ಜೂನ್‌ ಒಳಗೆ 11 ಸಾವಿರ ಶಿಕ್ಷಕರ ನೇಮಕ

KannadaprabhaNewsNetwork |  
Published : Jan 08, 2026, 03:15 AM IST
ಸಿಂದಗಿ ಪಟ್ಟಣದ ಬಸವ ನಗರದಲ್ಲಿರುವ ಸರಕಾರಿ ಕನ್ಯಾ ಪ್ರೌಢಶಾಲಾ ಆವರಣದಲ್ಲಿ ಎಂ.ಸಿ.ಮನಗೂಳಿ ಪ್ರತಿಷ್ಠಾನ ವತಿಯಿಂದ ನಡೆದ ಸಿಂದಗಿ ಮತಕ್ಷೇತ್ರದ ಪ್ರಥಮ ಹಂತದ 52 ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಶುದ್ಧ ಕುಡಿಯುವ ನೀರಿನ ಘಟಕಗಳ ಉದ್ಘಾಟನಾ ಮತ್ತು ವಿತರಣಾ ಸಮಾರಂಭವನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ಉದ್ಘಾಟಿಸಿದರು. | Kannada Prabha

ಸಾರಾಂಶ

ರಾಜ್ಯದಲ್ಲಿ ಶಿಕ್ಷಕರ ಕೊರತೆಯಿದ್ದು, ಜೂನ್‌ ಒಳಗಾಗಿ ದೈಹಿಕ ಶಿಕ್ಷಕರು ಸೇರಿದಂತೆ 11 ಸಾವಿರ ಪೂರ್ಣಾವಧಿ ಶಿಕ್ಷಕರನ್ನು ನೇಮಕಾತಿ ಮಾಡಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ಸಿಂದಗಿ

ರಾಜ್ಯದಲ್ಲಿ ಶಿಕ್ಷಕರ ಕೊರತೆಯಿದ್ದು, ಜೂನ್‌ ಒಳಗಾಗಿ ದೈಹಿಕ ಶಿಕ್ಷಕರು ಸೇರಿದಂತೆ 11 ಸಾವಿರ ಪೂರ್ಣಾವಧಿ ಶಿಕ್ಷಕರನ್ನು ನೇಮಕಾತಿ ಮಾಡಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ಪಟ್ಟಣದ ಬಸವ ನಗರದಲ್ಲಿರುವ ಸರ್ಕಾರಿ ಕನ್ಯಾ ಪ್ರೌಢಶಾಲಾ ಆವರಣದಲ್ಲಿ ಎಂ.ಸಿ.ಮನಗೂಳಿ ಪ್ರತಿಷ್ಠಾನ ವತಿಯಿಂದ ಹಮ್ಮಿಕೊಂಡ ಸಿಂದಗಿ ಮತಕ್ಷೇತ್ರದ ಪ್ರಥಮ ಹಂತದ 52 ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಶುದ್ಧ ಕುಡಿಯುವ ನೀರಿನ ಘಟಕಗಳ ಉದ್ಘಾಟನೆ ಮತ್ತು ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಈ ಮೊದಲು 200 ಕೆಪಿಎಸ್‌ಸಿ ಶಾಲೆಗಳಿದ್ದವು. ಪ್ರಸ್ತುತ 309 ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಆದರೆ ನಮ್ಮ ಗುರಿ 900 ಶಾಲೆಗಳನ್ನು ಏಕ ಕಾಲದಲ್ಲಿ ಪ್ರಾರಂಭಿಸುವ ಗುರಿ ಹೊಂದಿದ್ದೇವೆ. ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಪಿಯುಸಿ ಹಂತದ ಮಕ್ಕಳಿಗೆ ಪಠ್ಯಪುಸ್ತಕ, ಟೆಸ್ಟ್ ಬುಕ್ ಹಾಗೂ ಬಿಸಿ ಊಟದ ಯೋಜನೆ ಪ್ರಾರಂಭಿಸಲು ಸರ್ಕಾರ ಅನುಮತಿ ನೀಡಿದೆ. ದೇಶ ಅಭಿವೃದ್ಧಿ ಆಗಬೇಕಾದರೆ ಎಲ್ಲಾ ಮಕ್ಕಳಿಗೆ ಸಮಾನ ಶಿಕ್ಷಣದ ವ್ಯವಸ್ಥೆ ಜಾರಿಯಾಗಬೇಕು. ಆ ನಿಟ್ಟಿನಲ್ಲಿ ಸರ್ಕಾರ ಎಲ್ಲ ರೀತಿ ಯೋಜನೆ ಪ್ರಾರಂಭಿಸಲು ಮುಂದಾಗಿದೆ. ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಿಗೆ ಉಚಿತ ವಿದ್ಯುತ್‌ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಮಕ್ಕಳ ಕಲಿಕೆ ವೈಜ್ಞಾನಿಕವಾಗಿ ಸಾಗತ್ತಿದೆ ಎಂದರು.

ವಿಜಯಪುರ ಜಿಲ್ಲೆ ನಕಲು ಮುಕ್ತ ಜಿಲ್ಲೆಯಾಗಬೇಕು. ಆ ನಿಟ್ಟಿನಲ್ಲಿ ಶಿಕ್ಷಕರು ಜಾಗರೂಕತೆಯಿಂದ ತಮ್ಮ ಕಾರ್ಯನಿರ್ವಹಣೆ ಮಾಡಬೇಕು. ಕಲಿಕೆಯಿಂದ ಹಿಂದುಳಿದ ಮಕ್ಕಳನ್ನು ಗುರುತಿಸಿ ಅವರಿಗೆ ವಿಶೇಷ ತರಗತಿಗಳನ್ನು ಶಿಕ್ಷಕರು ತೆಗೆದುಕೊಳ್ಳಬೇಕು. ಬೇರೆ ಬೇರೆ ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಪಾಸಾಗಲು 30 ಅಂಕಗಳ ನಿಗದಿಯಿದೆ. ಈ ಬಾರಿ ನಮ್ಮ ರಾಜ್ಯದಲ್ಲಿಯೂ 33 ಅಂಕ ಪಡೆದರೆ ಸಾಕು, ಇದು ನಮ್ಮ ಮಕ್ಕಳ ಮುಂದಿನ ಶೈಕ್ಷಣಿಕ ಪ್ರಗತಿಗೆ ಅನುಕೂಲಕ್ಕಾಗಿ ಈ ಬಾರಿ ಆದೇಶ ಮಾಡಲಾಗಿದೆ. ಸಿಂದಗಿ ತಾಲೂಕಿನ ಕೋರಳ್ಳಿ ಗ್ರಾಮದಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಪಿಯುಸಿ ಕಾಲೇಜು ಮಂಜೂರಾತಿ ನೀಡಲಾಗಿದೆ. ಕೆಪಿಎಸ್‌ಸಿ ಶಾಲೆಗಳಲ್ಲಿ ಸಂಗೀತ ಶಿಕ್ಷಕರನ್ನು ನೇಮಕಾತಿ ಮಾಡಲು ಕ್ರಮ ಜರುಗಿಸುತ್ತೇವೆ ಎಂದು ತಿಳಿಸಿದರು.

ಪ್ರತಿಷ್ಠಾನದ ಅಧ್ಯಕ್ಷ, ಶಾಸಕ ಅಶೋಕ ಮನಗೂಳಿ ಮಾತನಾಡಿ, ದಿ.ಎಂ.ಸಿ.ಮನಗೂಳಿ ಪ್ರತಿಷ್ಠಾನದಿಂದ ಮತಕ್ಷೇತ್ರದ 314 ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಸುಸಜ್ಜಿತವಾದ ಶುದ್ಧ ಕುಡಿಯುವ ನೀರಿನ ಘಟಕವನ್ನು ವಿತರಿಸುವ ಕನಸು ಹೊಂದಿದ್ದೇವೆ. ಪ್ರಸ್ತುತ ಮೊದಲ ಹಂತದಲ್ಲಿ 52 ಶುದ್ಧ ಕುಡಿಯುವ ನೀರಿನ ಘಟಕ ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ಉಳಿದ ಎಲ್ಲಾ ಶಾಲೆಗಳಿಗೆ ಈ ಯೋಜನೆ ಮುಟ್ಟಲಿದೆ. ದಿ.ಎಂ.ಸಿ.ಮನಗೂಳಿ ಅವರು ತಮ್ಮ ಅಧಿಕಾರದ ಅವಧಿಯಲ್ಲಿ ಈ ಕ್ಷೇತ್ರಕ್ಕೆ ಶಾಶ್ವತ ಯೋಜನೆಗಳನ್ನು ನೀಡಿದ್ದಾರೆ ಅವರ ಹೆಜ್ಜೆಯಲ್ಲಿ ನಾನು ಸಹ ಶಾಶ್ವತ ಕಾರ್ಯಗಳನ್ನು ಮಾಡಲು ಮುಂದಾಗುತ್ತಿದ್ದೇನೆ. ಪ್ರತಿಷ್ಠಾನದ ಮೂಲಕ ಸಾಮಾಜಿಕ, ಧಾರ್ಮಿಕ ಕಾರ್ಯ ಮಾಡುವ ಮೂಲಕ ಅವರ ಹೆಸರನ್ನು ಅಜರಾಮರವಾಗಿ ಉಳಿಯುವಂತೆ ಮಾಡಲು ಮುಂದಾಗಿದ್ದೇವೆ ಎಂದರು.

ನಿವೃತ್ತ ಪ್ರಾಧ್ಯಾಪಕ ಡಾ.ಅರವಿಂದ ಮನಗೂಳಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಆಲಮೇಲ ಗುರು ಸಂಸ್ಥಾನ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯರು, ಶಿವಾನಂದ ಶಿವಾಚಾರ್ಯರು, ಅರಕೇರಿ ಮೂಲಪೀಠ ಮುಮ್ಮಟಗುಡ್ಡದ ಅವಧೂತಸಿದ್ಧ ಮಹಾರಾಜರು ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ವೇದಿಕೆ ಮೇಲೆ ಸಿಂದಗಿ ಪಟ್ಟಣ ಸಹಕಾರಿ ಬ್ಯಾಂಕ್‌ ಅಧ್ಯಕ್ಷ ಶರಣಪ್ಪ ವಾರದ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ವಿ.ವಿ.ಸಾಲಿಮಠ, ಡಾ.ಸಿ.ಕೆ. ಹೊಸಮನಿ, ಬಿಇಒ ಎಂ.ಬಿ.ಯಡ್ರಾಮಿ, ಪ್ರತಿಷ್ಠಾನದ ಕಾರ್ಯದರ್ಶಿ ಸೋಮನಗೌಡ ಬಿರಾದಾರ, ಸದಸ್ಯರಾದ ವಿ.ಬಿ.ಕುರಡಿ, ಸಿ.ವಿ.ಪಟ್ಟಣಶೆಟ್ಟಿ, ಬಿ.ಎ. ಬಿರಾದಾರ, ಆರ್.ಎ.ಕೋಳಕುರ, ಬಿ.ಆರ್.ಕಾಂಬಳೆ, ಬಿ.ಎಸ್.ಹಿಂಚಗೇರಿ, ಎಲ್.ಬಿ.ಗುಗ್ಗರಿ, ಎಂ.ಎ.ಸುಲ್ಪಿ, ಎಸ್.ಎಸ್.ಪಾಟೀಲ, ಎಸ್.ಎಸ್.ಹಿರೇಮಠ, ಪುರಸಭೆ ಮಾಜಿ ಅಧ್ಯಕ್ಷ ಡಾ.ಶಾಂತವೀರ ಮನಗೂಳಿ, ತಹಸೀಲ್ದಾರ್ ಕರೆಪ್ಪ ಬೆಳ್ಳಿ, ಸಿದ್ದಮ್ಮ ಗೌಡತಿ ಮನಗೂಳಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸುರೇಶ ಪೂಜಾರಿ, ಕ.ರಾ.ಪ್ರಾ.ಶಾ ಶಿಕ್ಷಕರ ಸಂಘ ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಲಿ, ಗುರಣ್ಣಗೌಡ ಬಿರಾದಾರ ನಾಗಾವಿ, ಶರಣಬಸವ ಲಂಗೋಟಿ ಸೇರಿದಂತೆ ಇತರರು ಇದ್ದರು.

ನನ್ನ ನಿಲುವು ಸ್ಪಷ್ಟ. ನನ್ನ ಪಾಲಿಗೆ ದೇವರು ಎರಡನೇ ಸ್ಥಾನ, ಶಾಲಾ ಮಕ್ಕಳೇ ಪ್ರಥಮ. ಮಕ್ಕಳನ್ನು ದೇವರ ಸ್ಥಾನದಲ್ಲಿಟ್ಟು ಅವರ ಉಜ್ವಲ ಭವಿಷ್ಯಕ್ಕಾಗಿ ಶ್ರಮಿಸುವುದೇ ನನ್ನಗುರಿ. ಎಂದ ಅವರು, ರಾಜ್ಯದ ಶೈಕ್ಷಣಿಕ ವ್ಯವಸ್ಥೆ ಸುಧಾರಣೆಗೆ ನಾವು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.

ಮಧು ಬಂಗಾರಪ್ಪ, ಶಿಕ್ಷಣ ಸಚಿವರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿ ವಿವಸ್ತ್ರ ಕೇಸ್‌ನಲ್ಲಿ ತಲೆದಂಡಕ್ಕೆ ಬಿಜೆಪಿ ಗಡುವು
ಶೀಘ್ರ ‘ಬಾಕಿ ಲಕ್ಷ್ಮಿ’ ಬಿಡುಗಡೆ - ಬಿಪಿಎಲ್‌ ರದ್ದಾದವರಿಗೆ ಇಲ್ಲ ಗೃಹಲಕ್ಷ್ಮಿ ಹಣ