ಕಲ್ಯಾಣ ಕರ್ನಾಟಕದ ರೈಲ್ವೆ ಅಭಿವೃದ್ಧಿಗೆ ₹12 ಸಾವಿರ ಕೋಟಿ ಅನುದಾನ: ವಿ. ಸೋಮಣ್ಣ

KannadaprabhaNewsNetwork |  
Published : Jan 06, 2026, 03:00 AM IST
ಹಗರಿಬೊಮ್ಮನಹಳ್ಳಿಯಲ್ಲಿ ಲೆವೆಲ್ ಕ್ರಾಸಿಂಗ್ 35 ರ ಮೇಲ್ಸೇತುವೆ ಕಾಮಗಾರಿಗೆ ಸಚಿವ ಸೋಮಣ್ಣ ಭೂಮಿ ಪೂಜೆ ನೆರವೇರಿಸಿದರು. | Kannada Prabha

ಸಾರಾಂಶ

ಹಗರಿಬೊಮ್ಮನಹಳ್ಳಿಯಲ್ಲಿ ಭಾನುವಾರ ಲೆವೆಲ್ ಕ್ರಾಸಿಂಗ್ 35ರ ಮೇಲ್ಸೇತುವೆ ಕಾಮಗಾರಿಗೆ ಭೂಮಿಪೂಜೆ ಹಾಗೂ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಭಾಗವಹಿಸಿದ್ದರು.

ಹೊಸಪೇಟೆ: ಅಭಿವೃದ್ಧಿ ವಿಷಯದಲ್ಲಿ ರಾಜಕಾರಣ ಬೆರೆಸಬಾರದು ಎಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಸ್ಪಷ್ಟ ಸಂದೇಶವಾಗಿದೆ. ಕಲ್ಯಾಣ ಕರ್ನಾಟಕ ಭಾಗದ ರೈಲ್ವೆ ಯೋಜನೆಗಳಿಗಾಗಿ ಕೇಂದ್ರ ಸರ್ಕಾರ ಬರೋಬ್ಬರಿ ₹12,900 ಕೋಟಿ ಮೊತ್ತದ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದೆ ಎಂದು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ತಿಳಿಸಿದರು.

ಹಗರಿಬೊಮ್ಮನಹಳ್ಳಿಯಲ್ಲಿ ಭಾನುವಾರ ನಡೆದ ಲೆವೆಲ್ ಕ್ರಾಸಿಂಗ್ 35ರ ಮೇಲ್ಸೇತುವೆ ಕಾಮಗಾರಿ ಭೂಮಿಪೂಜೆ ಹಾಗೂ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಭಾಗದ ಅಭಿವೃದ್ಧಿ ಕಾಮಗಾರಿಗಳ ಕುರಿತು ಸಮಗ್ರ ಮಾಹಿತಿ ನೀಡಿದರು.

ಹಿಂದೆ ಕರ್ನಾಟಕಕ್ಕೆ ರೈಲ್ವೆ ಇಲಾಖೆಯಿಂದ ವಾರ್ಷಿಕವಾಗಿ ಕೇವಲ ₹882 ಕೋಟಿ ಅನುದಾನ ಬರುತ್ತಿತ್ತು. ಆದರೆ ಮೋದಿ ಸರ್ಕಾರ ಬಂದ ನಂತರ ವಾರ್ಷಿಕವಾಗಿ ₹7500ರಿಂದ ₹8000 ಕೋಟಿ ಅನುದಾನ ನೀಡಲಾಗುತ್ತಿದೆ ಎಂದು ಸೋಮಣ್ಣ ಅಂಕಿಅಂಶ ಸಹಿತ ವಿವರಿಸಿದರು.

ಬಳ್ಳಾರಿ-ಚಿಕ್ಕಜಾಜೂರು ಜೋಡಿ ಮಾರ್ಗಕ್ಕೆ ₹3400 ಕೋಟಿ: ಬಳ್ಳಾರಿ ಮತ್ತು ಚಿತ್ರದುರ್ಗದ ಗಣಿಗಾರಿಕೆ ಹಾಗೂ ಮಂಗಳೂರು-ಹೈದರಾಬಾದ್ ಸಂಪರ್ಕದ ದೃಷ್ಟಿಯಿಂದ ಇದು ಮಹತ್ವದಾಗಿರುವ ಬಳ್ಳಾರಿ-ಚಿಕ್ಕಜಾಜೂರು ಜೋಡಿ ಮಾರ್ಗ ಯೋಜನೆಗೆ 2025ರ ಜೂನ್‌ನಲ್ಲಿ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಸುಮಾರು ₹3400 ಕೋಟಿ ವೆಚ್ಚದ ಈ ಯೋಜನೆಯು ಈ ಭಾಗದ ರೈಲ್ವೆ ಸಂಪರ್ಕದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲಿದೆ ಎಂದು ಸಚಿವರು ತಿಳಿಸಿದರು.

ಹಗರಿಬೊಮ್ಮನಹಳ್ಳಿಯ ಎಲ್.ಸಿ. 35ರ ಬದಲಿಗೆ ಗುಂಡಾ ರೋಡ್-ಕೊಟ್ಟೂರು ನಡುವೆ ₹38.7 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ. ಎಲ್.ಸಿ. 37 ಮತ್ತು 38ರ ಕಾಮಗಾರಿಗಳಿಗೂ ಚಾಲನೆ ನೀಡಲಾಗಿದೆ. ಹೊಸಪೇಟೆ ಟಿ.ಬಿ. ಡ್ಯಾಂ ಬಳಿ ಬಸ್‌ಗಳು ನಿಲ್ಲಲು ಕಷ್ಟವಾಗುತ್ತಿದ್ದು, ಅಲ್ಲಿ ಮೇಲ್ಸೇತುವೆ ನಿರ್ಮಿಸಲಾಗುವುದು. ಹೊಸಪೇಟೆ-ಹಂಪಿ ರಸ್ತೆಯ (ಎಲ್.ಸಿ. 85) ಕಾಮಗಾರಿಗೆ ₹26 ಕೋಟಿ ಮಂಜೂರಾಗಿದ್ದು, ಜೂನ್ ಒಳಗಾಗಿ ಪೂರ್ಣಗೊಳ್ಳಲಿದೆ. ಹೊಸಪೇಟೆ ರೈಲ್ವೆ ನಿಲ್ದಾಣವನ್ನು ₹15.17 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಈಗಾಗಲೇ ಶೇ. 80 ಕಾಮಗಾರಿ ಪೂರ್ಣಗೊಂಡಿದೆ. ಹಂಪಾಪಟ್ಟಣ ಮತ್ತು ಹಗರಿಬೊಮ್ಮನಹಳ್ಳಿ ಸಂಪರ್ಕಕ್ಕೆ ಅಗತ್ಯವಿರುವ 1 ಎಕರೆ 41 ಗುಂಟೆ ಜಮೀನನ್ನು ಭೂಸ್ವಾಧೀನ ಪಡಿಸಿಕೊಳ್ಳಲು ವಿಳಂಬ ಮಾಡದಂತೆ ಜಿಲ್ಲಾಧಿಕಾರಿಗಳಿಗೆ ಸಚಿವರು ವೇದಿಕೆಯಲ್ಲೇ ಸೂಚನೆ ನೀಡಿದರು. ರೈಲ್ವೆ ಕಾಮಗಾರಿಗಳಿಗೆ ಅಗತ್ಯವಿರುವ ಅನುಮತಿಗಳನ್ನು ತ್ವರಿತವಾಗಿ ನೀಡುವಂತೆ ಜಿಲ್ಲಾಡಳಿತಕ್ಕೆ ತಾಕೀತು ಮಾಡಿದರು.

ಸಂಸದ ತುಕಾರಾಂ ಕಾರ್ಯವೈಖರಿಗೆ ಮೆಚ್ಚುಗೆ: ಸಂಸದ ಈ. ತುಕಾರಾಂ ದೆಹಲಿಗೆ ಬಂದು ತಮ್ಮ ಕ್ಷೇತ್ರದ ಕೆಲಸಗಳಿಗೆ ಒತ್ತಾಯಿಸುವುದನ್ನು ಸ್ಮರಿಸಿದ ಸೋಮಣ್ಣ, ಅಭಿವೃದ್ಧಿ ವಿಚಾರದಲ್ಲಿ ತುಕಾರಾಂ ಅವರ ಕಳಕಳಿ ಮತ್ತು ಸಹಕಾರವನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.

ಸಂಸದ ಈ. ತುಕಾರಾಂ ಮಾತನಾಡಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಯಲ್ಲಿ ಹೆಚ್ಚು ಗಣಿಗಾರಿಕೆ ಮತ್ತು ಹಲವು ಕಾರ್ಖಾನೆಗಳಿವೆ. ಜತೆಗೆ ಪ್ರವಾಸೋದ್ಯಮದಲ್ಲಿ ಅವಳಿ ಜಿಲ್ಲೆ ಮುಂಚೂಣಿಯಲ್ಲಿದೆ. ರೈಲ್ವೆ ಡಬ್ಲಿಂಗ್ ಸೇರಿದಂತೆ ವಿದ್ಯುದ್ದೀಕರಣ, ಮೇಲ್ಸೇತುವೆ, ಕೆಳಸೇತುವೆಗಳ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು ಎಂದು ರೈಲ್ವೆ ಸಚಿವರಿಗೆ ಮನವಿ ಮಾಡಿದರು.

ಶಾಸಕ ನೇಮಿರಾಜ್ ನಾಯಕ್, ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ಪೊಲೀಸ್ ಅಧೀಕ್ಷಕಿ ಎಸ್. ಜಾಹ್ನವಿ, ಮಾಜಿ ಶಾಸಕರಾದ ಚಂದ್ರ ನಾಯ್ಕ್, ಮರಿಯಮ್ಮನಹಳ್ಳಿ ಮಲ್ಲಿಕಾರ್ಜುನ ಸ್ವಾಮೀಜಿ, ಡಾ. ಮಹೇಶ್ವರ ಸ್ವಾಮೀಜಿ, ಎಚ್.ಬಿ. ಹಳ್ಳಿ ಹಾಲಸಿದ್ದೇಶ್ವರ ಸ್ವಾಮೀಜಿ, ರೈಲ್ವೆ ಇಲಾಖೆಯ ಸಿಇಒ ಅಜೆಯ ಶರ್ಮ, ಎಡಿಆರ್ ಎಂ. ವಿಷ್ಣುಭೂಷಣ್ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿ ವಿವಸ್ತ್ರ ಕೇಸ್‌ನಲ್ಲಿ ತಲೆದಂಡಕ್ಕೆ ಬಿಜೆಪಿ ಗಡುವು
ಶೀಘ್ರ ‘ಬಾಕಿ ಲಕ್ಷ್ಮಿ’ ಬಿಡುಗಡೆ - ಬಿಪಿಎಲ್‌ ರದ್ದಾದವರಿಗೆ ಇಲ್ಲ ಗೃಹಲಕ್ಷ್ಮಿ ಹಣ