ಚಳ್ಳಕೆರೆ: ಜಾಜೂರು ಗ್ರಾಮದಲ್ಲಿ ಕಳೆದ ಆ.೧೭ರಂದು ಅಂಜಿನಪ್ಪನವರ ೯೦, ಓಬಯ್ಯನವರ ೧೬ ಕುರಿಗಳು ಸಿಡಿಲಿಗೆ ಬಲಿಯಾಗಿದ್ದು, ಪರಿಹಾರವನ್ನು ನೀಡುವಂತೆ ಸರ್ಕಾರಕ್ಕೆ ತಹಸೀಲ್ದಾರ್ ರೇಹಾನ್‌ಪಾಷ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿದ್ದರು. ಹಲವು ಪ್ರಕರಣಗಳಲ್ಲಿ ಪರಿಹಾರ ನೀಡುವಲ್ಲಿ ವಿಳಂಬ ನೀತಿ ಅನುಸರಿಸುತ್ತಿದ್ದರೂ ಜಾಜೂರಿನ ಕುರಿ ಸಾವಿನ ಪ್ರಕರಣದಲ್ಲಿ ಸರ್ಕಾರ ಕೇವಲ ೧೦ ದಿನದಲ್ಲಿ ಪರಿಹಾರವನ್ನು ನೀಡುವ ಮೂಲಕ ನೊಂದವರಿಗೆ ಸಹಾಯ ಮಾಡಿದೆ. ತಹಸೀಲ್ದಾರ್ ರೇಹಾನ್ ಪಾಷ ಈ ಬಗ್ಗೆ ಮಾಹಿತಿ ನೀಡಿ, ಪ್ರತಿ ಕುರಿಗೆ ೪ ಸಾವಿರದಂತೆ ಒಟ್ಟು ೪.೨೪ ಲಕ್ಷ ರು. ಹಣವನ್ನು ರೈತರ ಖಾತೆಗೆ ಆನ್‌ಲೈನ್ ಮೂಲಕ ಜಮಾ ಮಾಡಲಾಗಿದೆ. ಪ್ರಕೃತಿ ವಿಕೋಪ ನಿಧಿಯಡಿ ಈ ಹಣವನ್ನು ನೀಡಲಾಗಿದೆ ಎಂದಿದ್ಧಾರೆ.