ಕನ್ನಡಪ್ರಭ ವಾರ್ತೆ ವಿಧಾನಸಭೆ
ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ.ಸುಧಾಕರ್ ಅವರು, ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ(ತಿದ್ದುಪಡಿ) ವಿಧೇಯಕ ಹಾಗೂ ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ವಿಧೇಯಕಗಳನ್ನು ಪರ್ಯಾಲೋಚನೆಗೆ ಮಂಡಿಸಿದರು.
ಬಳಿಕ ಮಾತನಾಡಿ, ಮಂಡಳಿಯ ಅಧಿಕಾರ ವ್ಯಾಪ್ತಿಯೊಳಗೆ ಬರುವ ಜಿಲ್ಲೆ ಅಥವಾ ತಾಲೂಕುಗಳನ್ನು ನೋಡಲ್ ಜಿಲ್ಲೆ ಅಥವಾ ತಾಲೂಕಾಗಿ ಆಯ್ಕೆ ಮಾಡುವುದು. ಆ ವ್ಯಾಪ್ತಿಯಲ್ಲಿ ಮತದಾರರಾಗಿ ನೋಂದಾಯಿಸಿಕೊಂಡಿರುವ ವಿಧಾನ ಪರಿಷತ್ತಿನ ಸದಸ್ಯರನ್ನು ಮಂಡಳಿ ಸದಸ್ಯರನ್ನಾಗಿ ಸೇರಿಸಲು ತಿದ್ದುಪಡಿ ಮಾಡಲಾಗಿದೆ. ಯಾವುದೇ ಸದಸ್ಯರು ಎರಡು ಮಂಡಳಿಯಲ್ಲಿ ಇರಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು.ಕುಷ್ಠರೋಗಿಗಳು ಸದಸ್ಯರಾಗಬಹುದು:ಹಿಂದು ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ(ತಿದ್ದುಪಡಿ) ವಿಧೇಯಕ ಪರ್ಯಾಲೋಚನೆಗೆ ಮಂಡಿಸಿದ ಸಚಿವ ರಾಮಲಿಂಗಾರೆಡ್ಡಿ, ದೇವಾಲಯಗಳ ಆಡಳಿತ ಮಂಡಳಿ ಸದಸ್ಯರಾಗಲು ಕುಷ್ಠರೋಗಿಗಳು, ಕಿವುಡರು, ಮೂಗರು, ಸಾಂಕ್ರಾಮಿಕ ರೋಗಗಳುಳ್ಳವರಿಗೆ ಅವಕಾಶವಿರಲಿಲ್ಲ. ಸಮಾನತೆ ಹಾಗೂ ನ್ಯಾಯಾಲಯದ ಸೂಚನೆ ಮೇರೆಗೆ ಈ ಷರತ್ತು ರದ್ದುಗೊಳಿಸಲಾಗಿದೆ. ಈಗ ಕುಷ್ಠರೋಗಿಗಳು ಸಹ ಸದಸ್ಯರಾಗಬಹುದು ಎಂದು ವಿವರಣೆ ನೀಡಿ ಅಂಗೀಕಾರ ಪಡೆದರು.
ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ(ತಿದ್ದುಪಡಿ) ವಿಧೇಯಕ ಪರ್ಯಾಲೋಚನೆಗೆ ಮಂಡಿಸಿದ ಸಚಿವ ರಾಮಲಿಂಗಾರೆಡ್ಡಿ, ಪ್ರಾಧಿಕಾರದ ಅಧಿಕಾರದ ವ್ಯಾಪ್ತಿಯೊಳಗೆ ಭಕ್ತಾದಿಗಳಿಗೆ ಸುರಕ್ಷತೆ ಮತ್ತು ಸೌಲಭ್ಯ ಕಲ್ಪಿಸಿಕೊಡಲು ರಾಜ್ಯ ಮತ್ತು ಜಿಲ್ಲಾಮಟ್ಟದ ಮೇಲ್ವಿಚಾರಣಾ ಸಮಿತಿಗಳನ್ನು ರಚಿಸುವುದು ವಿಧೇಯಕದ ಮುಖ್ಯ ಉದ್ದೇಶ ಎಂದು ಹೇಳಿದರು.ಆದರೆ ಈ ಸಮಿತಿಯಲ್ಲಿ ಕ್ಷೇತ್ರದ ಧಾರ್ಮಿಕ ಕಾರ್ಯಗಳ ನೇತೃತ್ವ ವಹಿಸುವ ಶ್ರೀ ಸಾಲೂರು ಬೃಹನ್ಮಠದ ಪೀಠಾಧಿಪತಿಗಳನ್ನು ಸೇರಿಸದಿರುವುದಕ್ಕೆ ಬಿಜೆಪಿಯ ಶ್ರೀವತ್ಸ ಆಕ್ಷೇಪ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಸಹಮತ ಸೂಚಿಸಿದರು.
ಚಂದ್ರಗುತ್ತಿ ಕ್ಷೇತ್ರದ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ:ಚರ್ಚೆಯೇ ಇಲ್ಲದೆ ಒಪ್ಪಿಗೆ ಪಡೆದ ಈ ವಿಧೇಯಕ ಮಂಡಿಸಿದ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಕ್ಷೇತ್ರವನ್ನು ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿಗೊಳಿಸಲು ಮತ್ತು ನಿರ್ವಹಿಸಲು ಸ್ವತಂತ್ರ ಶಾಸನ ಬದ್ಧ ಪ್ರಾಧಿಕಾರ ರಚನೆ ಅವಶ್ಯಕ. ಹೀಗಾಗಿ ಈ ವಿಧೇಯಕ ಮಂಡಿಸಿ ಅಂಗೀಕಾರ ಪಡೆಯಲಾಗುತ್ತಿದೆ ಎಂದು ವಿವರಿಸಿದರು.
ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ತಿದ್ದುಪಡಿ:ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಮತ್ತು ಇತರ ಕಾನೂನುಗಳ(ತಿದ್ದುಪಡಿ) ವಿಧೇಯಕ ಮಂಡಿಸಿ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ, ‘ಚಾಮುಂಡೇಶ್ವರಿ, ರೇಣುಕಾ ಯಲ್ಲಮ್ಮ ದೇವಸ್ಥಾನ, ಘಾಟಿ ಸುಬ್ರಹ್ಮಣ್ಯ ಹುಲಿಗೆಮ್ಮ ದೇವಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರಗಳಿಗೆ ಹಿಂದು ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯ ಎ-ದರ್ಜೆಯ ಹಿರಿಯ ಶ್ರೇಣಿ ಅಧಿಕಾರಿಯನ್ನು ಪ್ರಾಧಿಕಾರದ ಕಾರ್ಯದರ್ಶಿಯಾಗಿ ನೇಮಿಸುವುದಕ್ಕಾಗಿ ವಿಧೇಯಕಕ್ಕೆ ತಿದ್ದುಪಡಿ ತರಲಾಗುತ್ತಿದೆ’ ಎಂದು ವಿವರಿಸಿದರು.
ವಿ.ವಿ ಹೆಸರು ತಿದ್ದುಪಡಿ:ರಾಜ್ಯ ವಿಶ್ವವಿದ್ಯಾಲಯಗಳ(ಎರಡನೇ ತಿದ್ದುಪಡಿ) ವಿಧೇಯಕ ಅಡಿ ರಾಣಿ ಚೆನ್ನಮ್ಮ ವಿಶ್ವವಿದ್ಯಾನಿಲಯ ಬದಲು ಕಿತ್ತೂರು ರಾಣಿ ಚೆನ್ನಮ್ಮ ವಿಶ್ವವಿದ್ಯಾನಿಲಯ ಎಂದು ಬದಲಾಯಿಸಲು ತಿದ್ದುಪಡಿ ತರಲಾಗಿದ್ದು, ಈ ವಿಧೇಯಕಕ್ಕೆ ಒಪ್ಪಿಗೆ ಸಿಕ್ಕಿತು.
ಕಾರ್ಮಿಕ ಕಲ್ಯಾಣ ನಿಧಿ ತಿದ್ದುಪಡಿ:ಕಾರ್ಮಿಕ ಕಲ್ಯಾಣ ನಿಧಿ(ತಿದ್ದುಪಡಿ) ವಿಧೇಯಕ ಪರ್ಯಾಲೋಚನೆಗೆ ಮಂಡಿಸಿ ಮಾತನಾಡಿದ ಕಾರ್ಮಿಕ ಸಚಿವ ಸಂತೋಷ್ ಲಾಡ್, ಸಂಸ್ಥೆಗಳಲ್ಲಿರುವ ಕನಿಷ್ಠ ಉದ್ಯೋಗಿಗಳ ಸಂಖ್ಯೆಯನ್ನು 15ರಿಂದ 10ಕ್ಕೆ ನಿರ್ದಿಷ್ಟಗೊಳಿಸುವುದು. ಮಂಡಳಿಗೆ ವಂತಿಗೆಯನ್ನು ನೀಡುವ ಕಾರ್ಯವಿಧಾನಕ್ಕೆ ಡಿಡಿ ಬದಲು ಇ-ಬ್ಯಾಂಕಿಂಗ್ ವ್ಯವಸ್ಥೆ ಮತ್ತು ಆನ್‌ಲೈನ್ ಬ್ಯಾಂಕಿಂಗ್ ವ್ಯವಸ್ಥೆ ಪರಿಚಯಿಸುವುದು ವಿಧೇಯಕದ ಉದ್ದೇಶ. ಇದರಿಂದ ಹೆಚ್ಚು ಮಂದಿ ಕಾರ್ಮಿಕ ಕಲ್ಯಾಣ ನಿಧಿ ವ್ಯಾಪ್ತಿಗೆ ಬರುತ್ತಾರೆ ಎಂದು ಸಮರ್ಥಿಸಿದರು.
ಇದೇ ವೇಳೆ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ಧಿ)(ತಿದ್ದುಪಡಿ) ವಿಧೇಯಕ ಮಂಡಿಸಿ, ಕಾರ್ಮಿಕ ಸಚಿವ ಸಂತೋಷ್ ಲಾಡ್ ವಿಧೇಯಕವನ್ನು ಮಂಡಿಸಿ, ಉದ್ಯೋಗದಾತ ಬದಲು ಸಂಸ್ಥೆಯ ಮಾಲೀಕ ಪದವನ್ನು ತಿದ್ದುಪಡಿ ತರಲಾಗಿದೆ ಎಂದು ಸದನದ ಗಮನಕ್ಕೆ ತಂದರು.ಇದಕ್ಕೂ ಮೊದಲು ಕರ್ನಾಟಕ ಭೂ ಕಂದಾಯ 2ನೇ ತಿದ್ದುಪಡಿ ವಿಧೇಯಕ, ಕರ್ನಾಟಕ ಬಾಡಿಗೆ ತಿದ್ದುಪಡಿ ವಿಧೇಯಕ, ಗ್ರೇಟರ್ ಬೆಂಗಳೂರು 2ನೇ ತಿದ್ದುಪಡಿ ವಿಧೇಯಕಗಳಿಗೆ ಚರ್ಚೆ ಬಳಿಕ ಅಂಗೀಕಾರ ದೊರೆತಿತ್ತು.-ಬಾಕ್ಸ್-
ಬೊಬ್ಬೆ ಹಾಕಿ ಮಾರಾಯ್ರೇ: ಸ್ಪೀಕರ್ವಿಧಾನಸಭೆ ಅಧಿವೇಶನದಲ್ಲಿ ಮಂಗಳವಾರ ಹಲವು ವಿಧೇಯಕಗಳನ್ನು ಅಂಗೀಕರಿಸಲಾಯಿತು. ಮತಕ್ಕೆ ಹಾಕಿದಾಗ ಆಡಳಿತ ಪಕ್ಷದ ಶಾಸಕರು ಹೌದು ಎನ್ನುವುದಕ್ಕೂ ಮನಸ್ಸು ಮಾಡಲಿಲ್ಲ. ಇದಕ್ಕೆ ವಿರೋಧ ಪಕ್ಷದ ನಾಯಕರು ಅಸಮಾಧಾನ ವ್ಯಕ್ತಪಡಿಸಿದರೂ ಆಡಳಿತಪಕ್ಷದ ಸದಸ್ಯರಿಂದ ಧ್ವನಿ ಬರುತ್ತಿರಲಿಲ್ಲ. ಹೀಗಾಗಿ ಸ್ಪೀಕರ್ ಯು.ಟಿ. ಖಾದರ್ ಅವರು, ‘ಬೊಬ್ಬೆ ಹಾಕಿ ಮಾರಾಯ್ರೇ ನೀವು. ಹೌದು ಎಂದು ಬೊಬ್ಬೆ ಹಾಕಿ’ ಎಂದರು.