ಕಾವೇರಿ ತಾಯಿ ಮೇಲಾಣೆ, ರಾಜಕೀಯದ ಒಂದು ರುಪಾಯಿ ನನಗೆ ಬೇಡ: ಸ್ಟಾರ್ ಚಂದ್ರು

KannadaprabhaNewsNetwork | Published : Apr 17, 2024 1:16 AM

ಸಾರಾಂಶ

ಕಾವೇರಿ ತಾಯಿ ಮೇಲಾಣೆ. ರಾಜಕೀಯದ ಒಂದು ರುಪಾಯಿ ನನಗೆ ಬೇಡ. ನನ್ನ ಜನ್ಮ ಭೂಮಿಯ ಋಣ ತಿರಿಸುವ ಅವಕಾಶವನ್ನು ಮತದಾರರು ನೀಡಬೇಕು. ಮೂಲಸೌಕರ್ಯಕ್ಕೆ ಒತ್ತು ನೀಡುವುದರ ಜೊತೆಗೆ ಇಲ್ಲಿನ ವಿಶ್ವಮಾನ್ಯತೆ ಪಡೆದಿರುವ ಕೊಕ್ಕರೆ ಬೆಳ್ಳೂರು ಪಕ್ಷಿಧಾಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವಂತೆ ಯೋಜನೆ ರೂಪಿಸಲಾಗುವುದು. ವಿದೇಶಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಮಾಡಿ ಮಂಡ್ಯ ಹೆಸರು ಇಂಡಿಯಾದಾಚೆ ಮೊಳಗುವಂತೆ ಮಾಡುತ್ತೇನೆ.

ಕನ್ನಡಪ್ರಭ ವಾರ್ತೆ ಮದ್ದೂರು

ಜಿಲ್ಲೆಯ ಅಭಿವೃದ್ಧಿ ಮತ್ತು ರೈತರ ಹಿತ ಕಾಯಲು ಮತದಾರರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ನನ್ನನ್ನು ಗೆಲ್ಲಿಸಬೇಕೆಂದು ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಅವರು ಹೇಳಿದರು.

ಮದ್ದೂರು ತಾಲೂಕಿನ ಗ್ರಾಮ ಪಂಚಾಯ್ತಿಗಳಲ್ಲಿ ಮತ ಪ್ರಚಾರ ನಡೆಸಿದರು. ಈ ವೇಳೆ ಮಾತನಾಡುತ್ತಾ ಮಂಡ್ಯ ಜಿಲ್ಲೆಯ ಅಭಿವೃದ್ಧಿಯ ಕನಸನ್ನು ಮತದಾರರ ಮುಂದೆ ಬಿಚ್ಚಿಟ್ಟರು.

ಕಾವೇರಿ ತಾಯಿ ಮೇಲಾಣೆ. ರಾಜಕೀಯದ ಒಂದು ರುಪಾಯಿ ನನಗೆ ಬೇಡ. ನನ್ನ ಜನ್ಮ ಭೂಮಿಯ ಋಣ ತಿರಿಸುವ ಅವಕಾಶವನ್ನು ಮತದಾರರು ನೀಡಬೇಕು. ಮೂಲಸೌಕರ್ಯಕ್ಕೆ ಒತ್ತು ನೀಡುವುದರ ಜೊತೆಗೆ ಇಲ್ಲಿನ ವಿಶ್ವಮಾನ್ಯತೆ ಪಡೆದಿರುವ ಕೊಕ್ಕರೆ ಬೆಳ್ಳೂರು ಪಕ್ಷಿಧಾಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವಂತೆ ಯೋಜನೆ ರೂಪಿಸಲಾಗುವುದು. ವಿದೇಶಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಮಾಡಿ ಮಂಡ್ಯ ಹೆಸರು ಇಂಡಿಯಾದಾಚೆ ಮೊಳಗುವಂತೆ ಮಾಡುತ್ತೇನೆ ಎಂದರು.

ರೈತರ ಸಮಸ್ಯೆಗಳ ನಿವಾರಣೆಗೆ ರಾಷ್ಟ್ರೀಯ ಕಾಂಗ್ರೆಸ್ ಪಂಚ ನ್ಯಾಯದ ಗ್ಯಾರಂಟಿ ನೀಡಿದೆ. ಕನಿಷ್ಠ ಬೆಂಬಲ ಬೆಲೆ, ಕೃಷಿ ಉತ್ಪನ್ನಗಳ ಮೇಲಿನ ಜಿಎಸ್ ಟಿ ತೆರವು, ಸಾಲಮನ್ನಾ ಸೇರಿದಂತೆ ನಾನಾ ರೈತಪರ ಕಾರ್ಯಕ್ರಮಗಳನ್ನು ಘೋಷಿಸಿದೆ. ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ ರಾಜ್ಯದಲ್ಲಿ ಗ್ಯಾರಂಟಿ ಜಾರಿ ಮಾಡಿದಂತೆ ಕೇಂದ್ರದಲ್ಲೂ ಜಾರಿಯಾಗಲಿದೆ. ರೈತ ಬಾಂಧವರು ನನ್ನನ್ನು ಬೆಂಬಲಿಸಿ ಕಾಂಗ್ರೆಸ್ ಗೆ ಶಕ್ತಿ ತುಂಬಬೇಕೆಂದು ಪ್ರಾರ್ಥಿಸಿದರು.

ನಾನು ಪಕ್ಕಾ ಹಳ್ಳಿ ಹೈದ. ನಾನು ಹೊಲ ಉತ್ತಿದ್ದೇನೆ, ಗೊಬ್ಬರ ಹೊತ್ತಿದ್ದೇನೆ. ರೈತರ ಕಷ್ಟನಷ್ಟ ಗೊತ್ತಿದೆ. ಹೀಗಾಗಿ ರೈತರ ಬದುಕಿನಲ್ಲಿ ಹೊಸ ಆಶಾಕಿರಣ ಮೂಡಿಸಬೇಕೆಂದುಕೊಂಡಿದ್ದೇನೆ. ನನ್ನನ್ನು ಬೆಂಬಲಿಸಿದರೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸೇರಿದಂತೆ ಜಿಲ್ಲೆಯ ಸಚಿವರು, ಶಾಸಕರ‌ ಸಂಪೂರ್ಣ ಬೆಂಬಲವಿರುವುದರಿಂದ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳಿಗೆ ಮತ್ತಷ್ಟು ವೇಗ ಸಿಗಲಿದೆ ಎಂದರು.

ಮದ್ದೂರು ಶಾಸಕರಾದ ಉದಯ್, ಮಾಜಿ ಸಚಿವರಾದ ಬಿ.ಸೋಮಶೇಖರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್, ಜಿಲ್ಲಾ ಕಾರ್ಯದರ್ಶಿ ಚಿದಂಬರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಟ್ಟನಹಳ್ಳಿ ಶಿವಲಿಂಗೇಗೌಡ, ಹಿರಿಯ ಕಾಂಗ್ರೆಸ್ ಮುಖಂಡರಾದ ರಾಮಕೃಷ್ಣ ಸೇರಿದಂತೆ ಗ್ರಾಮ ಪಂಚಾಯತಿ ಅಧ್ಯಕ್ಷರು, ಸದಸ್ಯರು, ಮುಖಂಡರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Share this article