ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಗರ್ಭನಿರೋಧಕ ಇಂಪ್ಲಾಂಟ್ ಒಂದು ಆಧುನಿಕ ಸುರಕ್ಷಿತ ಮತ್ತು ಸುಲಭ ವಿಧಾನ ಎಂದು ಕುಟುಂಬ ಕಲ್ಯಾಣ ವಿಭಾಗದ ಉಪ ನಿರ್ದೇಶಕ ಡಾ.ಚಂದ್ರಿಕಾ ತಿಳಿಸಿದರು.ನಗರದ ಜಿಲ್ಲಾ ಆಸ್ಪತ್ರೆ ಆವರಣದ ಬಿ.ಸಿ.ರಾಯ್ ಸಭಾಂಗಣದಲ್ಲಿ ಜಿಲ್ಲೆಯ ಹೆರಿಗೆ ಮತ್ತು ಸ್ತ್ರೀ ರೋಗ ತಜ್ಞರಿಗೆ ಆಯೋಜಿಸಿದ್ದ ನೂತನ ಗರ್ಭ ನಿರೋಧಕ ಇಂಪ್ಲಾಂಟ್ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತದಲ್ಲಿ 2023ರಿಂದಲೇ ಈ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ. ಮೊದಲ ಹಂತದಲ್ಲಿ ರಾಜ್ಯದ 13 ಜಿಲ್ಲೆಗಳಲ್ಲಿ ಪ್ರಾರಂಭಿಸಲಾಗಿದ್ದು, ಇದೀಗ 14ನೇ ಜಿಲ್ಲೆಯಾಗಿ ಚಿತ್ರದುರ್ಗದಲ್ಲಿ ಈ ಸೌಲಭ್ಯವನ್ನು ಜಾರಿಗೊಳಿಸಲಾಗಿದೆ. ಕರ್ನಾಟಕದಲ್ಲಿ ಇದುವರೆಗೆ ಸುಮಾರು 10,000 ಫಲಾನುಭವಿಗಳು ಈ ಇಂಪ್ಲಾಂಟ್ ಸೌಲಭ್ಯವನ್ನು ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.
ಇಂಪ್ಲಾಂಟ್ ಒಂದು ಬೆಂಕಿ ಕಡ್ಡಿಯ ಗಾತ್ರದ ಅತ್ಯಂತ ಸಣ್ಣ, ತೆಳುವಾದ ಮತ್ತು ಮೆದುವಾದ ರಾಡ್ ಆಗಿದ್ದು, ಇದನ್ನು ಮಹಿಳೆಯ ಮೇಲ್ದೋಳಿನ ಚರ್ಮದ ಕೆಳಗೆ ನುರಿತ ವೈದ್ಯರಿಂದ ಅಳವಡಿಸಲಾಗುತ್ತದೆ. ಒಮ್ಮೆ ಅಳವಡಿಸಿಕೊಂಡರೆ ಮೂರು ವರ್ಷಗಳವರೆಗೆ ಅನಗತ್ಯ ಗರ್ಭಧಾರಣೆಯಿಂದ ಇದು ರಕ್ಷಣೆ ನೀಡುತ್ತದೆ. ಅಂಡಾಶಯದಿಂದ ಅಂಡಾಣು ಬಿಡುಗಡೆಯಾಗುವುದನ್ನು ನಿಗ್ರಹಿಸುತ್ತದೆ ಎಂದರು.ಮುಟ್ಟು ಪ್ರಾರಂಭವಾದ 7 ದಿನಗಳ ಒಳಗಾಗಿ, ಪ್ರಸವವಾದ ತಕ್ಷಣ ಅಥವಾ ಗರ್ಭಪಾತದ ನಂತರದ ಅವಧಿಯಲ್ಲಿ ಇದನ್ನು ಅಳವಡಿಸಬಹುದು. ಇಂಪ್ಲಾಂಟ್ ಅನ್ನು ದೇಹದಿಂದ ಹೊರತೆಗೆದ ತಕ್ಷಣವೇ ಮಹಿಳೆಯು ಎಂದಿನಂತೆ ಶೀಘ್ರವಾಗಿ ಗರ್ಭ ಧರಿಸಬಹುದು. ಜಿಲ್ಲಾ ಆಸ್ಪತ್ರೆ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ನುರಿತ ಹೆರಿಗೆ ಮತ್ತು ಸ್ತ್ರೀ ರೋಗ ತಜ್ಞರು ಈ ಇಂಪ್ಲಾಂಟ್ ಅನ್ನು ಅರ್ಹ ಫಲಾನುಭವಿಗಳಿಗೆ ಸಂಪೂರ್ಣ ಉಚಿತವಾಗಿ ಅಳವಡಿಸಿಕೊಡಲಿದ್ದಾರೆ ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎನ್.ಕಾಶಿ, ತುಮಕೂರಿನ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಪ್ರಭ, ಡಬ್ಲ್ಯೂಹೆಚ್.ಓ ಪ್ರೋಗ್ರಾಮ್ ಆಫೀಸರ್ ಡಾ.ಮಯಾಂಕ್ ಖೇಡ, ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ.ಚಂದ್ರಶೇಖರ್ ಕಂಬಾಳಿಮಠ, ಜಿಲ್ಲಾ ಆಸ್ಪತ್ರೆಯ ಸ್ತ್ರೀ ರೋಗ ತಜ್ಞ ಡಾ.ರವಿಕುಮಾರ್, ಡಾ.ಮಲ್ಲಪ್ಪ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ, ಕ್ವಾಲಿಟಿ ಕನ್ಸಲ್ಟೆಂಟ್ ಡಾ.ರೇಖಾ, ಶುಶ್ರೂಷಾಧಿಕಾರಿ ಸರಸ್ವತಿ, ಪ್ರೋಗ್ರಾಮ್ ಅಸಿಸ್ಟೆಂಟ್ ಭವ್ಯ ಇದ್ದರು.