ಕನ್ನಡಪ್ರಭ ವಾರ್ತೆ, ಕಡೂರು
ಲೋಕಸಭಾ ಚುನಾವಣೆಯು ಹಿಂದುತ್ವ, ರಾಷ್ಟ್ರೀಯವಾದ, ಸನಾತನ ಧರ್ಮದ ಪರ ಮತ್ತು ವಿರೋಧದ ನಡುವಿನ ಚುನಾವಣೆಯಾಗಿರುವ ಕಾರಣ ಪ್ರತಿಯೊಬ್ಬ ಮತದಾರರು ದೇಶದ ಹಿತ ದೃಷ್ಟಿಯಿಂದ ಯೋಚಿಸಿ ಮತದಾನ ಮಾಡಬೇಕು ಎಂದು ಅಪೆಕ್ಸ್ ಬ್ಯಾಂಕಿನ ಅಧ್ಯಕ್ಷ ಹಾಗೂ ಮಾಜಿ ಶಾಸಕರಾದ ಬೆಳ್ಳಿ ಪ್ರಕಾಶ್ ಕರೆ ನೀಡಿದರು.ಕಡೂರು ತಾಲೂಕಿನ ಪಂಚನಹಳ್ಳಿಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರ ನಡೆದ ಪ್ರಚಾರ ಸಭೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ಈ ಚುನಾವಣೆ ಯಾವ ಪಕ್ಷದ ವಿರುದ್ಧದ ಚುನಾವಣೆಯಲ್ಲ. ದೇಶದ ಹಿತಕ್ಕಾಗಿ ನಡೆಯುತ್ತಿರುವ ಚುನಾವಣೆಯಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನೂರಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಮತ್ತೊಮ್ಮೆ ಅಧಿಕಾರಕ್ಕೆ ಬಂದು ದೇಶಾದ್ಯಂತ ಏಕರೂಪ ನಾಗರಿಕ ನೀತಿ ಸಂಹಿತೆ ಜಾರಿಗೆ ತರಲಿದ್ದಾರೆ. ಇದರಿಂದ ದೇಶದಲ್ಲಿ ಆಮೂಲಾಗ್ರ ಬದಲಾವಣೆ ಆಗಲಿದೆ. ಈ ವಿಚಾರವನ್ನು ಮತದಾರರಿಗೆ ಮನದಟ್ಟು ಮಾಡಿಕೊಡಬೇಕು. ದೇಶಕ್ಕೆ ಬಿಜೆಪಿ ಮತ್ತು ನರೇಂದ್ರ ಮೋದಿ ಅವರ ಅನಿವಾರ್ಯತೆ ತಿಳಿಸಿಕೊಡಬೇಕು ಎಂದು ಹೇಳಿದರು.ಜೆಡಿಎಸ್ ಮುಖಂಡ ಪಂಚನಹಳ್ಳಿ ಪಾಪಣ್ಣ ಮಾತನಾಡಿ, ಇನ್ನೊಂದು ಊರಿಗೆ ಹೋಗಿ ಮತ ಕೊಡಿಸುತ್ತೇವೆ ಎನ್ನುವ ಭ್ರಮೆಯಿಂದ ಎಲ್ಲರು ಹೊರಬರಬೇಕು. ಆಯಾ ಊರಿನ ಮುಖಂಡರು ಅವರ ಊರಿನಲ್ಲಿ ಇದ್ದು ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಎನ್.ಡಿ.ಎ.ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸಲು ಸಾಧ್ಯ ಎಂದರು.
ಬಿಜೆಪಿ ಜಿಲ್ಲಾ ವಕ್ತಾರ ಕೆ.ಆರ್.ಮಹೇಶ್ ಒಡೆಯರ್, ಬಿ.ಪಿ. ದೇವಾನಂದ್, ಕೆ.ಎಂ. ಮಹೇಶ್ವರಪ್ಪ, ಎಚ್.ಎಂ. ರೇವಣ್ಣಯ್ಯ, ಪಿ.ಆರ್. ರಂಗನಾಥ್, ಸಾವೆ ಮರುಳಪ್ಪ, ಪಿ.ಎಸ್. ಸಂತೋಷ್, ಬಸವರಾಜಪ್ಪ, ಮರುಳಪ್ಪ ಮುಂತಾದವರಿದ್ದರು.