ಬಿಪಿಎಲ್ ಕಾರ್ಡ್ ಪಡೆಯಲು ನಿಗದಿಪಡಿಸಿದ ₹1.20 ಲಕ್ಷ ವಾರ್ಷಿಕ ಆದಾಯವನ್ನು ಆಡಳಿತಾತ್ಮಕ ಸುಧಾರಣೆ ಆಯೋಗದ ಶಿಫಾರಸಿನಂತೆ ₹3 ಲಕ್ಷಕ್ಕೆ ಹೆಚ್ಚಿಸಲು ಚಿಂತನೆ ನಡೆಸಲಾಗಿದೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.
ಬೆಂಗಳೂರು : ಬಿಪಿಎಲ್ ಕಾರ್ಡ್ ಪಡೆಯಲು ನಿಗದಿಪಡಿಸಿದ ₹1.20 ಲಕ್ಷ ವಾರ್ಷಿಕ ಆದಾಯವನ್ನು ಆಡಳಿತಾತ್ಮಕ ಸುಧಾರಣೆ ಆಯೋಗದ ಶಿಫಾರಸಿನಂತೆ ₹3 ಲಕ್ಷಕ್ಕೆ ಹೆಚ್ಚಿಸಲು ಚಿಂತನೆ ನಡೆಸಲಾಗಿದೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.
ಶುಕ್ರವಾರ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ.ರೇವಣ್ಣ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಈಗಾಗಲೇ ತೆರಿಗೆ ಪಾವತಿ ಸೇರಿ ವಿವಿಧ ಕಾರಣಗಳಿಂದ ಪಡಿತರ ಹಂಚಿಕೆ ಸ್ಥಗಿತಗೊಂಡಿರುವ ಬಿಪಿಎಲ್ ಕಾರ್ಡ್‌ಗಳನ್ನು ಎಪಿಎಲ್ ಆಗಿ ಪರಿವರ್ತಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿದರು.
ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಮನೆ ಯಜಮಾನಿ ನಿಧನರಾದರೆ ಅವರ ಸ್ಥಾನದಲ್ಲಿ ಸೊಸೆ ಅಥವಾ ಮಗಳ ಹೆಸರು ಸೇರಿಸಲು ಅರ್ಜಿ ಸಲ್ಲಿಸಿದ ಒಂದು ತಿಂಗಳಲ್ಲೇ ಸೇರ್ಪಡೆಯಾಗಲಿದೆ. ಈ ಹಿಂದೆ ಅರ್ಜಿ ಸಲ್ಲಿಸಿ ಅನುಮೋದನೆ ಸಿಗಲು ಮೂರು ತಿಂಗಳು ಸಮಯ ತೆಗೆದುಕೊಳ್ಳಲಾಗುತ್ತಿತ್ತು.
ಗೋಷ್ಠಿಯಲ್ಲಿ ರಾಜ್ಯ ಗ್ಯಾರಂಟಿ ಅನುಷ್ಠಾನ ಪ್ರಾಕಾರದ ಅಧ್ಯಕ್ಷರಾದ ಎಚ್.ಎಂ.ರೇವಣ್ಣ, ಉಪಾಧ್ಯಕ್ಷರಾದ ದಿನೇಶ್ ಗೂಳಿಗೌಡ, ಎಸ್.ಆರ್.ಪಾಟೀಲ್, ಪುಷ್ಪಾ ಅಮರನಾಥ್ ಉಪಸ್ಥಿತರಿದ್ದರು.
ನ್ಯಾಯಬೆಲೆ ಅಂಗಡಿ ತೆರೆಯದಿದ್ದರೆ ದೂರು
ನ್ಯಾಯಬೆಲೆ ಅಂಗಡಿಗಳನ್ನು ಬೆಳಗ್ಗೆ 6 ರಿಂದ ರಾತ್ರಿ 10 ರವರೆಗೂ ತರೆದು ಪಡಿತರ ವಿತರಿಸಲು ಸೂಚಿಸಲಾಗಿದ್ದು, ತಪ್ಪಿದ್ದಲ್ಲಿ ಇಲಾಖೆಯ ‘ಅನ್ನ ಸಹಾಯವಾಣಿ’ ಸಂಖ್ಯೆ 1967 ಕರೆಮಾಡಿ ದೂರು ನೀಡಬಹುದು ಎಂದು ಕೆ.ಎಚ್.ಮುನಿಯಪ್ಪ ತಿಳಿಸಿದರು.
2 ತಿಂಗಳಲ್ಲಿ ಇಂದಿರಾ ಕಿಟ್:
‘ಅನ್ನಭಾಗ್ಯ’ ಯೋಜನೆಯಡಿ ಮುಂದಿನ ಎರಡು ತಿಂಗಳಲ್ಲಿ ‘ಇಂದಿರಾ ಕಿಟ್’ ವಿತರಣೆಗೆ ಕ್ರಮ ವಹಿಸಲಾಗುವುದು. ಇಂದಿರಾ ಕಿಟ್ ಸುಮಾರು ₹6 ಸಾವಿರ ಕೋಟಿ ವೆಚ್ಚದ ಬೃಹತ್ ಯೋಜನೆ. ಸದ್ಯ ಅದರ ಸಾಧಕ-ಬಾಧಕ ಪರಿಶೀಲಿಸಲಾಗುತ್ತಿದೆ. ಜತೆಗೆ ಟೆಂಡರ್ ಪ್ರಕ್ರಿಯೆಯೂ ನಡೆಯುತ್ತಿದ್ದು ಅಂತಿಮ ಹಂತದಲ್ಲಿದೆ. ಮುಂದಿನ ಎರಡು-ಮೂರು ತಿಂಗಳಲ್ಲಿ ಕಿಟ್ ವಿತರಣೆಗೆ ಕಾರ್ಯ ರೂಪಿಸುತ್ತಿದ್ದೇವೆ. ಒಂದು ವೇಳೆ ಇಂದಿರಾ ಕಿಟ್ ವಿತರಿಸಲಾಗದಿದ್ದರೆ 5 ಕೆ.ಜಿ. ಪಡಿತರ ಮೊತ್ತದ ಹಣವನ್ನು ಡಿಬಿಟಿ ಮೂಲಕ ನೀಡಲಾಗುವುದು ಎಂದರು.
ಅನ್ನಭಾಗ್ಯ ಯೋಜನೆಯಡಿ ಸುಮಾರು 4.42 ಕೋಟಿ ಫಲಾನುಭವಿಗಳಿಗೆ ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರದ ಪಾಲಾಗಿ ಬಿಪಿಎಲ್ ಕಾರ್ಡ್ ಹೊಂದಿರುವ ಪ್ರತಿ ಫಲಾನುಭವಿಗೆ 10 ಕೆ.ಜಿ. ಅಕ್ಕಿ ವಿತರಿಸಲಾಗುತ್ತಿದೆ. ಇದೀಗ ಕೇಂದ್ರದ ಪಾಲಿನಲ್ಲಿ 3 ಕೆ.ಜಿ. ರಾಗಿ ಹಾಗೂ 2 ಕೆ.ಜಿ. ಅಕ್ಕಿ ವಿತರಿಸಿದರೆ, ರಾಜ್ಯದ ಪಾಲಾಗಿ 5 ಕೆ.ಜಿ. ಸೇರಿ ಒಟ್ಟು 7 ಕೆ.ಜಿ. ಅಕ್ಕಿ ಹಾಗೂ 3 ಕೆ.ಜಿ. ರಾಗಿ ವಿತರಿಸಲಾಗುತ್ತಿದೆ. ಎಂಎಸ್‌ಪಿ ಯೋಜನೆಯಡಿ 5.60 ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿಸಿದ್ದು ಅದನ್ನು ಶುದ್ಧೀಕರಿಸಿ ಗ್ರಾಹಕರಿಗೆ ವಿತರಿಸಲಾಗುತ್ತಿದೆ ಎಂದು ಹೇಳಿದರು.
ಉತ್ತರ ಕರ್ನಾಟಕ ಭಾಗದಲ್ಲಿ ರಾಗಿ ಬದಲು ಜೋಳ ವಿತರಿಸಲಾಗುವುದು. ಆದರೆ ಅವರಿಗೆ ರಾಗಿಯಂತೆ 3 ಕೆ.ಜಿ. ಜೋಳ ವಿತರಿಸಲು ಸಾಧ್ಯವಾಗುವುದಿಲ್ಲ. ಎಂಎಸ್‌ಪಿ ದರದಲ್ಲಿ ರೈತರಿಂದ ಹೆಚ್ಚಿನ ಪ್ರಮಾಣದಲ್ಲಿ ಜೋಳ ಖರೀದಿಯಾಗಿಲ್ಲ. ಹೀಗಾಗಿ 2 ಕೆ.ಜಿ. ಜೋಳ ಹಾಗೂ 8 ಕೆ.ಜಿ. ಅಕ್ಕಿ ನೀಡಲಾಗುವುದು ಎಂದರು.
ಪಡಿತರ ವಸ್ತು ಕಾಳಸಂತೆಯಲ್ಲಿ ಮಾರಾಟ ತಡೆಯಲು ಕ್ರಮವಹಿಸಿದ್ದು, ಗೋದಾಮುಗಳಿಗೆ ಸಿಸಿ ಕ್ಯಾಮೆರಾ ಹಾಗೂ ಪಡಿತರ ವಾಹನಗಳಿಗೆ ಜಿಪಿಎಸ್ ಅಳವಡಿಸಲಾಗಿದ್ದು, ಇವುಗಳ ಮೇಲೆ ನಿಗಾ ಇಡಲು ‘ಕಮಾಂಡ್ ಕಂಟ್ರೋಲ್ ರೂಂ’ ಅನ್ನು ಕೇಂದ್ರ ಕಚೇರಿಯಲ್ಲಿ ನಿರ್ಮಿಸಲಾಗುವುದು. ಇದರಿಂದ ಅನ್ನಭಾಗ್ಯ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವುದು, ತೂಕದಲ್ಲಿ ವಂಚನೆ ಮಾಡುವುದು ಸೇರಿ ಎಲ್ಲಾ ಅವ್ಯವಸ್ಥೆಗಳು ‘ಕಮಾಂಡ್ ಕಂಟ್ರೋಲ್ ರೂಂ’ನಲ್ಲಿ ಪತ್ತೆ ಮಾಡಲಾಗುವುದು ಎಂದು ತಿಳಿಸಿದರು.
