ದ.ಕ. 115 ಕಾಳಜಿ ಕೇಂದ್ರಗಳ ಗುರುತು: ಜಿಲ್ಲಾಧಿಕಾರಿ

KannadaprabhaNewsNetwork |  
Published : Jun 03, 2026, 02:45 AM IST
ಜಿಲ್ಲಾಧಿಕಾರಿ ದರ್ಶನ್‌ ಎಚ್‌.ವಿ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು | Kannada Prabha

ಸಾರಾಂಶ

ಮಳೆಗಾಲದ ಮುಂಜಾಗ್ರತೆ ಅಂಗವಾಗಿ ದ.ಕ.ಜಿಲ್ಲೆಯಲ್ಲಿ 115 ಕಾಳಜಿ ಕೇಂದ್ರಗಳನ್ನು ಗುರುತಿಸಲಾಗಿದೆ. ಮಳೆಗಾಲ ಆರಂಭದ ಮೂರು ತಿಂಗಳು ಅಧಿಕಾರಿಗಳು ಕೇಂದ್ರ ಸ್ಥಾನದಲ್ಲೇ ಇರಬೇಕು ಎಂದು ಸೂಚಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್‌ ಎಚ್‌.ವಿ. ತಿಳಿಸಿದರು.

ಮಂಗಳೂರು: ಮಳೆಗಾಲದ ಮುಂಜಾಗ್ರತೆ ಅಂಗವಾಗಿ ದ.ಕ.ಜಿಲ್ಲೆಯಲ್ಲಿ 115 ಕಾಳಜಿ ಕೇಂದ್ರಗಳನ್ನು ಗುರುತಿಸಲಾಗಿದೆ. ಮಳೆಗಾಲ ಆರಂಭದ ಮೂರು ತಿಂಗಳು ಅಧಿಕಾರಿಗಳು ಕೇಂದ್ರ ಸ್ಥಾನದಲ್ಲೇ ಇರಬೇಕು ಎಂದು ಸೂಚಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್‌ ಎಚ್‌.ವಿ. ತಿಳಿಸಿದರು. ಅವರು ಸೋಮವಾರ ನಗರದ ಪಡೀಲ್‌ನ ಪ್ರಜಾಸೌಧದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಮುಂಗಾರು ಈಗಾಗಲೇ ಕೇರಳಕ್ಕೆ ಪ್ರವೇಶಿಸಿದ್ದು ಜೂ. 4ರಿಂದ ಕರಾವಳಿಗೂ ಪ್ರವೇಶವಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಸಂಭವನೀಯ ಕೃತಕ ನೆರೆ, ಪ್ರವಾಹ ಸೇರಿದಂತೆ ಪ್ರಾಕೃತಿಕ ವಿಕೋಪದ ಪರಿಸ್ಥಿತಿಗಳನ್ನು ಎದುರಿಸಲು ಜಿಲ್ಲಾಡಳಿತ ಸಕಲ ಸಿದ್ಧತೆ ನಡೆಸಿದೆ. ಕಾಳಜಿ ಕೇಂದ್ರಗಳಿಗಾಗಿ ಹಾಸ್ಟೇಲ್‌, ಹಾಲ್ ಕಟ್ಟಡಗಳನ್ನು ಸುಸ್ಥಕ್ಲ್ಲಿಡುವಂತೆ ಸೂಚಿಸಲಾಗಿದೆ. ತಹಶೀಲ್ದಾರ್‌ ಹಂತದಲ್ಲಿ ವಿವಿಧ ತಾಲೂಕುಗಳಲ್ಲಿ ತುರ್ತು ಪರಿಹಾರ ಕ್ರಮಗಳಿಗಾಗಿ ಒಟ್ಟು ಜಿಲ್ಲೆಯಲ್ಲಿ 3.25 ಕೋಟಿ ರೂ. ಲಭ್ಯ ಇದ್ದು, ಅಗತ್ಯವಿದ್ದಲ್ಲಿ ಇನ್ನೂ ಹೆಚ್ಚಿನ ಅನುದಾನ ಒದಗಿಸಲಾಗುವುದು ಎಂದರು.ಮುಂಗಾರು ಸಂದರ್ಭ ರಾತ್ರಿ ವೇಳೆ ಪ್ರಾಕೃತಿಕ ವಿಕೋಪಗಳಾದ ಸಂದರ್ಭ ಅಧಿಕಾರಿಗಳು ದೂರವಾಣಿ ಕರೆ ಎತ್ತುವುದಿಲ್ಲ ಎಂಬ ದೂರಿನ ಹಿನ್ನೆಲೆಯಲ್ಲಿ 24*7 ಮೊಬೈಲ್‌ ಕರೆಗಳನ್ನು ಡೈವರ್ಟ್‌ ಮಾಡುವ ಸೂಚನೆಯನ್ನು ನೀಡಲಾಗಿದೆ. ಅದರಂತೆ ಕಾಲ್‌ ಕಂಟ್ರೋಲ್‌ ರೂಂಗೆ ಸಂಪರ್ಕಿಸಲಿದೆ ಎಂದರು. ಪಾಲಿಕೆಯ 60 ವಾರ್ಡ್‌ಗಳಿಗೆ ಎಂಜಿನಿಯರ್‌ಗಳನ್ನು, 223 ಗ್ರಾ.ಪಂ. ವ್ಯಾಪ್ತಿಯಲ್ಲಿ ಪಿಡಿಒಗಳು, 13 ಸ್ಥಳೀಯ ಸಂಸ್ಥೆಗಳಲ್ಲಿ ಮುಖ್ಯಾಧಿಕಾರಿಗಳನ್ನು ಇನ್ಸಿಡೆಂಟ್‌ ಕಮಾಂಡರ್‌ಗಳಾಗಿ ನೇಮಕ ಮಾಡಲಾಗಿದೆ. ಜಿಲ್ಲಾಡಳಿತದಿಂದ ವಿವಿಧ ಪ್ರದೇಶಗಳಿಗೆ ನೇಮಿಸಲಾಗಿರುವ ಇನ್ಸಿಡೆಂಟ್‌ ಕಂಮಾಂರ್‌ಗಳು ಜಾಗೃತರಾಗಿದ್ದು, ಸಾರ್ವಜನಿಕ ದೂರಗಳಿಗೆ ಸ್ಪಂದಿಸುವುದು, ಮತ್ತು ಜಿಲ್ಲಾಧಿಕಾರಿ ಕಚೇರಿಯ ನಿಯಂತ್ರಣ ಕೊಠಡಿಯೊಳಗೆ ನಿರಂತರ ಸಂಪರ್ಕದಲ್ಲಿರಲು. ಕೇಂದ್ರಸ್ಥಾನದಲ್ಲೇ ಇರಲು ನಿರ್ದೇಶನ ನೀಡಲಾಗಿದೆ ಎಂದರು.

25 ಸಿಬ್ಬಂದಿಗಳ ಎನ್‌ಡಿಆರ್‌ಎಫ್‌ ತಂಡ ಪುತ್ತೂರು ತಾಲೂಕಿನಲ್ಲಿ ನಿಯೋಜಿಸಲಾಗಿದ್ದು, 10 ಸಿಬ್ಬಂದಿಯ ಎಸ್‌ಡಿಆರ್‌ಎಫ್‌ ತಂಡವನ್ನು ಸುಬ್ರಹ್ಮಣ್ಯದಲ್ಲಿ ನಿಯೋಜಿಸಲಾಗಿದೆ. ತುರ್ತು ಸಂದರ್ಭದಲ್ಲಿ ಕಾರ್ಯ ನಿರ್ವಹಿಸಲು 28 ಬೋಟ್‌ ಕಟ್ಟರ್‌, ಲೈಫ್‌ ಜಾಕೆಟ್‌, ಜೀವ ರಕ್ಷಕರು, ಜೆಸಿಬಿ ಯಂತ್ರ, ಟಿಪ್ಪರ್‌, ಕ್ರೇನ್‌ಗಳನ್ನು ಸಿದ್ಧಗೊಳಿಸಲಾಗಿದೆ. ಜೂ.1ರಿಂದ 2 ತಿಂಗಳ ಕಾಲ ಮೀನುಗಾರಿಕೆ ನಿಷೇಧವಿರಲಿದೆ. ಜಿಲ್ಲೆಯ ಎಲ್ಲಾ ಕಿಂಡಿ ಅಣೆಕಟ್ಟುಗಳ ಗೇಟ್‌ಗಳಲ್ಲಿ ಮರದ ದಿಮ್ಮಿ, ಹಾಗೂ ಇತರ ತ್ಯಾಜ್ಯ ಸಂಗ್ರಹವಾಗದಂತೆ ಸಣ್ಣ ನೀರಾವರಿ ಇಲಾಖೆ ವತಿಯಿಂದ ಕ್ರಮ ವಹಿಸಲು ನಿರ್ದೇಶನ ನೀಡಲಾಗಿದೆ. ಪ್ರವಾಸಿಗರು, ಸಾರ್ವಜನಿಕರು ಮಳೆಗಾಲದಲ್ಲಿ ಗುಡ್ಡ ಪ್ರದೇಶದ ಚಾರಣಕ್ಕೆ, ನದಿ ತೀರ, ಸಮುದ್ರ ತೀರಕ್ಕೆ ತೆರಳದಂತೆ ಸೂಚನೆ ನೀಡುವ ಜತೆಗೆ ಎಲ್ಲಾ ರೀತಿಯ ಅಗತ್ಯ ಸುರಕ್ಷಾ ಕ್ರಮಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.

ಜಲಸಿರಿ ಅಥವಾ ಒಳಚರಂಡಿಗೆ ಸಂಬಂಧಿಸಿ ನಡೆಯುತ್ತಿರುವ ಕಾಮಗಾರಿಯ ಹಿನ್ನೆಲೆಯಲ್ಲಿ ಮಳೆಗಾಲದಲ್ಲಿ ಮುಂದಿನ ಎರಡೂವರೆ ತಿಂಗಳ ಅವಧಿಯಲ್ಲಿ ಯಾವುದೇ ಹೊಸತಾಗಿ ಗುಂಡಿ ಅಗೆಯುವುದು ಅಥವಾ ರಸ್ತೆ ಅಗೆತ ಕಾರ್ಯಕ್ಕೆ ಅವಕಾಶ ಇರುವುದಿಲ್ಲ. ದ.ಕ. ಜಿಲ್ಲೆಯಲ್ಲಿ ಒಟ್ಟು 92 ಪ್ರವಾಹ ಪೀಡಿತ, 88 ಕಡೆ ಸಂಭವನೀಯ ಭೂಕುಸಿತ ಪ್ರದೇಶವೆಂದು ಗುರುತಿಸಲಾಗಿದೆ ಎಂದರು.ಶಾಲೆ, ಅಂಗನವಾಡಿಗೆ 4 ಕೋಟಿ: ಶಾಲೆ ಮತ್ತು ಅಂಗನವಾಡಿ ದುರಸ್ತಿ ಕಾರ್ಯ ಅನುದಾನದ ಕೊರತೆ ಹಾಗೂ ಇತರ ಕಾರಣಗಳಿಂದ ತುರ್ತಾಗಿ ನಡೆಸಲು ಸಾಧ್ಯವಾಗಿರಲಿಲ್ಲ. ಈ ಬಾರಿ ಈಗಾಗಲೇ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮೂಲಕ 91 ಶಾಲೆಗಳ ದುರಸ್ತಿಗೆ 1.5 ಕೋಟಿ, 137 ಅಂಗನವಾಡಿಗಳ ದುರಸ್ತಿಗೆ 2.5 ಕೋಟಿ ರು. ಅನುಮೋದನೆ ನೀಡಲಾಗಿದೆ. ಅಗತ್ಯವಿದ್ದಲ್ಲಿ ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನ ಒದಗಿಸಲಾಗುವುದು ಎಂದರು. ಜಿ.ಪಂ. ಸಿಇಒ ವಿನಾಯಕ ಕರ್ಭಾರಿ, ಅಪರ ಜಿಲ್ಲಾಧಿಕಾರಿ ರಾಜು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಕರಿಗೆ ಆನ್‌ಲೈನ್‌ ಹಾಜರಾತಿ ಧರ್ಮಸಂಕಟ !
ಕ್ರೆಡಿಟ್‌ಗಾಗಿ ಕಾಂಗ್ರೆಸ್-ಬಿಜೆಪಿ ಮಧ್ಯೆ ಪ್ರಚಾರ ಜೋರು!