ಕಾರ್ಮಿಕ ದಿನದಂದೇ 12 ಸಾವಿರ ಪೌರಕಾರ್ಮಿಕರಿಗೆ ನೇಮಕಾತಿ ಪತ್ರ ವಿತರಿಸುವ ಮೂಲಕ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
ಬೆಂಗಳೂರು : ಕಾರ್ಮಿಕ ದಿನದಂದೇ 12 ಸಾವಿರ ಪೌರಕಾರ್ಮಿಕರಿಗೆ ನೇಮಕಾತಿ ಪತ್ರ ವಿತರಿಸುವ ಮೂಲಕ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಮುಂದಿನ ದಿನಗಳಲ್ಲಿ ಪೌರಕಾರ್ಮಿಕ ಚಾಲಕರು, ಸಹಾಯಕರು ಸೇರಿ ಉಳಿದ 9 ಸಾವಿರ ಮಂದಿ ಸೇವೆ ಕಾಯಮಾತಿಗೆ ಕ್ರಮ ಕೈಗೊಳ್ಳಲಾವುದು ಎಂದು ಭರವಸೆ ನೀಡಿದೆ.
ನಗರದ ಅರಮನೆ ಮೈದಾನದಲ್ಲಿ ಗುರುವಾರ ಆಯೋಜಿಸಿದ್ದ ಬಿಬಿಎಂಪಿಯ 12,692 ಪೌರಕಾರ್ಮಿಕರಿಗೆ ನೇಮಕಾತಿ ಪತ್ರ ವಿತರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಗುತ್ತಿಗೆಯಡಿ ಕಾರ್ಯವಹಿಸುತ್ತಿದ್ದ ಪೌರಕಾರ್ಮಿಕರಿಗೆ ಗುತ್ತಿಗೆದಾರರು ಸಂಬಳ ನೀಡದೆ ಶೋಷಣೆ ಮಾಡುತ್ತಿದ್ದರು.. ಹಾಗಾಗಿ, ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಕನಿಷ್ಠ ವೇತನ ಕಾಯ್ದೆ ಜಾರಿಗೊಳಿಸಲಾಯಿತು. ಇದರಿಂದ 7 ಸಾವಿರ ರು. ದೊರೆಯುತ್ತಿದ್ದ ಸಂಬಳ 17 ಸಾವಿರಕ್ಕೆ ಹೆಚ್ಚಿಸಲಾಯಿತು. ಜತೆಗೆ, ನೇರ ವೇತನ ಪಾವತಿ ಜಾರಿಗೊಳಿಸಿ ಮಧ್ಯವರ್ತಿ ಹಾವಳಿಯನ್ನು ತಪ್ಪಿಸಲಾಯಿತು ಎಂದು ಹೇಳಿದರು.
ಇದೀಗ ಪೌರಕಾರ್ಮಿಕರ ಕಾಯಂಗೊಳಿಸುವ ಪ್ರಕ್ರಿಯೆ ಅಡಿ ಪ್ರಸ್ತುತ ಸುಮಾರು 12 ಸಾವಿರ ಪೌರಕಾರ್ಮಿಕರಿಗೆ ನೇಮಕಾತಿ ಪತ್ರ ವಿತರಣೆ ಮಾಡಲಾಗಿದೆ. ಈ ಪ್ರಕ್ರಿಯೆಯಲ್ಲಿ ಬಿಟ್ಟು ಹೋಗಿರುವ ಸುಮಾರು 9 ಸಾವಿರ ಲಾರಿ ಮತ್ತು ಆಟೋ ಚಾಲಕರು, ಸಹಾಯಕರು ಹಾಗೂ ಆಪರೇಟರ್ಸ್‌ಗಳನ್ನೂ ಮುಂದಿನ ದಿನಗಳಲ್ಲಿ ಕಾಯಂಗೊಳಿಸಲಾಗುವುದು ಎಂದು ಭರವಸೆ ನೀಡಿದರು.
ವಿರೋಧ ಪಕ್ಷದ ನಾಯಕನಾಗಿದ್ದ ಸಂದರ್ಭದಲ್ಲಿ ಪೌರಕಾರ್ಮಿಕರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾಗ ಸೇವೆ ಕಾಯಂಗೊಳಿಸಬೇಕೆಂದು ಆಗಿನ ಸರ್ಕಾರಕ್ಕೆ ಆಗ್ರಹಿಸಲಾಗಿತ್ತು. ಇಲ್ಲವಾದರೆ, ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಕಾಯಂ ಮಾಡುವುದಾಗಿ ಭರವಸೆ ನೀಡಲಾಗಿತ್ತು. ಅದರಂತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಕಾಯಂಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡಿ ಇದೀಗ ನೇಮಕಾತಿ ಪ್ರಮಾಣ ಪತ್ರ ನೀಡಿ, ಡಿ ದರ್ಜೆಯ ನೌಕರರಿಗೆ ನೀಡುವ 39 ಸಾವಿರ ರು. ವೇತನ ನೀಡಲಾಗುತ್ತಿದೆ ಎಂದು ತಿಳಿಸಿದರು.
ಶುಚಿತ್ವದಲ್ಲಿ ದೈವತ್ವ ಕಾಣಬೇಕು ಎಂದು ಮಹಾತ್ಮಾಗಾಂಧೀಜಿ ನುಡಿದಿದ್ದರು. ಪರಿಸರ ಸ್ವಚ್ಛತೆ ಕಾಪಾಡುವುದು ಶ್ರೇಷ್ಠ ಕೆಲಸ. ಬಸವಣ್ಣನವರು ಕಾಯಕವೇ ಕೈಲಾಸ ಎಂದು ತಿಳಿಸಿದ್ದು, ಯಾವುದೇ ಕೆಲಸದಲ್ಲಿ ಮೇಲು ಕೀಳೆಂಬುದು ಇಲ್ಲ ಎಂದರು.ಪೌರಕಾರ್ಮಿಕರ ಮಕ್ಕಳು ವಿದ್ಯಾವಂತರಾಗಿ ಸಮಾಜದ ಮುಖ್ಯವಾಹಿನಿಗೆ ಬರುವಂತಾಗಬೇಕು. ಪ್ರತಿ ವರ್ಷ ಒಂದು ಸಾವಿರ ಪೌರಕಾರ್ಮಿಕರನ್ನು ವಿದೇಶಕ್ಕೆ ಕಳಿಸುವ ಯೋಜನೆ ಸೇರಿ ಹಲವಾರು ಕಲ್ಯಾಣ ಯೋಜನೆಗಳನ್ನು ಪೌರ ಕಾರ್ಮಿಕರಿಗಾಗಿ ಹಮ್ಮಿಕೊಳ್ಳಲಾಗಿದೆ.
ಪೌರಕಾರ್ಮಿಕರು ಮತ್ತು ಅವರ ಕುಟುಂಬದವರೂ ಮುಖ್ಯವಾಹಿನಿಗೆ ಬರಬೇಕು. ಈ ಮೂಲಕ ಸಮಸಮಾಜ ನಿರ್ಮಿಸುವ ಉದ್ದೇಶ ಸರ್ಕಾರದ್ದಾಗಿದೆ. ರಾಜ್ಯದ ಎಲ್ಲ ವರ್ಗದ ಜನರಿಗೆ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸಮಾನತೆ ದೊರೆಯುವಂತಾಗಬೇಕು. ಜಾತಿ ವ್ಯವಸ್ಥೆ ಹೋಗಬೇಕಾದರೆ ಎಲ್ಲರೂ ವಿದ್ಯಾವಂತರಾಗಬೇಕು. ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳುವಂತೆ ಆಗಬೇಕು ಎಂದು ಹೇಳಿದರು.ಪ್ರಸ್ತಾವಿಕವಾಗಿ ಮಾತನಾಡಿದ ಉಪ ಮುಖ್ಯಮಂತ್ರಿ ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತಿನಂತೆ ಪೌರ ಕಾರ್ಮಿಕರನ್ನು ಕಾಯಂಗೊಳಿಸಿ ಅವರ ಬದುಕಿನಲ್ಲಿ ಬದಲಾವಣೆ ತರುವ ಮೂಲಕ ಸಮಾಜದಲ್ಲಿ ಸಮಾನತೆ ತರುವ ಕೆಲಸ ಮಾಡಿದೆ.
ಒಂದೇ ಒಂದು ರುಪಾಯಿ ಲಂಚ ಇಲ್ಲದೆ ಪೌರ ಕಾರ್ಮಿಕರನ್ನು ಕಾಯಂಗೊಳಿಸುವ ಕೆಲಸ ಮಾಡಲಾಗಿದೆ ಎಂದು ಹೇಳಿದರು.ಸರ್ಕಾರ ಪೌರಕಾರ್ಮಿಕರನ್ನು ದೇವರ ಮಕ್ಕಳು, ಸ್ವಚ್ಛತಾ ರಾಯಭಾರಿಗಳು ಎಂದು ಭಾವಿಸುತ್ತಿವೆ. ಪೌರ ಕಾರ್ಮಿಕರ ಮಕ್ಕಳೇ ಈ ಕಾರ್ಯಕ್ರಮ ನಡೆಸುತ್ತಿದ್ದಾರೆ. ಪೌರಕಾರ್ಮಿಕರ ಮಕ್ಕಳನ್ನು ವಿದ್ಯಾವಂತರನ್ನಾಗಿ, ಬುದ್ಧಿವಂತರಾಗಿ ದೊಡ್ಡ ಹುದ್ದೆ ಅಲಂಕರಿಸುವಂತೆ ಮಾಡಬೇಕು ಎಂಬುದು ಸರ್ಕಾರದ ಉದ್ದೇಶ. ಪೌರ ಕಾರ್ಮಿಕರ ಅಭಿವೃದ್ಧಿಗಾಗಿ ಪಾಲಿಕೆ ಬಜೆಟ್ ನಲ್ಲಿ 700 ಕೋಟಿ ರು. ಮೀಸಲಿಡಲಾಗಿದೆ. ಸಿಂಧುತ್ವ ವಿಚಾರದಲ್ಲಿ ಕೆಲ ಗೊಂದಲಗಳಿರುವ ಕಾರಣಕ್ಕೆ ಕೆಲವರ ಕೆಲಸ ಕಾಯಂ ಆಗಿಲ್ಲ. ಈ ಬಗ್ಗೆ ಪ್ರತ್ಯೇಕವಾಗಿ ಬೂತ್ ಆರಂಭಿಸಿ ದಾಖಲೆಗಳನ್ನು ಪರಿಶೀಲನೆ ಮಾಡಿಸಿ ನ್ಯಾಯ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಪೌರಕಾರ್ಮಿಕರ ನಿವೃತ್ತಿಯಾದಾಗ 10 ಲಕ್ಷ ರು. ಹಣ ಠೇವಣಿ ಮಾಡಿ 6 ಸಾವಿರ ಪಿಂಚಣಿ ದೊರೆಯುವಂತೆ ಯೋಜನೆ ರೂಪಿಸಿದ್ದೇವೆ. ನಿಮ್ಮ ಆರೋಗ್ಯ, ಮಕ್ಕಳ ಶಿಕ್ಷಣ, ಕೌಶಲ್ಯಾಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ರಾಜ್ಯದಾದ್ಯಂತ ಪೌರಕಾರ್ಮಿಕರಿಗೆ 7.70 ಲಕ್ಷ ಮನೆ ನಿರ್ಮಿಸಲಾಗಿತ್ತು. 2024-25ನೇ ಸಾಲಿನ ಬಜೆಟ್‌ನಲ್ಲಿ ಪೌರಕಾರ್ಮಿಕರ ಆರೋಗ್ಯ ವಿಮೆ ಘೋಷಿಸಲಾಗಿದೆ ಎಂದು ತಿಳಿಸಿದರು.ಕೋವಿಡ್ ಸಂದರ್ಭದಲ್ಲಿ ಪ್ರಾಣವನ್ನು ಪಣಕ್ಕಿಟ್ಟು ವಾರಿಯರ್ ನಂತೆ ಇಡೀ ರಾಜ್ಯವನ್ನು ಕಾಪಾಡಿದ್ದನ್ನು ಮರೆಯಲು ಸಾಧ್ಯವಿಲ್ಲ. ಪೌರ ಕಾರ್ಮಿಕರನ್ನು ಯಾರೂ ಕೀಳಾಗಿ ಕಾಣುವಂತಿಲ್ಲ.
ಆಯುಕ್ತರಿಗೆ ನೀಡುವ ಗೌರವವನ್ನು ಪೌರಕಾರ್ಮಿಕರಿಗೂ ನೀಡಬೇಕು ಎಂದು ಹೇಳಿದರು.ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿ, ರಾಜ್ಯ ಸರ್ಕಾರ ಪೌರಕಾರ್ಮಿಕರನ್ನು ಕಾಯಂಗೊಳಿಸುವ ಅತ್ಯುತ್ತಮ ಕೆಲಸ ಮಾಡಿದೆ. ನಗರದ ಕೊಳಗೇರಿಯಲ್ಲಿ ವಸತಿಯುತ ಶಾಲೆಗಳನ್ನು ಆರಂಭಿಸಿ ಅಲ್ಲಿನ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯುವಂತೆ ಮಾಡಬೇಕಿದೆ. ಶೋಷಿತರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.
ಸಮಾರಂಭದಲ್ಲಿ ಸಾಂಕೇತಿಕವಾಗಿ ಕೆಲ ಪೌರಕಾರ್ಮಿಕರಿಗೆ ನೇಮಕಾತಿ ಪತ್ರ ವಿತರಣೆ ಮಾಡಲಾಯಿತು. ಈ ವೇಳೆ ಸಚಿವರಾದ ಎಚ್.ಸಿ ಮಹದೇವಪ್ಪ, ಕೃಷ್ಣಬೈರೇಗೌಡ, ರಾಮಲಿಂಗಾರೆಡ್ಡಿ, ರಹೀಂ ಖಾನ್, ಬಿ.ಎ. ಸುರೇಶ್, ಸಂಸದ ರಣದೀಪ್ ಸಿಂಗ್ ಸುರ್ಜೆವಾಲ, ಶಾಸಕರಾದ ಶಿವಣ್ಣ, ಎಸ್.ಟಿ ಸೋಮಶೇಖರ್, ರಿಜ್ವಾನ್ ಹರ್ಷದ್, ಶ್ರೀನಿವಾಸ್, ರವಿ, ಯು.ಬಿ ವೆಂಕಟೇಶ್, ಬಿಬಿಎಂಪಿ ಆಡಳಿತಾಧಿಕಾರಿ ತುಷಾರ್ ಗಿರಿನಾಥ್, ಮುಖ್ಯ ಆಯುಕ್ತ ಮಹೇಶ್ವರ ರಾವ್ ಸೇರಿ ಮೊದಲಾದವರಿದ್ದರು.
-ಕಾಯಂ ನೇಮಕಗೊಳ್ಳುವ ಪೌರಕಾರ್ಮಿಕರ ವಿವರ
ವಲಯ ನೇಮಕಾತಿ ಸಂಖ್ಯೆ
ಪಶ್ಚಿಮ2,564
ಪೂರ್ವ2,341
ದಕ್ಷಿಣ3,012
ಆರ್‌ಆರ್‌ನಗರ1,118
ಮಹದೇವಪುರ1,369
ಬೊಮ್ಮನಹಳ್ಳಿ1,012
ದಾಸರಹಳ್ಳಿ468
ಯಲಹಂಕ808
ಒಟ್ಟು12,692
39 ಸಾವಿರ ರು. ಸಂಬಳ
ಇದೀಗ ಸೇವೆ ಕಾಯಂಗೊಂಡ 12 ಸಾವಿರ ಪೌರಕಾರ್ಮಿಕರಿಗೆ ಮಾಸಿಕ 39 ಸಾವಿರ ರು. ಸಂಬಳ ಸಿಗಲಿದೆ. ‘ಇವರಿಗೆ ಡಿ.ದರ್ಜೆಯ ನೌಕರರಿಗೆ ನೀಡುವ 39 ಸಾವಿರ ರು. ವೇತನ ನೀಡಲಾಗುವುದು’ ಎಂದು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಘೋಷಿಸಿದ್ದಾರೆ.
ಶೋಷಣೆ ಇನ್ನಿಲ್ಲ
ಈ ಹಿಂದೆ ಗುತ್ತಿ್ಎ ಪೌರಕಾರ್ಮಿಕರಿಗೆ ಗುತ್ತಿಗೆದಾರರು ಸಂಬಳ ನೀಡದೆ ಶೋಷಣೆ ಮಾಡುತ್ತಿದ್ದರು. ನಾನು ಈ ಹಿಂದೆ ಸಿಎಂ ಆಗಿದ್ದಾಗ ಕನಿಷ್ಠ ವೇತನ ಜಾರಿಗೆ ತಂದಿದ್ದೆ, 7ರಿಂದ 17 ಸಾವಿರ ರು.ಗೆ ಸಂಬಳ ಹೆಚ್ಚಿಸಿದ್ದೆ. ಈಗ ಚುನಾವಣೆಯಲ್ಲಿ ನೀಡಿದ ವಾಗ್ದಾನದಂತೆ ಸೇವೆ ಕಾಯಂ ಮಾಡಿದ್ದೇವೆ.
ಸಿದ್ದರಾಮಯ್ಯ, ಮುಖ್ಯಮಂತ್ರಿ
ನುಡಿದಂತೆ ನಡೆ
ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತಿನಂತೆ ಪೌರ ಕಾರ್ಮಿಕರನ್ನು ಕಾಯಂಗೊಳಿಸಿ ಅವರ ಬದುಕಿನಲ್ಲಿ ಬದಲಾವಣೆ ತರುವ ಮೂಲಕ ಸಮಾಜದಲ್ಲಿ ಸಮಾನತೆ ತರುವ ಕೆಲಸ ಮಾಡಿದೆ. ಒಂದೇ ಒಂದು ರುಪಾಯಿ ಲಂಚ ಇಲ್ಲದೆ ಪೌರ ಕಾರ್ಮಿಕರನ್ನು ಕಾಯಂಗೊಳಿಸುವ ಕೆಲಸ ಮಾಡಲಾಗಿದೆ.- ಡಿ.ಕೆ.ಶಿವಕುಮಾರ್, ಡಿಸಿಎಂ---
ರಾಜ್ಯದೆಲ್ಲೆಡೆ ಆಗಲಿಪೌರಕಾರ್ಮಿಕರ ಕಾಯಂ ಮೂಲಕ ಬಿಬಿಎಂಪಿ ಒಳ್ಳೆಯ ಕೆಲಸ ಮಾಡಿದೆ. ಬಿಬಿಎಂಪಿ ರೀತಿಯಲ್ಲೇ ರಾಜ್ಯದ ವಿವಿಧ ಸ್ಥಳೀಯ ಸಂಸ್ಥೆಗಳಲ್ಲಿ ಖಾಲಿ ಇರುವ ಪೌರಕಾರ್ಮಿಕರನ್ನು ಸರ್ಕಾರ ಭರ್ತಿ ಮಾಡಬೇಕು. ಪೌರಕಾರ್ಮಿಕರು ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಬೇಕು. - ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷಕಾರ್ಮಿಕರ ದಿನದಂದೇ 12 ಸಾವಿರಪೌರಕಾರ್ಮಿಕರಿಗೆ ನೇಮಕಾತಿ ಪತ್ರ