ಕನ್ನಡಪ್ರಭ ವಾರ್ತೆ ವಿಜಯಪುರ ನಗರದ ಆಕಾಶವಾಣಿ ಕೇಂದ್ರದ ಎದುರಿನ ರಿಂಗ್ ರಸ್ತೆಗೆ ಬನಶಂಕರಿ ಸರ್ಕಲ್ ಎಂದು ನಾಮಕರಣ ಮಾಡುವ ಜತೆಗೆ ನೇಕಾರರು ಸಮುದಾಯ ಭವನ ನಿರ್ಮಿಸಲು ₹೧೧ ಲಕ್ಷ ಆರ್ಥಿಕ ನೆರವು ನೀಡುತ್ತೇನೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಭರವಸೆ ನೀಡಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ನಗರದ ಆಕಾಶವಾಣಿ ಕೇಂದ್ರದ ಎದುರಿನ ರಿಂಗ್ ರಸ್ತೆಗೆ ಬನಶಂಕರಿ ಸರ್ಕಲ್ ಎಂದು ನಾಮಕರಣ ಮಾಡುವ ಜತೆಗೆ ನೇಕಾರರು ಸಮುದಾಯ ಭವನ ನಿರ್ಮಿಸಲು ₹೧೧ ಲಕ್ಷ ಆರ್ಥಿಕ ನೆರವು ನೀಡುತ್ತೇನೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಭರವಸೆ ನೀಡಿದರು.ನಗರದ ವೇದಮಾತೆ ಗಾಯತ್ರಿ ಪ್ರತಿಷ್ಠಾನ ಟ್ರಸ್ಟ್ ವತಿಯಿಂದ ಆಕಾಶವಾಣಿ ಕೇಂದ್ರದ ಬಳಿ ನೂತನವಾಗಿ ನಿರ್ಮಿಸಿದ ಬನಶಂಕರಿ ದೇವಸ್ಥಾನದ ಲೋಕಾರ್ಪಣೆ, ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಜಕಾರಣಿಗಳು ಮಾಡುವ ಸಾಮೂಹಿಕ ವಿವಾಹ ಬರೀ ಚುನಾವಣೆಗಳಿಗಷ್ಟೇ ಸೀಮಿತವಾಗಿರುತ್ತವೆ. ಅದನ್ನೇ ಮಠಾಧೀಶರು ಮುಂದೆ ನಿಂತು ಬಡ ಮಕ್ಕಳ ಸಾಮೂಹಿಕ ವಿವಾಹ ನೆರವೇರಿಸಿದರೆ ನಿರಂತರವಾಗಿ ಸಾಗುವ ಜತೆಗೆ ಧರ್ಮ ಕಾಯಕ ಮಾಡಿದಂತಾಗುತ್ತದೆ ಎಂದರು. ವಿಪ ಸದಸ್ಯ ಕೇಶವ ಪ್ರಸಾದ ಮಾತನಾಡಿ, ಪ್ರಯಾಗರಾಜ್‌ದಲ್ಲಿ ಮಹಾಕುಂಭಮೇಳ ನಡೆದು ಇಡೀ ಜಗತ್ತೇ ಜಾಗೃತಗೊಂಡ ಕಾಲಘಟ್ಟದಲ್ಲಿ ವಿಜಯಪುರದಲ್ಲಿ ಬನಶಂಕರಿ ದೇವಸ್ಥಾನ ಲೋಕಾರ್ಪಣೆಗೊಂಡಿರುವುದು ಸಂತಸ ತಂದಿದೆ. ಇಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ತಾವೂ ಸಹ ₹೫ ಲಕ್ಷ ನೆರವು ನೀಡುವುದಾಗಿ ಘೋಷಿಸಿದರು.
ಶಾಸಕ ವಿಠ್ಠಲ ಕಟಕಧೋಂಡ ಮಾತನಾಡಿ, ನೇಕಾರ ಸಮುದಾಯದ ತಾಯಂದಿರು ತಮ್ಮ ಮಕ್ಕಳಲ್ಲಿ ಹೆಣ್ಣು ಗಂಡೆಂಬ ಬೇಧಭಾವ ಮಾಡದೇ ಎಲ್ಲರಿಗೂ ಉನ್ನತ ಶಿಕ್ಷಣ ನೀಡಿ ಸಂಸ್ಕಾರವಂತರನ್ನಾಗಿ ಮಾಡಬೇಕು ಎಂದರು.ಹಂಪಿ ಹೇಮಕೂಟ, ಗಾಯತ್ರಿಪೀಠ ಮಹಾಸಂಸ್ಥಾನದ ಪೀಠಾಧೀಶ ದಯಾನಂದಪುರಿ ಮಹಾಸ್ವಾಮೀಜಿ, ವಿಜಯಪುರ ಜ್ಞಾನಯೋಗಾಶ್ರಮದ ಬಸವಲಿಂಗ ಮಹಾಸ್ವಾಮೀಜಿ, ಮೈಂದರ್ಗಿ ಗೌರಿ ಕಟ್ಟಾ ಹಿರೇಮಠದ ಅಭಿನವ ರೇವಣಸಿದ್ದೇಶ್ವರ ಶ್ರೀ, ವಿರಕ್ತಮಠ ಸಿದ್ಧಾಶ್ರಮದ ಮೃತ್ಯುಂಜಯ ಆಶೀರ್ವಚನ ನೀಡಿದರು. ಸಾನ್ನಿಧ್ಯ ವಿಜಯಪುರ-ಗದಗ ರಾಮಕೃಷ್ಣ ಆಶ್ರಮದ ನಿರ್ಭಯಾನಂದ ಸರಸ್ವತಿ ಶ್ರೀ ಸೇರಿದಂತೆ ವಿವಿಧ ಮಠಾಧೀಶರು ವಹಿಸಿದ್ದರು. ಅಧ್ಯಕ್ಷತೆ ಗಾಯತ್ರಿ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಎಸ್.ದಡ್ಡೇನವರ ವಹಿಸಿದ್ದರು.ಪ್ರಧಾನ ಕಾರ್ಯದರ್ಶಿ ಧನರಾಜ್ ಅಳ್ಳಿಕಟ್ಟಿ, ಬಿಜೆಪಿ ಧುರೀಣ ವಿಜುಗೌಡ ಪಾಟೀಲ, ಮಹಾನಗರ ಪಾಲಿಕೆ ಸದಸ್ಯ ರಾಜಶೇಖರ ಕುರಿಯವರ, ಪ್ರಮುಖರಾದ ಎ.ಬಿ.ಅಂಕದ, ಎಸ್.ಜಿ.ಸುರಪುರ, ಬಸವರಾಜ ಚಿತ್ತರಗಿ, ಬಿ.ಎಂ.ನೂಲ್ವಿ, ಡಾ.ವಿ.ಜಿ.ತೊರವಿ, ಎನ್.ಎಂ.ಪ್ಯಾಟಿ, ಡಾ.ಎಸ್.ಆರ್.ಡೋಣಗಾಂವ, ಬಸವರಾಜ ಚಿಂಚೋಳಿ, ಅಶ್ವಿನಿಕುಮಾರ ಕೋಷ್ಠಿ, ಎನ್.ಎಸ್.ಬಾವಿಕಟ್ಟಿ, ಆನಂದ ಹುಲಮನಿ, ಈರಣ್ಣ ಕೊಪ್ಪಳ, ಡಾ.ಮನೋಹರ ಔರಸಂಗ ಮುಂತಾದವರು ಇದ್ದರು.
ನೇಕಾರರು ತಮ್ಮೊಳಗಿನ ಭಿನ್ನಾಭಿಪ್ರಾಯ ಮರೆತು ಸಂಘಟಿತರಾದಾಗ ಮಾತ್ರ ವಿವಿಧ ಕ್ಷೇತ್ರಗಳಲ್ಲಿ ಮುಂದೆ ಬರಲು ಸಾಧ್ಯ. ಎಲ್ಲರೂ ತಮ್ಮಲ್ಲಿನ ಒಡಕು ಮನೋಭಾವ ತೊರೆದು ಸನಾತನ ಧರ್ಮ ಮತ್ತು ದೇಶದ ಉಳಿವಿಗಾಗಿ ದುಡಿಯಬೇಕು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.