಜಿ ಸಲ್ಲಿಸಲು ಈ ಹಿಂದೆ ನೀಡಲಾಗಿದ್ದ 45 ದಿನಗಳ ಕಾಲಮಿತಿಯನ್ನು ಸರ್ಕಾರ ರದ್ದುಗೊಳಿಸಿದ್ದು, ಅರ್ಹರು ಯಾವುದೇ ಗಡುವಿನ ಆತಂಕವಿಲ್ಲದೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿದೆ ಎಂದರು.
ಈ ಹಿಂದೆ ರದ್ದಾದ ಬಿಪಿಎಲ್ ಕಾರ್ಡ್‌ಗಳನ್ನು ಮರಳಿ ಪಡೆಯಲು ಕೇವಲ 45 ದಿನಗಳ ಕಾಲಾವಕಾಶ ನೀಡಲಾಗಿತ್ತು. ಆದರೆ, ಈ ಗಡುವು ಮುಗಿದಿದ್ದರಿಂದ ರಾಜ್ಯದ ಲಕ್ಷಾಂತರ ಬಡ ಹಾಗೂ ಅರ್ಹ ಕುಟುಂಬಗಳಿಗೆ ತೀವ್ರ ಅನಾನುಕೂಲವಾಗಿತ್ತು. ಯಾವುದೇ ಒಬ್ಬ ಅರ್ಹ ಫಲಾನುಭವಿಯೂ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಬಾರದು ಎಂಬ ಉದಾತ್ತ ಉದ್ದೇಶದಿಂದ, ರಾಜ್ಯ ಸರ್ಕಾರವು 45 ದಿನಗಳ ನಿಗದಿತ ಗಡುವಿನ ನಿಯಮವನ್ನು ಸಂಪೂರ್ಣವಾಗಿ ರದ್ದುಪಡಿಸಿ ಹೊಸ ಆದೇಶ ಹೊರಡಿಸಿದೆ ಎಂದು ತಿಳಿಸಿದರು.ವಿವಿಧ ಕಾರಣಗಳಿಂದ ಬಿಪಿಎಲ್‌ನಿಂದ ಎಪಿಎಲ್ ಕಾರ್ಡ್ ಆಗಿ ಬದಲಾಗಿರುವ ಕಾರ್ಡುದಾರರು, ತಮ್ಮ ವ್ಯಾಪ್ತಿಯ ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿ ಅಗತ್ಯ ದಾಖಲೆಗಳೊಂದಿಗೆ ಪುನಃ ಅರ್ಜಿ ಸಲ್ಲಿಸಬೇಕಾಗುತ್ತದೆ. ಅರ್ಜಿಯನ್ನು ಪರಿಶೀಲಿಸಿದ ನಂತರ ಎಪಿಎಲ್ ಕಾರ್ಡ್‌ಗಳನ್ನು ಮತ್ತೆ ಬಿಪಿಎಲ್ ಕಾರ್ಡ್‌ಗಳಾಗಿ ಸಕ್ರಿಯಗೊಳ್ಳಲಿವೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಸರ್ಕಾರ ಮುಕ್ತ ಅವಕಾಶ ನೀಡಿದೆ ಎಂದು ಮಾಹಿತಿ ನೀಡಿದರು.
ಕುಟುಂಬ ದತ್ತಾಂಶದ (ಫ್ಯಾಮಿಲಿ ಡೇಟಾ) ಆಧಾರದ ಮೇಲೆ ರಾಜ್ಯಾದ್ಯಂತ ವಿವಿಧ ಕಾರಣಗಳಿಂದ ಸುಮಾರು 4 ಲಕ್ಷಕ್ಕೂ ಅಧಿಕ ಬಿಪಿಎಲ್ ಕಾರ್ಡ್‌ಗಳನ್ನು ಎಪಿಎಲ್ ಕಾರ್ಡ್‌ಗಳಾಗಿ ವರ್ಗಾಯಿಸಲಾಗಿತ್ತು. ಇದರಲ್ಲಿ ಶಿವಮೊಗ್ಗ ಜಿಲ್ಲೆಯೊಂದರಲ್ಲೇ ಸುಮಾರು 13,641 ಕ್ಕೂ ಹೆಚ್ಚು ಬಿಪಿಎಲ್ ಕಾರ್ಡ್‌ಗಳು ರದ್ದಾಗಿದ್ದವು. ಸರ್ಕಾರದ ಈ ಹೊಸ ನಿರ್ಧಾರದಿಂದಾಗಿ ಬಡ ಕುಟುಂಬಗಳ ಪಡಿತರ ಚೀಟಿಗಳಿಗೆ ಈಗ ಮತ್ತೆ ಮರುಜೀವ ಬಂದಿದ್ದು, ಅರ್ಹ ನಾಗರಿಕರು ಆತಂಕಪಡುವ ಅಗತ್ಯವಿಲ್ಲ ಎಂದರು.ಸದಸ್ಯರಾದ ನಾಗರಾಜಗೌಡ ಮಾತನಾಡಿ, ಬಡ ಪೋಷಕರ ಮಗ ಕೆಸಲ ಪಡೆದು ವೇತನ ಪಡೆಯುತ್ತಿದ್ದ ಹಾಗೆಯೇ ಬಿಪಿಎಲ್ ಸೌಲಭ್ಯ ನಿಂತು, ಪೋಷಕರಿಗೆ ಪಡಿತರ, ಆರೋಗ್ಯ ಈ ರೀತಿ ಯಾವ ಸೌಲಭ್ಯಗಳು ದೊರೆಯದಾಗುತ್ತದೆ. ಈ ಕಡೆ ಮಗನ ಜತೆಯೂ ತಂದೆ-ತಾಯಿ ಇರಲು ಆಗದೇ ತೊಂದರೆ ಅನುಭವಿಸುತ್ತಾರೆ. ಆದ್ದರಿಂದ ಇಂತಹ ಕಾರ್ಡುಗಳ ಬಗ್ಗೆ ಮರುಪರಿಶೀಲನೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ಸದಸ್ಯ ಶಿವಾನಂದ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಶಿವಣ್ಣ, ಇಕ್ಕೇರಿ ರಮೇಶ್, ಸದಸ್ಯರಾದ ಅಮೀರ್ ಅಮ್ಜಾ, ಭವ್ಯ ಕೃಷ್ಣಮೂರ್ತಿ, ಅರ್ಚನಾ, ನವುಲೇಶ್, ಎಚ್.ಎಂ.ಮಧು, ಎಚ್.ಬಿ.ಚಿದಂಬರ, ಎನ್.ಜಿ.ಶಚೀಂದ್ರ ಹೆಗಡೆ, ಶಿವಾನಂದ, ಎಸ್.ಪಿ.ನಾಗನಗೌಡ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ಸತೀಶ್, ಸಹಾಯಕ ನಿರ್ದೇಶಕಿ ಲಕ್ಷ್ಮಿ, ಆಹಾರ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.