ಕನ್ನಡಪ್ರಭ ವಾರ್ತೆ ಮಳವಳ್ಳಿ:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರಗೆ ತಾಲೂಕಿನಲ್ಲಿ ನಡೆದಿರುವ ಭೂ ಅಕ್ರಮಗಳ ಪರಭಾರೆ ಪ್ರಕರಣದ ತನಿಖೆಯು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆಯುತ್ತಿದೆ. ಸುಮಾರು ಒಂದು ಸಾವಿರ ಎಕರೆ ಭೂಮಿಯನ್ನು ವಾಪಸ್ ಪಡೆಯಲಾಗಿದೆ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರಿ ಭೂಮಿ ಖಾಸಗಿಯವರಿಗೆ ಖಾತೆ ಮಾಡಿಕೊಟ್ಟಿದ್ದರು. ವಿವಿಧ ರೀತಿಯಲ್ಲಿ ಅಕ್ರಮ ನಡೆದಿರುವುದು ಸಾಬೀತಾಗುತ್ತಿದೆ. ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಅಕ್ರಮ ಭೂಮಿಯನ್ನು ಮರು ವಶಕ್ಕೆ ಪಡೆದುಕೊಂಡಿದೆ ಎಂದರು.
ಇದು ಸಾವಿರಾರು ಎಕರೆಯ ದೊಡ್ಡ ಹಗರಣ, ಇಲ್ಲಿ ಗುರುತರವಾಗಿ ಸಿಕ್ಕ ದಾಖಲಾತಿಗಳ ಆಧಾರದ ಮೇಲೆ ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿದಸ್ಥರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಪ್ರಕರಣದಲ್ಲಿ ಭಾಗಿಯಾಗಿದ್ದ ಎಲ್ಲರಿಗೂ ಕಾನೂನಿನಡಿಯಲ್ಲಿ ಸರ್ಕಾರದಿಂದ ಶಿಕ್ಷೆಗೆ ಒಳಪಡಿಸಲಾಗುವುದು ಎಂದು ಹೇಳಿದರು.ಬಿಜೆಪಿ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿ, ಇಂದು ಒಂದು ಪ್ರಚೋದನಕಾರಿ. ಅವರಿಗೆ ರಾಷ್ಟ್ರ, ಸಂವಿಧಾನ ಮತ್ತು ಸಹಬಾಳ್ವೆಯ ವಿಚಾರದಲ್ಲಿ ಕಿಂಚಿತ್ತೂ ಚಿಂತನೆ ಇಲ್ಲದಂಥ ಸ್ವಜನ ಪಕ್ಷಪಾತ ಮತ್ತು ಧರ್ಮಧಾರಿಕ ಚಿಂತನೆಗಳನ್ನು ಇಟ್ಟಿಕೊಂಡು ಮಾನವ ಧರ್ಮವನ್ನು ಮರೆತು ಮಾತನಾಡುತ್ತಾರೆ. ಇವರಿಗೆ ಉತ್ತರ ಕೊಡುವುದಿಲ್ಲ ಎಂದು ಹೇಳಿದರು.
ಸಂವಿಧಾನದಲ್ಲಿ ಕಾನೂನು ಎಲ್ಲವನ್ನೂ ನೀಡಿದೆ. ಕೆ.ಎಸ್.ಈಶ್ವರಪ್ಪ ಅವರಿಗೆ ಸಂವಿಧಾನ ಓದುವುದನ್ನು ಹೇಳಿಕೊಡಬೇಕು. ಅವರು ಮೊದಲು ಸಂವಿಧಾನವನ್ನು ಓದಿ ಸಮಾನತೆ ಬಗ್ಗೆ ತಿಳಿದುಕೊಳ್ಳಬೇಕು. ಶ್ರೂದ ವರ್ಗದವರಿಗೆ ಸಂವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷ ಜನಮನ್ನಣೆ ಗಳಿಸಿದ ಉತ್ತಮ ಹಾಗೂ ಬಹುಮತದಿಂದ ಗೆಲ್ಲುವಂಥ ಅಭ್ಯರ್ಥಿ ಈ ಬಾರಿ ಕಣಕ್ಕಿಳಿಸಲಿದೆ. ಸುಮಲತಾ ನಮ್ಮ ಪಕ್ಷದಲ್ಲಿ ಇಲ್ಲದಿರುವುದರಿಂದ ಅವರ ಬಗ್ಗೆ ಮಾತನಾಡುವುದಿಲ್ಲ. ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಯಾರೇ ಸ್ಪರ್ಧೆ ಮಾಡಿದರೂ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
2018ರ ಚುನಾವಣೆ ಸೋತ ನಂತರ ಜಿಲ್ಲೆಯ ಜನತೆಗೆ ಎಲ್ಲವು ಅರ್ಥವಾಗಿದೆ. ಕುಮಾರಣ್ಣ, ಯಡಿಯೂರಪ್ಪ, ಬೊಮ್ಮಾಯಿ ಅವರ ಅವಧಿಯಲ್ಲಿ ಜಿಲ್ಲೆಗೆ ಏನು ಮಾಡಿದ್ದಾರೆ ಎನ್ನುದು ಗೊತ್ತಿದೆ. ನಾವು ಶಾಂತಿಪ್ರಿಯರು, ಸಿಹಿಯ ನಾಡು ಮಂಡ್ಯಕ್ಕೆ ಅವರ ಮನೆಯ ಮಗನಾಗಿ ಕೆಲಸ ಮಾಡುತ್ತಿದ್ದೇವೆ. ಹೊರತು ಬೇರೆಯವರ ರೀತಿ ಸುಳ್ಳು, ಮೋಸ ಅಥವಾ ಜನರ ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿಲ್ಲ ಎಂದು ಜೆಡಿಎಸ್ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.