ರಾಜ್ಯದ ಹಲವೆಡೆ 11 ದಿನಗಳದಸರಾ ಸಂಭ್ರಮ ಪ್ರಾರಂಭ

KannadaprabhaNewsNetwork |  
Published : Sep 23, 2025, 01:03 AM IST
ಮಂಗಳೂರು ದಸರಾ | Kannada Prabha

ಸಾರಾಂಶ

ಶರನ್ನವರಾತ್ರಿ ಅಂಗವಾಗಿ 11 ದಿನಗಳ ದಸರಾ ಉತ್ಸವ ರಾಜ್ಯದೆಲ್ಲೆಡೆ ಸೋಮವಾರ ಸಡಗರ, ಸಂಭ್ರಮಗಳಿಂದ ಆರಂಭಗೊಂಡಿತು. ಶಕ್ತಿದೇವತೆಯ ಕ್ಷೇತ್ರಗಳಾದ ಕೊಲ್ಲೂರು, ಶೃಂಗೇರಿ ಸೇರಿ ರಾಜ್ಯದ ಪ್ರಮುಖ ದೇವಾಲಯಗಳಲ್ಲಿ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ದೇವಿಯ ಆರಾಧನೆಗೆ ನಾಂದಿ ಹಾಡಲಾಯಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಶರನ್ನವರಾತ್ರಿ ಅಂಗವಾಗಿ 11 ದಿನಗಳ ದಸರಾ ಉತ್ಸವ ರಾಜ್ಯದೆಲ್ಲೆಡೆ ಸೋಮವಾರ ಸಡಗರ, ಸಂಭ್ರಮಗಳಿಂದ ಆರಂಭಗೊಂಡಿತು. ಶಕ್ತಿದೇವತೆಯ ಕ್ಷೇತ್ರಗಳಾದ ಕೊಲ್ಲೂರು, ಶೃಂಗೇರಿ ಸೇರಿ ರಾಜ್ಯದ ಪ್ರಮುಖ ದೇವಾಲಯಗಳಲ್ಲಿ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ದೇವಿಯ ಆರಾಧನೆಗೆ ನಾಂದಿ ಹಾಡಲಾಯಿತು.

ಮಂಗಳೂರಲ್ಲಿ ಸಡಗರವಿಶ್ವವಿಖ್ಯಾತ ಮಂಗಳೂರು ದಸರಾ ಅಂಗವಾಗಿ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ಶಾರದೆ ಮತ್ತು ನವದುರ್ಗೆಯರ ಪ್ರತಿಷ್ಠಾಪನಾ ವಿಧಿ-ವಿಧಾನಗಳು ಸೋಮವಾರ ಸಡಗರ ಸಂಭ್ರಮದಿಂದ ನೆರವೇರಿದವು. ಮಹಾಗಣಪತಿ, ಶಾರದೆ, ಆದಿಶಕ್ತಿ, ಸ್ಕಂದ ಮಾತೆ, ಕಾತ್ಯಾಯಿನಿ, ಮಹಾಕಾಳಿ, ಮಹಾಗೌರಿ, ಸಿದ್ಧಿಧಾತ್ರಿ, ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟ, ಕೂಷ್ಮಾಂಡಿನಿ ದೇವಿ ಮೂರ್ತಿಗಳ ಪ್ರತಿಷ್ಠಾಪನಾ ಪೂಜೆ ನಡೆಯಿತು.

ಕೊಲ್ಲೂರಿನಲ್ಲಿ ವಿಶೇಷ ಪೂಜೆ

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಗಣಪತಿ ಪೂಜೆಯೊಂದಿಗೆ ನವರಾತ್ರಿಯ ಕಾರ್ಯಕ್ರಮಗಳು ಆರಂಭಗೊಂಡವು, ನಂತರ ಶ್ರೀದೇವಿಗೆ ವಿಶೇಷ ಪೂಜೆ, ಮಂಗಳಾರತಿ ನಡೆಸಲಾಯಿತು.

ಶೃಂಗೇರಿಯಲ್ಲಿ ಉತ್ಸವ

ಶೃಂಗೇರಿಯ ದಕ್ಷಿಣಾಮ್ನಾಯ ಶಾರದಾ ಪೀಠದಲ್ಲಿ ಶರನ್ನವರಾತ್ರಿ ಅಂಗವಾಗಿ ಸೋಮವಾರ ಶಾರದಾಂಬೆಗೆ ಹಂಸವಾಹಿನಿಯ ಅಲಂಕಾರ ಮಾಡಲಾಗಿತ್ತು. ಸೃಷ್ಟಿಕರ್ತ ಬ್ರಹ್ಮನ ಶಕ್ತಿ ಪಡೆದು ಬ್ರಾಹ್ಮಿಯಾಗಿ ಬ್ರಹ್ಮನ ವಾಹನ ಹಂಸವನ್ನೇರಿ ವಿಜೃಂಭಿಸಿದ ಶಾರದೆಯ ಅಲಂಕಾರ ಭಕ್ತರ ಮನಸೂರೆಗೊಳ್ಳುವಂತಿತ್ತು. ಇದೇ ವೇಳೆ, ನವರಾತ್ರಿಯ ಒಂಬತ್ತು ದಿನಗಳ ಕಾಲ ನಡೆಯಲಿರುವ ರಾಜಬೀದಿ ಉತ್ಸವಕ್ಕೆ ಚಾಲನೆ ನೀಡಲಾಯಿತು.

ತುಮಕೂರಿನಲ್ಲೂ ದಸರಾ

ತುಮಕೂರಲ್ಲಿ ವೈಭವದ ತುಮಕೂರು ದಸರಾಕ್ಕೆ ಸಿದ್ಧಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿಯವರು ಸೋಮವಾರ ಚಾಲನೆ ನೀಡಿದರು. ದಸರಾ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಹೆಲಿರೈಡ್, ಹಾಟ್ ಏರ್ ಬಲೂನ್, ಪಂಜಿನ ಕವಾಯತುಗಳಿಗೂ ಚಾಲನೆ ನೀಡಲಾಯಿತು. ಇದಕ್ಕೂ ಮೊದಲು, ದಸರಾ ಅಂಗವಾಗಿ ಚಾಮುಂಡೇಶ್ವರಿ ದೇವಿಯ ಪ್ರತಿಷ್ಠಾಪನೆ ನಡೆಸಲಾಯಿತು. ಈ ವೇಳೆ, ನಡೆದ ಹೋಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪರಮೇಶ್ವರ್‌ ಅವರು ಧರ್ಮಪತ್ನಿ ಸಹಿತರಾಗಿ ಪೂರ್ಣಾಹುತಿ ಸಲ್ಲಿಸಿದರು.

ಮಡಿಕೇರಿಯಲ್ಲಿ ಶಕ್ತಿದೇವತೆ ಕರಗ

ಐತಿಹಾಸಿಕ ಮಡಿಕೇರಿ ದಸರಾದಲ್ಲಿ ಪ್ರಮುಖವಾಗಿರುವ ನಗರದ ನಾಲ್ಕು ಶಕ್ತಿ ದೇವತೆಗಳ ಕರಗಗಳಿಗೆ ಪಂಪಿನ ಕೆರೆಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಕರಗಗಳ ಸಂಚಾರ ಆರಂಭಿಸುವ ಮೂಲಕ ಮಡಿಕೇರಿ ದಸರಾಗೆ ಸೋಮವಾರ ಚಾಲನೆ ನೀಡಲಾಯಿತು. ಮಹದೇವಪೇಟೆಯ ಪಂಪಿನ ಕೆರೆಯಲ್ಲಿ ಸೋಮವಾರ ಸಂಜೆ ನಗರದ ಶಕ್ತಿ ದೇವತೆಗಳ ಕರಗಗಳಿಗೆ ಪೂಜೆ ಸಲ್ಲಿಸಲಾಯಿತು. ನಾಲ್ಕು ಶಕ್ತಿ ದೇವತೆಗಳ ಕರಗಗಳಿಗೆ ದೇವತೆಗಳ ಮುಖವಾಡಗಳನ್ನು ಧರಿಸಿ ಹೂವುಗಳಿಂದ ಅದ್ಭುತವಾಗಿ ಅಲಂಕಾರ ಮಾಡಿದ್ದು, ಗಮನ ಸೆಳೆಯಿತು. ಇದೇ ವೇಳೆ, ಬೆಳಗಾವಿ ಜಿಲ್ಲೆ ಸವದತ್ತಿ ಯಲ್ಲಮ್ಮ, ಹೊರನಾಡು ಅನ್ನಪೂರ್ಣೇಶ್ವರಿ, ಕೊಪ್ಪಳ ಜಿಲ್ಲೆಯ ಹುಲಿಗೆಮ್ಮ ದೇವಾಲಯಗಳಲ್ಲೂ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಲಾಯಿತು.

PREV

Recommended Stories

ಅಕ್ರಮ ಶಸ್ತ್ರಾಸ್ತ್ರ: ನಿನ್ನೆಯೂ ವಿಚಾರಣೆಗೆ ತಿಮರೋಡಿ ಗೈರು
ಸಿದ್ದು ಆಳ್ವಿಕೆ ಟಿಪ್ಪು ಆಳ್ವಿಕೆ ನಾಚಿಸುವಂತಿದೆ : ಬಿವೈವಿ