ಕನ್ನಡಪ್ರಭ ವಾರ್ತೆ ಖಾನಾಪುರ
ಆನ್‌ಲೈನ್ ವಂಚಕರಿಂದ ನಿರಂತರ ಶೋಷಣೆಗೆ ಒಳಗಾಗಿ ಲಕ್ಷಾಂತರ ಹಣ ಕಳೆದುಕೊಂಡು ಕಿರುಕಳ ಅನುಭವಿಸಿದ ವೃದ್ಧ ದಂಪತಿ ಆತ್ಮಹತ್ಯೆಗೆ ಶರಣಾದ ಘಟನೆ ತಾಲೂಕಿನ ಬೀಡಿ ಗ್ರಾಮದಲ್ಲಿ ಗುರುವಾರ ಸಂಜೆ ವರದಿಯಾಗಿದ್ದು, ಶುಕ್ರವಾರ ಬೆಳಕಿಗೆ ಬಂದಿದೆ.ಮೃತರನ್ನು ಬೀಡಿ ಗ್ರಾಮದ ಚರ್ಚ್ ಸ್ಟ್ರೀಟ್ ನಿವಾಸಿ, ಕೇಂದ್ರ ಸರ್ಕಾರದ ನಿವೃತ್ತ ಅಧಿಕಾರಿ ಡಿಯಾಗೋ ಸಂತಾನ ನಜರೆತ್ (83) ಮತ್ತು ಅವರ ಪತ್ನಿ ಫ್ಲೇವಿಯಾ ಡಿಯಾಗೋ ನಜರೆತ್ (78) ಎಂದು ಗುರುತಿಸಲಾಗಿದೆ.
ಘಟನೆ ವಿವರ:ಕೆಲದಿನಗಳ ಹಿಂದೆ ಡಿಯಾಗೋ ಅವರ ಮೊಬೈಲ್‌ಗೆ ಕರೆ ಮಾಡಿದ ಅನೀಲ ಯಾದವ ಎಂಬ ವ್ಯಕ್ತಿ, ನಿಮ್ಮ ಮೊಬೈಲ್‌ನಿಂದ ನನಗೆ ಅಸಭ್ಯ ಸಂದೇಶಗಳು ಬರುತ್ತಿರುವ ಕಾರಣ ನಿಮ್ಮ ವಿರುದ್ಧ ಟೆಲಿಕಾಂ ಸೈಬರ್ ಅಪರಾಧ ವಿಂಗ್‌ನಲ್ಲಿ ದೂರು ದಾಖಲಿಸಿದ್ದೇನೆ ಎಂದು ಹೇಳಿ ಹೆದರಿಸಿದ್ದ. ಬಳಿಕ ಸುಮಿತ ಬಿಸ್ರಾ ಹೆಸರಿನ ಮತ್ತೊಬ್ಬ ಕರೆ ಮಾಡಿ, ಅನೀಲ ಅವರ ದೂರಿನ ಮೇಲೆ ನಿಮ್ಮ ಮೇಲೆ ಪ್ರಕರಣ ದಾಖಲಾಗಿದ್ದು, ನಿಮ್ಮನ್ನು ಡಿಜಿಟಲ್ ಅರೆಸ್ಟ್ ಮಾಡುತ್ತೇನೆ ಎಂದು ಬೆದರಿಸಿದ್ದ. ಇಬ್ಬರೂ ಆರೋಪಿಗಳು ಸೇರಿ ಡಿಯಾಗೋ ಅವರ ಬ್ಯಾಂಕ್ ವಿವರ ಪಡೆದುಕೊಂಡು ಅವರ ವಿರುದ್ಧ ಕಾನೂನು ಕ್ರಮದ ನೆಪ ಹೇಳಿ ಲಕ್ಷಾಂತರ ಮೊತ್ತವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದರು. ಇದರಿಂದ ತೀವ್ರ ಮನನೊಂದಿದ್ದ ದಂಪತಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು.
ಗುರುವಾರ ಪ್ಲೇವಿಯಾ ನಿದ್ರೆ ಮಾತ್ರೆ ಸೇವಿಸಿ ಸಾವನ್ನಪ್ಪಿದ್ದು, ಡಿಯಾಗೋ ನೇಣು ಬಿಗಿದುಕೊಂಡು ಸಾವನ್ನಪ್ಪಲು ಪ್ರಯತ್ನಿಸಿದ್ದರು. ಅವರ ಪ್ರಯತ್ನ ಫಲಕಾರಿಯಾಗದಿದ್ದಾಗ ಕತ್ತನ್ನು ಕುಯ್ದುಕೊಂಡು ಬಳಿಕ ಮುಖವನ್ನು ಮನೆಯ ಹಿಂದಿನ ನೀರಿನ ತೊಟ್ಟಿಯಲ್ಲಿ ಮುಳುಗಿಸಿಕೊಂಡು ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಘಟನಾ ಸ್ಥಳದಲ್ಲಿ ಅವರು ಬರೆದಿರುವ ಡೆತ್ ನೋಟ್ ಪತ್ತೆಯಾಗಿದೆ. ಅದರಲ್ಲಿ ಡಿಯಾಗೋ ನಜರೆತ್ ಉನ್ನತ ಹುದ್ದೆಯಲ್ಲಿರುವುದಾಗಿ ಹೇಳಿಕೊಂಡ ವ್ಯಕ್ತಿ ತಮಗೆ ಬೆದರಿಕೆ ಹಾಕಿದ್ದಾರೆ. ಸಿಮ್ ಕಾರ್ಡ್ ದುರುಪಯೋಗಪಡಿಸಿಕೊಂಡಿದ್ದಕ್ಕಾಗಿ ಡಿಜಿಟಲ್ ರೂಪದಲ್ಲಿ ಬಂಧಿಸಲ್ಪಡುವ ಭಯವಿದೆ ಎಂದು ಹೇಳಿ ತಮ್ಮಿಂದ ಲಕ್ಷಗಟ್ಟಲೇ ಹಣವನ್ನು ಸುಲಿಗೆ ಮಾಡಿದ್ದಾರೆ. ಅವರು ಹೇಳಿದಷ್ಟು ಹಣ ಪಾವತಿಸಿದರೂ ಡಿಜಿಟಲ್ ಬಂಧನದ ಬೆದರಿಕೆ ಹಾಕಿದ್ದರಿಂದ ಮನನೊಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬರಲಾಗಿದೆ. ತಮ್ಮ ಮೃತದೇಹಗಳನ್ನು ವೈದ್ಯಕೀಯ ಅಧ್ಯಯನಕ್ಕೆ ದಾನ ನೀಡಬೇಕು ಎಂದು ನಮೂದಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿರುವ ಹೆಚ್ಚುವರಿ ಎಸ್‌ಪಿ ಶೃತಿ, ಸೈಬರ್ ಅಪರಾಧಿಗಳ ಬೆದರಿಕೆಯಿಂದಾಗಿ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ನಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಒಂದು ಮೊಬೈಲ್ ಫೋನ್, ಒಂದು ಚಾಕು ಮತ್ತು ಡೆತ್ ನೋಟ್ ವಶಪಡಿಸಿಕೊಂಡಿದ್ದಾರೆ. ಸ್ಥಳಕ್ಕೆ ಬೆರಳಚ್ಚು ತಜ್ಞರು ಮತ್ತು ಶ್ವಾನ ದಳ ಭೇಟಿ ನೀಡಿ ಪರಿಶೀಲಿಸಿದೆ. ಘಟನೆಯ ತನಿಖೆ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.