ಲೋಕ ಅದಾಲತ್‌ನಲ್ಲಿ 11,512 ಪ್ರಕರಣ ಇತ್ಯರ್ಥ

KannadaprabhaNewsNetwork |  
Published : Sep 16, 2025, 12:03 AM IST
ಜಿಲ್ಲಾ ನ್ಯಾಯಾಧೀಶೆ ಕೆ.ಜಿ.ಶಾಂತಿ. | Kannada Prabha

ಸಾರಾಂಶ

ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆ ಒಳಗೊಂಡಂತೆ 31 ನ್ಯಾಯಾಲಯಗಳಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್ ಯಶಸ್ವಿಯಾಗಿ ಮುಕ್ತಾಯಗೊಂಡಿದೆ.

31 ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ ಅದಾಲತ್ ಯಶಸ್ವಿ

₹24,19,55,071.3 ಪರಿಹಾರದ ಮೊತ್ತ ವಸೂಲಿ: ನ್ಯಾಯಾಧೀಶೆ ಕೆ.ಜಿ. ಶಾಂತಿ

11,512 ಪ್ರಕರಣ ಇತ್ಯರ್ಥ

ಕನ್ನಡಪ್ರಭ ವಾರ್ತೆ ಬಳ್ಳಾರಿ

ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆ ಒಳಗೊಂಡಂತೆ 31 ನ್ಯಾಯಾಲಯಗಳಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್ ಯಶಸ್ವಿಯಾಗಿ ಮುಕ್ತಾಯಗೊಂಡಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಆದ ಕೆ.ಜಿ. ಶಾಂತಿ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ನ್ಯಾಯಾಲಯಗಳಲ್ಲಿ ದೀರ್ಘಕಾಲದಿಂದ ಬಾಕಿ ಇದ್ದ 16,650 ಪ್ರಕರಣಗಳನ್ನು ಅದಾಲತ್‌ನಲ್ಲಿ ರಾಜಿ ಸಂಧಾನಕ್ಕೆ ಗುರುತಿಸಿ, ಇವುಗಳಲ್ಲಿ 11,512 ಪ್ರಕರಣಗಳನ್ನು ಯಶಸ್ವಿಯಾಗಿ ಇತ್ಯರ್ಥಪಡಿಸಲಾಗಿದೆ. ಒಟ್ಟು ₹24,19,55,071.3 ಪರಿಹಾರ ಮೊತ್ತವನ್ನು ಅದಾಲತ್‌ನಲ್ಲಿ ವಸೂಲು ಮಾಡಲಾಗಿದೆ.

ಅದೇ ರೀತಿಯಾಗಿ ಇತ್ಯರ್ಥಗೊಂಡ 4,60,909 ವ್ಯಾಜ್ಯಪೂರ್ವ ಪ್ರಕರಣಗಳಿಂದ ₹193,79,69,679 ಪರಿಹಾರ ಮೊತ್ತ ವಸೂಲಾಗಿದೆ. ರಾಷ್ಟ್ರೀಯ ಲೋಕ್ ಅದಾಲತ್ ಅಂಗವಾಗಿ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಒಟ್ಟು 27 ನ್ಯಾಯಪೀಠಗಳನ್ನು (ಬೆಂಚ್) ಸ್ಥಾಪಿಸಲಾಗಿತ್ತು ಎಂದಿದ್ದಾರೆ.

ಈ ಅದಾಲತ್‌ನಲ್ಲಿ ಸಾವಿರಾರು ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಇದರಲ್ಲಿ ಅನೇಕ ವ್ಯಾಜ್ಯಪೂರ್ವ ಪ್ರಕರಣಗಳು ಕೂಡ ಸೇರಿವೆ ಇದು ಅವುಗಳು ನ್ಯಾಯಾಲಯಕ್ಕೆ ಹೋಗುವುದನ್ನು ತಡೆಯುತ್ತದೆ. ದೊಡ್ಡ ಪ್ರಮಾಣದ ಬಾಕಿ ಮತ್ತು ವ್ಯಾಜ್ಯಪೂರ್ವ ಪ್ರಕರಣಗಳನ್ನು ರಾಜಿ ಮತ್ತು ಸಂಧಾನದ ಮೂಲಕ ಇತ್ಯರ್ಥಪಡಿಸುವುದು ಅದಾಲತ್‌ನ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.

ಲೋಕ ಅದಾಲತ್ ಮೂಲಕ ಅಪಘಾತ ವಿಮೆ ಪ್ರಕರಣಗಳು, ಚೆಕ್ ಬೌನ್ಸ್, ಬ್ಯಾಂಕ್ ಸಾಲ ಮರುಪಾವತಿ ಪ್ರಕರಣಗಳು ಮತ್ತು ಗ್ರಾಹಕರ ದೂರುಗಳು ಸೇರಿದಂತೆ ವಿವಿಧ ರೀತಿಯ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ದೀರ್ಘಕಾಲದಿಂದ ಬಾಕಿ ಉಳಿದಿದ್ದ ಪ್ರಕರಣಗಳಿಗೂ ಪರಿಹಾರ ದೊರಕಿದೆ. ರಾಜಿ ಸಂಧಾನದ ಮೂಲಕ ಪ್ರಕರಣವನ್ನು ಇತ್ಯರ್ಥಪಡಿಸಿದವರಿಗೆ ಸಂಪೂರ್ಣ ನ್ಯಾಯಾಲಯ ಶುಲ್ಕವನ್ನು ಮರುಪಾವತಿ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಜಿಲ್ಲೆಯಲ್ಲಿನ 10 ಕೌಟುಂಬಿಕ ಪ್ರಕರಣಗಳಲ್ಲಿನ ವಾದಗಳನ್ನು ಬಗೆಹರಿಸಿ ದೂರ ಉಳಿದಿದ್ದ ಪತಿ-ಪತ್ನಿಯನ್ನು ಒಂದುಗೂಡಿಸಿ ಸಾಮರಸ್ಯ ಜೀವನ ಮಾಡುವಂತೆ ಸಂಧಾನ ಮಾಡಲಾಗಿದೆ. ಹತ್ತು ವರ್ಷಗಳಿಂದ ಬಾಕಿ ಇದ್ದ 4 ಚೆಕ್ ಬೌನ್ಸ್ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಮುಕ್ತಾಯಗೊಳಿಸಲಾಗಿದೆ.

ಸುಮಾರು 215 ಚೆಕ್ ಬೌನ್ಸ್ ಪ್ರಕರಣಗಳನ್ನು ರಾಜಿ ಮೂಲಕ ಸಂಧಾನ ಮಾಡಿ ಸುಮಾರು ₹6,43,18,707 ಪರಿಹಾರ ಕೊಡಲಾಗಿದೆ. 52 ಬ್ಯಾಂಕ್ ದಾವೆ ಮತ್ತು 24 ಹಣವಸೂಲಾತಿ ದಾವೆಗಳನ್ನು ರಾಜಿ ಸಂಧಾನದ ಮೂಲಕ ಮುಕ್ತಾಯಗೊಳಿಸಿ ₹2,51,82,098 ಪಾವತಿಸಲಾಗಿದೆ. ಅದೇ ರೀತಿಯಾಗಿ 66 ಅಪಘಾತ ಪರಿಹಾರದ ಪ್ರಕರಣ, 68 ಪಾಲು ಭಾಗ ದಾವೆಗಳನ್ನು, ಇತರೆ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳನ್ನು ಲೋಕ ಅದಾಲತ್ ನಲ್ಲಿ ರಾಜಿ ಸಂಧಾನದ ಮುಖಾಂತರ ಮುಕ್ತಾಯಗೊಳಿಸಲಾಗಿದೆ.

ಲೋಕ್ ಅದಾಲತ್‌ಗಳು ನ್ಯಾಯಾಂಗದ ಮೇಲಿನ ಒತ್ತಡ ಕಡಿಮೆ ಮಾಡಲು ಮತ್ತು ಸಮಾಜದಲ್ಲಿ ಸೌಹಾರ್ದಯುತ ವಾತಾವರಣ ನಿರ್ಮಿಸಲು ಸಹಕಾರಿಯಾಗಿವೆ. ಅದಾಲತ್ ನಲ್ಲಿ ಎಲ್ಲಾ ನ್ಯಾಯಾಧೀಶರು, ವಕೀಲರು, ಪೊಲೀಸ್ ಅಧಿಕಾರಿಗಳು, ಬ್ಯಾಂಕ್ ಅಧಿಕಾರಿಗಳು, ಸರ್ಕಾರ ಅಧಿಕಾರಿಗಳು ಮತ್ತು ಕಂಪನಿಗಳು ಸೇರಿದಂತೆ ಎಲ್ಲ ಪಾಲುದಾರರ ಸಹಕಾರದಿಂದ ಯಶಸ್ವಿಗೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಲು ಸಾಲು ರಜೆ, ಪ್ರವಾಸಿ ತಾಣ ರಷ್‌
ಭೂಮಿ ಮಾರಿದ ಇನ್ಫಿ ಬಗ್ಗೆ ಕಾರ್ತಿ ತೀವ್ರ ಆಕ್ರೋಶ