೧೦೦ ಎಕರೆ ಭೂಮಿ ಖಾಲಿ ಗೋಮಾಳವಲ್ಲ: ಮಹಾಲಿಂಗೇಗೌಡ

KannadaprabhaNewsNetwork |  
Published : Nov 04, 2026, 12:30 AM IST
೩ಕೆಎಂಎನ್‌ಡಿ-೧ಮಂಡ್ಯ ತಾಲೂಕು ಮುದ್ದನಘಟ್ಟ ಗ್ರಾಮದ ೧೦೦ ಎಕರೆ ಭೂಮಿಯ ವಾಸ್ತವ ಪರಿಸ್ಥಿತಿಯನ್ನು ಎಂ.ಎಂ.ಫೌಂಡೇಷನ್ ಅಧ್ಯಕ್ಷ ಎಂ.ಕೆ.ಮಹಾಲಿಂಗೇಗೌಡ ಅವರು ಗ್ರಾಮಸ್ಥರೊಂದಿಗೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಮುದ್ದನಘಟ್ಟ ಗ್ರಾಮದ ಸರ್ವೇ ನಂ. ೪೮ರಲ್ಲಿ ೭೦ ಎಕರೆ ಮತ್ತು ಹೆಗ್ಗಡತಿಹಳ್ಳಿ ಸರ್ವೇ ನಂ. ೩೫ರಲ್ಲಿ ೩೫ ಎಕರೆ ಸೇರಿ ಒಟ್ಟು ೧೦೫ ಎಕರೆ ಸರ್ಕಾರಿ ಜಮೀನು ಗೋಮಾಳವಾಗಿದೆ. ಇಲ್ಲಿರುವ ಭೂಮಿ ಖಾಲಿಯಾಗಿದೆ. ಒತ್ತುವರಿಯಿಂದ ಮುಕ್ತವಾಗಿದೆ. ಬೆಳೆಗಳು ಸೇರಿದಂತೆ ಯಾವುದೇ ಮರಗಳಿಲ್ಲ.

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲೆಯಲ್ಲಿ ಆಟೋಮೋಟಿವ್ ರೀಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ (ಎಆರ್‌ಎಐ) ಸ್ಥಾಪನೆಗೆ ತಾಲೂಕಿನ ಬಸರಾಳು ಸಮೀಪದ ಮುದ್ದನಘಟ್ಟ ಮತ್ತು ಹೆಗ್ಗಡತಿಹಳ್ಳಿಯಲ್ಲಿ ಗುರುತಿಸಿರುವ ೧೦೦ ಎಕರೆ ಭೂಮಿ ಖಾಲಿ ಗೋಮಾಳ ಅಲ್ಲ ಎಂದು ಎಂ.ಎಂ.ಫೌಂಡೇಷನ್ ಅಧ್ಯಕ್ಷ ಎಂ.ಕೆ.ಮಹಾಲಿಂಗೇಗೌಡ ತಿಳಿಸಿದರು.

ಮುದ್ದನಘಟ್ಟ ಗ್ರಾಮದ ಸರ್ವೇ ನಂ. ೪೮ರಲ್ಲಿ ೭೦ ಎಕರೆ ಮತ್ತು ಹೆಗ್ಗಡತಿಹಳ್ಳಿ ಸರ್ವೇ ನಂ. ೩೫ರಲ್ಲಿ ೩೫ ಎಕರೆ ಸೇರಿ ಒಟ್ಟು ೧೦೫ ಎಕರೆ ಸರ್ಕಾರಿ ಜಮೀನು ಗೋಮಾಳವಾಗಿದೆ. ಇಲ್ಲಿರುವ ಭೂಮಿ ಖಾಲಿಯಾಗಿದೆ. ಒತ್ತುವರಿಯಿಂದ ಮುಕ್ತವಾಗಿದೆ. ಬೆಳೆಗಳು ಸೇರಿದಂತೆ ಯಾವುದೇ ಮರಗಳಿಲ್ಲ. ನಮೂನೆ ೫೦, ೫೩, ೫೭ರ ಅರ್ಜಿಗಳು ಬಾಕಿ ಇಲ್ಲ ಎಂಬ ಅಂಶಗಳನ್ನು ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಸಲ್ಲಿಸಿರುವ ಅಂಶಗಳಲ್ಲಿ ಪ್ರಸ್ತಾಪಿಸಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಜಿಲ್ಲಾಡಳಿತ ಗುರುತಿಸಿರುವ ಈ ಪ್ರದೇಶದಲ್ಲಿ ಈಗಾಗಲೇ ಸರ್ಕಾರದಿಂದ ಭೂ ಮಂಜೂರಾತಿ ಪಡೆದಿರುವ ಹಿಡುವಳಿದಾರರಿದ್ದಾರೆ. ಕೆಲವರು ಮನೆಗಳನ್ನು ನಿರ್ಮಿಸಿಕೊಂಡು ವಾಸಿಸುತ್ತಿದ್ದಾರೆ. ಇನ್ನೂ ಕೆಲವರು ಭೂಮಿ ಮಂಜೂರಾತಿ ಕೋರಿ ನಮೂನೆ ೫೦, ೫೩, ೫೭ರಲ್ಲಿ ಅರ್ಜಿಗಳನ್ನು ಸಲ್ಲಿಸಿ ದೀರ್ಘಕಾಲದಿಂದ ಕೃಷಿ ಮಾಡಿಕೊಂಡು ಬರುತ್ತಿದ್ದಾರೆ ಎಂದು ದಾಖಲೆಗಳ ಸಹಿತ ವಿವರಿಸಿದರು.

ಸರ್ಕಾರ ಕುಟುಂಬಗಳಿಗೆ ನೀಡಿರುವ ಭೂ ಮಂಜೂರಾತಿ ದಾಖಲೆಗಳು, ವಾಸಸ್ಥಳಗಳು, ಸಾಗುವಳಿ ಮತ್ತು ಅರ್ಜಿಗಳ ವಾಸ್ತವ ಸ್ಥಿತಿಯನ್ನು ಸಮಗ್ರವಾಗಿ ದಾಖಲಿಸದೆ ಪ್ರಸ್ತಾವಿತ ಭೂಮಿಯನ್ನು ಸಂಪೂರ್ಣವಾಗಿ ಖಾಲಿ ಗೋಮಾಳವೆಂದು ಬಿಂಬಿಸುವುದು ಸರಿಯಲ್ಲ. ಮಂಜೂರಾತಿ ಪಡೆದ ರೈತರ ಜಮೀನುಗಳೂ ಪ್ರಸ್ತಾವಿತ ನಕ್ಷೆಯೊಳಗೆ ಸೇರಿದ್ದರೆ ಅವುಗಳನ್ನು ಸರ್ಕಾರಿ ಗೋಮಾಳವೆಂದು ಪರಿಗಣಿಸಿರುವ ಬಗ್ಗೆ ಜಿಲ್ಲಾಡಳಿತ ಸ್ಪಷ್ಟನೆ ನೀಡುವಂತೆ ಒತ್ತಾಯಿಸಿದರು.

ರೈತರ ದಾಖಲೆಗಳನ್ನು ಪರಿಶೀಲಿಸಿ ವರದಿಯಲ್ಲಿ ತಪ್ಪು ಅಥವಾ ಅಪೂರ್ಣ ಮಾಹಿತಿ ಇದ್ದಲ್ಲಿ ಅದನ್ನು ಸರಿಪಡಿಸಿ ಸರ್ಕಾರಕ್ಕೆ ಪರಿಷ್ಕೃತ ವರದಿ ಸಲ್ಲಿಸಬೇಕು. ನಮೂನೆ ೫೩, ೫೭ರ ಅರ್ಜಿಗಳನ್ನು ಅನರ್ಹತೆಯ ಆಧಾರದಲ್ಲಿ ತಿರಸ್ಕರಿಸಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಯಾವ ರೈತರ ಯಾವ ಅರ್ಜಿಯನ್ನು ಯಾವ ದಿನಾಂಕದಂದು ಯಾವ ಕಾರಣಕ್ಕೆ ತಿರಸ್ಕರಿಸಲಾಗಿದೆ ಎಂಬ ವಿವರ ಮತ್ತು ಆದೇಶ ಪ್ರತಿಗಳನ್ನು ಸಂಬಂಧಪಟ್ಟ ಅರ್ಜಿದಾರರಿಗೆ ಒದಗಿಸಬೇಕು. ಆ ನಿರ್ಧಾರವನ್ನು ಅವರಿಗೆ ತಿಳಿಸಲಾಗಿದೆಯೇ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದರು.

ಅರ್ಜಿಗಳು ಬಾಕಿ ಇಲ್ಲ ಎಂಬ ವರದಿಯ ಹೇಳಿಕೆ ಮತ್ತು ಅರ್ಜಿಗಳು ಇತ್ಯರ್ಥವಾಗಿಲ್ಲವೆಂಬ ರೈತರ ಅಹವಾಲಿನ ನಡುವಿನ ವ್ಯತ್ಯಾಸವನ್ನು ದಾಖಲೆಗಳ ಆಧಾರದಲ್ಲಿ ಪರಿಹರಿಸಬೇಕು. ಮಂಜೂರಾತಿದಾರರು, ಅರ್ಜಿದಾರರು, ನಿವಾಸಿಗಳು ಮತ್ತು ಇತರೆ ಸಾಗುವಳಿದಾರರ ಸ್ಥಿತಿಯನ್ನು ಪ್ರತ್ಯೇಕವಾಗಿ ಪರಿಶೀಲಿಸುವಂತೆ ಆಗ್ರಹಪಡಿಸಿದರು.

ಈ ಪ್ರದೇಶದಲ್ಲಿ ಮುದ್ದನಘಟ್ಟ, ಹೆಗ್ಗಡತಿಹಳ್ಳಿ ಗ್ರಾಮದ ಜೊತೆಗೆ ನರಗಲು, ವಡ್ಡರಹಳ್ಳಿ ಗ್ರಾಮಗಳ ಕೆಲವರು ಸೇರಿದಂತೆ ನೂರಾರು ಕುಟುಂಬಗಳು ಕುಟುಂಬವಾರು ನಾಲ್ಕರಿಂದ ಒಂದು ಎಕರೆ, ೨೦ ಗುಂಟೆಯವರೆಗೂ ಕೃಷಿ ಮಾಡಿಕೊಂಡು ಬದುಕುತ್ತಿದ್ದಾರೆ. ಪರಿಶಿಷ್ಟ ಜಾತಿಗೆ ಸೇರಿದ ೧೦ ರಿಂದ ೧೫ ಕುಟುಂಬಗಳು ಸೇರಿದಂತೆ ಸುಮಾರು ೮೦ ರಿಂದ ೧೦೦ಕ್ಕೂ ಹೆಚ್ಚು ಕುಟುಂಬಗಳು ಕೃಷಿಯನ್ನೇ ಅವಲಂಬಿಸಿವೆ. ಸಣ್ಣ ಅತಿಸಣ್ಣ ಪ್ರಮಾಣದ ಜಮೀನಿನಲ್ಲಿ ಕೃಷಿ ಮಾಡುತ್ತಿರುವವರಲ್ಲಿ ಬಡವರು, ಹಿಂದುಳಿದ ವರ್ಗದವರು ಕೃಷಿಯನ್ನೇ ಅವಲಂಬಿಸಿವೆ. ಈ ವಿವರಗಳನ್ನೆಲ್ಲಾ ಸ್ಯಾಟಲೈಟ್ ಸರ್ವೆ ಮೂಲಕ ಖಚಿತಪಡಿಸಿಕೊಳ್ಳುವಂತೆ ಒತ್ತಾಯಿಸಿದರು.

ಮೊದಲಿಗೆ ಜಿಲ್ಲಾಡಳಿತ ರೈತ ಕುಟುಂಬಗಳ ಸಭೆ ಕರೆಯಬೇಕು. ಯೋಜನೆಯ ಉದ್ದೇಶ, ಅಗತ್ಯವಿರುವ ಭೂಮಿಯ ಪ್ರಮಾಣ, ಗುರುತಿಸಿರುವ ಪ್ರದೇಶದ ನಕ್ಷೆ ಮತ್ತು ಭೂಮಿ ಹಸ್ತಾಂತರ ಪ್ರಕ್ರಿಯೆಯನ್ನು ಸ್ಪಷ್ಟವಾಗಿ ತಿಳಿಸಬೇಕು. ಕಂದಾಯ, ಭೂ ಮಾಪನ ಇಲಾಖೆ, ಕೆಐಎಡಿಬಿ, ಎಆರ್‌ಎಐ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ರೈತರ ಸಮ್ಮುಖದಲ್ಲಿ ಜಂಟಿ ಸ್ಥಳ ಪರಿಶೀಲನೆ ನಡೆಸಬೇಕು. ಪ್ರಸ್ತಾವಿತ ನೂರು ಎಕರೆಯ ಗಡಿಯನ್ನು ಗುರುತಿಸಿ ಅದರೊಳಗೆ ಯಾರ ಮಂಜೂರಾತಿ ಜಮೀನು, ಮನೆ, ಸಾಗುವಳಿ, ಬೆಳೆ ಅಥವಾ ಇತರೆ ಹೂಡಿಕೆ ಇರುವುದನ್ನು ಸ್ಪಷ್ಟಪಡಿಸಿಕೊಳ್ಳುವಂತೆ ತಿಳಿಸಿದರು.

ರೈತರು ಒಪ್ಪಿದರೆ ಸೂಕ್ತ ಪರಿಹಾರ, ಜೀವನಭದ್ರತೆ, ಉದ್ಯೋಗ ಖಾತರಿ ನೀಡಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬಹುದು. ಈ ಪ್ರದೇಶದಲ್ಲಿ ನನ್ನ ಕುಟುಂಬದವರಿಗೆ ಸಂಬಂಧಿಸಿದ ೨೫ ಎಕರೆ ಜಮೀನಿದೆ. ಯೋಜನೆಯನ್ನು ಮುಂದುವರೆಸುವುದಾದರೆ ಈ ಭೂಮಿಯನ್ನು ಯೋಜನೆಗೆ ಉಚಿತವಾಗಿ ಬಿಟ್ಟುಕೊಡಲು ಸಿದ್ಧನಿದ್ದೇನೆ. ಇದು ನನ್ನ ಕುಟುಂಬಕ್ಕೆ ಸಂಬಂಧಿಸಿದಂತೆ ನನ್ನ ವೈಯಕ್ತಿಕ ನಿಲುವು. ಉಳಿದಂತೆ ಇತರೆ ರೈತರ ಅಭಿಪ್ರಾಯ, ಅಹವಾಲು, ಒಪ್ಪಿಗೆಯನ್ನು ಪ್ರತ್ಯೇಕವಾಗಿ ಪಡೆದು ಅವರ ವಿಶ್ವಾಸದೊಂದಿಗೆ ಮುಂದುವರೆಯುವಂತೆ ಹೇಳಿದರು.

ಗೋಷ್ಠಿಯಲ್ಲಿ ವೆಂಕಟೇಶ್, ದೇಶಲಿಂಗೇಗೌಡ, ರಾಮಲಿಂಗೇಗೌಡ, ವೆಂಕಟೇಶ್, ತೇಜಸ್‌ಗೌಡ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಿತ್ತೂರ ಚೆನ್ನಮ್ಮ, ಭುವನೇಶ್ವರಿದೇವಿ ಭಾವಚಿತ್ರದ ಮೆರವಣಿಗೆ
ಫೋಟೋಗಳನ್ನು ಆಧರಿಸಿ ಮಹಿಳೆಯ ಆದಾಯ ನಿರ್ಧರಿಸಲಾಗದು: ಕೋರ್ಟ್‌