ಬೆಂಗಳೂರು : ಲಾಲ್‌ಬಾಗ್‌ನಲ್ಲಿ ನಡೆಯುತ್ತಿರುವ ಮಾವು- ಹಲಸು ಮೇಳಕ್ಕೆ ಗ್ರಾಹಕರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಕೇವಲ ನಾಲ್ಕು ದಿನಗಳಲ್ಲಿ 100 ಟನ್ ಮಾವು ಮತ್ತು ಹಲಸು ಮಾರಾಟವಾಗಿದ್ದು, ಬರೋಬ್ಬರಿ ₹1 ಕೋಟಿಗೂ ಅಧಿಕ ವಹಿವಾಟು ನಡೆದಿದೆ.
ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಮೇ 24ರಂದು ಚಾಲನೆ ನೀಡಿರುವ ಮಾವು ಮತ್ತು ಹಲಸು ಮೇಳದಲ್ಲಿ ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು ಗ್ರಾಮಾಂತರ ಹಲವೆಡೆಯಿಂದ ಮಾವು ಬೆಳೆಗಾರರು ಮಳಿಗೆಗಳನ್ನು ತೆರೆದಿದ್ದಾರೆ.
ಬಾದಾಮಿ, ಆಮ್ರಪಾಲಿ, ಮಲ್ಲಿಕಾ, ದಶೇರಿ, ಬಂಗನಪಲ್ಲಿ, ರಸಪುರಿ, ಇಮಾಮ್‌ಪಸಂದ್, ಸಕ್ಕರೆಗುತ್ತಿ, ಕಾಲಪಾಡ್, ಕೇಸರ್, ಮಲಗೋವ, ಸೇಂಧೂರ, ತೋತಾಪುರಿ, ನೀಲಂ ಸೇರಿದಂತೆ ವಿವಿಧ ತಳಿಯ ಮಾವುಗಳನ್ನು ಮಾರಾಟ ಮಾಡಲಾಗುತ್ತಿದೆ. ಬೆಳಗ್ಗೆ 7ರಿಂದ ಸಂಜೆ 7ಗಂಟೆ ವರೆಗೆ ಮಾವು ಮೇಳ ನಡೆಯುತ್ತಿರುವ ಹಿನ್ನೆಲೆಯಲ್ಲಿ ಲಾಲ್‌ಬಾಗ್‌ಗೆ ಬರುವ ಪ್ರವಾಸಿಗರು, ವಾಯುವಿಹಾರಿಗಳು ಸೇರಿದಂತೆ ನೂರಾರು ಜನರು ಪ್ರತಿ ದಿನ ಟನ್‌ಗಟ್ಟಲೆ ಮಾವು ಖರೀದಿಸುತ್ತಿರುವುದು ಮಾವು ಬೆಳೆಗಾರರಲ್ಲಿ ಸಂತಸ ಮೂಡಿಸಿದೆ.
ಮೇಳದ ಮೊದಲ ದಿನ (ಮೇ 24) 8.10 ಮೆಟ್ರಿಕ್ ಟನ್, ವಾರಾಂತ್ಯದ ಶನಿವಾರ 36 ಮೆಟ್ರಿಕ್ ಟನ್ ಮತ್ತು ಭಾನುವಾರ 43.20 ಟನ್ ಮಾವು ಮಾರಾಟವಾಗಿದೆ. ಸೋಮವಾರವೂ ಕೂಡ 15 ಟನ್‌ಗೂ ಹೆಚ್ಚು ಮಾವು ಮಾರಾಟವಾಗಿದ್ದು, ಹೀಗೆ ಒಟ್ಟು 100 ಮೆಟ್ರಿಕ್ ಟನ್ ಮಾವು ಮಾರಾಟವಾಗಿದೆ. ಇದರಿಂದ ₹1 ಕೋಟಿಗಳಿಗೂ ಅಧಿಕ ವಹಿವಾಟು ನಡೆದಿದೆ ಎಂದು ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದೆ.
ದರ ಪಟ್ಟಿ ಪ್ರದರ್ಶನ
ಮೇಳದ ಆರಂಭದ ದಿನದಲ್ಲಿ ಮಾವು ಅಭಿವೃದ್ಧಿ ನಿಗಮ ನಿಗದಿಪಡಿಸಿದ್ದ ಮಾವಿನ ದರಪಟ್ಟಿಯನ್ನು ಮಾವು ಬೆಳೆಗಾರರು ಪ್ರದರ್ಶಿಸಿರಲಿಲ್ಲ. ಅಲ್ಲದೇ ಗ್ರಾಹಕರಿಂದ ಮನಸ್ಸಿಗೆ ಬಂದ ದರವನ್ನು ವಸೂಲಿ ಮಾಡುತ್ತಿದ್ದ ಕುರಿತು ‘ಕನ್ನಡಪ್ರಭ’ ವರದಿ ಪ್ರಕಟಿಸಿತ್ತು. ಈ ಬೆನ್ನಲ್ಲೇ ಎಚ್ಚೆತ್ತುಕೊಂಡು ಮಾವು ಅಭಿವೃದ್ಧಿ ಮಂಡಳಿಯು ಪ್ರತಿ ಮಳಿಗೆಯಲ್ಲಿ ಗ್ರಾಹಕರಿಗೆ ಕಾಣುವಂತೆ ಸೂಚನೆ ನೀಡಿದ್ದು, ಅಧಿಕಾರಿಗಳು ಖುದ್ದಾಗಿ ದರಪಟ್ಟಿಯನ್ನು ಮಳಿಗೆಗಳಲ್ಲಿ ಹಾಕಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಲ್ಲದೇ ಹಲಸಿನ ಹಣ್ಣಿನ ಬೆಲೆಯನ್ನು ಕೂಡ ನಿಗದಿ ಮಾಡಿದ್ದು, ಸಾಮಾನ್ಯ ಹಲಸಿನ ಹಣ್ಣಿನ (ಹಳದಿ ಬಣ್ಣದ) ಒಂದು ಡಜನ್ (12 ತೊಳೆ) ಸಣ್ಣ ತೊಳೆಗೆ ₹40 ಮತ್ತು ದೊಡ್ಡ ತೊಳೆಗೆ ₹50 ಹಾಗೆಯೇ ಆರೆಂಜ್ ಬಣ್ಣದ ಹಲಸಿನ ಹಣ್ಣಿನ ಸಣ್ಣ ತೊಳೆಗೆ ₹50, ದೊಡ್ಡ ತೊಳೆಗೆ ₹80 ನಿಗದಿ ಮಾಡಲಾಗಿದೆ.
ಸಂಪೂರ್ಣ ಮಾರಾಟ
ಮಾವು ಮತ್ತು ಹಲಸಿನ ಉಳುವರಿ ಕಡಿಮೆ ಇರುವ ಹಿನ್ನೆಲೆಯಲ್ಲಿ ಮೇಳದಲ್ಲೂ ಕೂಡ ಹೆಚ್ಚಿನ ಸಂಗ್ರಹವಿಲ್ಲ. ಕೇವಲ ನಾಲ್ಕು ದಿನಗಳಲ್ಲಿ ಬಹುತೇಕ ಮಾವು ಮತ್ತು ಹಲಸು ಮಾರಾಟವಾಗಿದ್ದು, ಮೇಳದ ಮಳಿಗೆಗಳು ಖಾಲಿಯಾಗಿವೆ. ಮಾವು ಬೆಳೆಗಾರರು ಕೂಡ ಮಾವು ತರಲು ಊರುಗಳಿಗೆ ತೆರಳಿದ್ದು ಗುರುವಾರ ಅಥವಾ ಶುಕ್ರವಾರ ಮತ್ತೆ ತಾಜಾ ಮಾವು ಮೇಳಕ್ಕೆ ಆಗಮಿಸುವ ನಿರೀಕ್ಷೆಯಿದೆ. ಅಲ್ಲಿಯವರೆಗೂ ಸ್ವಲ್ಪ ಹಣ್ಣುಗಳಿಗೆ ಕಷ್ಟವಾಗಲಿದೆ ಎನ್ನುತ್ತಾರೆ ಮಾವು ಬೆಳೆಗಾರರು. ಪ್ರಸ್ತುತ ಲಾಲ್‌ಬಾಗ್ ಮೇಳದಲ್ಲಿ 72 ಮಾವು ಮಳಿಗೆಗಳು, 9 ಹಲಸು ಮಳಿಗೆಗಳು ಹಾಗೂ 14 ಇತರೆ ಮಳಿಗೆಗಳಿವೆ.