ಧಾರವಾಡ:
ಈ ಕುರಿತು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಂಘದ ಕಾರ್ಯಾಧ್ಯಕ್ಷ ಬಸವಪ್ರಭು ಹೊಸಕೇರಿ, ಕರ್ನಾಟಕ ಸೇರಿದಂತೆ ಆರು ರಾಜ್ಯಗಳಿಂದ 600 ಕನ್ನಡಿಗರು ಭಾಗವಹಿಸುವ ಈ ಮೇಳವನ್ನು ಜೂ. 20ರಂದು ಬೆಳಗ್ಗೆ 10ಕ್ಕೆ ಸೋಲಾಪುರದ ಕಿರೀಟೇಶ್ವರ ಮಠದ ಸ್ವಾಮಿನಾಥ ಸ್ವಾಮೀಜಿ ಸಾನ್ನಿಧ್ಯದಲ್ಲಿ ಮಾಜಿ ಕಾನೂನು ಸಚಿವ ಎಚ್.ಕೆ. ಪಾಟೀಲ ಉದ್ಘಾಟಿಸುವರು. ಅಕ್ಕಲಕೋಟ ಶಾಸಕ ಸಚಿವ ಕಲ್ಯಾಣಶೆಟ್ಟಿ ಗ್ರಂಥ ಲೋಕಾರ್ಪಣೆ, ಅತಿಥಿಗಳಾಗಿ ಸೋಲಾಪುರ ಎಸ್ಪಿ ಅತುಲ್ ಕುಲಕರ್ಣಿ ಭಾಗವಹಿಸುತ್ತಾರೆ. ಜೂ. 21ರಂಜು ಸಂಜೆ 4.30ಕ್ಕೆ ಸಮಾರೋಪ ಭಾಷಣವನ್ನುಆಳಂದ ಶಾಸಕ ಬಿ.ಆರ್. ಪಾಟೀಲ ಮಾಡುವರು. ಮಹಾರಾಷ್ಟ್ರ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ವಿಶ್ವನಾಥ ಚಾಕೋತೆ ಮುಖ್ಯ ಅತಿಥಿಗಳಾಗಿರುತ್ತಾರೆ ಎಂದರು.
ಮೇಳದಲ್ಲೇನಿದೆ?:ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿ, ಮೇಳದ ಮೊದಲ ದಿನ ನಡೆಯುವ ಎರಡು ಗೋಷ್ಠಿಯಲ್ಲಿ ವಚನಕಾರರು ಮತ್ತು ಸಮಕಾಲೀನತೆ, ಸೊನ್ನಲಗಿ ಸಿದ್ಧರಾಮ, ಮರಾಠಿ ಸಾಹಿತ್ಯಕ್ಕೆ ಬೇಂದ್ರೆಯವರ ಕೊಡುಗೆ, ಕನ್ನಡಕ್ಕೆ ಜಯದೇವಿತಾಯಿ ಲಿಗಾಡೆ ಕೊಡುಗೆ ಕುರಿತು ಚಿಂತಕರು ವಿಷಯ ಮಂಡನೆ ಮಾಡುವರು. ಅಂದು ಸಂಜೆ ಗೌರವ ಸನ್ಮಾನ, ವಚನ ನೃತ್ಯ, ಜನಪದ, ಲಾವಣಿ ನೃತ್ಯ, ಹಾಸ್ಯ ಸಂಜೆ ಅಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಎರಡನೆಯ ದಿನದ ಗೋಷ್ಠಿಯಲ್ಲಿ ಹೊರನಾಡು ಕನ್ನಡಿಗರ ಸುಖ-ದುಃಖ, ಕನ್ನಡ ಮರಾಠಿ ಕೊಡುಕೊಳ್ಳುವಿಕೆ, ಸೋಲಾಪುರದ ಸಾಂಸ್ಕೃತಿಕ ಪರಂಪರೆ ಕುರಿತು ಚಿಂತಕರು ವಿಷಯ ಮಂಡಿಸುವರು. ಕವಿ ಮಿಲನ ಗೋಷ್ಠಿಯಲ್ಲಿ ಹತ್ತುಕ್ಕೂ ಹೆಚ್ಚು ಕವಿಗಳು ಕವಿತೆ ವಾಚನ ಮಾಡುವರು. ಸಂಜೆ ಕನ್ನಡ ಭಕ್ತಿಗೀತೆಗಳು, ವಚನ ನೃತ್ಯ, ಅಕ್ಕಮಹಾದೇವಿ ನಾಟಕ, ಕೋಲಾಟ, ಯೋಗ ನೃತ್ಯ ಅಂತಹ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ ಎಂದು ಮಾಹಿತಿ ನೀಡಿದರು.