ಮಳೆಗೆ ಈವರೆಗೆ 111 ಸಾವು, ₹550 ಕೋಟಿ ಬೆಳೆ ನಷ್ಟ

KannadaprabhaNewsNetwork |  
Published : Sep 09, 2025, 01:00 AM ISTUpdated : Sep 09, 2025, 12:28 PM IST
Siddaramaiah

ಸಾರಾಂಶ

ರಾಜ್ಯದಲ್ಲಿ ಬೆಳೆ ಹಾನಿ ಬಗ್ಗೆ 10 ದಿನಗಳ ಒಳಗಾಗಿ ಜಂಟಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

 ಬೆಂಗಳೂರು :  ‘ರಾಜ್ಯದಲ್ಲಿ ಅತಿವೃಷ್ಟಿಯಿಂದ 5.22 ಲಕ್ಷ ಹೆಕ್ಟೇರ್‌ ಬೆಳೆ ಹಾನಿ ಅಂದಾಜು ಮಾಡಲಾಗಿದೆ. ಬೆಳೆ ಹಾನಿ ಬಗ್ಗೆ 10 ದಿನಗಳ ಒಳಗಾಗಿ ಜಂಟಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದು, ವರದಿ ಬಂದ ತಕ್ಷಣ ಬೆಳೆ ಹಾನಿ ಪರಿಹಾರ ನೀಡಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ಇದೇ ವೇಳೆ ‘ಎಸ್‌ಡಿಆರ್‌ಎಫ್‌ ನಿಯಮಗಳ ಪ್ರಕಾರ ಬೆಳೆ ಹಾನಿ ಪರಿಹಾರ ನೀಡಲು ಸಿದ್ಧರಿದ್ದೇವೆ. ಒಂದು ವೇಳೆ ಹೆಚ್ಚು ಪರಿಹಾರ ನೀಡಬೇಕಾದ ಅಗತ್ಯವಿದ್ದರೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಿ ನೀಡುತ್ತೇವೆ’ ಎಂದೂ ಸ್ಪಷ್ಟಪಡಿಸಿದ್ದಾರೆ.

ಸದ್ಯ 5.22 ಲಕ್ಷ ಹೆಕ್ಟೇರ್‌ನಲ್ಲಿ ಬೆಳೆ ಹಾನಿ ಅಂದಾಜಿಸಿದ್ದು, 550 ಕೋಟಿ ರು. ಹಾನಿ ಆಗಿರಬಹುದು. ಜಂಟಿ ಸಮೀಕ್ಷೆ ಬಳಿಕ ಈ ಹಾನಿ ಪ್ರಮಾಣ ಹೆಚ್ಚೂ ಅಥವಾ ಕಡಿಮೆ ಆಗಬಹುದು. ಸಮೀಕ್ಷೆ ಮುಗಿದ ಜಿಲ್ಲೆಗಳಲ್ಲಿ ತಕ್ಷಣ ಪರಿಹಾರ ಒದಗಿಸಲಾಗುವುದು ಎಂದು ಹೇಳಿದರು.ಅತಿವೃಷ್ಟಿಯಿಂದ ಉಂಟಾಗಿರುವ ಹಾನಿ ಹಾಗೂ ಕೈಗೊಂಡಿರುವ ಪರಿಹಾರ ಕ್ರಮಗಳ ಕುರಿತು ಸೋಮವಾರ ಗೃಹ ಕಚೇರಿ ಕೃಷ್ಣಾದಲ್ಲಿ ಜಿಲ್ಲಾಧಿಕಾರಿಗಳು, ವಿಭಾಗಾಧಿಕಾರಿಗಳು, ಜಿ.ಪಂ. ಸಿಇಓಗಳೊಂದಿಗೆ ವಿಡಿಯೋ ಸಂವಾದದ ಮೂಲಕ ಸಭೆ ನಡೆಸಿದ ಬಳಿಕ ಅವರು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ಕೇಂದ್ರವನ್ನು ಸದ್ಯ ಪರಿಹಾರ ಕೇಳಲ್ಲ:

ನಾವು ಸದ್ಯ ಕೇಂದ್ರ ಸರ್ಕಾರವನ್ನು ಪರಿಹಾರ ಕೇಳಲು ಹೋಗುವುದಿಲ್ಲ. ಅವರು ಕೊಡಬೇಕಾದ ಪರಿಹಾರವನ್ನೇ ನೀಡಿಲ್ಲ. ಕಳೆದ ಬಾರಿಯೂ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಬಳಿಕವಷ್ಟೇ ನಮಗೆ ಪರಿಹಾರ ನೀಡಿದರು. ಇನ್ನು ನಿಯಮಗಳ ಪ್ರಕಾರ ಬರಗಾಲ ಬಂದಾಗ ಮಾತ್ರವೇ ಕೇಳಬೇಕು. ಪ್ರಸ್ತುತ ಚಾಮರಾಜನಗರದಲ್ಲಿ ಮಾತ್ರ ಬರ ಪರಿಸ್ಥಿತಿಯಿದ್ದು, ಮುಂದಿನ ಸ್ಥಿತಿ ನೋಡಿಕೊಂಡು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

ಶೇ.4 ರಷ್ಟು ಹೆಚ್ಚು ಮಳೆ: 

ರಾಜ್ಯದಲ್ಲಿ ಮುಂಗಾರು ಹಂಗಾಮಿನಲ್ಲಿ ಜೂ. 1ರಿಂದ ಸೆಪ್ಟೆಂಬರ್ ಮೊದಲ ವಾರದವರೆಗೆ ವಾಡಿಕೆಗಿಂತ ಶೇ.4ರಷ್ಟು ಹೆಚ್ಚು ಮಳೆಯಾಗಿದೆ. ಆದರೆ, ಚಾಮರಾಜನಗರದಲ್ಲಿ ಶೇ.24ರಷ್ಟು ಕಡಿಮೆ ಮಳೆಯಾಗಿದೆ. ವಿಜಯಪುರ, ಗದಗ, ಬಾಗಲಕೋಟೆ, ದಾವಣಗೆರೆ, ತುಮಕೂರು ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಶೇ.20ಕ್ಕಿಂತ ಹೆಚ್ಚು ಮಳೆ ದಾಖಲಾಗಿದೆ.ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಕಳೆದ ವರ್ಷಕ್ಕೆ ಹೋಲಿಸಿದರೆ ಈಗ ಸ್ವಲ್ಪ ಕಡಿಮೆಯಿದೆ. ಪ್ರಮುಖ ಜಲಾಶಯಗಳ ಗರಿಷ್ಠ ಸಾಮರ್ಥ್ಯ 895.62 ಟಿಎಂಸಿ ಇದ್ದು, ಪ್ರಸ್ತುತ 840.52 ಟಿಎಂಸಿ ಸಂಗ್ರಹವಿದೆ. ಮುಂಗಾರು ಹಂಗಾಮಿನಲ್ಲಿ ಶೇ.98 ಬಿತ್ತನೆ ಪೂರ್ಣಗೊಂಡಿದೆ ಎಂದು ಸಿದ್ದರಾಮಯ್ಯ ಮಾಹಿತಿ ನೀಡಿದರು.

8 ಜಿಲ್ಲೆಗಳಲ್ಲೇ ಭಾಗಶಃ ಬೆಳೆ ಹಾನಿ :

ಪ್ರಾಥಮಿಕ ಸಮೀಕ್ಷೆ ಪ್ರಕಾರ, 480256 ಹೆಕ್ಟೇರ್ ಕೃಷಿ ಬೆಳೆ, 40407 ಹೆಕ್ಟೇರ್ ತೋಟಗಾರಿಕಾ ಬೆಳೆ ಸೇರಿ ಒಟ್ಟು 5,20,663 ಹೆಕ್ಟೇರ್‌ಗಳಷ್ಟು ಬೆಳೆ ಹಾನಿಯಾಗಿದೆ. ಈ ಪೈಕಿ ಕಲಬುರಗಿ, ಬೀದರ್‌, ಗದಗ, ಧಾರವಾಡ, ಬೆಳಗಾವಿ, ಬಾಗಲಕೋಟೆ, ಹಾವೇರಿ, ವಿಜಯಪುರ ಜಿಲ್ಲೆಗಳಲ್ಲೇ 5,19,596 ಹೆಕ್ಟೇರ್‌ಗಳಷ್ಟು ಬೆಳೆ ಹಾನಿಯಾಗಿದೆ ಎಂದು ತಿಳಿಸಿದರು.

111 ಮಂದಿ ಸಾವು, 9,087 ಮನೆಗಳಿಗೆ ಭಾಗಶಃ ಹಾನಿ:

ಏ.1 ರಿಂದ ಸೆ.7 ರವರೆಗೆ 111 ಮಂದಿ ಸಾವನ್ನಪ್ಪಿದ್ದಾರೆ. ಅಷ್ಟೂ ಪ್ರಕರಣಗಳಲ್ಲಿ ಪ್ರತಿಯೊಬ್ಬರಿಗೆ 5 ಲಕ್ಷ ರು.ಗಳಂತೆ 5.55 ಕೋಟಿ ರು. ಪರಿಹಾರ ವಿತರಿಸಲಾಗಿದೆ. 1,110 ಜಾನುವಾರುಗಳ ಜೀವ ಹಾನಿಯಾಗಿದ್ದು, 1.52 ಕೋಟಿ ಪರಿಹಾರ ನೀಡಲಾಗಿದೆ. 651 ಮನೆಗಳು ಸಂಪೂರ್ಣ ಹಾನಿಯಾಗಿದ್ದು, 9087 ಮನೆಗಳು ಭಾಗಶಃ ಹಾನಿಯಾಗಿದ್ದು ಪರಿಹಾರ ನೀಡಲಾಗಿದೆ. ಜಿಲ್ಲಾಧಿಕಾರಿಗಳ ಪಿಡಿ ಖಾತೆಗಳಲ್ಲೂ ಇನ್ನೂ 1350 ಕೋಟಿರು. ಹಣವಿದೆ ಎಂದು ಸಿಎಂ ಮುಖ್ಯಮಂತ್ರಿಗಳು ಮಾಹಿತಿ ನೀಡಿದರು.ಸಚಿವರಾದ ಎಚ್.ಕೆ. ಪಾಟೀಲ್‌, ಚಲುವರಾಯಸ್ವಾಮಿ, ಕೃಷ್ಣಬೈರೇಗೌಡ, ಪ್ರಿಯಾಂಕ್‌ ಖರ್ಗೆ, ಸಂತೋಷ್‌ಲಾಡ್‌, ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್‌ ಸೇರಿದಂತೆ ಹಲವರು ಹಾಜರಿದ್ದರು.

ಮುಂದಿನ ಮುಂಗಾರೊಳಗೆ ತುಂಗಭದ್ರಾ ಕ್ರಸ್ಟ್ ಗೇಟ್‌ ಬದಲಿಸಿ: ಸಿಎಂ ಸೂಚನೆ

ತುಂಗಭದ್ರಾ ಜಲಾಶಯದ ಕ್ರೆಸ್ಟ್‌ ಗೇಟ್‌ಗಳಿಗೆ ಹಾನಿ ಆಗಿರುವುದರಿಂದ ಸುರಕ್ಷತಾ ದೃಷ್ಟಿಯಿಂದ 105 ಟಿಎಂಸಿ ಸಂಗ್ರಹ ಸಾಮರ್ಥ್ಯದ ಬದಲಿಗೆ 80 ಟಿಎಂಸಿ ಮಾತ್ರ ನೀರು ಶೇಖರಣೆ ಮಾಡಿದ್ದೇವೆ. ಮುಂದಿನ ಮುಂಗಾರು ವೇಳೆಗೆ ಕ್ರಸ್ಟ್ ಗೇಟ್ ಬದಲಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಜಲಾಶಯದ ಸಾಮರ್ಥ್ಯ 130 ಟಿಎಂಸಿ ಆದರೂ ಹೂಳು ತುಂಬಿರುವುದರಿಂದ 105 ಟಿಎಂಸಿ ಸಾಮರ್ಥ್ಯ ಇತ್ತು. ಆದರೂ 80 ಟಿಎಂಸಿ ನೀರು ಮಾತ್ರ ತುಂಬಿಸಿದ್ದು, ಎರಡನೇ ಬೆಳೆಗೆ ನೀರು ಹರಿಸಲು ಪ್ರಸ್ತುತ ಸನ್ನಿವೇಶದಲ್ಲಿ ಸಾಧ್ಯವಿಲ್ಲ. ಪ್ರಸ್ತುತ ತುಂಗಭದ್ರಾ ಅಣೆಕಟ್ಟಿನ 32 ಕ್ರಸ್ಟ್ ಗೇಟ್ ಬದಲಾವಣೆಗೆ ಟೆಂಡರ್ ಆಗಿದ್ದು, 8 ಕ್ರಸ್ಟ್‌ಗೇಟ್‌ಗಳು ಅಳವಡಿಕೆಗೆ ಸಿದ್ಧವಿವೆ. ಮುಂದಿನ ಮುಂಗಾರು ವೇಳೆಗೆ ಅಳವಡಿಸಲು ಸೂಚಿಸಿದ್ದೇನೆ ಎಂದರು.ಬಾಕ್ಸ್..

ಕೇಂದ್ರಕ್ಕೆ ಸ್ಪಂದಿಸುವ ಗುಣವಿಲ್ಲ: ಸಿಎಂ ಕಿಡಿ

ಕೇಂದ್ರ ಸರ್ಕಾರವು ಕೊಡಬೇಕಾದ ಬೆಳೆ ಹಾನಿ ಪರಿಹಾರವನ್ನೇ ನೀಡಿಲ್ಲ. ರಸಗೊಬ್ಬರ ಕೊರತೆ ಬಗ್ಗೆ ಪತ್ರ ಬರೆದಿದ್ದರೂ ಉತ್ತರ ಕೊಟ್ಟಿಲ್ಲ. ಕೇಂದ್ರ ಸರ್ಕಾರಕ್ಕೆ ಸ್ಪಂದಿಸುವ ಗುಣವಿಲ್ಲ. ನಾವು ಒಕ್ಕೂಟ ವ್ಯವಸ್ಥೆಯಲ್ಲಿ ಇರುವುದು. ಈ ವ್ಯವಸ್ಥೆಯಲ್ಲಿ ರಾಜ್ಯಗಳಿಗೆ ಕೂಡಲೇ ಉತ್ತರ ನೀಡಬೇಕಾಗಿರುವುದು ಸ್ವಾಭಾವಿಕವಾಗಿ ಇರಬೇಕಾದ ಗುಣ. ಆದರೆ ನಮಗೆ ಅವರು ಸ್ಪಂದಿಸಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರದ ವಿರುದ್ಧ ಕಿಡಿಕಾರಿದರು.ಬಾಕ್ಸ್...

ಮೂಲಸೌಕರ್ಯ ಹಾನಿ:

ಮಳೆಯಿಂದಾಗಿ 683 ಕಿಮೀ ರಾಜ್ಯ ಹೆದ್ದಾರಿ, 1383 ಕಿ.ಮೀ. ಜಿಲ್ಲಾ ಪ್ರಮುಖ ಹೆದ್ದಾರಿ, 5558 ಕಿ.ಮೀ. ಗ್ರಾಮೀಣ ರಸ್ತೆಗಳು, 656 ಸೇತುವೆ, 1877 ಶಾಲಾ ಕಟ್ಟಡಗಳು, 160 ಪ್ರಾಥಮಿಕ ಆರೋಗ್ಯ ಕೇಂದ್ರ, 1018 ಅಂಗನವಾಡಿ, 25279 ವಿದ್ಯುತ್ ಕಂಬ, 819 ಟಿಸಿ, 31 ಸಣ್ಣ ನೀರಾವರಿ ಕೆರೆಗಳಿಗೆ ಹಾನಿಯಾಗಿದೆ.* ಹೆಚ್ಚು ಬೆಳೆಹಾನಿ ಜಿಲ್ಲೆಗಳು:

ಕಲಬುರಗಿ: 1.05 ಲಕ್ಷ ಹೆಕ್ಟೇರ್‌

ಗದಗ : 1.01 ಲಕ್ಷ ಹೆಕ್ಟೇರ್‌

ಧಾರವಾಡ 93,497 ಹೆಕ್ಟೇರ್‌

ಬೀದರ್‌ : 79,887 ಹೆಕ್ಟೇರ್

PREV
Read more Articles on

Recommended Stories

ಧರ್ಮಸ್ಥಳ: ಬಂಗ್ಲೆಗುಡ್ಡದಲ್ಲಿ ಮತ್ತೆರಡು ತಲೆಬುರುಡೆ ಪತ್ತೆ
ದಸರಾ : ಬೆಂಗಳೂರು ನಗರದಿಂದ ವಿವಿಧೆಡೆ ವಿಶೇಷ ರೈಲು