ಬೆಂಗ್ಳೂರಿಂದ 100 ಕಿ.ಮೀ. ವ್ಯಾಪ್ತಿ 8 ಪಥದ ರೈಲ್ವೆ

KannadaprabhaNewsNetwork |  
Published : Jun 30, 2026, 02:00 AM IST
ಸೋಮಣ್ಣ ಕಾರ್ಯಕ್ರಮ | Kannada Prabha

ಸಾರಾಂಶ

ಬೆಂಗಳೂರಿನಿಂದ 100 ಕಿ.ಮೀ. ಸುತ್ತಮುತ್ತ ಇರುವ ನಗರಗಳಿಗೆ ಚತುಷ್ಪಥ ರೈಲ್ವೆ ಮಾರ್ಗಗಳನ್ನು ಅಭಿವೃದ್ಧಿ ಪಡಿಸಲಾಗುವುದು. ಜತೆಗೆ, ಬೆಂಗಳೂರಿನಿಂದ ಮಂಗಳೂರಿಗೆ ಕೂಡ ಚತುಷ್ಪಥ ಮಾರ್ಗ ಅಭಿವೃದ್ಧಿಯನ್ನು ಪರಿಗಣಿಸಲಾಗುವುದು ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು.

ಕನ್ನಡಪ್ರಭ ವಾರ್ತೆ ಚನ್ನಪಟ್ಟಣ

ಬೆಂಗಳೂರಿನಿಂದ 100 ಕಿ.ಮೀ. ಸುತ್ತಮುತ್ತ ಇರುವ ನಗರಗಳಿಗೆ ಚತುಷ್ಪಥ ರೈಲ್ವೆ ಮಾರ್ಗಗಳನ್ನು ಅಭಿವೃದ್ಧಿ ಪಡಿಸಲಾಗುವುದು. ಜತೆಗೆ, ಬೆಂಗಳೂರಿನಿಂದ ಮಂಗಳೂರಿಗೆ ಕೂಡ ಚತುಷ್ಪಥ ಮಾರ್ಗ ಅಭಿವೃದ್ಧಿಯನ್ನು ಪರಿಗಣಿಸಲಾಗುವುದು ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು.

ಬೆಂಗಳೂರು ದಕ್ಷಿಣ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಎಲೇಕೇರಿ ಬಳಿ ನೂತನವಾಗಿ ನಿರ್ಮಿಸಿರುವ ರಸ್ತೆ ಮೇಲ್ಸೇತುವೆ ಉದ್ಘಾಟಿಸಿ ಮಾತನಾಡಿದ ಸಚಿವರು, ದೇಶದಲ್ಲಿ ಸಂಪೂರ್ಣ ಎಲ್‌ಸಿ ಗೇಟ್ ಮುಕ್ತ ಮಾಡಬೇಕು ಎನ್ನುವುದು ಪ್ರಧಾನಿಯವರ ಕನಸು. ಈಗಾಗಲೇ ಅರ್ಧದಷ್ಟು ಎಲ್‌ಸಿ ಗೇಟ್‌ಗಳನ್ನು ತೆಗೆದು ಮೇಲ್ಸೇತುವೆ ನಿರ್ಮಿಸಲಾಗಿದೆ. ಇನ್ನೆರಡು ವರ್ಷದಲ್ಲಿ ಬೆಂಗಳೂರಿನ ಸುತ್ತಮುತ್ತ ಯಾವುದೇ ಎಲ್‌ಸಿ ಗೇಟ್ ಇರೋದಿಲ್ಲ ಎಂದು ಹೇಳಿದರು.

ಬೆಂಗಳೂರು-ತುಮಕೂರು ಚತುಷ್ಪಥ ಮಾರ್ಗದ ಸರ್ವೇ ಕಾರ್ಯ ಮುಗಿದಿದ್ದು, ಶೀಘ್ರದಲ್ಲೇ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗುವುದು. ಮುಂದಿನ ಒಂದೂವರೆ-ಎರಡು ವರ್ಷದಲ್ಲಿ ಕಾಮಗಾರಿ ಮುಗಿಸುವ ಉದ್ದೇಶ ಇದೆ. ಹಾಗೆಯೇ ಬೆಂಗಳೂರು-ಮೈಸೂರು ಚತುಷ್ಪಥ ನಿರ್ಮಾಣಕ್ಕೆ ಸಮೀಕ್ಷೆ ಮಾಡಲು ತೀರ್ಮಾನಿಸಲಾಗಿದೆ ಎಂದು ವಿವರಿಸಿದರು.

ಎಂ.ಬಿ.ಪಾಟೀಲರ ಕೋರಿಕೆಯಂತೆ ಬೆಂಗಳೂರು-ಕೋಲಾರ ನಡುವೆ ನೇರ ರೈಲು ಸಂಪರ್ಕ ಕಲ್ಪಿಸಲಾಗುವುದು. ಸದ್ಯಕ್ಕೆ ವೈಟ್ ಫೀಲ್ಡ್ ತನಕ ಇರುವ ನಾಲ್ಕು ಪಥದ ಮಾರ್ಗವನ್ನು ಮುಂದಕ್ಕೂ ಕೊಂಡೊಯ್ಯಲಾಗುವುದು. ಇದಕ್ಕೆ ಬೇಕಾದ ಭೂಸ್ವಾಧೀನವನ್ನು ಕೇಂದ್ರ ಸರ್ಕಾರವೇ ನಡೆಸುತ್ತದೆ ಎಂದು ತಿಳಿಸಿದರು.

ಬೆಂಗಳೂರಿನಿಂದ ಮಂಗಳೂರಿಗೆ ತ್ವರಿತ ರೈಲು ಸಂಚಾರ ವ್ಯವಸ್ಥೆ ಆಗಬೇಕಿದೆ. ಇದಕ್ಕಾಗಿ ಸಕಲೇಶಪುರ-ಗುಂಡ್ಯ ನಡುವೆ ಸಮಾನಾಂತರವಾಗಿ ರಸ್ತೆ ಮತ್ತು ರೈಲು ಮಾರ್ಗ ಆಗಬೇಕಿದೆ. ಈ ಎರಡೂ ನಗರಗಳ ನಡುವೆ ಚತುಷ್ಪಥ ರೈಲು ಮಾರ್ಗದ ಅಭಿವೃದ್ಧಿಯ ಅಗತ್ಯ ಇದೆ. ತುಮಕೂರು- ಚಿತ್ರದುರ್ಗ- ದಾವಣಗೆರೆ ಮಾರ್ಗದಲ್ಲಿ ಭರದಿಂದ ಕಾಮಗಾರಿ ನಡೆಯುತ್ತಿದೆ. ಈಗ ಏಕಪಥವಾಗಿರುವ ಈ ಮಾರ್ಗವನ್ನು ಜೋಡಿಹಳಿ ಮಾಡಬೇಕೆಂಬ ಬೇಡಿಕೆ ಇದ್ದು, ಇದನ್ನು ಕೂಡ ಪರಿಗಣಿಸಲಾಗುವುದು ಎಂದು ಹೇಳಿದರು.

ವಿಜಯಪುರಕ್ಕೆ ವಂದೇ ಭಾರತ್:

ವಿಜಯಪುರಕ್ಕೆ ವಂದೇ ಭಾರತ್ ಸ್ಲೀಪರ್ ರೈಲು ಸೇವೆ ಆರಂಭಿಸಬೇಕು ಎಂದು ಸಚಿವ ಎಂ.ಬಿ.ಪಾಟೀಲ ಬೇಡಿಕೆ ಇಟ್ಟಿದ್ದಾರೆ. ಇನ್ನು 3-4 ತಿಂಗಳಲ್ಲಿ ಅದು ನನಸಾಗಲಿದೆ. ವಂದೇ ಭಾರತ್ ರೈಲಿಗೆ ಬದಲಾಗಿ ಸ್ಲೀಪರ್ ರೈಲು ಓಡಿಸಲಾಗುವುದು. ಈ ಕುರಿತು ಸದ್ಯದಲ್ಲೇ ತೀರ್ಮಾನ ತೆಗೆದುಕೊಳ್ಳಲಾಗುವುದು. ಬೆಂಗಳೂರು-ವಿಜಯಪುರ ನಡುವೆ ವಾರಕ್ಕೆ ಎರಡು ಸಲ ಸಂಚರಿಸುತ್ತಿರುವ ವಿಶೇಷ ರೈಲನ್ನು ಕಾಯಂ ಮಾಡಲಾಗುವುದು. ಬೆಂಗಳೂರು- ಮುಂಬಯಿಯನ್ನು ಬೆಸೆಯಲು ಬೆಂಗಳೂರು-ಪುಣೆ ಮಧ್ಯೆ ಹೈಸ್ಪೀಡ್ ರೈಲು ಆರಂಭಿಸಬೇಕು ಎನ್ನುವ ಬೇಡಿಕೆ ಸೂಕ್ತವಾಗಿದ್ದು, ಅದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಲಾಗುವುದು ಎಂದು ತಿಳಿಸಿದರು.

ಕರ್ನಾಟಕದಲ್ಲಿ 13 ವಂದೇ ಭಾರತ್ ರೈಲು ಸಂಚರಿಸುತ್ತಿದ್ದು, ಅತಿ ಹೆಚ್ಚು ವಂದೇ ಭಾರತ್ ರೈಲು ಸಂಚರಿಸುತ್ತಿರುವ ರಾಜ್ಯವಾಗಿದೆ ಎಂದರು.----

ಸಚಿವರಿಬ್ಬರು ವಿಶೇಷ ರೈಲಿನಲ್ಲಿ ಪ್ರಯಾಣ

ರೈಲ್ವೆ ಮೂಲಸೌಕರ್ಯದ ಗುಣಮಟ್ಟ, ಸುರಕ್ಷತೆ ಹಾಗೂ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲಿಸಲು ಬಳಸಲಾಗುವ ಎಸ್‌ಪಿಐ ಎಂಬ ವಿಶೇಷ ರೈಲ್ವೆ ಪರಿಶೀಲನಾ ವಾಹನದಲ್ಲಿ ಸಚಿವ ವಿ.ಸೋಮಣ್ಣ ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಖಾತೆ ಸಚಿವ ಎಂ.ಬಿ.ಪಾಟೀಲ್ ಬೆಂಗಳೂರು ರೈಲ್ವೆ ನಿಲ್ದಾಣದಿಂದ ಚನ್ನಪಟ್ಟಣದವರೆಗೆ ಪ್ರಯಾಣ ಬೆಳೆಸಿದರು. ಬಳಿಕ ಅದೇ ರೈಲಿನಲ್ಲಿ ವಾಪಸ್ಸಾದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾವೇರಿ ಜಿಲ್ಲಾ ನ್ಯಾಯಾಲಯಕ್ಕೆ ಮತ್ತೆ ಬಾಂಬ್ ಬೆದರಿಕೆ
ಯುವ ಜನತೆ ಹಿರಿಯರನ್ನು ಗೌರವದಿಂದ ನಡೆಸಿಕೊಳ್ಳಬೇಕು-ಶ್ರೀಶೈಲಜಾ