ಮಂಗಳೂರಿಗೆ 11 ತೇಲುವ ಜೆಟ್ಟಿ ಮಂಜೂರು: ಗುಂಡೂರಾವ್‌

KannadaprabhaNewsNetwork | Published : Jan 27, 2025 12:45 AM

ಸಾರಾಂಶ

ದ.ಕ. ಜಿಲ್ಲೆಯಲ್ಲಿ ಪಡಿತರ ಚೀಟಿ ಹೊಂದಿಲ್ಲದ ಪರಿಶಿಷ್ಟ ಪಂಗಡದ ಕೊರಗ ಸಮುದಾಯದವರಿಗೆ ಆದ್ಯತಾ ಪಡಿತರ ಚೀಟಿ ನೀಡುವಂತೆ ಮುಖ್ಯಮಂತ್ರಿ ನಿರ್ದೇಶಿಸಿದ್ದಾರೆ. ಅದರಂತೆ ವಿಶೇಷ ಆಂದೋಲನ ನಡೆಸಿ 158 ಕುಟುಂಬಗಳಿಗೆ ಪಡಿತರ ಚೀಟಿ ನೀಡಿ 320 ಮಂದಿ ಸದಸ್ಯರನ್ನು ಪಡಿತರ ಚೀಟಿಗೆ ಸೇರ್ಪಡೆ ಮಾಡಲಾಗಿದೆ ಎಂದು ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದರು.
ಕನ್ನಡಪ್ರಭ ವಾರ್ತೆ ಮಂಗಳೂರುಮಂಗಳೂರು ಹಳೆ ಬಂದರು ವ್ಯಾಪ್ತಿಯಲ್ಲಿ 11 ತೇಲುವ ಜೆಟ್ಟಿ ಕಾಮಗಾರಿಗಳು ಮಂಜೂರಾಗಿವೆ. ಉಳ್ಳಾಲ ಕೋಡಿಯಲ್ಲಿ ನಾಡದೋಣಿಗಳು ತಂಗಲು ಜೆಟ್ಟಿ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿದೆ ಎಂದು ಆರೋಗ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದ್ದಾರೆ.ನಗರದ ನೆಹರೂ ಮೈದಾನದಲ್ಲಿ ಭಾನುವಾರ ದ.ಕ. ಜಿಲ್ಲಾ ಮಟ್ಟದ ಗಣರಾಜ್ಯೋತ್ಸವ ದಿನಾಚರಣೆ ಪ್ರಯುಕ್ತ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ ಅವರು ಸಂದೇಶ ನೀಡಿದರು.ಮಂಗಳೂರು ಮೀನುಗಾರಿಕಾ ಬಂದರಿನ 3ನೇ ಹಂತದ ಕಾಮಗಾರಿಗೆ ಈಗಾಗಲೇ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದರು.ಬಡವರಿಗೆ ಅಂಗಕಸಿ ಯೋಜನೆ: ಈಗಾಗಲೇ ಅಸ್ತಿತ್ವದಲ್ಲಿರುವ ಜೀವ- ಸಾರ್ಥಕತೆ ಅಂಗಕಸಿ ಯೋಜನೆ ವಿಸ್ತರಣೆಗೆ ರಾಜ್ಯ ಸರ್ಕಾರ ತೀರ್ಮಾನಿಸಿದ್ದು, ರಾಜ್ಯದ ಆದ್ಯತಾ ಕಾರ್ಡ್‌ ಹೊಂದಿರುವವರಿಗೆ ಈ ಯೋಜನೆಯಡಿ ಹೃದಯ, ಶ್ವಾಸಕೋಶ ಮತ್ತು ಮೂಳೆ ಮಜ್ಜೆಯ ಕಸಿಯ ಸೌಲಭ್ಯ ವಿಸ್ತರಿಸಲು 30 ಕೋಟಿ ರು. ಒದಗಿಸಲು ತೀರ್ಮಾನಿಸಲಾಗಿದೆ. ಇದಕ್ಕಾಗಿ 15, 18 ಮತ್ತು 21 ಲಕ್ಷ ರು.ಗಳ ಮೂರು ಪ್ಯಾಕೇಜ್‌ಗಳಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಸಚಿವರು ಹೇಳಿದರು.ಮನಪಾಕ್ಕೆ 165 ಕೋಟಿ ರು. ಅನುದಾನ: ರಾಜ್ಯದ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಸಮಗ್ರ ಮೂಲಭೂತ ಸೌಕರ್ಯ ಕಲ್ಪಿಸುವ ಉದ್ದೇಶದಿಂದ 2024-25ನೇ ಸಾಲಿನಲ್ಲಿ ಒಟ್ಟು 165 ಕೋಟಿ ರು. ಅನುದಾನ ಮಂಗಳೂರು ಮಹಾನಗರ ಪಾಲಿಕೆಗೆ ಹಂಚಿಕೆ ಮಾಡಲಾಗಿದೆ. ಈ ಯೋಜನೆಯಲ್ಲಿ ಒಟ್ಟು 25 ಕಾಮಗಾರಿಗಳನ್ನು ಪ್ರಸ್ತಾವಿಸಲಾಗಿದ್ದು, ಕಾಮಗಾರಿಗಳ ಅಂದಾಜು ಪಟ್ಟಿ ತಯಾರಿಕೆ ಹಂತದಲ್ಲಿದೆ. ಶೀಘ್ರ ಕಾಮಗಾರಿ ಆರಂಭಿಸಲಾಗುವುದು ಎಂದು ಮಾಹಿತಿ ನೀಡಿದರು.ವಾರ್ಷಿಕ ಉತ್ಸವ ನಿರ್ಧಾರ: ಹಲವು ವರ್ಷಗಳ ಬಳಿಕ ನಡೆದ ಕರಾವಳಿ ಉತ್ಸವದಲ್ಲಿ ನಿರೀಕ್ಷೆ ಮೀರಿ ಜನರು, ಪ್ರವಾಸಿಗರು ಭಾಗವಹಿಸಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮ, ವಸ್ತುಪ್ರದರ್ಶನ, ಯುವ ಉತ್ಸವ, ಶ್ವಾನ ಪ್ರದರ್ಶನ, ಕಲಾ ಪರ್ಬ, ಕಾರು ಮತ್ತು ಬೈಕ್‌ಗಳ ಪ್ರದರ್ಶನ, ಬೀಚ್‌ ಉತ್ಸವ, ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಇತ್ಯಾದಿ ಕಾರ್ಯಕ್ರಮಗಳು ಜಿಲ್ಲೆಯ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿದೆ. ಈ ಎಲ್ಲ ಕಾರ್ಯಕ್ರಮಗಳನ್ನು ನಿರಂತರವಾಗಿ ಮುಂದುವರಿಸಲು ವಾರ್ಷಿಕ ಉತ್ಸವವಾಗಿ ನಿಗದಿಗೊಳಿಸಲು ಸರ್ಕಾರ ನಿರ್ಧರಿಸಿದೆ ಎಂದು ದಿನೇಶ್‌ ಗುಂಡೂರಾವ್‌ ತಿಳಿಸಿದರು.ಕ್ರೀಡೆಗೆ ಪ್ರೋತ್ಸಾಹ: ಮಂಗಳೂರಿನಲ್ಲಿ ನಿರ್ಮಾಣವಾಗುತ್ತಿರುವ ಒಳಾಂಗಣ ಕ್ರೀಡಾಂಗಣವನ್ನು ಶೀಘ್ರ ಕ್ರೀಡಾಪಟುಗಳ ಬಳಕೆಗೆ ಸಮರ್ಪಿಸಲಾಗುವುದು. ನೆಹರೂ ಮೈದಾನದ ಫುಟ್‌ಬಾಲ್‌ ಮೈದಾನದಲ್ಲಿ ಉನ್ನತ ಸೌಲಭ್ಯಗಳನ್ನು ಒದಗಿಸಿ ಮೇಲ್ದರ್ಜೆಗೆ ಏರಿಸಲಾಗುವುದು ಎಂದರು.ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿದ್ಯಾರ್ಥಿಗಳಿಗೆ ಮಂಗಳೂರು, ಬಂಟ್ವಾಳ ಮತ್ತು ಬೆಳ್ತಂಗಡಿಯಲ್ಲಿ ಡಾ. ಬಿ.ಆರ್‌. ಅಂಬೇಡ್ಕರ್‌ ವಿದ್ಯಾರ್ಥಿ ನಿಲಯ ನಿರ್ಮಾಣ ಕಾಮಗಾರಿಗಳು ಪ್ರಗತಿಯಲ್ಲಿವೆ. ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗಾಗಿ 4 ಹೊಸ ಹಾಸ್ಟೆಲ್‌ಗಳನ್ನು ಆರಂಭಿಸಲಾಗಿದ್ದು, ಇದರಲ್ಲಿ 400 ವಿದ್ಯಾರ್ಥಿಗಳು ಪ್ರಯೋಜನ ಪಡೆಯಲಿದ್ದಾರೆ ಎಂದು ವಿವರಿಸಿದರು.ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ, ಸಂಸದ ಕ್ಯಾ. ಬ್ರಿಜೇಶ್‌ ಚೌಟ, ವಿಧಾನ ಪರಿಷತ್‌ ಸದಸ್ಯರಾದ ಐವನ್‌ ಡಿಸೋಜ, ಮಂಜುನಾಥ ಭಂಡಾರಿ, ಮೇಯರ್‌ ಮನೋಜ್‌ ಕುಮಾರ್‌, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರನಾಥ್‌ ಗಟ್ಟಿ, ಕೊಕಂಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟಾನ್ಲಿ ಅಲ್ವಾರಿಸ್‌, ಬ್ಯಾರಿ ಅಕಾಡೆಮಿ ಅಧ್ಯಕ್ಷ ಉಮರ್‌ ಯು.ಎಚ್‌., ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ.ಎಂ.ಪಿ. ಶ್ರೀನಾಥ್‌, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌, ಪೊಲೀಸ್‌ ಆಯುಕ್ತ ಅನುಪಮ್‌ ಅಗ್ರವಾಲ್‌, ಜಿ.ಪಂ. ಸಿಇಒ ಡಾ. ಆನಂದ್‌ ಕೆ., ಪೊಲೀಸ್‌ ವರಿಷ್ಠಾಧಿಕಾರಿ ಯತೀಶ್‌ ಎನ್‌., ಅಪರ ಜಿಲ್ಲಾಧಿಕಾರಿ ಡಾ. ಸಂತೋಷ್‌, ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್‌ ಮತ್ತಿತರರು ಇದ್ದರು.ದುಷ್ಟ ಶಕ್ತಿಗಳಿಗೆ ಸಮಾಜ ಬಹಿಷ್ಕಾರ ಹಾಕಲಿಸಮಾಜದಲ್ಲಿ ಯಾವುದೇ ವರ್ಗದ ನೈತಿಕ ಪೊಲೀಸ್‌ಗಿರಿಯನ್ನು ಸಹಿಸುವ ಪ್ರಶ್ನೆಯೇ ಇಲ್ಲ. ಕಾನೂನು ಕೈಗೆತ್ತಿಕೊಳ್ಳುವ ಸಮಾಜ ಘಾತುಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಸಮಾಜವೇ ಬಹಿಷ್ಕಾರ ಹಾಕಿದರಷ್ಟೇ ಇಂತಹ ದುಷ್ಟಶಕ್ತಿಗಳನ್ನು ನಿರ್ನಾಮ ಮಾಡಬಹುದು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ತಮ್ಮ ಸಂದೇಶದಲ್ಲಿ ಹೇಳಿದರು. ಜಿಲ್ಲೆಯ ಅಭಿವೃದ್ಧಿ, ಶಿಕ್ಷಣ ಮತ್ತು ಪ್ರವಾಸೋದ್ಯಮ ಬೆಳವಣಿಗೆಗೆ ಜಿಲ್ಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವುದು ಅಗತ್ಯ ಎಂಬ ಅಂಶವನ್ನು ಸಮಾಜದ ಎಲ್ಲಾ ವರ್ಗದ ಜನರು ಭಾವಿಸಬೇಕು ಎಂದೂ ಅವರು ಕಿವಿಮಾತು ಹೇಳಿದರು.ಪಥ ಸಂಚಲನ ದಂಡನಾಯಕಿ ಮನೀಶಾ ಮನೋಹಿಗಣರಾಜ್ಯೋತ್ಸವದ ಕೇಂದ್ರ ಬಿಂದು ಆಕರ್ಷಕ ಪಥ ಸಂಚಲನದ ದಂಡನಾಯಕಿಯಾಗಿ ಹರಿಯಾಣ ಮೂಲದ ಪ್ರೊಬೆಷನರಿ ಐಪಿಎಸ್‌ ಅಧಿಕಾರಿ ಮನೀಶಾ ಮನೋಹಿ ಕನ್ನಡದಲ್ಲೇ ಕಮಾಂಡ್‌ ನೀಡುವ ಮೂಲಕ ಗಮನ ಸೆಳೆದರು. ಉಪ ದಂಡನಾಯಕರಾಗಿ ಬಾಗಣ್ಣ ವಾಲಿಕರ್‌ ಕಾರ್ಯ ನಿರ್ವಹಿಸಿದರು. 2023ನೇ ಬ್ಯಾಚ್‌ನ ಐಪಿಎಸ್‌ ಅಧಿಕಾರಿಯಾಗಿರುವ ಮನೀಶಾ ಮನೋಹಿ, ಡಿಸೆಂಬರ್‌ನಲ್ಲಿ ದ.ಕ. ಜಿಲ್ಲೆಗೆ ಪ್ರೊಬೆಶನರಿ ಎಎಸ್ಪಿಯಾಗಿ ಆಗಮಿಸಿದ್ದು, ಆನ್‌ಲೈನ್‌ ಮೂಲಕ ಕನ್ನಡ ಅಭ್ಯಾಸ ಮಾಡುತ್ತಿದ್ದಾರೆ.

ವಿಂಟೇಜ್‌ ಕಾರು, ಬೈಕ್‌ಗಳ ಪ್ರದರ್ಶನಗಣರಾಜ್ಯೋತ್ಸವ ಕಾರ್ಯಕ್ರಮದ ಬಳಿಕ ನೆಹರೂ ಮೈದಾನದಲ್ಲಿ ಆಯೋಜಿಸಲಾದ ವಿಂಟೇಜ್‌ ಕಾರು, ಬೈಕ್‌ಗಳ ಪ್ರದರ್ಶನಕ್ಕೆ ಸಚಿವ ದಿನೇಶ್‌ ಗುಂಡೂರಾವ್‌ ಚಾಲನೆ ನೀಡಿದರು. 1928ರ ಮಾಡೆಲ್‌ನಿಂದ ಹಿಡಿದು ದೇಶ- ವಿದೇಶಗಳ ಅಪರೂಪದ ಹಳೆಯ ಕಾರುಗಳನ್ನು ಪ್ರದರ್ಶನಕ್ಕೆ ಇರಿಸಲಾಗಿತ್ತು. ಹಳೆಯ ರೋಲ್ಸ್‌ ರಾಯ್ಸ್‌ ಕಾರು ಎಲ್ಲರ ಗಮನ ಸೆಳೆಯಿತು. ದ.ಕ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯತೀಶ್‌ ಎನ್‌. ಅವರ ಒಡೆತನದ ಕಾಂಟೆಸ್ಸಾ ಕಾರು ಕೂಡ ಪ್ರದರ್ಶನದಲ್ಲಿತ್ತು.

ಕೊರಗರಿಗೆ ಆದ್ಯತಾ ಪಡಿತರ ಚೀಟಿದ.ಕ. ಜಿಲ್ಲೆಯಲ್ಲಿ ಪಡಿತರ ಚೀಟಿ ಹೊಂದಿಲ್ಲದ ಪರಿಶಿಷ್ಟ ಪಂಗಡದ ಕೊರಗ ಸಮುದಾಯದವರಿಗೆ ಆದ್ಯತಾ ಪಡಿತರ ಚೀಟಿ ನೀಡುವಂತೆ ಮುಖ್ಯಮಂತ್ರಿ ನಿರ್ದೇಶಿಸಿದ್ದಾರೆ. ಅದರಂತೆ ವಿಶೇಷ ಆಂದೋಲನ ನಡೆಸಿ 158 ಕುಟುಂಬಗಳಿಗೆ ಪಡಿತರ ಚೀಟಿ ನೀಡಿ 320 ಮಂದಿ ಸದಸ್ಯರನ್ನು ಪಡಿತರ ಚೀಟಿಗೆ ಸೇರ್ಪಡೆ ಮಾಡಲಾಗಿದೆ ಎಂದು ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದರು.

Share this article