ಬಳ್ಳಾರಿ: ನಗರದ ಜನರ ಕುಡಿಯುವ ನೀರಿನ ಸಮಸ್ಯೆಯನ್ನು ನೀಗಿಸಲು ₹1200 ಕೋಟಿ ಯೋಜನೆ ರೂಪಿಸಲಾಗಿದೆ. ಯೋಜನೆಗೆ ಶೀಘ್ರ ಚಾಲನೆ ನೀಡಲಾಗುವುದು ಎಂದು ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.
ನಿಮ್ಮ ಆಶೀರ್ವಾದದಿಂದ ಶಾಸಕನಾಗಿದ್ದೇನೆ. ಜನರ ನಿರೀಕ್ಷೆ ಹುಸಿ ಮಾಡದೇ ಬಳ್ಳಾರಿ ನಗರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ. ನಗರದ ಮೂಲಸೌಕರ್ಯಕ್ಕಾಗಿ ಹತ್ತಾರು ಕೋಟಿ ಅನುದಾನ ತಂದಿರುವೆ. ಕೋಲ್ಡ್ ಸ್ಟೋರೇಜ್, ತ್ಯಾಜ್ಯ ನಿರ್ವಹಣೆ ಘಟಕ ನಿರ್ಮಾಣಕ್ಕಾಗಿ ₹51 ಕೋಟಿ, ಎಪಿಎಂಸಿಯ ಆವರಣದ ಅಭಿವೃದ್ಧಿಗೆ ₹27 ಕೋಟಿ ಅನುದಾನ ತಂದಿರುವೆ ಎಂದರು.
ತುಂಗಭದ್ರಾ ಜಲಾಶಯದಿಂದ ನೀರು ತರುವುದಾಗಿ ಪ್ರತಿಪಕ್ಷಗಳ ನಾಯಕರು ಬರೀ ಬಾಯಿ ಮಾತಲ್ಲಿ ಹೇಳಿದರು. ಆದರೆ ನಾನು ₹1200 ಕೋಟಿ ಅನುದಾನದಲ್ಲಿ ಬಳ್ಳಾರಿ ನಗರಕ್ಕೆ ನೇರವಾಗಿ ನೀರು ಪೂರೈಸಲು ಯೋಜನೆ ರೂಪಿಸಿರುವೆ. ನಾನು ಮನೆಯಲ್ಲಿ ಯಾವ ನೀರು ಕುಡಿಯುತ್ತೇನೇಯೋ ನನ್ನ ಜನರು ಅದೇ ನೀರು ಕುಡಿಯಬೇಕು ಎಂಬುದು ನನ್ನಾಸೆ. ಜನರಿಂದ ಗೆದ್ದು ಜನರಿಗಾಗಿ ಸೇವೆ ಮಾಡುವುದೇ ನನ್ನ ಮುಖ್ಯ ಆಶಯ ಎಂದರು.ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಮಾತನಾಡಿ, ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅಪ್ಪಟ ಹೃದಯವಂತ ಮನುಷ್ಯ. ವೈರಿಗಳ ಮನಸನ್ನೂ ಗೆಲ್ಲಬಲ್ಲ ವ್ಯಕ್ತಿಯಾಗಿದ್ದಾರೆ. ಇಂತಹ ಶಾಸಕರನ್ನು ಪಡೆದ ಬಳ್ಳಾರಿಯ ಜನ ಭಾಗ್ಯಶಾಲಿಗಳು ಎಂದರು. ನಾರಾ ಮನೆತನದ ನೆರವಿನಿಂದಲೇ ನಾನು ಎರಡು ಸಲ ಶಾಸಕ ಆಗಿರುವೆ. ಆ ಮನೆತನದ ಋಣವನ್ನು ಮರೆಯಲಾರೆ. ಕಷ್ಟದ ಸಮಯದಲ್ಲಿ ಸಹಾಯಕ್ಕೆ ಬಂದವರೇ ಬಂಧುಗಳು ಎಂದು ಶಾಸಕ ಗಣೇಶ್ ಸ್ಮರಿಸಿದರು.
ಜನ್ಮದಿನ ಅಂಗವಾಗಿ ಶಾಸಕ ಭರತ್ ರೆಡ್ಡಿ ನಗರದ ಶ್ರೀಕನಕ ದುರ್ಗಮ್ಮ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಶಾಸಕರ ಕಚೇರಿಯಲ್ಲಿ 800ಕ್ಕೂ ಹೆಚ್ಚು ಪೌರ ಕಾರ್ಮಿಕರಿಗೆ ಬಟ್ಟೆ ವಿತರಿಸಲಾಯಿತು.