ಕನ್ನಡಪ್ರಭ ವಾರ್ತೆ ಮಂಡ್ಯ
ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಜಫ್ರುಲ್ಲಾ ಖಾನ್ ಜನ್ಮದಿನಾಚರಣೆಯ ಅಂಗವಾಗಿ ಹಿತೈಷಿಗಳ ಬಳಗ ಹಾಗೂ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮಿಗಳ ಭಕ್ತ ವೃಂದದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ‘ಬೃಹತ್ ರಕ್ತದಾನ ಶಿಬಿರ, ಗಿಡಗಳ ವಿತರಣೆ ಹಾಗೂ ಸಾಧಕರಿಗೆ ಸನ್ಮಾನ’ ಸಮಾರಂಭ ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಭಾಂಗಣದಲ್ಲಿ ಸೋಮವಾರ ಯಶಸ್ವಿಯಾಗಿ ನಡೆಯಿತು.ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಕೆಂಗೇರಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ, ಮನುಷ್ಯನಿಗೆ ಎಲ್ಲಕ್ಕಿಂತ ಮುಖ್ಯವಾದದ್ದು ಮಾನವ ಧರ್ಮ. ಶುದ್ಧವಾದ ಮನಸ್ಸಿದ್ದರೆ ಮೋಕ್ಷ ಪ್ರಾಪ್ತಿಯಾಗುತ್ತದೆ. ಪ್ರಕೃತಿ ಉಳಿವಿಗಾಗಿ ಹಾಗೂ ಆಮ್ಲಜನಕಕ್ಕಾಗಿ ಪ್ರತಿಯೊಬ್ಬರೂ ಗಿಡಗಳನ್ನು ಬೆಳೆಸಬೇಕು. ಜಫ್ರುಲ್ಲಾ ಖಾನ್ ಅವರು ಸಮಾಜಕ್ಕೆ ನೀಡುತ್ತಿರುವ ಕೊಡುಗೆ ಶ್ಲಾಘನೀಯ. ಇಂತಹ ಸಮಾಜಮುಖಿ ಕಾರ್ಯಕ್ರಮಗಳು ಎಲ್ಲರಿಗೂ ಮಾದರಿ ಎಂದರು.
ಮಿಮ್ಸ್ ನಿರ್ದೇಶಕ ಡಾ.ನರಸಿಂಹಸ್ವಾಮಿ ಮಾತನಾಡಿ, ರಕ್ತದಾನದ ಅಗತ್ಯತೆಯನ್ನು ವಿವರಿಸಿದರು. ಮಾನವನ ದೇಹದಲ್ಲಿ ಸುಮಾರು 5 ಲೀಟರ್ ರಕ್ತವಿರುತ್ತದೆ ಮತ್ತು ಪ್ರತಿ 120 ದಿನಗಳಿಗೊಮ್ಮೆ ಅದು ಬದಲಾಗುತ್ತಿರುತ್ತದೆ. ದಾನಿಗಳು ನೀಡುವ ಒಂದು ಯೂನಿಟ್ ರಕ್ತವು ಕ್ಯಾನ್ಸರ್ ರೋಗಿಗಳಿಗೆ, ಅಪಘಾತಕ್ಕೊಳಗಾದವರಿಗೆ ಹಾಗೂ ಗರ್ಭಿಣಿಯರಿಗೆ ಜೀವದಾನ ನೀಡುತ್ತದೆ. ರಕ್ತದಾನದ ಬಗ್ಗೆ ಇರುವ ಮೂಢನಂಬಿಕೆಗಳನ್ನು ತೊಡೆದುಹಾಕಿ, ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ರಕ್ತದಾನಕ್ಕೆ ಮುಂದಾಗಬೇಕು ಎಂದರು.ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಮತ್ತೀಕೆರೆ ಜಯರಾಮ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಜನ್ಮದಿನಾಚರಣೆ ಎಂದರೆ ಕೇವಲ ಆಡಂಬರಕ್ಕೆ ಸೀಮಿತವಾಗುತ್ತಿದೆ. ಆದರೆ, ಈ ಅಭಿಮಾನಿ ಬಳಗವು ರಕ್ತದಾನ, ಸಸಿ ವಿತರಣೆಯಂತಹ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಅಭಿನಂದನಾರ್ಹ. ಜಫ್ರುಲ್ಲಾ ಖಾನ್ ಅವರು ದುಬೈನಲ್ಲಿದ್ದರೂ, ಮಂಡ್ಯದ ಮೇಲಿನ ಅವರ ಪ್ರೀತಿ ಮತ್ತು ಮಾನವೀಯ ಮೌಲ್ಯಗಳು ಅನುಕರಣೀಯ ಎಂದು ಶ್ಲಾಘಿಸಿದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಕನ್ನಿಕಾ ಶಿಲ್ಪ ನವೋದಯ ಎಜುಕೇಷನ್ ಟ್ರಸ್ಟ್ ಅಧ್ಯಕ್ಷೆ ಎಚ್.ಆರ್. ಕನ್ನಿಕಾ, ಮಳವಳ್ಳಿಯ ಸಾಲುಮರ ನಾಗರಾಜು, ಮಿಮ್ಸ್ ರಕ್ತನಿಧಿ ಕೇಂದ್ರದ ಶುಶ್ರೂಷಕ ಅಧಿಕಾರಿ ಮಹಮದ್ ರಫಿ ಹಾಗೂ ಪತ್ರಿಕಾ ಛಾಯಾಗ್ರಾಹಕ ಕೆ.ಪಿ.ಕುಮಾರ್ ಅವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಡಾ.ಮಹಮ್ಮದ್ ಜಫ್ರುಲ್ಲಾ ಖಾನ್ ಹಿತೈಷಿಗಳ ಬಳಗ ಹಾಗೂ ಡಾ. ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮಿಗಳ ಭಕ್ತ ವೃಂದದ ಕೆ.ಎನ್.ನವೀನ್ ಕುಮಾರ್, ಜೀವಧಾರೆ ಟ್ರಸ್ಟ್ ಅಧ್ಯಕ್ಷ ಎಸ್.ಎಂ.ನಟರಾಜ್, ನಂಜುಂಡ ಸ್ವಾಮಿ, ಕೆ.ಪಿ.ಶಶಿಕುಮಾರ್ ಸೇರಿದಂತೆ ಇತರರು ಇದ್ದರು.
ಮಂಡ್ಯದ ಜೀವಧಾರೆ ಟ್ರಸ್ಟ್ ಹಾಗೂ ಮಿಮ್ಸ್ ಜಿಲ್ಲಾ ರಕ್ತನಿಧಿ ಕೇಂದ್ರದ ಸಹಕಾರದೊಂದಿಗೆ ಅಪಾರ ಸಂಖ್ಯೆಯಲ್ಲಿ ರಕ್ತದಾನಿಗಳು ಮತ್ತು ಸಾರ್ವಜನಿಕರು ಪಾಲ್ಗೊಂಡಿದ್ದರು.ಜಫ್ರುಲ್ಲಾಖಾನ್ ಹುಟ್ಟುಹಬ್ಬ: ಅಂಧ ಶಾಲೆ ಮಕ್ಕಳಿಗೆ ದಾಸೋಹ
ಕನ್ನಡಪ್ರಭ ವಾರ್ತೆ ಮಂಡ್ಯಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಫ್ರುಲ್ಲಾಖಾನ್ ಹುಟ್ಟುಹಬ್ಬದ ಪ್ರಯುಕ್ತ ನಗರದ ಸ್ವರ್ಣಸಂದ್ರದಲ್ಲಿರುವ ಪ್ರೇರಣಾ ಅಂಧ ಮತ್ತು ಅಂಗವಿಕಲ ಶಾಲೆಯ ಮಕ್ಕಳಿಗೆ ಅಭಿಮಾನಿಗಳು ದಾಸೋಹ ಕಾರ್ಯಕ್ರಮ ಆಯೋಜಿಸಿದ್ದರು.ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಬೇಕೆಂಬ ಉದ್ದೇಶದಿಂದ ರಕ್ತದಾನ, ಗಿಡಗಳ ವಿತರಣೆ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನೆರವೇರಿಸಲಾಯಿತು. ಸಂಜೆ ಮಕ್ಕಳಿಗೆ ದಾಸೋಹ ಕಾರ್ಯಕ್ರಮ ಆಯೋಜಿಸಿ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಲಾಗಿದೆ ಎಂದು ನಗರಸಭೆ ಮಾಜಿ ಸದಸ್ಯ ನಾಗೇಶ್ ಹೇಳಿದರು.ಹುಟ್ಟುಹಬ್ಬ ಸಮಾರಂಭಗಳು ಆಡಂಬರದಿಂದ ಕೂಡಿರದೆ, ಮೋಜು-ಮಸ್ತಿ ನಡೆಸದೆ, ಸಮಾಜಮುಖಿ ಚಟುವಟಿಕೆಗಳೊಂದಿಗೆ ನಡೆಸಿದಾಗ ಅದಕ್ಕೊಂದು ಅರ್ಥ ಬರುತ್ತದೆ. ಸಾರ್ಥಕತೆಯನ್ನು ಪಡೆಯುತ್ತವೆ ಎಂದರು.ಕಾರ್ಯಕ್ರಮದಲ್ಲಿ ಮೃತ್ಯುಂಜಯ, ಕೆ.ಎನ್.ನವೀನ್‌ಕುಮಾರ್, ಚಂದು, ಪ್ರೇರಣಾ ಶಾಲೆಯ ರವಿಕುಮಾರ್ ಇದ್ದರು.