ಲೋಕೋಪಯೋಗಿ, ನಗರ ಪಾಲಿಕೆ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳಿಂದ ಜಾಹಿರಾತು ಬಾಬ್ತು 106 ಕೋಟಿ ರು.ಗೂ ಅಧಿಕ ಮೊತ್ತ ಬರಬೇಕಾಗಿದೆ ಎಂದು ಕರ್ನಾಟಕ ರಾಜ್ಯ ಮಾರ್ಕೆಟಿಂಗ್ ಕಮ್ಯುನಿಕೇಷನ್ ಅಂಡ್ ಅಡ್ವರ್ಟೈಸಿಂಗ್ ಲಿಮಿಟೆಡ್(ಕೆಎಸ್‌ಎಂಸಿಎ)ನಿಗಮದ ಅಧ್ಯಕ್ಷ, ಕಾರವಾರ ಶಾಸಕ ಸತೀಶ್ ಸೈಲ್ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಗಳೂರು
ಲೋಕೋಪಯೋಗಿ, ನಗರ ಪಾಲಿಕೆ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳಿಂದ ಜಾಹಿರಾತು ಬಾಬ್ತು 106 ಕೋಟಿ ರು.ಗೂ ಅಧಿಕ ಮೊತ್ತ ಬರಬೇಕಾಗಿದೆ ಎಂದು ಕರ್ನಾಟಕ ರಾಜ್ಯ ಮಾರ್ಕೆಟಿಂಗ್ ಕಮ್ಯುನಿಕೇಷನ್ ಅಂಡ್ ಅಡ್ವರ್ಟೈಸಿಂಗ್ ಲಿಮಿಟೆಡ್(ಕೆಎಸ್‌ಎಂಸಿಎ)ನಿಗಮದ ಅಧ್ಯಕ್ಷ, ಕಾರವಾರ ಶಾಸಕ ಸತೀಶ್ ಸೈಲ್ ಹೇಳಿದ್ದಾರೆ. ಅವರು ಶುಕ್ರವಾರ ಮಂಗಳೂರಿನ ಯೆಯ್ಯಾಡಿಯಲ್ಲಿ ಕೆಎಸ್‌ಎಂಸಿಎ ಸ್ಥಳಾಂತರಿತ ಮಂಗಳೂರು ಶಾಖೆಯ ಉದ್ಘಾಟನೆ ನೆರವೇರಿಸಿ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಇಂಡಿಯನ್ ನ್ಯೂಸ್ ಪೇಪರ್ ಸೊಸೈಟಿ(ಐಎನ್‌ಎಸ್) ನಿಯಮ ಪ್ರಕಾರ ಸರ್ಕಾರಿ ಜಾಹಿರಾತುಗಳನ್ನು ಪತ್ರಿಕಗಳಿಗೆ ನೀಡಿದ 60 ದಿನಗಳಲ್ಲಿ ಕೆಎಸ್‌ಎಂಸಿಎ ಬಿಲ್ ಪಾವತಿಸುತ್ತದೆ. ಆದರೆ ಕೆಎಸ್‌ಎಂಸಿಎ ಬಳಿಕ ಅದನ್ನು ಸರ್ಕಾರದಿಂದ ಪಡೆಯುವುದು ಕ್ರಮ. 2022ರಿಂದ ವಸೂಲಿಗೆ ಬಾಕಿ ಮೊತ್ತ ಇರುವ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗಿದೆ. ಇಲ್ಲಿವರೆಗೆ 106 ಕೋಟಿ ರು.ಗೂ ಅಧಿಕ ಮೊತ್ತ ಬರಬೇಕಾಗಿದೆ. ಮೊತ್ತ ಬಾಕಿ ಇರಿಸಿರುವ ಇಲಾಖೆಗಳಿಂದ ಪಾವತಿಗೆ ಕ್ರಮ ಕೈಗೊಳ್ಳುವಂತೆ ಕೋರಿ ಜಿಲ್ಲಾಧಿಕಾರಿಗಳು, ಸಹಾಯಕ ಕಮಿಷನರ್‌ಗಳಿಗೆ ಪತ್ರ ಮೂಲಕ ಕೋರಲಾಗಿದೆ ಎಂದರು. ಮಾಧ್ಯಮಗಳಿಗೆ ಸರ್ಕಾರದ ಇಲಾಖೆಗಳು ನೀಡುವ ಜಾಹಿರಾತು ಮೊತ್ತದಲ್ಲಿ ಶೇ.15ರಷ್ಟು ಕಮಿಷನ್‌ನ್ನು ಕೆಎಸ್‌ಎಂಸಿಎ ಪಡೆದುಕೊಳ್ಳುತ್ತದೆ. ಪತ್ರಿಕೆಗಳಿಗೆ ಪ್ರಯೋಜನವಾಗುವ ಸಲುವಾಗಿ ಈ ಕಮಿಷನ್(ಏಜೆಂಟ್ ಚಾರ್ಜ್) ಮೊತ್ತವನ್ನು ಶೇ.10ಕ್ಕೆ ಇಳಿಸುವ ಬಗ್ಗೆ ಚಿಂತಿಸಲಾಗುತ್ತಿದೆ ಎಂದರು. ಎಂಸಿಎ ಭವನ ನಿರ್ಮಾಣ: ಸಂಸ್ಥೆಗೆ ವಿವಿಧ ಜಿಲ್ಲೆಗಳಲ್ಲಿ ಹಂಚಿಕೆ, ನೋಂದಣಿಯಾಗಿರುವ 12 ನಿವೇಶನಗಳಲ್ಲಿ ಎಂಸಿಎ ಭವನ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಈ ಸಂಸ್ಥೆಗೆ ಕೆಐಎಡಿಬಿಯಿಂದ ಬೆಂಗಳೂರಿನಲ್ಲಿ ಹಂಚಿಕೆಯಾಗಿರುವ 1 ಎಕರೆ ಕೈಗಾರಿಕಾ ಭೂಮಿಲ್ಲಿ ಮುದ್ರಣ ಮತ್ತು ಐಟಿ, ಐಟಿಇಎಸ್ ಚಟುವಟಿಕೆಯ ಕಾರ್ಯಯೋಜನೆ ಸಿದ್ಧಪಡಿಸಲಾಗುತ್ತಿದೆ ಎಂದರು.
ಮಂಗಳೂರು ಶಾಖೆ 2009ರಲ್ಲಿ ಸ್ಥಾಪನೆಯಾಗಿದ್ದು, ಕಾವೂರಿನಲ್ಲಿ ಇಲ್ಲಿನ ಪ್ರಥಮ ಶಾಖೆ ಆರಂಭಿಸಲಾಗುತ್ತಿದೆ ಎಂದರು.
ಸಂಸ್ಥೆಯ ಎಂಡಿ ಮೊಹಮ್ಮದ್ ಅತಿವುಲ್ಲಾ ಶರೀಫ್, ಡಿಜಿಎಂ ನಂದೀಶ್, ಶಾಖಾ ಪ್ರಬಂಧಕ ರಾಘವೇಂದ್ರ ಶಾಸ್ತ್ರಿ, ವಿಶೇಷ ಅಧಿಕಾರಿ ಅನುರಾಧ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.