ಹೂವಿನಹಡಗಲಿ: ರಂಗಭೂಮಿ ಜೀವಂತ ಕಲೆಯಾಗಿದ್ದು, ಅದು ವೈಯಕ್ತಿಕ, ಸಾಮಾಜಿಕ ಪರಿವರ್ತನೆಗೆ ಪ್ರಬಲ ಮಾಧ್ಯಮವಾಗಿದೆ ಎಂದು ನಟ, ನಿರ್ದೇಶಕ, ರಂಗ ಸಂಘಟಕ ಎನ್.ವಿ. ಶ್ರೀಕಾಂತ್ ಹೇಳಿದರು.
ಎಂ.ಪಿ. ಪ್ರಕಾಶ ಅವರ ಸೈದ್ಧಾಂತಿಕ ಒಲವುಗಳು ಅವರ ಸಾಹಿತ್ಯಿಕ, ಸಾಂಸ್ಕೃತಿಕ, ರಾಜಕೀಯ, ಸಾಮಾಜಿಕ ಕೊಡುಗೆಗಳನ್ನು ವಿವರಿಸುತ್ತಾ, ಅವರ ಬಹುಮುಖಿ ವ್ಯಕ್ತಿತ್ವವನ್ನು ಪರಿಚಯಿಸಿದರು. ಪ್ರಕಾಶ ಅವರು ಸ್ಥಾಪಿಸಿದ ರಂಗಭಾರತಿ ಸಂಸ್ಥೆ 60 ವರ್ಷಗಳಿಂದ ನಿರಂತರವಾಗಿ ನಾಟಕ, ಸಾಂಸ್ಕೃತಿಕ ಚಟುವಟಿಕೆಯನ್ನು ಆಯೋಜಿಸುತ್ತಿರುವುದು ಶ್ಲಾಘನೀಯ ಎಂದರು. ತಾಲೂಕಿನ ಹಿರಿಯ, ಕಿರಿಯ ರಂಗ ಕಲಾವಿದರ ಕೊಡುಗೆಗಳನ್ನು ಸ್ಮರಿಸುತ್ತಾ, ವಿದ್ಯಾರ್ಥಿಗಳು ರಂಗ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಮನವಿ ಮಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ರಂಗಭಾರತಿ ಕಾರ್ಯಾಧ್ಯಕ್ಷೆ ಸುಮಾ ವಿಜಯ್ ಮಾತನಾಡಿ, ರಂಗಭೂಮಿಯಲ್ಲಿ ತೊಡಗಿಸಿಕೊಳ್ಳುವುದರಿಂದ ಕ್ರಿಯಾಶೀಲ ವ್ಯಕ್ತಿತ್ವ ರೂಪುಗೊಳ್ಳುವುದು. ನಾಟಕ ರಂಜನೆಯ ಜತೆಗೆ ನೈತಿಕತೆ, ಮಾನವೀಯ ಮೌಲ್ಯಗಳ ಉದ್ದೀಪನ ಮಾಡುವುದು ಎಂದರು. ವಿದ್ಯಾರ್ಥಿಗಳು ಅಭ್ಯಾಸದ ಜತೆ ಲಲಿತ ಕಲೆಗಳ ಕಲಿಕೆಗೂ ಆಸಕ್ತಿ ವಹಿಸಲು ಕರೆ ನೀಡಿದರು.ಇದೇ ಸಂದರ್ಭದಲ್ಲಿ ತಾಲೂಕಿನ ಹುಗಲೂರು ಗ್ರಾಮದ ರಂಗ ಒಕ್ಕಲು ಸಂಸ್ಥೆಯ ನಟ, ನಿರ್ದೇಶಕ ಅಜಯ್ ಚ. ಅವರನ್ನು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಸನ್ಮಾನಿಸಲಾಯಿತು.