ಕನ್ನಡಪ್ರಭ ವಾರ್ತೆ ರಾಮನಗರ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಸ್ತ ಭಕ್ತರಿಗೆ ಸನ್ಮಂಗಲ ಉಂಟು ಮಾಡಲೆಂದು ಪ್ರತ್ಯಂಗಿರಾ ದೇವಿ ವಿಗ್ರಹ ಪ್ರತಿಷ್ಠಾಪನೆ ಮಾಡಲಾಗಿದೆ. ಈ ವಿಗ್ರಹದ ಉದ್ಘಾಟನಾ ಮಹೋತ್ಸವ ಹಿನ್ನೆಲೆಯಲ್ಲಿ ಆಗಸ್ಟ್ 19 ರಿಂದ 21ರವರೆಗೆ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಕೈಂಕರ್ಯಗಳು ನೆರವೇರಲಿವೆ ಎಂದರು.
ಆಗಸ್ಟ್ 19ರಂದು ಋತ್ವಿಜಾಧಿಕಾರ ಸ್ವೀಕಾರ, ಯಾಗಶಾಲ ಪ್ರವೇಶ, ಪುಣ್ಯಾಹ, ವಾಸ್ತು, ರಕ್ಷೋಘ್ನ, ಹೋಮಾದಿ ಪೂಜಾ ಕೖಂಕರ್ಯಗಳು ನೆರವೇರಲಿವೆ. ಆಗಸ್ಟ್ 20ರಂದು ಮಹಾಗಣಪತಿ ಅಷ್ಟದ್ರವ್ಯ ಹೋಮ ಪೂರ್ವಕ, ನವಗ್ರಹಾದಿ, ವಾಸ್ತು ಹೋಮ, ಬಿಂಬ ಶುದ್ಧಿ, ಜಲಾಧಿ, ಸಂಸ್ಕಾರ ವಾಸ ಜರುಗಲಿದೆ ಎಂದು ತಿಳಿಸಿದರು.ಆಗಸ್ಟ್ 21ರಂದು ಬ್ರಾಹ್ಮಿ ಮುಹೂರ್ತ ದಲ್ಲಿ ದೇವಿ ಅಷ್ಟಬಂಧನ, ಪ್ರಾಣ ಪ್ರತಿಷ್ಠೆ, ಪ್ರತ್ಯಂಗಿರಾ ಪ್ರಧಾನ ಹೋಮ, ಭಗವತಿ ಸೇವೆ, ಪೂಜಾ ಕಾರ್ಯಕ್ರಮಗಳು ನಡೆಯಲಿದೆ. ಅದೇ ದಿನ ಸುತ್ತೂರು ಶ್ರೀ ವೀರಸಿಂಹಾಸನ ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ, ಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಕೆಂಗೇರಿ ಏಕದಳ ಬಿಲ್ವ ಬಂಡೆ ಮಠ ಶ್ರೀ ಚರಮೂರ್ತಿ ಸಚ್ಚಿದಾನಂದ ಮಹಾಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ವಾರಣಾಸಿಯ ಅರವಿಂದ ಅಘೋರಿಗಳು ಶಾಕ್ತೇಯ ತಂತ್ರಾಗಮಾನುಸಾರ ಬ್ರಹ್ಮ ಶ್ರೀ ಶಶಿಧರನ್ ನಂಬೂದರಿ 108 ಅಡಿ ಎತ್ತರದ ಪ್ರತ್ಯಂಗಿರಾ ದೇವಿ ವಿಗ್ರಹ ಉದ್ಘಾಟನೆ ಮಾಡಲಿದ್ದಾರೆ ಎಂದು ಹೇಳಿದರು.
2 ವರ್ಷದಲ್ಲಿ ವಿಗ್ರಹ ನಿರ್ಮಾಣ :
ಕರ್ನಾಟಕದಲ್ಲಿ ಮೊದಲ ಬಾರಿಗೆ ಚಿಕ್ಕಕಲ್ ಬಾಳು ಗ್ರಾಮದಲ್ಲಿ 108 ಅಡಿ ಎತ್ತರ ಪ್ರತ್ಯಂಗಿರಾ ವಿಗ್ರಹ ಸ್ಥಾಪನೆ ಮಾಡಲಾಗುತ್ತಿದೆ. ಭಕ್ತರ ಸಹಕಾರದಿಂದ ವಿಗ್ರಹ ನಿರ್ಮಾಣ ಸಾಧ್ಯವಾಗಿದೆ. ದೇವಿಯ ಹಿಂಭಾಗದಲ್ಲಿ 30 ಅಡಿ ಎತ್ತರದ ಸಿಂಹ ಇದ್ದು, ಪ್ರತ್ಯಂಗಿರಾ ದೇವಿ ನಿಂತಿರುವ ವಿಗ್ರಹ ಆಕರ್ಷಕವಾಗಿ ಮೂಡಿ ಬಂದಿದೆ ಎಂದು ತಿಳಿಸಿದರು.
ಈ ಹಿಂದೆ ಮತ್ತು ಈಗ ಮೂರ್ತಿಗಳ ನಿರ್ಮಾಣದಲ್ಲಿ ಸಾಕಷ್ಟು ವ್ಯತ್ಯಾಸವಿದೆ. ಮೊದಲು ಮಾಡೆಲ್ ತಯಾರಿಸಿಕೊಂಡು ಅದಕ್ಕೆ ಇಟ್ಟಿಗೆ ಚೂರುಗಳನ್ನು ಬಳಸಿ ಮೂರ್ತಿ ಮಾಡುತ್ತಿದ್ದರು. ಪರಿಸರದಲ್ಲಿನ ವ್ಯತ್ಯಾಸದಿಂದ ಆ ಇಟ್ಟಿಗೆ ಚೂರು ತನ್ನ ಆಯಸ್ಸು ಕಳೆದುಕೊಂಡು ಮೂರ್ತಿ ಕ್ಷೀಣಿಸುತ್ತಿತ್ತು. ಇಲ್ಲಿ ಪ್ರತ್ಯಂಗಿರಾ ವಿಗ್ರಹಕ್ಕೆ ಸಣ್ಣ ಇಟ್ಟಿಗೆಯನ್ನು ಬಳಸದೆ ಕಾಂಕ್ರಿಟ್ ನಿಂದಲೇ ತಯಾರಿಸಲಾಗಿದೆ. ದೇವಿಯ ಸಣ್ಣ ಕೂದಲಿನ ಎಳೆಯಿಂದ ಹಿಡಿದು ಕಿರು ಬೆರಳಿನ ಸಮೇತ ಎಲ್ಲವನ್ನು ಕಾಂಕ್ರಿಟ್ ನಿಂದಲೇ ಮಾಡಲಾಗಿದೆ ಎಂದು ತಿಳಿಸಿದರು.