ಶಿವಮೊಗ್ಗ: ಕಾಶ್ಮೀರದ ಪಹಲ್ಗಾಂನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಮೃತಪಟ್ಟ ಮಂಜುನಾಥ್ ರಾವ್ ಅವರ ಮನೆಗೆ ದೂರದೂರಿನಿಂದ 103 ವರ್ಷದ ವೃದ್ಧೆ ಆಗಮಿಸಿ, ಸಂತ್ರಸ್ತ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದ ಹೃದಯ ತುಂಬಿದ ಘಟನೆ ಮಂಗಳವಾರ ನಡೆಯಿತು.
ವೃದ್ಧೆಯಾಗಿರುವ ತಾಯಿ ಶಿವಮ್ಮ ಅವರ ಆಸೆಯನ್ನು ಈಡೇರಿಸಲು ಮುಂದಾದ ಶಿವರುದ್ರಪ್ಪ ಅವರು ತಾಯಿಯನ್ನು ಮಂಗಳವಾರ ಶಿವಮೊಗ್ಗಕ್ಕೆ ಕರೆ ತಂದರು. ಬಸ್ಸಿನಲ್ಲಿಯೇ ಆಗಮಿಸಿದ ಇವರು ಆಟೋದಲ್ಲಿ ಮೃತ ಮಂಜುನಾಥ್ ರಾವ್ ಅವರ ಮನೆಗೆ ಆಗಮಿಸಿದರು.
ಆವರ ಆಗಮನದಿಂದ ತೀವ್ರ ಆಶ್ಚರ್ಯ ಚಕಿತರಾದವರು ಮೃತ ಮಂಜುನಾಥ್‌ರಾವ್ ಅವರ ಕುಟುಂಬದವರು. ನಿತ್ಯ ನೂರಾರು ಜನ ಬಂದು ಸಾಂತ್ವನ ಹೇಳುತ್ತಿದ್ದಾರೆ. ಆದರೆ 103 ವರ್ಷದ ವೃದ್ಧೆ ದೂರದೂರಿನಿಂದ ಬಂದ ವಿಚಾರ ಅರಿತ ಮಂಜುನಾಥ್ ರಾವ್ ಪತ್ನಿ ಪಲ್ಲವಿ, ತಾಯಿ ಸುಮತಿ ಭಾವುಕರಾದರು.ವೃದ್ಧೆ ಶಿವಮ್ಮ ಅವರು ಕುಟುಂಬದ ಎಲ್ಲ ಸದಸ್ಯರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು. ಶಿವಮ್ಮ ಅವರ ಧೈರ್ಯ ತುಂಬಿದ ಮಾತುಗಳನ್ನು ಕೇಳಿ ಮಂಜುನಾಥ್ ಪತ್ನಿ ಪಲ್ಲವಿ, ಮಂಜುನಾಥ್ ತಾಯಿ ಸುಮತಿ ಕಣ್ಣೀರಾದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ವೃದ್ಧೆ ಶಿವಮ್ಮ, ಶತ್ರು ದೇಶ ಪಾಕಿಸ್ತಾನವನ್ನು ಬಗ್ಗು ಬಡಿಯಬೇಕು. ಉಗ್ರಗಾಮಿಗಳನ್ನು ಬುಡ ಸಮೇತ ಕಿತ್ತು ಹಾಕಬೇಕು. ಪ್ರಧಾನಿ ನರೇಂದ್ರ ಮೋದಿ ಮತ್ತು ಯೋಗಿ ಆದಿತ್ಯನಾಥ್ ಹಾಗೂ ನಮ್ಮ ಸೈನಿಕರು ಪಾಕಿಸ್ತಾನವನ್ನು ಬಿಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಉಗ್ರರರಿಗೆ ಬೆಂಬಲ ನೀಡುವವರನ್ನೂ ಬಿಡಬೇಡಿ:
ನಿಜವಾಗಲೂ ನಮ್ಮ ವಿಳಾಸ ಹುಡುಕಿ ಅಜ್ಜಿ ಬಂದಿರುವುದು ನೋಡಿ ಆಶ್ಚರ್ಯ ಆಯ್ತು. ನಮಗೆ ಧೈರ್ಯ ತುಂಬಿ ಆಶೀರ್ವಾದ ಮಾಡಿರುವುದು ನಿಜಕ್ಕೂ ಖುಷಿ ಕೊಟ್ಟಿದೆ ಎಂದು ಮೃತ ಮಂಜುನಾಥ ರಾವ್ ಪತ್ನಿ ಪಲ್ಲವಿ ತಿಳಿಸಿದರು.
ಅಜ್ಜಿ ಹೇಳಿದಂತೆ ಸೇನೆಯವರಿಗೆ ದೇವರು ಆಯುಷ್ಯ, ಆರೋಗ್ಯ ಕೊಟ್ಟು ಉಗ್ರರ ವಿರುದ್ಧ ಹೋರಾಡುವ ಶಕ್ತಿ ಕೊಡಲಿ ಎಂದರು.
ಅಜ್ಜಿಯ ಕಳಕಳಿಯ ಮನಸ್ಥಿತಿ
ಎಲ್ಲರಲ್ಲೂ ಬರಲಿ: ಸುಮತಿಅಜ್ಜಿಯ ನೋಡಿ ತುಂಬಾ ಹೆಮ್ಮೆ ಅನಿಸುತ್ತದೆ. ಅಜ್ಜಿಯನ್ನು ನೋಡಿದರೆ ಹೃದಯದಲ್ಲಿ ದೇಶ ಪ್ರೇಮ ಎಷ್ಟಿದೆ ಎಂದು ಗೊತ್ತಾಗುತ್ತದೆ. ನಮ್ಮಲ್ಲೂ ದೇಶ ಪ್ರೇಮ ಇದೆ. ಆದರೆ ನಮಗಿಂತ ಹೆಚ್ಚಿನ ದೇಶ ಪ್ರೇಮ ಅಜ್ಜಿಯಲ್ಲಿದೆ ಎಂದು ಮೃತ ಮಂಜುನಾಥ್ ರಾವ್ ತಾಯಿ ಸುಮತಿ ಹೇಳಿದರು.
ಅಜ್ಜಿ ದೂರದೂರಿನಿಂದ ನಮಗೆ ಆಶೀರ್ವಾದ ಮಾಡಲು ಬಂದಿದ್ದಾರೆ. ಈ ಮೊದಲು ಸ್ವಾಮೀಜಿ ಒಬ್ಬರು ಕೂಡ ಬಂದಿದ್ದರು. ಹೀಗೆ ಮಹನೀಯರು, ಅಜ್ಜಿ ರೀತಿ ಎಲ್ಲರೂ ಬಂದು ಆಶೀರ್ವಾದ ಮಾಡುತ್ತಿದ್ದಾರೆ. ಅಮಾಯಕರನ್ನು ಈ ರೀತಿ ಕೊಲೆ ಮಾಡಬಾರದು, ದೇವರು ಉಗ್ರರಿಗೆ ಶಿಕ್ಷೆ ಕೊಟ್ಟೇ ಕೊಡುತ್ತಾನೆ. ನಮ್ಮ ದೇಶಕ್ಕೆ ಒಳ್ಳೆದಾಗ್ಬೇಕು ಎಲ್ಲರಿಗೂ ಒಳ್ಳೆಯದಾಗಬೇಕು ಎಂಬ ಅಜ್ಜಿಯ ಕಳಕಳಿಯ ಮನಸ್ಥಿತಿ ಎಲ್ಲರಲ್ಲೂ ಬರಬೇಕು ಎಂದರು.