ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯದಲ್ಲಿ 2006ನೇ ಸಾಲಿನ ಏ.1ಕ್ಕಿಂತ ಮುಂಚೆ ನೇಮಕಗೊಂಡ ಸರ್ಕಾರಿ ನೌಕರರಿಗೆ ಸರ್ಕಾರವು ಸಿಹಿ ಸುದ್ದಿ ನೀಡಿದ್ದು, ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್) ಬದಲಿಗೆ ಹಳೆ ಪಿಂಚಣಿ ಯೋಜನೆ (ಒಪಿಎಸ್) ವ್ಯಾಪ್ತಿಗೆ ಸೇರಲು ಅನುಕೂಲ ಮಾಡಿ ಆದೇಶ ಹೊರಡಿಸಿದೆ.ಸರ್ಕಾರದ ಈ ಆದೇಶದಿಂದ 11,361 ನೌಕರರಿಗೆ ಅನುಕೂಲವಾಗಲಿದೆ. ಹಳೆ ಪಿಂಚಣಿ ಯೋಜನೆ ವ್ಯಾಪ್ತಿಗೊಳಪಡಲು ಇಚ್ಛಿಸುವ ಸರ್ಕಾರಿ ಸಿಬ್ಬಂದಿಯು ಜೂ.30ರೊಳಗೆ ಸರ್ಕಾರಕ್ಕೆ ಅರ್ಜಿ ಸಲ್ಲಿಸಬೇಕಾಗಿದೆ. ಕೆಲವು ಷರತ್ತುಗಳೊಂದಿಗೆ ಸೇರ್ಪಡೆಯಾಗಲು ಒಂದು ಬಾರಿಗೆ ಮಾತ್ರ ಈ ಅವಕಾಶವನ್ನು ರಾಜ್ಯ ಸರ್ಕಾರ ಕಲ್ಪಿಸಿದೆ.
ಕೇಂದ್ರ ಸರ್ಕಾರ ಇದೇ ಮಾದರಿಯ ಸೌಲಭ್ಯವನ್ನು ಕಲ್ಪಿಸಿತ್ತು. ಹಾಗಾಗಿ ರಾಜ್ಯ ಸರ್ಕಾರ ಸಹ ನೌಕರರಿಗೆ ಹಳೆ ಪಿಂಚಣಿ ಅಥವಾ ಹೊಸ ಪಿಂಚಣಿ ಸೌಲಭ್ಯದಲ್ಲಿ ಮುಂದುವರೆಯುವ ಬಗ್ಗೆ ತಮ್ಮ ಅಭಿಪ್ರಾಯವನ್ನು ನಿಗದಿತ ನಮೂನೆಯಲ್ಲಿ ಸಲ್ಲಿಸುವಂತೆ ಆದೇಶಿಸಿದೆ.ರಾಜ್ಯದಲ್ಲಿ 2005ರವರೆಗೆ ಹಳೆ ಪಿಂಚಣಿ ಯೋಜನೆ ಜಾರಿಯಲ್ಲಿತ್ತು. 2006ರಿಂದ ಹೊಸ ಪಿಂಚಣಿ ಜಾರಿಗೆ ಬಂದಿದೆ. ಹೀಗಾಗಿ ರಾಜ್ಯ ಸರ್ಕಾರದ ಆದೇಶ 2006ರಲ್ಲಿ ನೇಮಕವಾದವರಿಗಷ್ಟೇ ಅನ್ವಯಿಸಲಿದೆ.
ಒಪಿಎಸ್‌ಗೆ ಏನು ಮಾಡಬೇಕು?:2006ರ ಏ.1ಕ್ಕಿಂತ ಮೊದಲು ನೇಮಕ ಅಧಿಸೂಚನೆಗಳ ಮೂಲಕ ಆಯ್ಕೆಯಾದ ಸರ್ಕಾರಿ ನೌಕರರು ಹಳೆ ಪಿಂಚಣಿ ಯೋಜನೆಗೊಳಪಡಿಸಲು ಇಚ್ಛಿಸಿದರೆ ತಮ್ಮ ಅಭಿಪ್ರಾಯವನ್ನು ನಿಗದಿತ ನಮೂನೆಯ ಮೂಲಕ ಸಲ್ಲಿಸಬೇಕು. ಜೂ.30ರೊಳಗೆ ಸಕ್ಷಮ ನೇಮಕಾತಿ ಪ್ರಾಧಿಕಾರಕ್ಕೆ ನೇರವಾಗಿ ಸಲ್ಲಿಸಬೇಕು. ಇದು ಒಂದು ಬಾರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಒಂದು ಬಾರಿ ಮಾಡಿಕೊಂಡ ಆಯ್ಕೆಯನ್ನು ಬದಲಾಯಿಸಲು ಅವಕಾಶ ಇಲ್ಲ. ಒಂದು ವೇಳೆ ನಿಗದಿತ ಸಮಯದಲ್ಲಿ ಸಲ್ಲಿಕೆ ಮಾಡದಿದ್ದರೆ ಎನ್‌ಪಿಎಸ್‌ನಲ್ಲಿಯೇ ಮುಂದುವರಿಯಲಿದ್ದಾರೆ. ನೌಕರರ ಆಯ್ಕೆಗೆ ಅನುಗುಣವಾಗಿ ಹಳೆ ಪಿಂಚಣಿ ಯೋಜನೆಗೊಳಪಡಲು ನಿಗದಿತ ಅರ್ಹತೆಯನ್ನು ಹೊಂದಿರುವುದನ್ನು ಸಕ್ಷಮ ನೇಮಕಾತಿ ಪ್ರಾಧಿಕಾರವು ಖಚಿತಪಡಿಸಿಕೊಳ್ಳಬೇಕು. ಬಳಿಕ ಜು.31ರೊಳಗೆ ನೌಕರರ ಶಿಫಾರಸ್ಸನ್ನು ಇಲಾಖಾ ಮುಖ್ಯಸ್ಥರಿಗೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಷರತ್ತು ವಿಧಿಸಲಾಗಿದೆ. ಕೇಂದ್ರ ಸರ್ಕಾರ ತನ್ನ ನೌಕರರಿಗೆ ಹಳೆ ಪಿಂಚಣಿ ಯೋಜನೆಗೆ ಒಳಪಡಿಸಲು ಒಂದು ಬಾರಿ ಅವಕಾಶ ನೀಡಿದೆ. ಅಂತೆಯೇ ರಾಜ್ಯ ಸರ್ಕಾರವು 2006, ಏ.1ಕ್ಕಿಂತ ಮುಂಚೆ ನೇಮಕಗೊಂಡವರಿಗೆ ಹಳೆ ಪಿಂಚಣಿ ಯೋಜನೆಗೊಳಪಡಿಸಲು ತೀರ್ಮಾನಿಸಿ ಆದೇಶಿಸಿದೆ. ಸರ್ಕಾರದ ಆದೇಶ ಸ್ವಾಗತಾರ್ಹಹಳೆ ಪಿಂಚಣಿ ಯೋಜನೆಗೊಳಪಡಲು ಒಂದು ಬಾರಿ ಅವಕಾಶ ನೀಡಿರುವ ಸರ್ಕಾರದ ಆದೇಶ ಸ್ವಾಗತಾರ್ಹ. ಈ ಆದೇಶದಿಂದ 11,361 ನೌಕರರಿಗೆ ಅನುಕೂಲವಾಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಆರ್ಥಿಕ ಇಲಾಖೆಗೆ ಸರ್ಕಾರಿ ನೌಕರರ ಪರವಾಗಿ ಅಭಿನಂದನೆ ಸಲ್ಲಿಸುತ್ತೇವೆ.- ಸಿ.ಎಸ್.ಷಡಕ್ಷರಿ, ಅಧ್ಯಕ್ಷ, ರಾಜ್ಯ ಸರ್ಕಾರಿ ನೌಕರರ ಸಂಘ