ತುಮಕೂರು : ಡಾ.ಶಿವಕುಮಾರ ಸ್ವಾಮಿಗಳ 118 ನೇ ಜಯಂತಿ ಹಾಗೂ ಗುರವಂದನ ಮಹೋತ್ಸವ ವನ್ನು ಏಪ್ರಿಲ್ 1 ರಂದು ಬೆಳಿಗ್ಗೆ 11 ಗಂಟೆಗೆ ಸಿದ್ಧಗಂಗಾ ಮಠದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಿದ್ಧಗಂಗಾ ಸಂಸ್ಥೆಯ ಕಾರ್ಯದರ್ಶಿ ಟಿ.ಕೆ.ನಂಜುಂಡಪ್ಪ ತಿಳಿಸಿದರು.
ಅವರು ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಸಮಾರಂಭದ ಉದ್ಘಾಟನೆಯನ್ನು ಕೇಂದ್ರ ಸರ್ಕಾರದ ರಕ್ಷಣ ಸಚಿವ ರಾಜನಾಥ್ ಸಿಂಗ್ ಮಾಡಲಿದ್ದು, ಅಧ್ಯಕ್ಷತೆಯನ್ನು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಹಿಸಲಿದ್ದಾರೆ.ದಿವ್ಯ ನೇತೃತ್ವವನ್ನು ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗಸ್ವಾಮಿಗಳು ವಹಿಸಲಿದ್ದು, ಮೈಸೂರು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿದ್ದು, ಸಿದ್ಧಗಂಗಾ ಮಠದ ಕಿರಿಯ ಶ್ರೀಗಳಾದ ಸಿದ್ದೇಶ್ವರಸ್ವಾಮಿಗಳು ಉಪಸ್ಥಿತಿ ಇರಲಿದ್ದಾರೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಕೇಂದ್ರದ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ, ಗೃಹ ಸಚಿವ ಡಾ.ಜಿ.ಪರಮೇಶ್ವರ್, ಸಹಕಾರ ಸಚಿವರಾದ ಕೆ.ಎನ್.ರಾಜಣ್ಣ, ಭಾಗವಹಿಸುವರು, ವಿಶೇಷ ಆಹ್ವಾನಿತರಾಗಿ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಬಿ.ಸುರೇಶ್‌ಗೌಡ ಮತ್ತು ಎನ್.ಶ್ರೀನಿವಾಸಯ್ಯ ಭಗವಹಿಸಲಿದ್ದಾರೆ ಎಂದು ತಿಳಿಸಿದರು.ಗುರುವಂದನಾ ಮಹೋತ್ಸವದ ಅಂಗವಾಗಿ 5 ಕಡೆ ದಾಸೋಹವನ್ನು ಏರ್ಪಡಿಸಲಾಗಿದ್ದು, ಸುಮಾರು ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ ಇರುವುದಾಗಿ ತಿಳಿಸಿದರು.
ಶ್ರೀ ಸಿದ್ದಗಂಗಾ ವಿದ್ಯಾಸಂಸ್ಥೆಯ ಜಂಟಿ ಕಾರ್ಯದರ್ಶಿ ಡಾ.ಶಿವಕುಮಾರಯ್ಯ ಮಾತನಾಡಿ, ಶ್ರೀಗಳ 118ನೇ ಜಯಂತಿ ಹಾಗೂ ಗುರುವಂದನಾ ಮಹೋತ್ಸವ ಪ್ರಯುಕ್ತ ಅಂದು ಮುಂಜಾನೆಯಿಂದಲೇ ಶ್ರೀಗಳ ಗದ್ದುಗೆಯಲ್ಲಿ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರ ನೇತೃತ್ವದಲ್ಲಿ ಹರಗುರುಚರಮೂರ್ತಿಗಳಿಂದ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಲಿವೆ ಎಂದರು.
ನಂತರ ಶ್ರೀಮಠದ ಆವರಣದಲ್ಲಿ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಪುತ್ಥಳಿ ಮೆರವಣಿಗೆಯನ್ನು ವಿವಿಧ ಜಾನಪದ ಕಲಾ ತಂಡಗಳ ಮೇಳದೊಂದಿಗೆ ನಡೆಸಲಾಗುವುದು ಎಂದು ಅವರು ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಶ್ರೀ ಸಿದ್ದಗಂಗಾ ವಿದ್ಯಾಸಂಸ್ಥೆಯ ಜಂಟಿ ಕಾರ್ಯದರ್ಶಿ ಡಾ.ಶಿವಕುಮಾರಯ್ಯ, ಸಿದ್ದಗಂಗಾ ಮಠದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಮಲ್ಲಿಕಾರ್ಜುನಯ್ಯ ಉಪಸ್ಥಿತರಿದ್ದರು.