ಉಳ್ಳಾಲ: ತೊಕ್ಕೊಟ್ಟು ಓವರ್ ಬ್ರಿಡ್ಜ್ ನಲ್ಲಿ ಕೆಲ ದಿನಗಳ ಹಿಂದೆ ಸಂಚಾರಿ ಅವ್ಯವಸ್ಥೆಯಿಂದ ಉಂಟಾದ ಗೊಂದಲಗಳಿಗೆ ಪರಿಹಾರ ಸಿಗುವಂತೆ ಸ್ಪೀಕರ್ ಯು.ಟಿ. ಖಾದರ್ ನೇತೃತ್ವದ ನಿಯೋಗ ತೊಕ್ಕೊಟ್ಟು ಓವರ್ ಬ್ರಿಡ್ಜ್, ಉಳ್ಳಾಲಬೈಲು, ತೊಕ್ಕೊಟ್ಟು ಜಂಕ್ಷನ್ ಗೆ ಸಂಚಾರಿ ಪೊಲೀಸ್, ಲೋಕೋಪಯೋಗಿ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳ ನಿಯೋಗದೊಂದಿಗೆ ಭೇಟಿ ನೀಡಿ ವಾಹನ ಸಂಚಾರಕ್ಕೆ ಅಡಚಣೆಯಾಗದಂತೆ ತಕ್ಷಣಕ್ಕೆ ಪರಿಹಾರ ಕ್ರಮಗಳನ್ನು ಅನುಸರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.ತೊಕ್ಕೊಟ್ಟು ಎರಡು ಬದಿಯ ಸರ್ವಿಸ್ ರಸ್ತೆಗಳಲ್ಲಿ ಏಕಮುಖ ಸಂಚಾರ ನಡೆಸಬೇಕು. ಉಳ್ಳಾಲ ಹೋಗುವ ಬಸ್ ಇತರ ವಾಹನಗಳು ಕಾಪಿಕಾಡು ಡಿವೈಡರ್ ದಾಟಿಯೇ ಉಳ್ಳಾಲದ ರಸ್ತೆಯಾಗಿ ತೆರಳಬೇಕು. ತೊಕ್ಕೊಟ್ಟು ಒಳಪೇಟೆ ಸಂಚರಿಸುವ ವಾಹನಗಳು ಉಳ್ಳಾಲಬೈಲ್ ಡಿವೈಡರ್ ದಾಟಿ ಬಳಿಕ ಓವರ್‌ಬ್ರಿಡ್ಜ್ ರಸ್ತೆಯಿಂದ ಇಳಿಯುವಂತೆ ಮಾಡಿದಾಗ ಸಂಚಾರ ವ್ಯವಸ್ಥೆಯಲ್ಲಿ ಅಡಚಣೆಗಳು ಆಗಲು ಸಾಧ್ಯವಿಲ್ಲ. ತೊಕ್ಕೊಟ್ಟುವಿನಿಂದ ಉಳ್ಳಾಲವರೆಗಿನ ರಸ್ತೆ ಬದಿಯ ಅಂಗಡಿಗಳನ್ನು ತೆರವುಗೊಳಿಸಬೇಕು, ಗಿಡಗಂಟಿಗಳನ್ನು ಕಡಿದು ಎರಡು ಬದಿಗಳಲ್ಲೂ ಸ್ವಚ್ಛತೆ ಕಾಪಾಡುವಂತೆ ಉಳ್ಳಾಲ ನಗರಸಭೆ ಅಧಿಕಾರಿಗಳಿಗೆ ಸೂಚಿಸಿದರು. ತೊಕ್ಕೊಟ್ಟು ಓವರ್‌ಬ್ರಿಡ್ಜ್ -ಉಳ್ಳಾಲಬೈಲ್ ರಸ್ತೆ ಅಭಿವೃದ್ಧಿಗೆ 30 ಲಕ್ಷ ರು. ಅನುದಾನದ ಪ್ರಸ್ತಾಪ ಇರಿಸಲಾಗಿದೆ. ಶೀಘ್ರವೇ ಮಂಜೂರುಗೊಂಡು ಅಭಿವೃದ್ಧಿ ಕಾರ್ಯಗಳು ನಡೆಯಲಿವೆ. ತೊಕ್ಕೊಟ್ಟು ಓವರ್ ಬ್ರಿಡ್ಜ್ ಜಂಕ್ಷನ್‌ನಲ್ಲಿ ವಾಹನ ದಟ್ಟಣೆ ಹೆಚ್ಚಾದಾಗ ಒಳಪೇಟೆಯಾಗಿ ತೆರಳಲು ಉಳ್ಳಾಲಬೈಲ್ ಕೆಳ ರಸ್ತೆಯಲ್ಲಿ ದ್ವಿಚಕ್ರ ವಾಹನಗಳನ್ನು ಕಳಿಸುವಂತೆ ಸೂಚಿಸಲಾಯಿತು. ಶೀಘ್ರವೇ ಉಳ್ಳಾಲಬೈಲ್ ರೈಲ್ವೇ ಹಳಿ ಸಮೀಪದ ಕಿರಿದಾದ ಸೇತುವೆಯನ್ನು ಅಗಲಗೊಳಿಸಲು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.