100 ಗ್ರಾಮ ನ್ಯಾಯಾಲಯ ಶೀಘ್ರ-ಸಚಿವ ಪಾಟೀಲ್

KannadaprabhaNewsNetwork | Published : Nov 5, 2023 1:16 AM

ಸಾರಾಂಶ

ತ್ವರಿತ ನ್ಯಾಯದಾನಕ್ಕಾಗಿ ಗ್ರಾಮ ನ್ಯಾಯಾಲಯ ಸ್ಥಾಪಿಸುವ ಗುರಿಯನ್ನು ರಾಜ್ಯ ಸರ್ಕಾರ ಹೊಂದಿದೆ. ರಾಜ್ಯಾದ್ಯಂತ ಸುಮಾರು 100 ಗ್ರಾಮ ನ್ಯಾಯಾಲಯಗಳನ್ನು ಪ್ರಸಕ್ತ ಆರ್ಥಿಕ ವರ್ಷದಲ್ಲಿಯೇ ಪ್ರಾರಂಭಿಸಲಾಗುವುದು ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ್ ಹೇಳಿದ್ದಾರೆ.

ಕೊಪ್ಪಳ: ತ್ವರಿತ ನ್ಯಾಯದಾನಕ್ಕಾಗಿ ಗ್ರಾಮ ನ್ಯಾಯಾಲಯ ಸ್ಥಾಪಿಸುವ ಗುರಿಯನ್ನು ರಾಜ್ಯ ಸರ್ಕಾರ ಹೊಂದಿದೆ. ರಾಜ್ಯಾದ್ಯಂತ ಸುಮಾರು 100 ಗ್ರಾಮ ನ್ಯಾಯಾಲಯಗಳನ್ನು ಪ್ರಸಕ್ತ ಆರ್ಥಿಕ ವರ್ಷದಲ್ಲಿಯೇ ಪ್ರಾರಂಭಿಸಲಾಗುವುದು ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ್ ಹೇಳಿದ್ದಾರೆ.

ನಗರದ ಕುಷ್ಟಗಿ ರಸ್ತೆಯಲ್ಲಿ ನೂತನ ಜಿಲ್ಲಾ ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆಯಲ್ಲಿ ಭಾಗವಹಿಸಿ, ನಂತರ ಅವರು ಮಾತನಾಡಿದರು. ರಾಜ್ಯ ಸೇರಿದಂತೆ ದೇಶಾದ್ಯಂತ ನ್ಯಾಯದಾನ ವಿಳಂಬವಾಗುತ್ತಿದೆ. ದೇಶಾದ್ಯಂತ ಕೋಟ್ಯಂತರ ಪ್ರಕರಣ, ರಾಜ್ಯಾದ್ಯಂತ ಲಕ್ಷಾಂತರ ಪ್ರಕರಣ ಇತ್ಯರ್ಥವಾಗಬೇಕಾಗಿದೆ. ಇವುಗಳ ತ್ವರಿತ ವಿಲೇವಾರಿ ಗಮನದಲ್ಲಿಟ್ಟುಕೊಂಡು ಗ್ರಾಮ ನ್ಯಾಯಾಲಯ ಆರಂಭಿಸಲಾಗುತ್ತದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿಯೇ ಪ್ರಾರಂಭಿಸುವ ಬಯಕೆ ನಮ್ಮದು ಎಂದರು.

ನ್ಯಾಯದಾನ ತ್ವರಿತವಾಗಿ ಆಗಬೇಕು. ಆಗಲೇ ಅದಕ್ಕೆ ನ್ಯಾಯ ಸಿಕ್ಕಂತೆ ಆಗುತ್ತದೆ. ಈ ದಿಸೆಯಲ್ಲಿ ಸರ್ಕಾರ ಅಗತ್ಯ ಸಹಕಾರ ನೀಡಲು ಸಂಪೂರ್ಣ ಸನ್ನದ್ಧವಾಗಿದೆ. ಹೈಕೋರ್ಟ್ ಸೂಚಿಸುವ ಎಲ್ಲ ಮೂಲಭೂತ ಸೌಕರ್ಯಗಳನ್ನು ನೀಡಲು ನಾವು ಬದ್ಧರಾಗಿದ್ದೇವೆ. ಹೀಗಾಗಿ ಪ್ರಕರಣಗಳ ತ್ವರಿತ ಇತ್ಯರ್ಥಕ್ಕೆ ಹೈಕೋರ್ಟ್ ಮುಖ್ಯನ್ಯಾಯಮೂರ್ತಿಗಳು ಅಗತ್ಯ ಕ್ರಮ ವಹಿಸಬೇಕು ಎಂದರು.

ಮಾನವ ಹಕ್ಕುಗಳ ಉಲ್ಲಂಘನೆಯ ಜಾಗೃತಿಯ ಕೊರತೆ ನಮ್ಮಲ್ಲಿ ಹೆಚ್ಚು ಇದೆ. ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣ ಅಷ್ಟಾಗಿ ದಾಖಲಾಗುವುದಿಲ್ಲ. ಅವುಗಳ ಇತ್ಯರ್ಥವೂ ಸಮರ್ಪಕವಾಗಿ ಆಗುತ್ತಿಲ್ಲ ಎಂದು ವಿಷಾದಿಸಿದರು.

ವ್ಯಕ್ತಿ ಗೌರವ, ವ್ಯಕ್ತಿತ್ವಕ್ಕೆ ಸಿಗಬೇಕಾದ ಮಾನ್ಯತೆ ನ್ಯಾಯಾಲಯದಲ್ಲೂ ಸಿಗಬೇಕು ಎಂದರು. ಆರೋಪಿಯನ್ನು ಅಪರಾಧಿಯಂತೆ ಕಾಣುವುದು ಸರಿಯಲ್ಲ. ನ್ಯಾಯಾಲಯಗಳಲ್ಲಿ ಪ್ರಕರಣದ ಇತ್ಯರ್ಥದ ವೇಳೆಯಲ್ಲಿ ಆರೋಪಿಗಳನ್ನು ಹಾಗೂ ಸಾಕ್ಷಿದಾರರನ್ನು ಅಗೌರವದಿಂದ ನಡೆಸಿಕೊಳ್ಳುವುದು ಸರಿಯಲ್ಲ. ಹಾಜರಾಗಲು ಏಕವಚನದಲ್ಲಿಯೇ ಕೂಗುತ್ತಾರೆ. ಇದ್ಯಾವುದನ್ನೂ ಇದುವರೆಗೂ ವಕೀಲರು ಪ್ರಶ್ನೆ ಮಾಡುತ್ತಿಲ್ಲ. ನಮ್ಮ ಕಕ್ಷಿದಾರರನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು ಎಂದು ನ್ಯಾಯಾಧೀಶರನ್ನು ಪ್ರಶ್ನೆ ಮಾಡುವುದಿಲ್ಲ. ಇನ್ನು ಸಾಕ್ಷಿದಾರರಿಗೆ ಸಿಗಬೇಕಾದ ಸೌಕರ್ಯಗಳು ಸಿಗುತ್ತಿಲ್ಲ. ಕೆಲವೊಂದು ನ್ಯಾಯಾಲಯದಲ್ಲಂತೂ ಕುಡಿಯುವ ನೀರು ಸಹ ಇರುವುದಿಲ್ಲ. ಕಕ್ಷಿದಾರರು, ಸಾಕ್ಷಿದಾರರ ವ್ಯಕ್ತಿಗತ ಗೌರವಕ್ಕೆ ಧಕ್ಕೆಯಾಗುವುದು ಸರಿಯಲ್ಲ ಎಂದರು.

ನ್ಯಾಯಾಂಗ ವ್ಯವಸ್ಥೆ ಸುಧಾರಣೆಗಾಗಿ ಕಾನೂನು ರೂಪಿಸುವ ಅಗತ್ಯವಿದೆ. ಈ ದಿಸೆಯಲ್ಲಿ ವಕೀಲರ ಸಂಘದವರು ಸಹ ವಿಚಾರ ಸಂಕಿರಣ ನಡೆಸಬೇಕು. ಅಗತ್ಯ ಕಾನೂನು ಕುರಿತು ಪ್ರಸ್ತಾವನೆಯನ್ನು ನೀತಿ ಆಯೋಗದ ಮುಂದೆ ಅಥವಾ ಕಾನೂನು ಇಲಾಖೆಯ ಮುಂದೆ ತರಬೇಕು. ಇದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.

ಹೈಕೋರ್ಟ್‌ ವ್ಯಾಪ್ತಿಯ ಕುರಿತು ಆದಾಗ ಹೋರಾಟ ಮಾಡಿ ಯಶಸ್ವಿಯಾಗಿದ್ದಿರಿ., ನೀವೇ ಧ್ವನಿ ಎತ್ತುವ ಮೂಲಕ ವ್ಯಕ್ತಿ ಗೌರವ ಮತ್ತು ಮಾನವ ಹಕ್ಕುಗಳ ಉಲ್ಲಂಘನೆ ತಡೆಗೆ ಪ್ರಸ್ತಾವನೆ ಸಲ್ಲಿಸುವಂತೆ ಆಗಬೇಕು ಎಂದರು.

ಕಾಲಮಿತಿಯೊಳಗೆ ಪೂರ್ಣಗೊಳಿಸಿ: ಜಿಲ್ಲಾ ನ್ಯಾಯಾಲಯ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸಿದರೆ ಸಾಲದು, ಅದನ್ನು ಪೂರ್ಣಗೊಳಿಸುವ ದಿಸೆಯಲ್ಲಿ ಲೋಕೋಪಯೋಗಿ ಇಲಾಖೆ ಕಾರ್ಯಗತವಾಗಬೇಕು. ಕಾಲಮಿತಿಯಲ್ಲಿಯೇ ಕೊಪ್ಪಳ ಜಿಲ್ಲಾ ನ್ಯಾಯಾಲಯ ಕಟ್ಟಡ ಪೂರ್ಣಗೊಳಿಸಿ ಎಂದು ಸಚಿವರು ವೇದಿಕೆಯಲ್ಲಿಯೇ ಅಧಿಕಾರಿಗಳಿಗೆ ಸೂಚಿಸಿದರು.

Share this article