- ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ । ಪ್ರತಿಜ್ಞೆ ಬೋಧನೆ
ಕನ್ನಡಪ್ರಭ ವಾರ್ತೆ ಮಲೇಬೆನ್ನೂರು
ವಿಶ್ವದಲ್ಲಿ ಏಳು ಕೋಟಿ ಜನರು ಆತ್ಮಹತ್ಯೆ ಮಾಡಿಕೊಂಡಿರುವ ಹೀನ ಪರಿಸ್ಥಿತಿಯಿದ್ದು, 100ಕ್ಕೆ 12 ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಅಬ್ದುಲ್ ಖಾದರ್ ಹೇಳಿದರು.ಪಟ್ಟಣದ ಸರ್ಕಾರಿ ಪಿಯು ಕಾಲೇಜ್‌ನಲ್ಲಿ ಬುಧವಾರ ಏರ್ಪಡಿಸಿದ್ದ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆಯಲ್ಲಿ ಅವರು ಮಾತನಾಡಿದರು. ಮುಖ್ಯವಾಗಿ ಯವಜನತೆ ಪ್ರೇಮ, ಪ್ರೀತಿಯಲ್ಲಿ ಫೇಲ್ ಆಗಿ, ಶಿಕ್ಷಣದ ಫಲಿತಾಂಶ ಉತ್ತಮವಾಗಿಲ್ಲ ಎಂಬ ಕಾರಣದಿಂದ, ಒಬ್ಬರೇ ಕೂತು ಯೋಚನೆ ಮಾಡುತ್ತ ಒತ್ತಡಕ್ಕೆ ಒಳಗಾಗಿ ಆತ್ಮಹತ್ಯೆಗೆ ಶರಣಾಗುವ ಪ್ರಕರಣಗಳು ಘಟಿಸುತ್ತಿವೆ. ಇಂಥ ಆತ್ಮಹತ್ಯೆ ತಡೆಗಟ್ಟುವಲ್ಲಿ ಎಲ್ಲ ಇಲಾಖೆಗಳು ಹಾಗೂ ಸಮುದಾಯದ ಜನರು ಜವಾಬ್ದಾರಿ ಮೆರೆಯಬೇಕಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತು ಸಂಘಟನಾ ಕಾರ್ಯದರ್ಶಿ ಸದಾನಂದ ಮಾತನಾಡಿ, ಬರ್ಮಾ, ಆಫ್ಘಾನಿಸ್ಥಾನ, ನೇಪಾಳ ಮತ್ತು ನೈಜೀರಿಯಾ ದೇಶಗಳು ಯುವಜನತೆಯನ್ನು ಗುರಿಯಾಗಿಸಿ, ವಾಮಮಾರ್ಗದಲ್ಲಿ ಭಾರತಕ್ಕೆ ಮಾದಕ ವಸ್ತುಗಳನ್ನು ಸರಬರಾಜು ಮಾಡುತ್ತಿವೆ. ವಿದ್ಯಾರ್ಥಿಗಳು ಆಕರ್ಷಣೆಗೆ ಒಳಗಾಗಿ ದಿಢೀರ್ ನಿರ್ಧಾರ ಮಾಡಿ, ಕೆಟ್ಟ ಚಟಗಳಿಗೆ ದಾಸರಾಗೋದು ಸಲ್ಲದು. ಪ್ರಕೃತಿಯನ್ನು ಆರಾಧಿಸಿ, ವಿಶೇಷ ವಿದ್ಯಾರ್ಥಿಯಾಗಲು ಶ್ರಮಿಸಬೇಕು ಎಂದರು.
ಪ್ರಾಚಾರ್ಯ ಸುರೇಶ್ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ರಂಗನಾಥ್, ಕುಬೇರಪ್ಪ, ಮಲ್ಲಿಕಾರ್ಜುನ್, ವಿಜಯ್, ರೇಷ್ಮಾ ಇದ್ದರು. ವಿದ್ಯಾರ್ಥಿನಿಯರಾದ ರಾಧಿಕಾ, ಮೇಘನಾ, ಕಾವ್ಯ ಅನಿಸಿಕೆ ಹಂಚಿಕೊಂಡರು. ಕೊನೆಯಲ್ಲಿ ವಿದ್ಯಾರ್ಥಿಗಳಿಂದ ಆತ್ಮಹತ್ಯೆ ತಡೆಗಟ್ಟುವ ಪ್ರತಿಜ್ಞೆ ಬೋಧಿಸಲಾಯಿತು.
-ಚಿತ್ರ೩: