4ನೇ ಪ್ರಯತ್ನಕ್ಕೆ ಯುಪಿಎಸ್ಸಿಯಲ್ಲಿ 100ನೇ ರ್‍ಯಾಂಕ್‌

KannadaprabhaNewsNetwork |  
Published : Apr 17, 2024, 01:16 AM IST
26ನೇ ವಯಸ್ಸಿನಲ್ಲಿಯೇ ಯುಪಿಎಸ್‌ಸಿ ಪಾಸ್ಸ:ತತ ಪ್ರಯತ್ನದಲ್ಲಿಯೇ ಸಕ್ಸಸ್​ ಕಂಡ ವಿಜೇತಾ ಹೊಸಮನಿ. | Kannada Prabha

ಸಾರಾಂಶ

ಸತತ ಮೂರು ಬಾರಿ ಯುಪಿಎಸ್ಸಿ ಪರೀಕ್ಷೆ ಬರೆದರೂ ಪ್ರಿಲಿಮ್ಸ್ ಕೂಡ ಪಾಸಾಗಲಿಲ್ಲ. ಆದರೆ, ಆಸಕ್ತಿ ವಹಿಸಿ ಪ್ರಯತ್ನ ಮುಂದುವರಿಸಿದ್ದರಿಂದ ನಾಲ್ಕನೇ ಪ್ರಯತ್ನದಲ್ಲಿ ದೇಶಕ್ಕೆ 100ನೇ ರ್ಯಾಂಕ್ ಪಡೆದಿದ್ದಾಳೆ ಈ ಯುವತಿ.

ಮಲ್ಲಿಕಾರ್ಜುನ ಪಟ್ಟಣಶೆಟ್ಟಿ

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ

ಸತತ ಮೂರು ಬಾರಿ ಯುಪಿಎಸ್ಸಿ ಪರೀಕ್ಷೆ ಬರೆದರೂ ಪ್ರಿಲಿಮ್ಸ್‌ ಕೂಡ ಪಾಸಾಗಲಿಲ್ಲ. ಆದರೆ, ಆಸಕ್ತಿ ವಹಿಸಿ ಪ್ರಯತ್ನ ಮುಂದುವರಿಸಿದ್ದರಿಂದ ನಾಲ್ಕನೇ ಪ್ರಯತ್ನದಲ್ಲಿ ದೇಶಕ್ಕೆ 100ನೇ ರ್‍ಯಾಂಕ್‌ ಪಡೆದಿದ್ದಾಳೆ ಈ ಯುವತಿ.

22ನೇ ವಯಸ್ಸಿನಿಂದಲೇ ಯುಪಿಎಸ್‌ಪಿ ಪರೀಕ್ಷೆಯ ಹಂಬಲ ಇಟ್ಟುಕೊಂಡಿದ್ದ ಈ ಯುವತಿ ಕೊನೆಗೆ 26ನೇ ವಯಸ್ಸಿನಲ್ಲಿಯೇ ಸಾಧಿಸಿ ತೋರಿಸಿದ್ದಾಳೆ. ಹೀಗಾಗಿ ಯುಪಿಎಸ್‌ಸಿ ಈಗ ಬಿಡುಗಡೆ ಮಾಡಿರುವ ಫಲಿತಾಂಶದಲ್ಲಿ ದೇಶಕ್ಕೆ 100 ರ್‍ಯಾಂಕ್‌ ಪಡೆದಿದ್ದಾಳೆ. ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಜಾಲವಾದ ಗ್ರಾಮದ ವಿಜೇತಾ ಭೀಮಸೇನ್ ಹೊಸಮನಿ ಈ ರ್‍ಯಾಂಕ್‌ ಪಡೆದ ಯುವತಿ.

ಸತತ ಪ್ರಯತ್ನದಿಂದ ಮಾತ್ರ ನಾವು ಗುರಿ ತಲುಪಲು ಸಾಧ್ಯ. ಇದಕ್ಕೆ ದೃಢಸಂಕಲ್ಪ, ಕಠಿಣ ಪರಿಶ್ರಮ ಅವಶ್ಯಕ ಎಂಬುವುದನ್ನು ಸಾಧಿಸಿ ತೋರಿಸಿದ್ದಾಳೆ ಈ ಯುವತಿ. ಹೀಗಾಗಿಯೇ ಪ್ರಿಲಿಮ್ಸ್‌ ಕೂಡ ಪಾಸಾಗದ್ದಕ್ಕೆ ಬೇಸರಗೊಳ್ಳದೇ ಮರಳಿ ಯತ್ನ ಮಾಡಿದ ನಂತರ ಈಗ ಸತತ ನಾಲ್ಕನೇ ಪ್ರಯತ್ನದಲ್ಲಿ ಯಶಸ್ಸಿನ ದಾರಿ ಕಂಡುಕೊಂಡಿದ್ದಾಳೆ ಯುವತಿ.

ಆನ್‌ಲೈನ್‌ನಲ್ಲಿ ತರಬೇತಿ:

ಯುಪಿಎಸ್‌ಸಿ ಸತತ ಓದು ಬೇಕು ಎನ್ನುವ ವಿಜೇತಾ ಅವರು ಆನ್‌ಲೈನ್‌ ಮೂಲಕ ಕೋಚಿಂಗ್‌ ಕೂಡ ಪಡೆದುಕೊಂಡಿದ್ದಾರೆ. 2022ನೇ ಬ್ಯಾಚಿನ ಇವರ ಗೆಳತಿ ಕೃತಿಕಾ ಗೋಯಲ್ ಅವರು 14ನೇ ರ್‍ಯಾಂಕ್‌ ಪಡೆದಿದ್ದು ಕೂಡ ಪ್ರೇರಣೆಯಾಗಿದೆ. ಈ ನಿಟ್ಟಿನಲ್ಲಿ ಸತತ ಅಧ್ಯಯನ ಮೂಲಕ ತಾವು ಅಂದುಕೊಂಡ ದಾರಿಯಲ್ಲಿ ಯಶಸ್ಸು ಸಾಧಿಸಿದ್ದಾಳೆ.

ವಿಜೇತಾ ಹೊಸಮನಿ ಅವರ ತಂದೆ ಭೀಮಸೇನ್‌ ಅವರು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನಲ್ಲಿ ಕೆಲಸ ನಿರ್ವಹಿಸುವ ಮೂಲಕ ನಿವೃತ್ತಿಯ ಜೀವನವನ್ನು ಹುಬ್ಬಳ್ಳಿಯಲ್ಲಿ ಕಳೆಯುತ್ತಿದ್ದಾರೆ.

ವಿಜೇತಾ ಫ್ರೀ ಪ್ರೈಮರಿಯಿಂದ 5ನೇ ತರಗತಿಯವರೆಗೆ ಸೈನಿಕ ಸ್ಕೂಲ್ (ಶಿಶು ನಿಕೇತನ) ವಿಜಯಪುರದಲ್ಲಿ ಮಾಡಿದ್ದಾರೆ. 6ನೇ ತರಗತಿಯಿಂದ 10ನೇ ತರಗತಿವರೆಗೆ ಬಸವೇಶ್ವರ ವಿದ್ಯಾವರ್ಧಕ ಸಂಘ ಬಾಗಲಕೋಟೆಯಲ್ಲಿ ವಿದ್ಯಾಭ್ಯಾಸ ಮುಗಿಸಿ, ಪ್ರಥಮ ಪಿಯುಸಿ ವಿಜಯಪುರದ ತುಂಗಳ ಕಾಲೇಜಿನಲ್ಲಿ ನಡೆಸಿ, ದ್ವಿತೀಯ ಪಿಯುಸಿಯನ್ನು ವಿಜಯಪುರದ ದರ್ಬಾರ್ ಕಾಲೇಜಿನಲ್ಲಿ ಮುಗಿಸಿದ್ದಾರೆ.

ನಂತರ ಗುಜರಾತ್ ಯೂನಿವರ್ಸಿಟಿಯಲ್ಲಿ ಬಿಎ ಹಾಗೂ ಎಲ್‌ಎಲ್ ಬಿ ಕ್ರಿಮಿನಲ್ ಲಾ ಪದವಿಯಲ್ಲಿ ಗೋಲ್ಡ್ ಮೆಡಲ್ ಪಡೆದು ಪ್ರಥಮ ಶ್ರೇಣಿಯಲ್ಲಿ ಪಾಸಾಗಿದ್ದರು. ನಂತರ ಫ್ಲಾಟ್ ಪರೀಕ್ಷೆಯಲ್ಲಿ ಪಾಸಾಗಿ ಕ್ರಿಮಿನಲ್ ಲಾ ವೃತ್ತಿ ಜೀವನ ಬಿಟ್ಟು, ಯುಪಿಎಸ್‌ಸಿ ಪರೀಕ್ಷೆ ಎದುರಿಸಬೇಕೆಂಬ ಹಂಬಲ ಅವರದ್ದಾಗಿತ್ತು. ಹೀಗಾಗಿ ತಮ್ಮ ಸಹಪಾಠಿಗಳ ಜೊತೆ ಸತತ ಓದು ಹಾಗೂ ಆನ್‌ಲೈನ್‌ ತರಬೇತಿ ಪ್ರಯತ್ನ ಮಾಡುವ ಮೂಲಕ 2023ನೇ ಬ್ಯಾಚಿನ ಒಂದು 100ನೇ ಸ್ಥಾನ ಪಡೆದು ಜಿಲ್ಲೆಯ ಕೀರ್ತಿ ಎತ್ತರಿಸಿದ್ದಾರೆ.

-------------------

ಕೋಟ್‌

ಲಾ ಪದವಿ ಪರೀಕ್ಷೆಯ ನಂತರ ನಮ್ಮ ಸಹಪಾಠಿಗಳ ಜೊತೆ ಐಎಎಸ್ ಅಧಿಕಾರಿಯಾಗಲು ಬಯಸಿ ಸತತ ಪ್ರಯತ್ನ ಮಾಡಲು ತಂದೆ ತಾಯಿ ಪರೀಕ್ಷೆ ತಯಾರಿ ಸಮಯದಲ್ಲಿ ತುಂಬಾ ಪ್ರೋತ್ಸಾಹಿಸಿದರು. ಕಠಿಣ ಪರಿಶ್ರಮದಿಂದ ನಾಲ್ಕನೇ ಪ್ರಯತ್ನದಲ್ಲಿ 100ನೇ ಸ್ಥಾನ ದೊರಕಿದ್ದು ತುಂಬಾ ಸಂತೋಷವಾಗಿದೆ. ಇದಕ್ಕೆಲ್ಲ 2022ನೇ ಬ್ಯಾಚಿನ ನನ್ನ ಗೆಳತಿ ಕೃತಿಕಾ ಗೋಯಲ್ 14ನೇ ಸ್ಥಾನ ಪಡೆದಿದ್ದೇ ಪ್ರೇರಣೆಯಾಗಿದೆ.

-ವಿಜೇತಾ ಭೀಮಸೇನ ಹೊಸಮನಿ, 2023ನೇ ಬ್ಯಾಚಿನ ಯುಪಿಎಸ್‌ಸಿ ಪರೀಕ್ಷೆಯಲ್ಲಿ 100ನೇ ಸ್ಥಾನ ಪಡೆದ ವಿದ್ಯಾರ್ಥಿ.

------

ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನಲ್ಲಿ ನಾನು ಹಾಗೂ ಕುಟುಂಬದ ಇಬ್ಬರು ಕೆಲಸ ನಿರ್ವಹಿಸುವ ಮೂಲಕ ಮಕ್ಕಳ ಕಲಿಕೆಗೆ ಯಾವುದೇ ತೊಂದರೆ ಆಗದಂತೆ ಪ್ರೋತ್ಸಾಹ ನೀಡಿದ್ದೇವೆ. 2017ರಲ್ಲಿ ನನ್ನ ಧರ್ಮ ಪತ್ನಿ ಸ್ವಯಂ ನಿವೃತ್ತಿ ಪಡೆದು ಮಕ್ಕಳಿಗೆ ಪ್ರೋತ್ಸಾಹ ನೀಡಿದ್ದಳು. ನಂತರ 2021ರಲ್ಲಿ ಚೀಪ್ ಮ್ಯಾನೇಜರ್ ಆಗಿ ನಾನು ಸ್ವಯಂ ನಿವೃತ್ತಿ ಪಡೆದು ಮಕ್ಕಳ ಕಲಿಕೆಗೆ ಪ್ರೋತ್ಸಾಹ ನೀಡಿದೆವು. ಇಂದು ಇಬ್ಬರು ಮಕ್ಕಳು ತಮ್ಮ ಪ್ರತಿಭೆ ಹೊರಹಾಕಿದ್ದಾರೆ ತುಂಬಾ ಸಂತೋಷವಾಗಿದೆ.

-ಭೀಮಸೇನ ಹೊಸಮನಿ, ವಿಜೇತಾ ತಂದೆ.

PREV

Latest Stories

ದಾವಣಗೆರೆಯಲ್ಲಿ ವೀರಶೈವ ಪಂಚಪೀಠಗಳ ಸಮಾಗಮ
ಹವ್ಯಕ ಪ್ರತಿಷ್ಠಾನ ವಾರ್ಷಿಕೋತ್ಸವ ಸಂಪನ್ನ
5 ಪಾಲಿಕೆ ರಚನೆಗೆ ಆಕ್ಷೇಪಣೆ ಸಲ್ಲಿಸಲು ಹಕ್ಕಿದೆ: ಡಿಕೆಶಿ