ರಾಮನಗರ: ಆಧುನಿಕ ಜೀವನಕ್ಕೆ ವಿರುದ್ಧವಾಗಿದ್ದ ವಯೋವೃದ್ಧೆಯನ್ನು ಗೃಹ ಬಂಧನದಲ್ಲಿರಿಸಿ ಕಿರುಕುಳ ನೀಡಿದ್ದು ಹಾಗೂ ಗಿಫ್ಟ್ ಡೀಡ್ ಮಾಡಿದ್ದ ಅತ್ತೆಯನ್ನೇ ಅಳಿಯ ಮನೆಯಿಂದ ಹೊರಗೆ ದಬ್ಬಿದ್ದರು... ಈ ರೀತಿಯ ಹತ್ತಾರು ಪ್ರಕರಣಗಳಲ್ಲಿ ವಯೋವೃದ್ಧರಿಗೆ ಪೊಲೀಸ್ ಇಲಾಖೆಯ ‘ಆಸರೆ’ ಯೋಜನೆ ಅಡಿಯಲ್ಲಿ ನ್ಯಾಯ ಸಿಕ್ಕಿದೆ. ಒಂಟಿಯಾಗಿ ವಾಸಿಸುತ್ತಿರುವ ಮಹಿಳೆಯರಿಗೆ ಮತ್ತು ಹಿರಿಯ ನಾಗರಿಕರಿಗೆ ಅವರ ಜೀವನದಲ್ಲಿ ಒಂಟಿತನದ ಅಸುರಕ್ಷತೆ, ಅಭದ್ರತೆ ಹಾಗೂ ಕಾಳಜಿ ವಹಿಸುವ ವಿಶ್ವಾಸದ ಕೊರತೆಯನ್ನು ನೀಗಿಸಿ, ಸಮುದಾಯ ಪೊಲೀಸ್ ಪರಿಕಲ್ಪನೆ ಅಡಿಯಲ್ಲಿ ಅವರೊಂದಿಗೆ ಪೊಲೀಸ್ ಇಲಾಖೆ ಇದೆ ಎಂಬ ವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ಜಾರಿಗೆ ತರಲಾಗಿರುವ ‘ಆಸರೆ’ ಯೋಜನೆ ನಿರ್ಲಕ್ಷ್ಯ, ದೌರ್ಜನ್ಯ ಮತ್ತು ಅನ್ಯಾಯಕ್ಕೊಳಗಾದ ವಯೋವೃದ್ಧರ ಪಾಲಿಗೆ ಆಸರೆಯಾಗಿ ನಿಂತಿದೆ.

ಮಾಗಡಿ ತಾಲೂಕಿನ ಮಂಚನಬೆಲೆ ಗ್ರಾಮದಲ್ಲಿ ಆಧುನಿಕ ಜೀವನಕ್ಕೆ ಅಡ್ಡಿಯಾಗಿದ್ದಾರೆ ಎಂಬ ಕಾರಣಕ್ಕೆ ಮಕ್ಕಳೇ ಹೆತ್ತ ತಾಯಿಯನ್ನು ಗೃಹ ಬಂಧನದಲ್ಲಿ ಇರಿಸಿದ್ದರು. ಸಣ್ಣದಾದ ಕೊಠಡಿಯಲ್ಲಿ ತಾವೇ ಅಡುಗೆ ತಯಾರಿಸಿಕೊಂಡು ಜೀವನ ಸಾಗಿಸುತ್ತಿದ್ದರು. ಈ ವಿಚಾರ ಸ್ಥಳೀಯರ ಮೂಲಕ ಪೊಲೀಸರ ಗಮನಕ್ಕೆ ಬಂದಿತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಆ ಮನೆಗೆ ಭೇಟಿ ನೀಡಿ ವಯೋವೃದ್ಧೆಯನ್ನು ಗೃಹ ಬಂಧನದಿಂದ ಬಿಡುಗಡೆಗೊಳಿಸಿದರು. ಮಕ್ಕಳ ಆದಿಯಾಗಿ ಎಲ್ಲರನ್ನು ಸಮಾಲೋಚನೆ ನಡೆಸಿದ ಪರಿಣಾಮ ಇದೀಗ ಆ ವಯೋವೃದ್ಧೆ ಮನೆ ಮಂದಿಯೊಂದಿಗೆ ಜೀವನ ಸಾಗಿಸುತ್ತಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಚನ್ನಪಟ್ಟಣ ವಾಸಿಯಾದ ಹಿರಿಯ ನಾಗರಿಕರೊಬ್ಬರು, ಕೆಲ ವರ್ಷಗಳ ಹಿಂದಷ್ಟೇ ತಮ್ಮ ಮಗಳ ಮದುವೆ ಮಾಡಿದ್ದರು. ಆ ಸಂದರ್ಭದಲ್ಲಿ ತಾವು ವಾಸವಿದ್ದ ಮನೆಯನ್ನು ಮಗಳಿಗೆ ಉಡುಗೊರೆ (ಗಿಫ್ಟ್ ಡೀಡ್) ನೀಡಿದ್ದರು. ಮಗಳು ಮರಣ ಹೊಂದಿದ ಬಳಿಕ ಅಳಿಯ ಮನೆಗಾಗಿ ಅತ್ತೆಯನ್ನೇ ಹೊರ ಹಾಕಿದ್ದನು.

ಆಗ ಆಸರೆ ಯೋಜನೆ ಬಗ್ಗೆ ತಿಳಿದುಕೊಂಡು ಆ ಹಿರಿಯ ನಾಗರಿಕರು, ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರಕ್ಕೆ ದೂರು ಸಲ್ಲಿಸಿದ್ದರು. ಅಳಿಯನನ್ನು ಕರೆಸಿ ತಿಳಿವಳಿಕೆ ಹೇಳಿದರು ಪ್ರಯೋಜನವಾಗಲಿಲ್ಲ. ಕೊನೆಗೆ ಎಸಿ ಕೋರ್ಟಿಗೆ ಪ್ರಕರಣ ಹಸ್ತಾಂತರವಾಗಿ ವಿಚಾರಣೆ ನಡೆದು ಕೊನೆಗೂ ಆ ಮನೆ ಹಿರಿಯ ನಾಗರಿಕರ ಪಾಲಾಯಿತು.

ವಯೋವೃದ್ಧರ ಪಟ್ಟಿ ತಯಾರಿ:


ಈ ರೀತಿ ಒಂಟಿ ಮಹಿಳೆಯರು ಹಾಗೂ ವಯೋವೃದ್ಧರಿಗೆ ನೆರವು ಕಲ್ಪಿಸುವ ಆಸರೆ ಯೋಜನೆ ಬಗ್ಗೆ ಪೊಲೀಸರು ಹಿರಿಯ ನಾಗರಿಕರಲ್ಲಿ ಅರಿವು ಮೂಡಿಸುತ್ತಿದ್ದಾರೆ. ಅಲ್ಲದೆ, ಜಿಲ್ಲೆಯ ಆಯಾಯ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ, ಸಾಕಷ್ಟು ಭದ್ರತೆಯಿಲ್ಲದ ಮನೆಯಲ್ಲಿ ವಾಸಿಸುತ್ತಿರುವ ವೃದ್ಧರ ಪಟ್ಟಿ ತಯಾರಿಸುತ್ತಿದ್ದಾರೆ.

ಕೋಟ್ ................

ಪೊಲೀಸ್ ಇಲಾಖೆ ಕೇವಲ ಕಾನೂನು ಸುವ್ಯವಸ್ಥೆ ಕಾಪಾಡುವುದಷ್ಟೇ ಅಲ್ಲ, ಹಿರಿಯ ನಾಗರಿಕರಲ್ಲಿ ಸುರಕ್ಷತೆ, ವಿಶ್ವಾಸ ಮತ್ತು ಕಾಳಜಿ ಮೂಡಿಸುವುದು ಆಸರೆ ಯೋಜನೆಯ ಮೂಲ ಮಂತ್ರವಾಗಿದೆ. ಅಸಹಾಯಕರಿಗೆ ಈ ಯೋಜನೆ ನಿಜಕ್ಕೂ ಒಂದು ವರದಾನ.

-ಡಿ.ಎಸ್.ರಾಜೇಂದ್ರ, ಎಎಸ್ಪಿ, ಬೆಂ.ದಕ್ಷಿಣ ಜಿಲ್ಲೆ

ಕೋಟ್ ............

ಹಿರಿಯ ನಾಗರಿಕರ ಪಾಲನೆ ಪೋಷಣೆ ವಿಚಾರ, ಆಸ್ತಿಯನ್ನು ಮೋಸ ಮಾಡಿ ಬರೆಸಿಕೊಂಡಿರುವ ಬಗ್ಗೆ ದೂರುಗಳಿದ್ದರೆ, ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರಕ್ಕೆ ಸಲ್ಲಿಸಬೇಕು. ಅದನ್ನು ವಿಚಾರಣೆ ಮಾಡಿ, ಸಂಬಂಧಪಟ್ಟವರಿಗೆ ನೋಟಿಸ್ ನೀಡಿ ಕರೆಸಿ ನ್ಯಾಯ ತೀರ್ಮಾನ ಮಾಡುತ್ತೇವೆ. ಅದು ಸಾಧ್ಯವಾಗದಿದ್ದರೆ ಎಸಿ ಕೋರ್ಟ್‌ನಲ್ಲಿ ವಿಚಾರಣೆ ಮಾಡಿ ನ್ಯಾಯ ದೊರಕಿಸಿಕೊಡಲಾಗುತ್ತದೆ.

-ವರದರಾಜು, ಜಿಲ್ಲಾ ಯೋಜನಾ ಸಂಯೋಜಕ, ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರ, ಎಸ್ಪಿ ಕಚೇರಿ ಆವರಣ, ರಾಮನಗರ

ಬಾಕ್ಸ್‌................

‘ಆಸರೆ’ ಯೋಜನೆ ಕೆಲಸ ಹೇಗೆ?

1. ಹುಡುಕಿ ಬರುವ ಕಾಳಜಿ:

ಮೊದಲ ಹಂತದಲ್ಲಿ, ಪ್ರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂಟಿಯಾಗಿ ವಾಸಿಸುತ್ತಿರುವ ಮಹಿಳೆಯರು ಮತ್ತು ಹಿರಿಯ ನಾಗರಿಕರ ಪಟ್ಟಿಯನ್ನು ಪೊಲೀಸರು ಸಿದ್ಧಪಡಿಸುತ್ತಾರೆ.

2. ವಾರಕ್ಕೊಮ್ಮೆ ಸೌಹಾರ್ದ ಭೇಟಿ:

ಇದು ಈ ಯೋಜನೆಯ ಹೈಲೈಟ್. ಪ್ರತಿ ವಾರ ಪೊಲೀಸರು ಗುರುತಿಸಲಾದ ಹಿರಿಯರ ಅಥವಾ ಒಂಟಿ ಮಹಿಳೆಯರ ಮನೆಗೆ ಭೇಟಿ ನೀಡುತ್ತಾರೆ. “ಹೇಗಿದ್ದೀರಿ? ಏನಾದರೂ ತೊಂದರೆ ಇದೆಯೇ?” ಎಂದು ಯೋಗಕ್ಷೇಮ ವಿಚಾರಿಸುತ್ತಾರೆ. ಈ ಭೇಟಿ ಅವರಿಗೆ ಧೈರ್ಯ ತುಂಬುತ್ತದೆ.

3. ಇ-ಬೀಟ್ ಮತ್ತು ಪಾಯಿಂಟ್ ಬುಕ್:

ನಿಯಮಿತ ಸಂಪರ್ಕಕ್ಕಾಗಿ ಅವರ ಮನೆಗಳ ಬಳಿ ಬೀಟ್ ಪಾಯಿಂಟ್ ಅಥವಾ ಪಾಯಿಂಟ್ ಬುಕ್‌ಗಳನ್ನು ಇಡಲಾಗುತ್ತದೆ. ಇದರಿಂದ ಪೊಲೀಸರ ನಿರಂತರ ಸಂಪರ್ಕದಲ್ಲಿ ಇರಲು ಸಾಧ್ಯವಾಗುತ್ತದೆ.

4. ಸಂಕಷ್ಟದಲ್ಲಿ ತಕ್ಷಣ ಸ್ಪಂದನೆ:

ಯಾವುದೇ ತುರ್ತು ಪರಿಸ್ಥಿತಿ ಅಥವಾ ಸಂಕಷ್ಟದ ಕರೆ(Distress Call) ಬಂದರೆ, ಹಿರಿಯ ನಾಗರಿಕರಿಗೆ ತಕ್ಷಣವೇ ಪ್ರತಿಕ್ರಿಯೆ ನೀಡಲು ಪೊಲೀಸರು ಸನ್ನದ್ಧರಾಗಿರುತ್ತಾರೆ.

5. ಆರೋಗ್ಯ ಮತ್ತು ಆಂಬ್ಯುಲೆನ್ಸ್ ಸೇವೆ:

ತುರ್ತು ವೈದ್ಯಕೀಯ ಸಹಾಯ ಬೇಕಾದಾಗ, ಸ್ಥಳೀಯ ಆಸ್ಪತ್ರೆಗಳು ಮತ್ತು ಆಂಬ್ಯುಲೆನ್ಸ್ ಸೇವೆಗಳೊಂದಿಗೆ ಸಮನ್ವಯ ಸಾಧಿಸಿ ತಕ್ಷಣ ಚಿಕಿತ್ಸೆ ಸಿಗುವಂತೆ ಪೊಲೀಸರು ನೋಡಿಕೊಳ್ಳುತ್ತಾರೆ.

6. ಕುಟುಂಬದವರ ನಿರ್ಲಕ್ಷ್ಯಕ್ಕೆ ಬ್ರೇಕ್:

ಅನೇಕ ಬಾರಿ ಹಿರಿಯರು ಸ್ವಂತ ಮಕ್ಕಳಿಂದಲೇ ನಿರ್ಲಕ್ಷ್ಯ ಅಥವಾ ದೌರ್ಜನ್ಯಕ್ಕೆ ಒಳಗಾಗುತ್ತಾರೆ. ಅಂತಹ ಸಂದರ್ಭದಲ್ಲಿ, ಪೊಲೀಸರು ಆ ಕುಟುಂಬ ಸದಸ್ಯರನ್ನು ಕರೆಸಿ ಸಮಾಲೋಚನೆ ನಡೆಸುತ್ತಾರೆ ಮತ್ತು ಹಿರಿಯರಿಗೆ ರಕ್ಷಣೆ ನೀಡುತ್ತಾರೆ.

7. ಸರ್ಕಾರಿ ಸವಲತ್ತುಗಳಿಗೆ ಸಹಾಯ:

ವೃದ್ಧಾಪ್ಯ ವೇತನ, ವಿಧವಾ ವೇತನದಂತಹ ಸರ್ಕಾರಿ ಕಲ್ಯಾಣ ಯೋಜನೆಗಳು ಮತ್ತು ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಪಡೆಯಲು ಅವರಿಗೆ ತಿಳಿಯದಿದ್ದರೆ, ಅದನ್ನು ಕೊಡಿಸಲು ಪೊಲೀಸರು ನೆರವಾಗುತ್ತಾರೆ. ಕಾನೂನು ಹಕ್ಕುಗಳ ಬಗ್ಗೆ ಅರಿವು ಮೂಡಿಸುತ್ತಾರೆ.

23ಕೆಆರ್ ಎಂಎನ್ 1.ಜೆಪಿಜಿ

ರಾಮನಗರದಲ್ಲಿರುವ ಪೊಲೀಸ್ ಭವನ.