ಅಂತೂ ಮರಿಯಮ್ಮನಹಳ್ಳಿಗೆ ಬಂತು ಕುಡಿವ ನೀರು!

KannadaprabhaNewsNetwork | Published : Mar 29, 2025 12:33 AM

ಸಾರಾಂಶ

ಮರಿಯಮ್ಮನಹಳ್ಳಿ ಪಟ್ಟಣಕ್ಕೆ ತುಂಗಭದ್ರಾ ಜಲಾಶಯದಿಂದ ಶಾಶ್ವತ ಕುಡಿಯುವ ನೀರು ಹರಿಸುವ ಯೋಜನೆಗೆ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಕೆ. ನೇಮರಾಜ್‌ ನಾಯ್ಕ ಚಾಲನೆ ನೀಡುವ ಮೂಲಕ ಇಲ್ಲಿಯ ಜನರ ಬಹುದಿನಗಳ ಕನಸು ನನಸು ಮಾಡಿದ್ದಾರೆ.

ಸಿ.ಕೆ. ನಾಗರಾಜ್‌

ಮರಿಯಮ್ಮನಹಳ್ಳಿ: ತುಂಗಭದ್ರಾ ಜಲಾಶಯದಿಂದ ಶಾಶ್ವತ ಕುಡಿಯುವ ನೀರು ಹರಿಸುವ ಯೋಜನೆಗೆ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಶಾಸಕ, ಮರಿಯಮ್ಮನಹಳ್ಳಿಯ ನಿವಾಸಿಯೂ ಆಗಿರುವ ಕೆ. ನೇಮರಾಜ್‌ ನಾಯ್ಕ ಬುಧವಾರ ಚಾಲನೆ ನೀಡುವ ಮೂಲಕ ಇಲ್ಲಿಯ ಜನರ ಬಹುದಿನಗಳ ಕನಸು ನನಸು ಮಾಡಿದ್ದಾರೆ.

ಅನೇಕ ದಶಕಗಳಿಂದ ಕುಡಿಯುವ ನೀರಿನ ಸಮಸ್ಯೆ ಅನುಭವಿಸಿದ ಇಲ್ಲಿನ ಜನರು ಈಗ ಅಂತೂ ಕುಡಿಯುವ ನೀರು ಬಂತಪ್ಪಾ... ಎಂದು ಉದ್ಗರಿಸಿದ್ದಾರೆ.

ಮರಿಯಮ್ಮನಹಳ್ಳಿಯ ಜನರು ಅಂದಿನ ನಾರಾಯಣದೇವರ ಕೆರೆಯಲ್ಲಿ ಸುಮಾರು 72 ವರ್ಷಗಳ ಹಿಂದೆ ತುಂಗಭದ್ರಾ ಜಲಾಶಯದ ನಿರ್ಮಾಣದ ಸಂದರ್ಭದಲ್ಲಿ ತಮ್ಮ ಹೊಲ-ಮನೆ-ಆಸ್ತಿ ಎಲ್ಲವನ್ನೂ ಕಳೆದುಕೊಂಡಿದ್ದರು. ನಾರಾಯಣದೇವರಕೆರೆ ಬಿಟ್ಟು ಬಂದಾಗಿನಿಂದಲೂ ಮರಿಯಮ್ಮನಹಳ್ಳಿ ಜನರಿಗೆ ಕುಡಿಯುವ ನೀರಿನದ್ದೇ ಬಹುದೊಡ್ಡ ಸಮಸ್ಯೆಯಾಗಿತ್ತು. ಈ ವರೆಗೂ ಶಾಶ್ವತ ಕುಡಿಯುವ ನೀರಿನ ಯೋಜನೆ ರೂಪಿಸಲು ಸಾಧ್ಯವಾಗಿರಲಿಲ್ಲ. ಆದರೆ ಈಗ ಸ್ಥಳೀಯ ಶಾಸಕ ಕೆ. ನೇಮರಾಜ್‌ ನಾಯ್ಕ್ ಅವರ ಇಚ್ಛಾಶಕ್ತಿಯ ಫಲವಾಗಿ ನೀರು ಬಂದಿದೆ. ಕೇಂದ್ರದ ಅಮೃತ್-2 ಯೋಜನೆ ಅನುದಾನದಲ್ಲಿ ಸುಮಾರು ₹77 ಕೋಟಿ ವೆಚ್ಚದ ಕಾಮಗಾರಿ ಮುಗಿಸಿ, ನೀರು ಸರಬರಾಜಿಗೆ ಈಗ ಚಾಲನೆ ನೀಡಲಾಗಿದೆ.

ತುಂಗಭದ್ರಾ ಜಲಾಶಯದ ಹಿನ್ನೀರಿನ ಪ್ರದೇಶದ ಜಾಕ್‌ವೆಲ್‌ನಲ್ಲಿ ಅಳವಡಿಸಿದ 60 ಅಶ್ವಶಕ್ತಿ ಮೋಟರ್‌ನಿಂದ ಒಂದು ತಾಸಿಗೆ 80 ಸಾವಿರ ಲೀಟರ್‌ ನೀರು ಹರಿದು ಬರುತ್ತದೆ. ನಿತ್ಯ 13-15 ಗಂಟೆಗಳ ಕಾಲ ನಿರಂತರವಾಗಿ ಚಾಲನೆಯಲ್ಲಿದ್ದರೆ 13 ಲಕ್ಷ ಲೀಟರ್‌ ನೀರು ದೊರೆಯುತ್ತದೆ. ಈ ನೀರನ್ನು ಪ್ರತಿದಿನ ಸಂಗ್ರಹಿಸಿ ಸಾರ್ವಜನಿಕರಿಗೆ ಶುದ್ಧೀಕರಿಸಿ ಪೂರೈಸಲಾಗುತ್ತದೆ.

ಅಮೃತ್‌ ಯೋಜನೆಯ ಶುದ್ಧೀಕರಣ ಘಟಕ ನಿರ್ಮಾಣ ಹಂತದಲ್ಲಿದೆ. ಪಟ್ಟಣದಲ್ಲಿ ಈಗಾಗಲೇ 5 ನೀರಿನ ಟ್ಯಾಂಕ್‌ ಇದೆ. ಕಾಲೇಜ್‌ ಸಮೀಪ 5 ಲಕ್ಷ ಲೀಟರ್‌ ಟ್ಯಾಂಕ್‌, ವೆಂಕಟಾಪುರ ರಸ್ತೆಯಲ್ಲಿ 2 ಲಕ್ಷ ಲೀಟರ್‌ ಟ್ಯಾಂಕ್‌, ಸರ್ಕಾರಿ ಆಸ್ಪತ್ರೆ ಆವರಣದಲ್ಲಿ 1 ಲಕ್ಷ ಲೀಟರ್‌ ಟ್ಯಾಂಕ್‌, ಮರಿಯಮ್ಮನಳ್ಳಿ ತಾಂಡದಲ್ಲಿ 1 ಲಕ್ಷ ಲೀಟರ್‌ ಟ್ಯಾಂಕ್‌ ಇದೆ. ಈ ಟ್ಯಾಂಕ್‌ಗಳಲ್ಲಿ ನೀರು ಸಂಗ್ರಹಿಸಿ, ಪ್ರೆಶರ್‌ ಫಿಲ್ಟರ್‌ಗಳ ಮೂಲಕ ಶುದ್ಧೀಕರಿಸಿ, ಹಳೆಯ ಪೈಪ್‌ಲೈನ್‌ ಮೂಲಕ ಪ್ರತಿ ವಾರ್ಡ್‌ಗೆ ಕುಡಿಯುವ ನೀರು ಸರಬರಾಜು ಮಾಡಲು ಯೋಜನೆ ರೂಪಿಸಲಾಗಿದೆ.

ಈ ಹಿಂದೆ ಮರಿಯಮ್ಮನಹಳ್ಳಿಗೆ ಶಾಶ್ವತ ಕುಡಿಯುವ ನೀರು ಯೋಜನೆಗಾಗಿ ಹೋರಾಟ ಸಮಿತಿ ರಚಿಸಲಾಗಿತ್ತು. ಹಲವು ಹೋರಾಟಗಳು ನಿರಂತರ ನಡೆದಿವೆ. ಆದರೆ ರಾಜಕಾರಣಿಗಳು ಚುನಾವಣೆ ಸಂದರ್ಭದಲ್ಲಿ ಭರವಸೆ ನೀಡುವುದು ಬಿಟ್ಟು ಬೇರೇನೂ ಕೆಲಸ ಆಗುತ್ತಿರಲಿಲ್ಲ. ಈಗ ಶಾಸಕ ನೇಮರಾಜ ನಾಯ್ಕ ತನ್ನ ಹುಟ್ಟೂರಿನ ಸಮಸ್ಯೆ ನೀಗಿಸಿದ್ದಾರೆ. ಈ ಕುರಿತು ಹೋರಾಟ ಸಮಿತಿ ಪದಾಧಿಕಾರಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

ಕೊಟ್ಟ ಮಾತಿನಂತೆ ನೀರು ಸರಬರಾಜು: ಶಾಸಕ ನೇಮಿರಾಜ್ ನಾಯ್ಕ್

ಯುಗಾದಿ ವೇಳೆಗೆ ಹೊಸ ನೀರು ಕೊಡುತ್ತೇವೆ ಎಂದು ನಾವು ಮಾತು ಕೊಟ್ಟಿದ್ವಿ. ಕೊಟ್ಟ ಮಾತಿನಂತೆ ನೀರು ಕೊಡಲಾಗಿದೆ. ಪಟ್ಟಣದ ಪ್ರತಿ ಮನೆಗೂ ಕುಡಿಯುವ ನೀರು ಸರಬರಾಜು ಆಗಲಿದೆ ಎಂದು ಹಗರಿಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಕೆ. ನೇಮಿರಾಜ್‌ ನಾಯ್ಕ ಹೇಳಿದರು.

ತುಂಗಭದ್ರಾ ನದಿ ತೀರದ ಜಾಕ್‌ವೆಲ್ ಪಾಯಿಂಟ್‌ನಲ್ಲಿ ಅಮೃತ್ 2 ಯೋಜನೆಯ ಕುಡಿಯುವ ನೀರಿನ ಯೋಜನೆಗೆ ಪಟ್ಟಣದ ಗುರುಪಾದ ದೇವರ ಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳ ಜತೆಗೆ ಇತ್ತೀಚೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಅನೇಕ ವರ್ಷಗಳ ಕಾಲ ಕುಡಿಯುವ ನೀರಿಗಾಗಿ ಹೋರಾಟ ನಡೆಸಿದ ಫಲವಾಗಿ ತುಂಗಭದ್ರಾ ಜಲಾಶಯದಿಂದ ಶಾಶ್ವತ ಕುಡಿಯುವ ನೀರು ಯೋಜನೆ ಸಾಕಾರವಾಗಿದೆ ಎಂದು ಹೇಳಿದರು.ಪಪಂ ಅಧ್ಯಕ್ಷ ಆದಿಮನಿ ಹುಸೇನ್‌ ಬಾಷಾ, ಪಪಂ ಮುಖ್ಯಾಧಿಕಾರಿ ಎಂ. ಖಾಜಾ, ಎಂಜಿನಿಯರ್‌ ಟಿ.ಎಸ್‌. ಹನುಮಂತಪ್ಪ, ಮರಿಯಮ್ಮನಹಳ್ಳಿ ಕುಡಿಯುವ ನೀರಿನ ಹೋರಾಟ ಸಮಿತಿಯ ಗೋವಿಂದರ ಪರಶುರಾಮ, ಚಿದ್ರಿ ಸತೀಶ್‌, ಉರುಕೊಂಡ ವೆಂಕಟೇಶ್‌, ಕೆ. ರಘುವೀರ, ಗುಂಡಾಸ್ವಾಮಿ, ಎಲೆಗಾರ್ ಮಂಜುನಾಥ, ಬಿ.ಎಂ.ಎಸ್‌. ಪ್ರಕಾಶ್‌, ರೋಗಾಣಿ ಮಂಜುನಾಥ, ಡಾ. ಎರ್ರಿಸ್ವಾಮಿ, ನಾಗೇಶ್‌ ಇತರರಿದ್ದರು.

Share this article