ಸರ್ಕಾರಿ ಆಸ್ಪತ್ರೆಯ ಸಭಾಂಗಣದಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಚಾಲನೆ
ವಿಶ್ವದಿಂದ ಪೋಲಿಯೊ ಸಂಪೂರ್ಣ ನಿರ್ಮೂಲನೆಯಾಗುವವರೆಗೂ ಲಸಿಕೆ ನೀಡುವುದನ್ನು ಮುಂದುವರಿಸಲಾಗುವುದು ಎಂದು ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ.ನರಸಿಂಹಮೂರ್ತಿ ಹೇಳಿದರು.
ಭಾನುವಾರ ತಾಲೂಕು ಸಾರ್ವಜನಿಕ ಆಸ್ಪತ್ರೆ ಸಭಾಂಗಣದಲ್ಲಿ ನಡೆದ ತಾಲೂಕು ಮಟ್ಟದ ರಾಷ್ಟ್ರೀಯ ಪಲ್ಸ್ ಪೋಲಿಯೊ ಕಾರ್ಯಕ್ರಮದ ಚಾಲನಾ ಸಮಾರಂಭದಲ್ಲಿ ಮಾತನಾಡಿ ಮಗು ಜನಿಸಿದ ಸಂದರ್ಭದಲ್ಲಿ ಪೋಲಿಯೊ ಲಸಿಕೆ ನೀಡಿದ್ದರೂ ಸಹ ಸಾರ್ವತ್ರಿಕವಾಗಿ ನಡೆಯುವ ಪಲ್ಸ್ ಪೋಲಿಯೊ ಕಾರ್ಯಕ್ರಮದಲ್ಲಿ 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಪೋಲಿಯೊ ಲಸಿಕೆ ಹಾಕಲಾಗುತ್ತದೆ.ಪೋಲಿಯೊ ನಿರ್ಮೂಲನೆಯಲ್ಲಿ ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಆರೋಗ್ಯ ಸಿಬ್ಬಂದಿ ಹಾಗೂ ಸಂಘ ಸಂಸ್ಥೆಗಳ ಪಾತ್ರ ಪ್ರಮುಖ. ಗುಡ್ಡಗಾಡು ಪ್ರದೇಶ, ವಾಹನಗಳು ಹೋಗದ ಕುಗ್ರಾಮಗಳಲ್ಲಿನ ಯಾವುದೇ ಒಂದು ಮಗುವನ್ನು ಬಿಡದೆ ಲಸಿಕೆ ನೀಡಿರುವುದರಿಂದ ಪೋಲಿಯೊ ನಿರ್ಮೂಲನೆಯಾಗಿದೆ. ತಾಲೂಕಿನಲ್ಲಿ 98 ಪೋಲಿಯೋ ಬೂತ್ ತೆರೆಯಲಾಗಿದೆ. 392 ವ್ಯಾಕ್ಸಿನೇಟರ್ ಗಳು ಕಾರ್ಯನಿರ್ವಹಿಸಲಿದ್ದಾರೆ. 5 ವರ್ಷದೊಳಗಿನ 3917 ಮಕ್ಕಳಿಗೆ ಪೋಲಿಯೊ ಹನಿ ಹಾಕುವ ಗುರಿ ಹೊಂದಲಾಗಿದೆ. 18,943 ಮನೆ ಭೇಟಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 28 ವಲಸೆ ಪ್ರದೇಶಗಳನ್ನು ಗುರುತಿಸಲಾಗಿದೆ ಎಂದರು.
ಸಮಾಜ ಸೇವಕಿ ಜುಬೇದಾ ಮಾತನಾಡಿದರು. ಪಪಂ ಕಂದಾಯ ನಿರೀಕ್ಷಕ ವಿಜಯಕುಮಾರ್, ರೋಟರಿ ನಿಯೋಜಿತ ಕಾರ್ಯದರ್ಶಿ ಮನೋಜ್ ಶೆಟ್ಟಿ, ಹಿರಿಯ ಶುಶ್ರೂಷಕಿ ಡೈಸಿ,ಅಂಗನವಾಡಿ ಕಾರ್ಯಕರ್ತೆ ಶಿವರತ್ನ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪಿ.ಪಿ.ಬೇಬಿ ಇದ್ದರು.