ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಪ್ರಧಾನಮಂತ್ರಿ ಹೆಸರಿನ ಯೋಜನೆಗಳ ಅನುಷ್ಠಾನದಲ್ಲಿ ಚಿತ್ರದುರ್ಗ ಜಿಲ್ಲೆ ಕಡೇ ಸ್ಥಾನದಲ್ಲಿದೆ. ಜಿಲ್ಲಾ ಪಂಚಾಯಿತಿ ಸಭಾಂಗದಲ್ಲಿ ನಡೆದ ಜಿಲ್ಲಾ ಸಲಹಾ ಸಮಿತಿ ಹಾಗೂ ಪರಿಶೀಲನಾ ಸಮಿತಿ ಸಭೆಯಲ್ಲಿ ಈ ಕುರಿತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆಕಾಶ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಭದ್ರತಾ ಯೋಜನೆಗಳಾದ ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ, ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ, ಅಟಲ್ ಪಿಂಚಣಿ ಯೋಜನೆ ನೋಂದಣಿಯು ಅತ್ಯಂತ ನಿರಾಶಾದಾಯಕವಾಗಿದ್ದು, ಗುರಿ ತಲುಪುವಲ್ಲಿ ಬ್ಯಾಂಕುಗಳು ಸಂಪೂರ್ಣವಾಗಿ ವಿಫಲವಾಗಿವೆ.

ಜಿಲ್ಲೆಯ ಬ್ಯಾಂಕುಗಳ ಕಳಪೆ ಸಾಧನೆಯ ಬಗ್ಗೆ ರಾಜ್ಯ ಸಲಹಾ ಸಮಿತಿ ಸಭೆಯಲ್ಲಿ ಟೀಕೆಗಳನ್ನು ಎದುರಿಸಬೇಕಾಗುತ್ತದೆ. ಕಡಿಮೆ ಸಾಕ್ಷರತೆ ಹಾಗೂ ಕಡಿಮೆ ತಲಾ ಆದಾಯ ಹೊಂದಿರುವ ರಾಜ್ಯದ ಇತರ ಜಿಲ್ಲೆಗಳು ಈ ಯೋಜನೆಗಳಡಿ ಹೆಚ್ಚಿನ ಪ್ರಗತಿ ಸಾಧಿಸಿವೆ. ಆದರೆ ಚಿತ್ರದುರ್ಗ ಜಿಲ್ಲೆ ಪಿಎಂ-ಜೆಜೆಬಿವೈ ಶೇ.18 ಹಾಗೂ ಪಿಎಂ-ಎಸ್‍ಬಿವೈ ಶೇ.30ರಷ್ಟು ಸಾಧನೆ ಮಾಡುವ ಮೂಲಕ ರಾಜ್ಯದಲ್ಲೇ ಕೊನೆಯ ಸ್ಥಾನದಲ್ಲಿದೆ ಎಂದರು.

ಜಿಲ್ಲೆಯಲ್ಲಿ ಒಟ್ಟು 16,59,456 ಜನಸಂಖ್ಯೆಯಿದ್ದು, ಪಿಎಂ-ಜೆಜೆಬಿವೈ 2,34,613, ಪಿಎಂ-ಎಸ್‍ಬಿವೈ ಅಡಿ 5,42,528 ಹಾಗೂ ಎಪಿವೈ ಅಡಿ 1,42,655 ಜನರು ನೋಂದಣಿಯಾಗಿದ್ದಾರೆ. ಪ್ರತಿ ಲಕ್ಷ ಜನರಿಗೆ ಪಿಎಂ-ಜೆಜೆಬಿವೈ ಅಡಿ 14,215, ಪಿಎಂ-ಎಸ್‍ಬಿವೈ ಅಡಿ 32,693 ಹಾಗೂ ಎಪಿವೈ ಅಡಿ 8,596 ನೋಂದಣಿಯಿದೆ ಎಂದು ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ವ್ಯವಸ್ಥಾಪಕ ಪ್ರವೀಣ್.ಎಂ.ಪಿ ತಿಳಿಸಿದರು.


ಜಿಲ್ಲೆಯಲ್ಲಿ ಒಟ್ಟು 259 ಬ್ಯಾಂಕ್ ಶಾಖೆಗಳು ಇದ್ದು, ಒಟ್ಟು 12,431 ಕೋಟಿ ರು. ಠೇವಣಿ ಸಂಗ್ರಹಿಸಲಾಗಿದೆ. ಒಟ್ಟು 14,695.81 ರು. ಕೋಟಿ ಸಾಲ ನೀಡಲಾಗಿದೆ. ಜಿಲ್ಲೆಯ ಒಟ್ಟಾರೆ ಠೇವಣಿ ಹಾಗೂ ಸಾಲ ಅನುಪಾತ ಶೇ.118.22 ರಷ್ಟಿದೆ ಎಂದರು.

ಜಂಟಿ ಕೃಷಿ ನಿರ್ದೇಶಕ ಮಂಜುನಾಥ ಮಾತನಾಡಿ, ಪಿಎಂಎಫ್ಎಂಇ (ಪ್ರಧಾನ ಮಂತ್ರಿ ಸೂಕ್ಷ್ಮ ಆಹಾರ ಸಂಸ್ಕರಣ ಉದ್ದಿಮೆಗಳ ಔಪಚಾರಿಕರಣ) ಅಡಿ ಜಿಲ್ಲೆಯಲ್ಲಿ 100 ಘಟಕಗಳಿಗೆ ಸಾಲ ಸೌಲಭ್ಯ ನೀಡಲು ಗುರಿ ನಿಗದಿ ಮಾಡಲಾಗಿದೆ. 167 ಅರ್ಜಿಗಳು ಸ್ವೀಕೃತವಾಗಿವೆ. ಇದುವರೆಗೆ 69 ಅರ್ಜಿಗಳಿಗೆ ಮಂಜೂರಾತಿ ನೀಡಲಾಗಿದೆ. 59 ಅರ್ಜಿಗಳು ಬಾಕಿಯಿವೆ. 39 ಅರ್ಜಿಯನ್ನು ತಿರಸ್ಕರಿಸಲಾಗಿದೆ. ಮಾರ್ಚ್‍ನಿಂದ ಯಾವುದೇ ಅರ್ಜಿಗಳಿಗೆ ಬ್ಯಾಂಕ್ ಮಂಜೂರಾತಿ ದೊರೆತಿಲ್ಲ ಎಂದರು.

ಸಭೆಯಲ್ಲಿ ಚಿತ್ರದುರ್ಗ ಜಿಲ್ಲಾ ವಾರ್ಷಿಕ ಸಾಲ ಯೋಜನೆ 2026-27 ಕೈಪಿಡಿಯನ್ನು ಅನಾವರಣಗೊಳಿಸಲಾಯಿತು. ಆರ್ ಬಿಐ ಪ್ರಾದೇಶಿಕ ವ್ಯವಸ್ಥಾಪಕ ಅರುಣ್ ಕುಮಾರ್, ನಬಾರ್ಡ್ ಜಿಲ್ಲಾ ವ್ಯವಸ್ಥಾಪಕ ವಿನ್ನತ್, ಕೆನರಾ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ರಾಘವೇಂದ್ರ.ಎಂ, ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕಿ ಜಯಲಕ್ಷ್ಮೀ, ಕರ್ನಾಟಕ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ಜಗನಾಥ್ ಸೇರಿದಂತೆ ಬ್ಯಾಂಕುಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.