ಕನ್ನಡಪ್ರಭ ವಾರ್ತೆ ಮಂಡ್ಯ
ತಾಲೂಕಿನ ಕೊತ್ತತ್ತಿ ಒಂದನೇ ಹಾಗೂ ಎರಡನೇ ವೃತ್ತದ ವ್ಯಾಪ್ತಿಯಲ್ಲಿ ಸುಮಾರು 12,000 ಪೌತಿಖಾತೆಗಳು ಬಾಕಿ ಇವೆ ಎಂದು ಚೆಸ್ಕಾಂ ಅಧ್ಯಕ್ಷ ಹಾಗೂ ಶಾಸಕ ರಮೇಶ್ ಬಂಡಿಸಿದ್ದೇಗೌಡ ತಿಳಿಸಿದರು.ತಾಲೂಕಿನ ಹಳುವಾಡಿ ಶ್ರೀನಿವಾಸ ಸಮುದಾಯ ಭವನದಲ್ಲಿ ಜಿಲ್ಲಾ ಪಂಚಾಯ್ತಿ, ತಾಲೂಕು ಆಡಳಿತ ಮತ್ತು ತಾಲೂಕು ಪಂಚಾಯ್ತಿಯಿಂದ ಏರ್ಪಡಿಸಿದ್ದ ತಗ್ಗಹಳ್ಳಿ ಹಾಗೂ ಹಳುವಾಡಿ ಗ್ರಾಪಂ ಮಟ್ಟದ ಜನತಾ ದರ್ಶನ ಉದ್ಘಾಟಿಸಿ ಮಾತನಾಡಿದರು.
ಪೌತಿ ಖಾತೆ ಆಂದೋಲನ ಚುರುಕಾಗಿ ನಡೆಯಬೇಕು. ಪೌತಿ ಖಾತೆ ಆಗಬೇಕಿರುವವರು ಅಗತ್ಯ ದಾಖಲೆ ಸಲ್ಲಿಸಿ ಸರಿಪಡಿಸಿಕೊಳ್ಳಬೇಕು. ಅಧಿಕಾರಿಗಳು ಜನರನ್ನು ಅಲೆದಾಡಿಸದೆ ಯಾವ ದಾಖಲೆಗಳು ಬೇಕೋ ಅವುಗಳನ್ನು ಮೊದಲೇ ತಿಳಿಸಿ ಶೀಘ್ರಗತಿಯಲ್ಲಿ ಪೂರ್ಣಗೊಳಿಸುವಂತೆ ಸೂಚಿಸಿದರು.ಸರ್ಕಾರದ ಯೋಜನೆಗಳು ಜನಸಾಮಾನ್ಯರಿಗೆ ನೇರವಾಗಿ ತಲುಪಬೇಕು ಎಂದು ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಜನತಾ ದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಇಲಾಖೆವಾರು ತಮ್ಮ ಅಹವಾಲು ಸ್ವೀಕರಿಸಿ ಸಾರ್ವಜನಿಕರ ಹಾಗೂ ರೈತರ ಕುಂದುಕೊರತೆ ಪರಿಹರಿಸುವ ಕೆಲಸವನ್ನು ಅಧಿಕಾರಿಗಳು ಮಾಡುತ್ತಾರೆ ಎಂದರು.
ಸರ್ಕಾರ ಹೊಸ ಯೋಜನೆ ಜಾರಿಗೆ ತರುತ್ತಿದ್ದು, ಗ್ರಾಪಂ ವ್ಯಾಪ್ತಿಯ ರೆವಿನ್ಯೂ ಸೈಟ್‌ಗಳ ಮಾಲೀಕರಿಗೆ 11ಬಿ ಅನ್ವಯ ಬಿ ಖಾತಾ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರ ಕಮಿಟಿ ರಚನೆ ಮಾಡಿ ಇನ್ನು 15 ದಿನದಲ್ಲಿ ನೂತನ ಯೋಜನೆ ಜಾರಿಗೆ ತರಲು ಸರ್ಕಾರ ಆದೇಶ ಮಾಡಿದೆ. ಗ್ರಾಮ ಠಾಣಾ ವ್ಯಾಪ್ತಿಯಲ್ಲಿ ಮನೆ ಕಟ್ಟಬೇಕಾದರೆ 30 ಅಡಿ ರಸ್ತೆಗೆ ಜಾಗ ಬಿಟ್ಟು ಮನೆಯಲ್ಲಿ ನಿರ್ಮಾಣ ಮಾಡಬೇಕು. ಈ ರೀತಿಯಾಗಿ ಎಲ್ಲವನ್ನು ಕಾನೂನು ವ್ಯಾಪ್ತಿಗೆ ತಂದು ಹೊಸ ಯೋಜನೆ ಜಾರಿಗೆ ತರುತ್ತಿದ್ದಾರೆ ಎಂದರು.ತಹಸೀಲ್ದಾರ್ ವಿಶ್ವನಾಥ್ ಮಾತನಾಡಿ, ಅಕ್ಕ-ಪಕ್ಕದವರು ಹಾಗೂ ಅಣ್ಣ-ತಮ್ಮಂದಿರು ಒತ್ತುವರಿ ಮಾಡಿಕೊಂಡಿರುವ ಜಮೀನುಗಳನ್ನು ಕಾನೂನು ರೀತಿ ತೆರವುಗೊಳಿಸಬೇಕಾದರೆ ಪೊಲೀಸ್ ರಕ್ಷಣೆ ತೆಗೆದುಕೊಂಡು ಬಿಡಿಸಿಕೊಡುತ್ತೇವೆ. ಗ್ರಾಪಂ ಗ್ರಾಮಠಾಣ ಒಳಗಡೆ ಬರುವ ಆಸ್ತಿಗಳಿಗೆ ಶೇ.100ರಷ್ಟು ಇ -ಸ್ವತ್ತು ಕೊಡಲಾಗುವುದು ಎಂದರು.
ತಾಪಂ ಇಒ ಲೋಕೇಶ್ ಮೂರ್ತಿ ಮಾತನಾಡಿ, ಸರ್ವೇ ನಂಬರ್‌ಗಳಲ್ಲಿ ಮನೆ ಕಟ್ಟಿಕೊಂಡಿದ್ದರೆ ಪಂಚಾಯ್ತಿ ಖಾತೆಯನ್ನು ಕ್ರಮಬದ್ಧವಾಗಿ ಅಲಿಲೇಶನ್ ಮಾಡಿಸಿಕೊಂಡು ಗ್ರಾಪಂ ಖಾತೆ ಮಾಡಿಸಿಕೊಂಡರೆ ನಿಮಗೆ ದಾಖಲೆಯಾಗಿ ಅವು ಉಳಿಯುತ್ತವೆ ಎಂದರು.ಹಳ್ಳಿಗಳಲ್ಲಿ ರಸ್ತೆ ಸಮಸ್ಯೆಗಳು ಬರುತ್ತಿರುತ್ತವೆ ಅವುಗಳನ್ನು ನೀವೇ ಸ್ಪಂದಿಸಿ ಸರಿಪಡಿಸಿಕೊಂಡರೆ ಸೂಕ್ತ. ಹಳ್ಳಿಗಳಲ್ಲಿ ಮನೆ ನಿರ್ಮಾಣ ಮಾಡುವವರು 25 ರಿಂದ 30 ಅಡಿ ರಸ್ತೆಗೆ ಜಾಗ ಬಿಟ್ಟುಕೊಂಡು ಮನೆ ನಿರ್ಮಾಣ ಮಾಡಿದರೆ ಅನುಕೂಲವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಎಂ.ಶಿವಮೂರ್ತಿ, ಎಡಿಎಲ್ಆರ್ ಮಮತಾ, ತಗ್ಗಹಳ್ಳಿ ಗ್ರಾಪಂ ಅಧ್ಯಕ್ಷೆ ಭಾರತಿ , ಹಳುವಾಡಿ ಗ್ರಾಪಂ ಅಧ್ಯಕ್ಷ ಸಿ.ಆರ್. ಕೃಷ್ಣ, ಉಪ ತಹಸೀಲ್ದಾರ್ ಡಿ.ತಮ್ಮಣ್ಣ ಗೌಡ, ಜಿಪಂ ಮಾಜಿ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್, ತಗ್ಗಹಳ್ಳಿ ಕೃಷ್ಣ, ಕೆ.ಎಚ್.ನಾಗರಾಜು ಸೇರಿದಂತೆ ಮತ್ತಿತರರು ಹಾಜರಿದ್ದರು.