ರಾಜ್ಯದಲ್ಲಿ ಹೃದಯಾಘಾತ ಮತ್ತೆ 11 ಬಲಿ

KannadaprabhaNewsNetwork |  
Published : Jul 08, 2025, 01:48 AM ISTUpdated : Jul 08, 2025, 06:23 AM IST
low blood pressure heart attack risk truth and prevention tips

ಸಾರಾಂಶ

ರಾಜ್ಯದಲ್ಲಿ ಹೃದಯಾಘಾತದ ಪ್ರಕರಣಗಳು ಮುಂದುವರಿದಿದ್ದು, ಸೋಮವಾರ 11 ಜನರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.

 ಬೆಂಗಳೂರು :  ರಾಜ್ಯದಲ್ಲಿ ಹೃದಯಾಘಾತದ ಪ್ರಕರಣಗಳು ಮುಂದುವರಿದಿದ್ದು, ಸೋಮವಾರ 11 ಜನರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.

ತುಮಕೂರಿನಲ್ಲಿ ಹೃದಯಾಘಾತಕ್ಕೆ ಮೂವರು ಬಲಿಯಾಗಿದ್ದಾರೆ. ತುಮಕೂರಿನ ಹನುಮಂತಪುರದ ನಿವಾಸಿಗಳಾದ ಜಯಂತ್ (31) ಹಾಗೂ ಶ್ರೀಧರ್ (52) ಸೋಮವಾರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಜಯಂತ್‌ಗೆ ಮನೆಯಲ್ಲಿ ಮಲಗಿದ್ದಾಗ ಎದೆ ನೋವು ಕಾಣಿಸಿಕೊಂಡಿದೆ. ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದಾರೆ. ಶ್ರೀಧರ್ ಟೀ ಕುಡಿದು ಮನೆಯಲ್ಲಿ ಕುಳಿತಿದ್ದಾಗ ಎದೆ ನೋವು ಕಾಣಿಸಿಕೊಂಡು ಕುಸಿದು ಬಿದ್ದಿದ್ದಾರೆ. ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಕೊನೆಯುಸಿರೆಳೆದಿದ್ದಾರೆ. ತುಮಕೂರು ಜಿಲ್ಲೆ ಮಧುಗಿರಿ ತಾಲೂಕು ಕೆ.ಗೊಲ್ಲಹಳ್ಳಿಯಲ್ಲಿ ತಮ್ಮಣ್ಣ (35) ಮೊಬೈಲ್ ನೋಡುತ್ತಿದ್ದ ವೇಳೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಧಾರವಾಡ ತಾಲೂಕಿನ ಯಾದವಾಡ ಗ್ರಾಮದಲ್ಲಿ ಶಾಂತವ್ವ ತೋಟಗೇರ (56) ಮಗಳನ್ನು ಗಂಡನ ಮನೆಯಿಂದ ಕರೆದುಕೊಂಡು ಬರಲು ಸಮೀಪದ ಹೆಬ್ಬಳ್ಳಿ ಗ್ರಾಮಕ್ಕೆ ಹೋದಾಗ ಎದೆ ನೋವು ಕಾಣಿಸಿಕೊಂಡಿತ್ತು. ಕೂಡಲೇ ಹುಬ್ಬಳ್ಳಿ ಕೆಎಂಸಿಆರ್‌ಐ ಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ.

ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಮೆಣಸಮಕ್ಕಿ ಗ್ರಾಮದ ಲಕ್ಷ್ಮಣ (52) ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಭಾನುವಾರ ಜಮೀನಿನಲ್ಲಿ ಕೆಲಸ ಮಾಡಿ ಮನೆಗೆ ಹಿಂದಿರುಗಿದ್ದ ಲಕ್ಷ್ಮಣನಿಗೆ ಮನೆಗೆ ಬಂದಾಗ ಎದೆನೋವು ಕಾಣಿಸಿಕೊಂಡಿದೆ. ಹಾಸನದ ಅಮೀರ್ ಮೊಹಲ್ಲಾ ನಿವಾಸಿ ಸಯ್ಯದ್ ಮುಹಿದ್ದ್ (52) ಮನೆಯಲ್ಲಿ ಕುಳಿತಿದ್ದಾಗ ಎದೆಯಲ್ಲಿ ನೋವು ಕಾಣಿಸಿಕೊಂಡಿದೆ. ಆಸ್ಪತ್ರೆಗೆ ಕರೆದೊಯ್ಯಲು ಆಟೋ ಹುಡುಕಿ ಬರುವಷ್ಟರಲ್ಲಿ ಪ್ರಾಣ ಹೋಗಿತ್ತು.  ಜಿಲ್ಲೆಯ ಅರಸೀಕೆರೆ ತಾಲೂಕಿನ ಬೆಳಗುಂಬ ಗ್ರಾಮದ ಸುರೇಶ್ (52)ಗೆ ಬೆಳಗ್ಗೆ 5 ಗಂಟೆಗೆ ಎದೆನೋವು ಕಾಣಿಸಿಕೊಂಡಿತು. 

ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನಲ್ಲಿ ಸೋಮವಾರ ಒಂದೇ ದಿನ ಮೂವರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಪಟ್ಟಣದ ನಾರಾಯಣ ರಾಯ್ಕರ (52), ಬಸಪ್ಪ ಸತ್ಯಪ್ಪ ಬಾಗಲಕೋಟಿ (78) ತಾಲೂಕಿನ ಬಸಾಪೂರ ಗ್ರಾಮದ ಅಣ್ಣಪೂರ್ಣಮ್ಮ ಯಲ್ಲಪ್ಪ ಚವಡಿ (56) ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ. 

ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಪಗಡದಿನ್ನಿ ಕ್ಯಾಂಪ್‌ ನಿವಾಸಿ ಶರಣಬಸವ (30) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಎದೆನೋವು ತಾಳಲಾರದೆ ಆಸ್ಪತ್ರೆಗೆ ತೆರಳುವಾಗ ಆ್ಯಂಬುಲೆನ್ಸ್‌ನಲ್ಲೇ ಕೊನೆಯುಸಿರೆಳೆದರು.ಹೃದಯಾಘಾತದಿಂದ ವೈದ್ಯ ಸಾವು; ಮನೆಯಲ್ಲಿ ಮಾಟದ ಗೊಂಬೆ ಪತ್ತೆ!

ಕೋಲಾರ: ಹೃದಯಾಘಾತದಿಂದ ಮೃತಪಟ್ಟ ಇಲ್ಲಿನ ಸಾರ್ವಜನಿಕ ಆಸ್ವತ್ರೆಯ ವೈದ್ಯಾಧಿಕಾರಿ ಡಾ.ವಸಂತ್‌ ಕುಮಾರ್‌ ಅವರ ಕೊಠಡಿ ಹಾಗೂ ಅವರ ಲಾಕರ್‌ಗಳಲ್ಲಿ ಮಾಟಮಂತ್ರದ ಗೊಂಬೆಗಳು ಕಂಡು ಬಂದಿದ್ದು, ಆಸ್ವತ್ರೆ ಸಿಬ್ಬಂದಿಗೆ ಆಂತಕ ಉಂಟು ಮಾಡಿದೆ. ಜೂ.5 ರಂದು ಡಾ.ವಸಂತ್‌ ಮೃತ ಪಟ್ಟಿದ್ದ ಹಿನ್ನೆಲೆಯಲ್ಲಿ ಬೇರೆ ವೈದ್ಯರು ಅಧಿಕಾರ ಸ್ವೀಕರಿಸಲು ಆಗಮಿಸಲಿರುವ ಹಿನ್ನೆಲೆಯಲ್ಲಿ ಶನಿವಾರ ಮಹಿಳಾ ಸಿಬ್ಬಂದಿ ವೈದ್ಯಾಧಿಕಾರಿಯ ಕೊಠಡಿ ಸ್ವಚ್ಛ ಮಾಡುವಾಗ ಬೀರು ಬಾಗಿಲು ತೆರೆದರು.  

ಆಗ ಅಲ್ಲಿದ್ದ ಒಂದು ಬಾಕ್ಸ್‌ನಲ್ಲಿ ಅಪ್ಪಿಕೊಂಡ ರೀತಿಯ ಮಣ್ಣಿನ ಗೊಂಬೆಗಳು, ಮಾಟ ಮಂತ್ರದ ವಸ್ತುಗಳು ಕಂಡು ಬಂದಿವೆ. ತಕ್ಷಣ ಸಿಬ್ಬಂದಿ ಆಸ್ವತ್ರೆಯಲ್ಲಿದ್ದ ಡಾ.ಶ್ರೀನಿವಾಸ್‌ ಅವರಿಗೆ ಮಾಹಿತಿ ನೀಡಿದ್ದಾರೆ.‘

ಹೃದಯಾಘಾತ’ ಗಂಭೀರವಾಗಿ ಪರಿಗಣಿಸದ ಸರ್ಕಾರ: ಅಶೋಕ್‌ 

ಹಾಸನ ಜಿಲ್ಲೆಯಲ್ಲಿ ಹೃದಯಾಘಾತದಿಂದ ಸಂಭವಿಸುತ್ತಿರುವ ಸಾವುಗಳ ಬಗ್ಗೆ ತೀವ್ರ ನೋವುಂಟಾಗಿದೆ. ಆದರೆ ಹಾಸನದಲ್ಲಿ ಪದೇ ಪದೇ ಹೃದಯಾಘಾತದಿಂದ ಸಾವುಗಳು ಸಂಭವಿಸುತ್ತಿದ್ದರೂ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಅಶೋಕ್ ಕಿಡಿಕಾರಿದರು.ಮುಖ್ಯಮಂತ್ರಿಗಳು ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಇದು ಕೋವಿಡ್ ಲಸಿಕೆಯ ಪರಿಣಾಮವಾಗಿರಬಹುದು ಎಂದು ಹೇಳಿಕೆ ನೀಡಿದ್ದಾರೆ. 

ಒಬ್ಬ ಜವಾಬ್ದಾರಿಯುತ ಮುಖ್ಯಮಂತ್ರಿಯಿಂದ ಇಂತಹ ಹೇಳಿಕೆ ಬರಬಾರದು. ಇದು ನಗೆಪಾಟಲಿಗೀಡಾಗುವ ವಿಷಯವಾಗಿದೆ ಎಂದರು.ಈ ಕುರಿತಂತೆ ದೆಹಲಿಯ ಆರೋಗ್ಯ ಇಲಾಖೆ ಮತ್ತು ಜಯದೇವ ಆಸ್ಪತ್ರೆಗಳಿಂದ ವರದಿಗಳು ಬಂದಿವೆ, ಆದರೆ ಅವುಗಳನ್ನು ಮುಚ್ಚಿಹಾಕಲಾಗಿದೆ. ದೇಶಾದ್ಯಂತ ಕೋವಿಡ್ ಲಸಿಕೆ ನೀಡಲಾಗಿದೆ, ಆದರೆ ಹೃದಯಾಘಾತದಿಂದ ಸಾವು ಹಾಸನದಲ್ಲಿಯೇ ಯಾಕೆ ಹೆಚ್ಚು? ಇದು ಪ್ರಶ್ನೆಗೆ ಗುರಿಯಾಗಬೇಕಾದ ವಿಷಯ ಎಂದು ಹೇಳಿದರು.

ಹಾಸನದ ಭಯಾನಕ ಸ್ಥಿತಿಯನ್ನು ಅನೇಕ ಸಚಿವರು ಕಂಡುಕೊಳ್ಳದೆ, ಭೇಟಿ ನೀಡದೆ ಅಲ್ಲಿಂದಲೇ ಹಿಂದಿರುಗಿದ್ದಾರೆ. ಹಿರಿಯ ಸಚಿವರು, ವೈದ್ಯಕೀಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದರೆ ನಿಖರವಾದ ಕಾರಣ ಪತ್ತೆಯಾಗಬಹುದು ಎಂದು ಅವರು ಒತ್ತಾಯಿಸಿದರು. ಸರ್ಕಾರ ಈಗ ಕೋಮಾ ಸ್ಥಿತಿಯಲ್ಲಿ ಇದೆ. ಅಧಿಕಾರ ಹಸ್ತಾಂತರ ಎಂಬ ಲಾಲಸೆಯಲ್ಲಿ ಮುಳುಗಿದೆ. ದೆಹಲಿಗೆ ಎಷ್ಟು ಹಣ ತಂದುಕೊಡಬೇಕು, ಯಾರ ಕೈಯ್ಯಲ್ಲಿ ಎಷ್ಟು ಹಣ ಹೋಗಬೇಕು ಎಂಬ ಪೈಪೋಟಿಯಲ್ಲಿ ಇದೆ. ಇದರ ಪರಿಣಾಮ ಜನರ ಜೀವ ಕಳೆದು ಹೋಗುತ್ತಿದೆ ಎಂದು ಸರ್ಕಾರವನ್ನು ತಿವಿದರು.

PREV
Read more Articles on